ಹಾಸನ : ಕಳೆದ ಆಗಸ್ಟ್ 29 ರ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕು ಆಲಗೊಂಡನಹಳ್ಳಿ ತೋಟದ ಮನೆಯಲ್ಲಿ ನಡೆದ ವೃದ್ಧ ದಂಪತಿ ಜೋಡಿ ಕೊಲೆ ಆರೋಪಿಗಳ ಪೈಕಿ ಓರ್ವನ ಮೇಲೆ ಕಳೆದ ರಾತ್ರಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಫೈರಿಂಗ್ ಮಾಡಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕು ಅಣ್ಣೇನಹಳ್ಳಿ ಬಳಿಯ ಕೋಳಿಫಾರಂನಲ್ಲಿ ಕೊಲೆ ಆರೋಪಿ ಪ್ರಸಾದ್ ಅಲಿಯಾಸ್ ಗುಂಡಾ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದ ಪೊಲೀಸರ ಮೇಲೇ ಪ್ರಸಾದ್ ಹಲ್ಲೆ ನಡೆಸಲು ಮುಂದಾಗಿದ್ದರಿಂದ ಆತ್ಮರಕ್ಷಣೆಗಾಗಿ ಬೇಲೂರು ಸಿಪಿಐ ಸಿದ್ದರಾಮೇಶ್ವರ್ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್ ವಿನಯ್ ಎಂಬುವರ ಎಡಗೈಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೋಡಿ ಕೊಲೆ ಸಂಬಂಧ ಪ್ರಸಾದ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರ ಸೆರೆಗೆ ಶೋಧ ಮುಂದುವರಿದಿದೆ ಎಂದು ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ಆರೋಪಿ ಗುಂಡಾ ಕೊಲೆ, ಸುಲಿಗೆ ಸೇರಿದಂತೆ ಬೆಂಗಳೂರಿನಲ್ಲಿ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಇಡೀ ಹಾಸನ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಆಲಗೊಂಡನಹಳ್ಳಿಯ ಮುರುಳೀಧರ್-ಉಮಾದೇವಿ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ಇಬ್ಬರು ಕೇವಲ 48 ಗಂಟೆಗಳ ಅಂತರದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಖಚಿತ ಮಾಹಿತಿ ಮೇರೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್ ತಂಡ, ಇದೇ ತಾಲೂಕಿನ ಮಂಜಶೆಟ್ಟಿ ಅಲಿಯಾಸ್ ದ್ವಾರಕಿ, ಮತ್ತು ಪ್ರಸಾದ್ ಅಲಿಯಾಸ್ ಗುಂಡಾ ಬಂಧಿತರು.
ಜೋಡಿ ಕೊಲೆ ನಂತರ ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ, ಅರಸೀಕೆರೆ ಡಿವೈಎಸ್ಪಿ ನಾಗೇಶ್ ಅವರ ನೇತೃತ್ವದಲ್ಲಿ 2 ವಿಶೇಷ ತಂಡ ರಚಿಸಲಾಗಿತ್ತು. ಒಂದು ತಂಡದಲ್ಲಿದ್ದ ಬೇಲೂರು ಸಿಪಿಐ ಸಿದ್ದರಾಮೇಶ್ವರ್ ಹಾಗೂ ಇತರರು, ಆಗಸ್ಟ್ 31 ರಂದು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ
ಚನ್ನರಾಯಪಟ್ಟಣ ತಾಲೂಕು ಬರಗೂರು ಕೊಪ್ಪಲು ನಿವಾಸಿ ಮಂಜಶೆಟ್ಟಿ ಎಂಬಾತನನ್ನು ವಶಕ್ಕೆಪಡೆದು ತೀವ್ರ ವಿಚಾರಣೆ ನಡೆಸಿದಾಗ, ಡಬಲ್ ಮರ್ಡರ್ ವೃತ್ತಾಂತ ಬಿಚ್ಚಿಟ್ಟಿದ್ದಾನೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಸಾದ್ ಅಲಿಯಾಸ್ ಗುಂಡಾ, ಅಣ್ಣೇನಹಳ್ಳಿಯ ಬೋರೇಗೌಡ ಎಂಬುವರಿಗೆ ಸೇರಿದ ಕೋಳಿಫಾರಂ ನಲ್ಲಿ ಅಡಗಿದ್ದಾನೆ ಎಂಬ ಸುಳಿವನ್ನೂ ನೀಡಿದ್ದಾನೆ.
ಇದಾದ ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ಸಿದ್ದರಾಮೇಶ್ವರ್, ಹಾಸನ ಡಿಸಿಐಬಿ ಇನ್ಸ್ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ಪ್ರಸಾದ್ ಇದ್ದ ಕೋಳಿಫಾರಂ ಮೇಲೆದಾಳಿ ಮಾಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ತಪ್ಪಿಸಿಕೊಳ್ಳುವ ಸಲುವಾಗ ಪೊಲೀಸರ ಮೇಲೇ ಹಲ್ಲೆ ನಡೆಸಲು ಪ್ರಸಾದ್ ಮುಂದಾಗಿ, ಇನ್ಸ್ ಪೆಕ್ಟರ್ ವಿನಯ್ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಅರಿತ ಸಿಪಿಐ ಸಿದ್ದರಾಮೇಶ್ವರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಆತ ಕುಸಿದು ಬೀಳುತ್ತಿದ್ದಂತೆಯೇ ಆತನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ಬೆಳಗ್ಗೆ ದಕ್ಷಿಣ ವಲಯದ ಐಜಿಪಿ ವಿಫುಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ರೇಚಿಹಳ್ಳಿ ಗ್ರಾಮದ ಗಾಯಾಳು ಆರೋಪಿ ಪ್ರಸಾದ್ ನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರು ನಗರದ ಉಪ್ಪಾರ ಪೇಟೆ, ಸಂಜಯ್ ನಗರ, ಅವಲಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ, ಸುಲಿಗೆ ಸೇರಿ ಬರೋಬ್ಬರಿ 8 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುಂಡಾ, ಕೊರೊನಾ ಲಾಕ್ ಡೌನ್ ನಂತರ ಚನ್ನರಾಯಪಟ್ಟಣಕ್ಕೆ ಬಂದು ಅಣ್ಣೇನಹಳ್ಳಿಯ 15 ದಿನಗಳ ಹಿಂದಷ್ಟೇ ಬೊರೇಗೌಡ ಎಂಬುವರ ಬಳಿ ಇದ್ದ ಕೋಳಿಫಾರಂ ನನ್ನು ಲೀಸ್ ಪಡೆದು ಅಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದ. ಆದರೆ ಪ್ರಸಾದ್ ಇಂಥ ದುರುಳ ಎಂದು ಗೊತ್ತಿಲ್ಲದ ಬೋರೇಗೌಡ ಕುಟುಂಬ ನಿಜ ಸಂಗತಿ ಬಯಲಾದ ನಂತರ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ನಮಗೆ ಕೋಳಿಸಾಕಣೆ ಮಾಡಿದ ಅನುಭವ ಇದೆ ಎಂದೆಲ್ಲಾ ಹೇಳಿ ನಂಬಿಸಿದ್ದವ ಕೊಲೆ ಪಾತಕಿ ಎಂದು ಗೊತ್ತಿರಲಿಲ್ಲ. ಇಂಥ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬೋರೇಗೌಡ ಒತ್ತಾಯಿಸಿದ್ದಾರೆ.
ಕೊಲೆಯಾದ ವೃದ್ಧದಂಪತಿ ತೋಟದ ಪಕ್ಕದಲ್ಲೇ ಜಮೀನು ಹೊಂದಿದ್ದ ದ್ವಾರಕಿ ಎಂಬಾತ, ಮುರಳೀಧರ್ –ಉಮಾದೇವಿ ದಂಪತಿ ಹತ್ತಾರು ಎಕರೆ ಜಮೀನು ಮಾಲೀಕರಾಗಿದ್ದು ಇವರನ್ನು ಕೊಲೆ ಮಾಡಿದ್ರೆ ದೊಡ್ಡ ಮೊತ್ತದ ನಗದು ಹಾಗೂ ಚಿನ್ನಾಭರಣ ಸಿಗಲಿದೆ ಎಂದು ಪ್ರಸಾದ್ ಹಾಗೂ ಇತರರ ಜೊತೆಗೆ ಚರ್ಚಿಸಿದ್ದ. ನಂತರ ಐದಾರು ಮಂದಿ ಮೊದಲೇ ಪ್ಲಾನ್ ಮಾಡಿಕೊಂಡು ಆ.29 ರ ರಾತ್ರಿ ತೋಟದ ಮನೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಇದೀಗ ಲಾಭದ ಉದ್ದೇಶದಿಂದಲೇ ಜೋಡಿ ಕೊಲೆ ನಡೆದಿದೆ ಎಂಬುದು ಖಾತ್ರಿಯಾಗಿದ್ದು, ಸವಾಲಾಗಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿರುವ ಜಿಲ್ಲಾ ಪೊಲೀಸರ ಕಾರ್ಯವೈಖರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
-ಪ್ರತಾಪ್ ಹಿರೀಸಾವೆ