ಬೆಂಗಳೂರು: ಲಾಕ್ಡೌನ್ ಘೋಷಣೆಯಾದಾಗಿನಿಂದಲೂ ಚಲನಚಿತ್ರಗಳು, ಧಾರವಾಹಿಗಳ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. ಆದರೆ ಹೆಸರಾಂತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಮನೆಯಿಂದ ಹೊರಬಂದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಅವರು ಆಕ್ಷನ್ ಕಟ್ ಹೇಳುತ್ತಿರುವುದು ಯಾವುದೇ ಚಲನಚಿತ್ರಕ್ಕಾಗಲೀ ಅಥವಾ ಯಾವುದೇ ಹಿಟ್ ಹೀರೋಗಾಗಲೀ ಅಲ್ಲ. ಬದಲಾಗಿ ಭಟ್ರು ಪೊಲೀಸರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕಮಿಷನರ್ ಸೇರಿದಂತೆ ಇಲಾಖೆಯ ಕೆಲ ಆಧಿಕಾರಿಗಳ ಕೆಲಸದ ಬಗ್ಗೆ ಡ್ಯಾಕುಮೆಂಟರಿ ಚಿತ್ರೀಕರಣ ಮಾಡುತ್ತಿದ್ದು, ಇದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪರ್ಮಿಷನ್ ಕೊಟ್ಟಿದ್ದಾರೆ. ನಗರದ ಟೌನ್ಹಾಲ್ ಮುಂಭಾಗದಲ್ಲಿ ಚಿತ್ರೀಕರಣವನ್ನು ಮಾಡುತ್ತಿದ್ದು, ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸಹ ಜಾಗೃತಿ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಮಾತನಾಡಿದ ಭಾಸ್ಕರ್ ರಾವ್, ‘ಡ್ಯಾಕುಮೆಂಟರಿ ಶೂಟಿಂಗ್ ಮಾಡಲು ನಾನೇ ಪರ್ಮಿಷನ್ ಕೊಟ್ಟಿದ್ದೇನೆ. ಅವರು ಪೊಲೀಸರ ಸೇವೆ ಕುರಿತು ಜಾಗೃತಿ ಡ್ಯಾಕುಮೆಂಟರಿ ಮಾಡುತ್ತಿರುವುದರಿಂದ ಅನುಮತಿ ಕೊಟ್ಟಿದ್ದೇವೆ‘ ಎಂದು ಹೇಳಿದರು.