Monday, January 17, 2022
Powertv Logo
Homeಕ್ರೀಡೆರೋಚಕ ಟೆಸ್ಟ್ ಡ್ರಾನಲ್ಲಿ ಅಂತ್ಯ..!

ರೋಚಕ ಟೆಸ್ಟ್ ಡ್ರಾನಲ್ಲಿ ಅಂತ್ಯ..!

ಕಡೆಗೂ ನ್ಯೂಜಿಲೆಂಡ್ ಸೋಲನ್ನು ತಪ್ಪಿಸಿದ್ದು ಭಾರತೀಯ ಮೂಲದ ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್ ಎಂಬ ಟೇಲ್ ಎಂಡ್ ಆಟಗಾರರು! ಇಬ್ಬರೂ ಕ್ರಮವಾಗಿ 18 ಮತ್ತು 2 ರನ್ ಗಳನ್ನು ಗಳಿಸಿ ನಾಟೌಟ್ ಆಗಿ ಉಳಿದರು. ಇನ್ನೇನು ಭಾರತ ಮೊದಲ ಟೆಸ್ಟ್ ಗೆದ್ದೇಬಿಡ್ತು ಎಂದುಕೊಳ್ಳುವಾಗಲೇ ಎಲ್ಲರ ನಿರೀಕ್ಷೆಯನ್ನು ತಲೆಕೆಳಗು ಮಾಡಿದ ಈ ಇಬ್ಬರು ಬಾಲಂಗೊಚಿ ಬ್ಯಾಟ್ಸ್ ಮನ್ ಗಳು ಕಡೆಗೂ ನ್ಯೂಜಿಲೆಂಡ್ ಆಲೌಟ್ ಆಗುವುದನ್ನು ತಪ್ಪಿಸುವಲ್ಲಿ ಸಫಲರಾಗಿಯೆಬಿಟ್ಟರು. ಆ ಮೂಲಕ ನ್ಯೂಜಿಲೆಂಡ್ ಸೋಲನ್ನು ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡು ನಿಟ್ಟುಸುರುಬಿಟ್ಟರೆ, ಭಾರತದ ಆಟಗಾರರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ಪೇಚಾಡಿಕೊಂಡರು.

ಕಡೆಯ ಐದು ಓವರ್ ಗಳಲ್ಲಿ ಒಂದು ವಿಕೆಟ್  ತೆಗೆದರೆ ಭಾರತ ಗೆಲ್ಲುತ್ತಿತ್ತು. ಅದುವರೆಗೂ ಸ್ಪಿನ್ನರ್ ಗಳು ವಿಕೆಟ್ ತೆಗೆದಿದ್ದರಿಂದ ಭಾರತ ಕಡೆಯವರೆಗೂ ಸ್ಪಿನ್ನರ್ ಗಳಿಗೆ ಮಣೆಹಾಕಿದ್ದು ಭಾರತದ ಲೆಕ್ಕಾಚಾರ ವಿಫಲವಾಗಲು ಕಾರಣವಾಯಿತು. ಭಾರತದ ಒಬ್ಬನೆ ಒಬ್ಬ ವೇಗಿ ಒಂದೇ ಒಂದು ಓವರ್ ಬೌಲ್ ಮಾಡಿದ್ದರೂ ಜಯ ಭಾರತಕ್ಕೆ ಒಲಿಯುವ ಸಾಧ್ಯತೆಯಿತ್ತು. ಆದರೆ ಸ್ಪಿನ್ನರ್ ಗಳ ಮೇಲಿನ ಅತಿಯಾದ ನಂಬಿಕೆ ಭಾರತದ ಜಯವನ್ನು ಕಿತ್ತುಕೊಳ್ಳುವಂತೆ ಮಾಡಿತು.

ಏನೆ ಆದರೂ ಕಡೆಯ ಎಸೆತದವೆರೆಗೂ ಪ್ರೇಕ್ಷಕರ ಎದೆಬಡಿತವನ್ನು ಹೆಚ್ಚಿಸಿದ್ದ ಈ ಕಾನ್ಪುರ ಟೆಸ್ಟ್ ಡ್ರಾ ಆದರೂ ಸಹ ಬಹುಕಾಲ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂಥ ಪಂದ್ಯವೆನ್ನಬಹುದು.

ಕಡೆಯದಾಗಿ ಕಾನ್ಪುರ ಟೆಸ್ಟ್ ಮ್ಯಾಚ್ ನ ಸ್ಕೋರ್ ನೋಡೋದಾದ್ರೆ ಭಾರತ ಮೊದಲ ಇನ್ನಿಂಗ್ಸ್ 345 ಹಾಗೂ ಎರಡನೆಯ ಇನ್ನಿಂಗ್ಸ್ 7 ವಿಕೆಟ್ ಗಳಿಗೆ 234.  ನ್ಯೂಜಿಲೆಂಡ್ ಮೊದಲನೆಯ ಇನ್ನಿಂಗ್ಸ್  296 ಹಾಗೂ ಎರಡನೆಯ ಇನ್ನಿಂಗ್ಸ್ 9 ವಿಕೆಟ್ ಗಳಿಗೆ 195 ರನ್ ಗಳು.  ನ್ಯೂಜಿಲೆಂಡಿನ ಟಾಮ್ ಲತಾಮ್ 52 ರನ್ ಗಳನ್ನು ಮಾಡಿದ್ದು ಬಿಟ್ಟರೆ ಬೇರೆಲ್ಲ ಬ್ಯಾಟ್ಸ್ ಮನ್ ಗಳು ವಿಫಲರಾದರು.  ರವೀಂದ್ರ ಜಡೇಜ 4 ವಿಕೆಟ್ ತೆಗೆದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಗಳನ್ನು ಕಬಳಿಸಿದರು. ಅಕ್ಷರ ಪಟೆಲ್ ಮತ್ತು ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ತೆಗೆದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments