Sunday, May 29, 2022
Powertv Logo
Homeದೇಶ``ನನ್ನ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ನೀಡುತ್ತೇನೆ'' : ಟ್ರಂಪ್​

“ನನ್ನ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ನೀಡುತ್ತೇನೆ” : ಟ್ರಂಪ್​

ಅಹಮದಾಬಾದ್: ಅಮೆರಿಕಾದ ಅಧ್ಯಕ್ಷರಾದ ಬಳಿಕ ಡೊನಾಲ್ಡ್​ ಟ್ರಂಪ್ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದು, ಭಾರತೀಯರ ಆತಿಥ್ಯಕ್ಕೆ ಮನಸೋತಿದ್ದಾರೆ. ಇಂದು ಬೆಳಗ್ಗೆ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಬಳಿಕ ಮೊಟೆರಾ ಸ್ಟೇಡಿಯಂ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್‘ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ ಟ್ರಂಪ್ ತಮ್ಮ ಭಾಷಣದುದ್ದಕ್ಕೂ ಭಾರತ ಹಾಗೂ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ‘ನಾನು  8 ಸಾವಿರ ಮೈಲಿ ಪ್ರಯಾಣಿಸಿ ಒಂದು ಸಂದೇಶ ಹೇಳಲು ಬಂದಿದ್ದೇನೆ. ಅಮೇರಿಕಾ ಭಾರತವನ್ನು ಪ್ರೀತಿಸುತ್ತದೆ ಹಾಗೂ ಗೌರವಿಸುತ್ತದೆ. ನೀವು ನಮಗೆ ತೋರಿರುವ ಆತಿಥ್ಯವನ್ನು ಎಂದಿಗೂ ಮರೆಯುವುದಿಲ್ಲ. ಇಂದಿನಿಂದ ನನ್ನ ಹೃದಯದಲ್ಲಿ ಭಾರತಕ್ಕೆ ಒಂದು ವಿಶೇಷ ಸ್ಥಾನ ನೀಡುತ್ತೇನೆ‘ ಎಂದರು.

ಇನ್ನು ಮೋದಿ ಬಗ್ಗೆ ಮಾತನಾಡಿದ ಟ್ರಂಪ್, “ಮೋದಿ ತುಂಬಾ ಕಠಿಣ ವ್ಯಕ್ತಿ. ಅಷ್ಟೇ ಅಲ್ಲ ಪರಿಶ್ರಮ ಹಾಗೂ ಶ್ರದ್ಧೆಯಿಂದ ಭಾರತೀಯರು ಏನನ್ನು ಬೇಕಾದರೂ ಸಾಧಿಸುತ್ತಾರೆ ಅನ್ನೋದಕ್ಕೆ ಇವರು ಜೀವಂತ ಉದಾಹರಣೆಯಾಗಿದ್ದಾರೆ. ಮೋದಿ 27 ಕೋಟಿ ಜನರನ್ನು ಬಡತನದಿಂದ ಮುಕ್ತಿಗೊಳಿಸಿದ್ದಾರೆ. ಅವರ ಆಡಳಿತದಲ್ಲಿ ಭಾರತದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಸಿಕ್ಕಿದೆ. ಹಾಗಾಗಿ ಮೋದಿ ನನ್ನ ಸ್ನೇಹಿತ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು. 

ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರು, ಜೈನರು ಹಾಗೂ ಬೌದ್ಧರು ಎಲ್ಲಾ ಧರ್ಮದವರೂ ಒಟ್ಟಾಗಿ ಬಾಳುವ ನೀವು ಹಾಗೂ ನಿಮ್ಮ ಒಗ್ಗಟ್ಟು ಎಲ್ಲರಿಗೂ ಉದಾಹರಣೆ. ಭಾರತ ಇಡೀ ಮನುಕುಲಕ್ಕೆ  ಒಂದು ಭರವಸೆ ನೀಡುವ ದೇಶವಾಗಿದೆ. ಹಾಗಾಗಿ ಭಾರತದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದರು.

ಇನ್ನು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಸಂತೋಷವಾಗಿದೆ.  ಇಂದು ಸಂಜೆ  ತಾಜ್​ಮಹಲ್​ಗೆ ತೆರಳಲಿದ್ದೇವೆ. ಬಳಿಕ ಭಾರತ ಹಾಗೂ ಅಮೇರಿಕಾ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾನು ಹಾಗೂ ಮೋದಿ ಮಾತುಕತೆ ನಡೆಸಲಿದ್ದೇವೆ ಎಂದರು.

ಅಲ್ಲದೆ ಭಾರತಕ್ಕಾಗಿ ವಿಶ್ವದಲ್ಲೇ ಅತಿ ಸಾಮರ್ಥ್ಯವುಳ್ಳ ಸೇನಾ  ಸಲಕರಣೆಗಳನ್ನು ತಯಾರಿಸಿ ಅದನ್ನು ಭಾರತಕ್ಕೆ  ನೀಡಲು ಮುಂದಾಗಿದ್ದೇವೆ. ಅಷ್ಟೇ ಅಲ್ಲದೆ ಭಾರತೀಯ ಸೇನೆಗೆ ಮಿಲಿಟರಿ ಹೆಲಿಕಾಪ್ಟರ್​ ಹಾಗೂ ಇತರೆ ಸಲಕರಣೆಗಳ ಪೂರೈಕೆಗೆ ನಮ್ಮೆರಡು ದೇಶದ ರಾಯಭಾರಿಗಳು ನಾಳೆ 3 ಬಿಲಿಯನ್ ಡಾಲರ್​ನ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದು ತಿಳಿಸಿದರು. 

ಭಯೋತ್ಪಾದನೆಯಿಂದ ದೇಶವನ್ನು ಕಾಪಾಡಲು ಎರಡೂ ದೇಶಗಳು ಒಟ್ಟಾಗಿ ಹೋರಾಡುತ್ತಿದೆ. ನನ್ನ ಆಡಳಿತದಲ್ಲಿ ಐಸಿಸ್​ನ ಉಗ್ರರ ವಿರುದ್ಧ ಅಮೆರಿಕಾ ಸೇನೆಯ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುವ ಅವಕಾಶ ನೀಡಿದ್ದರಿಂದ ಐಸಿಸ್ ಮುಖ್ಯಸ್ಥ ಅಲ್​ ಬಾಗ್ದಾದಿ ನಿರ್ನಾಮ ಮಾಡಲು ಸಾಧ್ಯವಾಗಿದೆ ಎಂದರು.

ಕೊನೆಯಾದಾಗಿ ಪ್ರಧಾನಿ ಮೋದಿಯವರೇ ಉತ್ತಮ ಆತಿಥ್ಯಕ್ಕೆ ಧನ್ಯವಾದ. ಭಾರತೀಯರೇ ನಿಮ್ಮ ಅದ್ಭುತ ಸ್ವಾಗತಕ್ಕೆ ಧನ್ಯವಾದ. ದೇವರು ಭಾರತಕ್ಕೆ, ಅಮೆರಿಕಾಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು. 

19 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments