ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅರೆಸ್ಟ್..!

0
1712

ನವದೆಹಲಿ : 8.59 ಕೋಟಿ ರೂ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಟ್ರಬಲ್ ಶೂಟರ್ ಖ್ಯಾತಿಯ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ.
ಸತತ 4 ದಿನಗಳ ತೀವ್ರ ವಿಚಾರಣೆ ಬಳಿಕ ಡಿಕೆಶಿಯವರನ್ನು ಬಂಧಿಸಲಾಗಿದೆ. ಲೋಕನಾಯಕ್ ಭವನದ 6ನೇ ಮಹಡಿಯಲ್ಲಿರುವ ED ಕಚೇರಿಯಲ್ಲಿ ಶುಕ್ರವಾರ, ಶನಿವಾರ ಸೋಮವಾರ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ವಿಚಾರಣೆ ನಡೆಸಿದ್ದರು. ಇಂದು ಕೂಡ ಬೆಳಗ್ಗೆಯಿಂದ ಸತತ 8ಗಂಟೆ ವಿಚಾರಣೆಗೆ ಒಳಪಡಿಸಿ, ಇದೀಗ ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಡಿಕೆಶಿ ಸಹಕಾರ ನೀಡಿಲ್ಲ ಅನ್ನೋ ಕಾರಣವನ್ನು ಇಡಿ ಅಧಿಕಾರಿಗಳು ನೀಡಿದ್ದು, ಕೋರ್ಟ್​ಗೆ ಹಾಜರುಪಡಿಸಿ , ಮತ್ತಷ್ಟು ವಿಚಾರಣೆಗೆ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡುವ ಸಾಧ್ಯತೆ ಇದೆ.
2017ರ ಆಗಸ್ಟ್​ 2ನೇ ತಾರೀಖು ಆದಾಯ ತೆರಿಗೆ ಇಲಾಖೆಯವರು ಡಿಕೆಶಿ ಆಪ್ತರ ನಿವಾಸದ ಮೇಲೆ ದಾಳಿ ನಡೆಸಿತ್ತು. 8.59 ಕೋಟಿ ರೂಪಾಯಿನ್ನು ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಡಿಕೆಶಿ ಹವಾಲಾ ಮುಖೇನ ಏಜೆಂಟ್​ ಗಳ ಸಹಾಯದಿಂದ ಸಾವಿರಾರು ಕೋಟಿಯನ್ನು ಬದಲಿಸಿದ್ದರು. ಬ್ಲಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಪರಿವರ್ತಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ವಿದೇಶದಲ್ಲೂ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ ಅನ್ನೋ ಆರೋಪವಿದ್ದು, ಈ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​​ ಜಾರಿ ಮಾಡಿತ್ತು. ಇದನ್ನು ವಜಾ ಮಾಡುವಂತೆ ಡಿಕೆಶಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಆಗಸ್ಟ್ 29ರಂದು ಡಿಕೆಶಿ ಅರ್ಜಿ ವಜಾಗೊಳಿಸಿತ್ತು. ಬಳಿಕ ಡಿಕೆಶಿ ಆಗಸ್ಟ್ 30 (ಶುಕ್ರವಾರ) ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ತೆರಳಿದ್ದರು. ಅಂದಿನಿಂದ ಇಂದಿನವರೆಗೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ, ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here