ತುಮಕೂರಿನಲ್ಲಿ ಗೋ ಜಾತ್ರೆಯ ಸಂಭ್ರಮ..!

0
276

ತುಮಕೂರು: ದೇಶದಲ್ಲೇ ಪ್ರಖ್ಯಾತಿ ಪಡೆದ ಸಿದ್ದರ ಪುಣ್ಯಕ್ಷೇತ್ರದಲ್ಲಿ ಗೋವುಗಳ ಜಾತ್ರೆ ಆರಂಭವಾಗಿದೆ. ಈ ಜಾತ್ರೆಯಲ್ಲಿ ಅಂದ ಚೆಂದದಿಂದ ಸಿಂಗಾರಗೊಂಡ ಗೋವುಗಳು ಒಂದೆಡೆ ಸೇರುತ್ತವೆ. ಸುಗ್ಗಿ ಕಾಲ ಮುಗಿದ ಮೇಲೆ ಹರ್ಷದಲ್ಲಿ ಮುಳುಗೋ ರೈತರಿಗೆ ಇದು ಸಂಭ್ರಮದ ಜಾತ್ರೆ.

ಸಿದ್ದರ ಕ್ಷೇತ್ರ ಎಂದ ಕೂಡಲೇ ಎಲ್ಲರಿಗೂ ನೆನಪಾಗೋದು ಸಿದ್ದಗಂಗಾ ಕ್ಷೇತ್ರ. ಮಹಾಪುರುಷ ಕಾಯಕಯೋಗಿ, ನಡೆದಾಡೋ ದೇವರು, ಶ್ರೀ ಶಿವಕುಮಾರ ಸ್ವಾಮೀಜಿ ಆರಂಭಿಸಿದ ಸಿದ್ದಗಂಗೆಯ ಗೋವುಗಳ ಜಾತ್ರೆ ಈಗ ಬಹಳ ಜನಪ್ರಿಯವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ಬಹುಶಃ ಬೇರೆಲ್ಲೂ ನಡೆಯೋದಿಲ್ಲ ಅನಿಸುತ್ತೆ. ಯಾಕಂದ್ರೆ ಕರ್ನಾಟಕದ ಮೂಲೆ ಮೂಲೆಗಳಿಂದ ರೈತರು ದನಗಳನ್ನು ಮಾರೋದಕ್ಕೆ ಮತ್ತು ಕೋಳ್ಳೋದಕ್ಕೆ ಈ ಜಾತ್ರೆಗೆ ಆಗಮಿಸುತ್ತಾರೆ. ಸುಮಾರು 52 ವರ್ಷಗಳ ಇತಿಹಾಸವಿರುವ ಜಾತ್ರೆ ಪ್ರಸಿದ್ಧಿ ಪಡೆದಿದೆ. ಶಿವರಾತ್ರಿ ಹಬ್ಬಕ್ಕೆ 20 ದಿನಗಳ ಮುಂಚೆ ದನಗಳ ಜಾತ್ರೆ ಆರಂಭವಾಗಲಿದ್ದು, ಕಣ್ಣು ಹಾಯಿಸಿದಷ್ಟು ದೂರ ದನಗಳು ಕಾಣಸಿಗ್ತವೆ.  ಇನ್ನೂ ದನಗಳ ವ್ಯಾಪಾರ ಕೂಡ ಅಷ್ಟೇ ಭರ್ಜರಿಯಾಗಿ ನಡೆಯಲಿದ್ದು,  ಸಾವಿರದಿಂದ ಲಕ್ಷಗಳವರೆಗೆ ದನಗಳ ವ್ಯಾಪಾರ ನಡೆಯುತ್ತೆ.

ಈ ಜಾತ್ರೆಯಲ್ಲಿ ರಾಸುಗಳಿಗೆ ಶಾಮಿಯಾನ ಹಾಕಿಸಿ ದನಗಳನ್ನ ಸಿಂಗರಿಸಿ  ಇರಿಸಲಾಗಿರುತ್ತೆ. ದುಬಾರಿ ದನಗಳನ್ನ ಮೆರವಣಿಗೆ ಮೂಲಕ ಜಾತ್ರೆಗೆ  ಕರೆತರೋದೂ ಇದೆ. ಈ ಬಾರಿ ಶ್ರಿಗಳು ಲಿಂಗೈಕ್ಯರಾಗಿದ್ದು ಇದೇ ಮೊದಲ ಬಾರಿಗೆ ಅವರಿಲ್ಲದೆ ಜಾತ್ರೆ ನಡೆಯುತ್ತಿದೆ. ಹಿಂದಿನ ವರ್ಷದಂತೆ ಈ ಬಾರಿಯೂ ದನಗಳ ಜಾತ್ರೆ ಹಾಗೂ ಕೃಷಿಯ ಬಗ್ಗೆ ಮಾಹಿತಿ ನೀಡಲು ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.

ಶಿವರಾತ್ರಿವರೆಗೂ ರಾಸುಗಳ ಜಾತ್ರೆ ನಡೆಯಲಿದೆ. ಪ್ರತಿವರ್ಷ ಶಿವಕುಮಾರ ಶ್ರೀಗಳೇ ದನಗಳ ಜಾತ್ರೆಗೆ ಚಾಲನೆ ನೀಡುತಿದ್ರು.  ಆದರೆ ಈ ವರ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ದನಗಳ ಜಾತ್ರೆ ನಡೆಸುತ್ತಿದ್ದಾರೆ. ರಾಸುಗಳಿಗಾಗಲಿ ಸಾರ್ವಜನಿಕರಿಗಾಗಲಿ ತೊಂದರೆಯಾಗದಂತೆ ನಿಗಾವಹಿಸಿದ್ದಾರೆ. ಒಟ್ಟಾರೆ ಪ್ರಸಿದ್ಧವಾದ ಸಿದ್ದಗಂಗೆಯ ದನಗಳ ಜಾತ್ರೆ ಎಲ್ಲರ ಮನ ಸೆಳೆಯುತ್ತಿದ್ದು, ದಿನದಿಂದ ದಿನಕ್ಕೆ ಜಾತ್ರೆಗೆ ಬರುವವರ ಸಂಖ್ಯೆಕೂಡ ಹೆಚ್ಚಾಗುತ್ತಿದೆ.

ಹೇಮಂತ್ ಕುಮಾರ್.ಜೆ.ಎಸ್, ತುಮಕೂರು

LEAVE A REPLY

Please enter your comment!
Please enter your name here