ಹುಬ್ಬಳ್ಳಿ : ಜಿಲ್ಲೆಯ ಗೋಪನಕೊಪ್ಪದಲ್ಲಿ ಮಧ್ಯರಾತ್ರಿ ಯುವಕರಿಬ್ಬರನ್ನ ಕಬ್ಬಿಣದ ರಾಡ್ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕರಿಬ್ಬರು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಯುವಕರಿಬ್ಬರನ್ನ ಅಟ್ಟಾಡಿಸಿ ಹೊಡೆದು ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗೋಪನಕೊಪ್ಪದ ನಿವಾಸಿ ಮಂಜುನಾಥ್ ಕಬ್ಬಿನ್ ಹಾಗೂ ಸಿದ್ರಾಮ ನಗರದ ನಿವಾಸಿ ನಿಯಾಜ್ ಮೃತ ದುರ್ದೈವಿಗಳು.
ಮೊನ್ನೆ ಮೊನ್ನೆಯಷ್ಟೆ ರೌಡಿಶೀಟರ್ ಪ್ರೂಟ್ ಇರ್ಪಾನನ್ನ ಹಾಡುಹಗಲೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಆ ಹಂತಕರ ಬಂಧನಕ್ಕು ಮೊದಲೆ ಕಳೆದ ರಾತ್ರಿ ಜೋಡಿ ಕೊಲೆಯಾಗುವ ಮೂಲಕ ಚೋಟಾ ಮುಂಬೈನಲ್ಲಿ ಮತ್ತೆ ನೆತ್ತರು ಹರಿದಿದ್ದು, ಅವಳಿ ನಗರದ ಜನತೆಯನ್ನ ಬೆಚ್ಚಿಬೀಳಿಸಿದೆ.
ಕೊಲೆಗೆ ಹಳೆಯ ವೈಷಮ್ಯ ಕಾರಣ ಎಂದು ಹೇಳಲಾಗಿದ್ದು, ಕೊಲೆಯಾದ ಮಂಜುನಾಥನ ತಾಯಿ ಮತ್ತು ಅಕ್ಕ ಆರೋಪ ಮಾಡುತ್ತಿದ್ದಾರೆ. ಮನೆಯ ಬಳಿ ಇರುವ ಹುಡುಗರ ಜೊತೆ ಈ ಹಿಂದೆ ಗಲಾಟೆ ಆಗಿತ್ತು. ಹಿಂದೆ ನಡೆದ ಹಲ್ಲೆಯಿಂದ ಮಂಜುನಾಥನ ತಲೆಗೆ ಗಾಯವಾಗಿತ್ತು, ನಂತರ ಅವನ ತಲೆಗೆ ಶಸ್ತ್ರ ಚಿಕಿತ್ಸೆಯೂ ಮಾಡಿಸಲಾಗಿತ್ತು. ಇದೆ ವಿಚಾರವಾಗಿ ನಿನ್ನೆ ತಡರಾತ್ರಿ ಗೆಳೆಯರ ಗುಂಪೊಂದು ಆತನನ್ನ ಕರೆದೊಯ್ದು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಂಜುನಾಥ ಮತ್ತು ನಿಯಾಜ್ ಇಬ್ಬರು ಸ್ನೇಹಿತರು. ಮನೆಯಿಂದ ಬಸ್ ನಿಲ್ದಾಣದ ಬಳಿ ಇರುವ ಪಾನ್ ಶಾಪ್ಗೆ ಹೋಗಿ ಬರೋದಾಗಿ ಮಂಜುನಾಥ ಮನೆಯವರಿಗೆ ಹೇಳಿ ಹೋಗಿದ್ದಾನೆ. ಮನೆಯಿಂದ ಪಾನ್ ಶಾಪ್ ಬಂದ ಮಂಜುನಾಥ ಸ್ನೇಹಿತ ನಿಯಾಜನನ್ನ ಕರೆಯಿಸಿಕೊಂಡು ಮಾತನಾಡುತ್ತ ಬಸ್ ನಿಲ್ದಾಣದ ಬಳಿ ನಿಂತಿದ್ದ. ಇದೇ ವೇಳೆ ಬಂದ ಆರೋಪಿಗಳು ಇಬ್ಬರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಮಂಜುನಾಥ ಮತ್ತು ನಿಯಾಜ್ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದೀಲಿಪ್ ಪರಿಶೀಲನೆ ನಡೆಸಿ ತನಿಖೆಗೆ ತಂಡ ರಚಿಸಿದ್ದಾರೆ.