ದೇವನಹಳ್ಳಿ : ಕಿಲ್ಲರ್ ಕೊರೊನಾ ವೈರಸ್ ಯಾರನ್ನೂ ಬಿಡದೇ ಸಮಾಜದಲ್ಲಿ ಎಲ್ಲಾ ವರ್ಗದವರಿಗೂ ವ್ಯಾಪಕವಾಗಿ ಹರಡುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೂ ಕೊರೊನಾ ವೈರಸ್ ಹಬ್ಬಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಳೆದ ಒಂದು ತಿಂಗಳಿಗಿಂತ ಅಧಿಕ ದಿನಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ವಿದೇಶಗಳಿಂದ ಬಂದ ಅನಿವಾಸಿ ಭಾರತೀಯರನ್ನು ಕ್ವಾರಂಟೈನ್ ಸೆಂಟರ್ ಗಳಿಗೆ ರವಾನೆ ಮಾಡುವ ದೊಡ್ಡ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಹಗಲಿರುಳು ಎನ್ನದೆ ಕೆಐಎಎಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜಿಲ್ಲಾಧಿಕಾರಿ ಗೆ ಕೊರೊನಾ ಪಾಸಿಟಿವ್ ಬಂದಿರುವುದು ಇದೀಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಆತಂಕ ಶುರುವಾಗಿದೆ. ಇನ್ನೂ ಜಿಲ್ಲಾಧಿಕಾರಿ ಕುಟುಂಬಸ್ಥರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನೊಂದು ಆತಂಕಕಾರಿ ವಿಚಾರ ಎಂದರೆ ಕಳೆದ ಐದು ದಿನಗಳ ಹಿಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪುತ್ಥಳಿಯ ಶಿಲಾನ್ಯಾಸ ಮತ್ತು ಸೆಂಟ್ರಲ್ ಪಾರ್ಕ್ ಕಾಮಗಾರಿಯ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ನಾಯಕರು ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ಸಂಸದ ಬಚ್ಚೇಗೌಡ, ಪಿಸಿ ಮೋಹನ್, ತೇಜಸ್ವಿ ಸೂರ್ಯ, ಸುರೇಶ್ ಅಂಗಡಿ, ಡಿಸಿಎಂ ಅಶ್ವಥ್ ನಾರಾಯಣ್, ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಸಚಿವ ಭೈರತಿ ಬಸವರಾಜ್, ಗೋಪಾಲಯ್ಯ, ಬಸವರಾಜ್ ಬೊಮ್ಮಾಯಿ ಮತ್ತು ಎಲ್ಲ ಪಕ್ಷಗಳ ಮುಖಂಡರು ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.