ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

0
192

ಅವರೊಬ್ಬರು ಖ್ಯಾತ ಉದ್ಯಮಿ. ಆದ್ರೆ, ಉದ್ಯಮಿಯಾಗೋಕು ಮೊದ್ಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮಾಡ್ತಿದ್ದ ಔಷಧ ವ್ಯಾಪಾರವೇ ಆವರಿಗೆ ಆಧಾರವಾಗಿತ್ತು. ಕೇವಲ 10 ಸಾವಿರ ರೂಪಾಯಿ ಅವರ ಬಾಳನ್ನೇ ಬದಲಿಸಿ ಬಿಡ್ತು. ಇವತ್ತು ಅವರು ಭಾರತ ದೇಶದ ಎರಡನೇ ಶ್ರೀಮಂತ. ಹಾಗಾದ್ರೆ, ಅವರು ಯಾರು..?
ಅವರು ದಿಲೀಪ್ ಸಾಂಘ್ವಿ. ಹುಟ್ಟಿದ್ದು ಮುಂಬೈಯಲ್ಲಿ.. ನಂತರ ತಂದೆ ಜೊತೆ ಕೋಲ್ಕತ್ತಾಗೆ ಶಿಫ್ಟ್ ಆಗಿದ್ರು. ಅಲ್ಲೇ ಪದವಿ ಮೂಗಿಸಿದ್ರು. ಓದೋ ವಯಸ್ಸಿನಲ್ಲೇ ಹಲವು ಆಸೆಗಳನ್ನು ಹೊತ್ತುಕೊಂಡಿದ್ದ ಸಾಂಘ್ವಿಯವರು, ತಂದೆಯಂತೆ ಔಷಧ ಉದ್ಯಮಕ್ಕೆ ಕಾಲಿಟ್ಟರು. ಕೋಲ್ಕತ್ತಾದಲ್ಲೇ ಸ್ವಂತದೊಂದು ಉದ್ಯಮ ಪ್ರಾರಂಭಿಸಿದ್ರು. ಆದ್ರೆ, ಈ ಉದ್ಯಮಕ್ಕಾಗಿ ತಂದೆಯಿಂದ 10 ಸಾವಿರ ರೂಪಾಯಿ ಹಣ ಪಡೆದಿದ್ರು.
ಆದ್ರೆ, ಉದ್ಯಮ ಪ್ರಾರಂಭಿಸಿದ ಆರಂಭದ ದಿನಗಳು ಅಷ್ಟೇನು ಸುಲಭದ್ದಾಗಿರಲಿಲ್ಲ.. ದಿಲೀಪ್ ಸಾಂಘ್ವಿ ಜೊತೆ ಕೇವಲ ಒಬ್ಬ ನೌಕರ ಮಾತ್ರ ಇದ್ದ. ಆ ಸಮಯದಲ್ಲಿ ದಿಲೀಪ್ ಮನೋವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಔಷಧಗಳನ್ನು ಮಾರಾಟ ಮಾಡುತ್ತಿದ್ರು. ನಂತರ ಮುಂಬೈಗೆ ಶಿಫ್ಟ್ ಆದ ದಿಲೀಪ್, ಗುಜರಾತ್​ನ ವಪಿ ಎಂಬಲ್ಲಿ ಔಷಧಿಗಳ ತಯಾರಿಸೋ ಕಾರ್ಖಾನೆ ಶುರುಮಾಡಿದ್ರು.
ವ್ಯಾಪಾರದಲ್ಲಿ ತಂದೆಗೆ ನೆರವಾಗುತ್ತಿದ್ದಾಗ್ಲೇ ಸ್ವಂತ ಫ್ಯಾಕ್ಟರಿ ಆರಂಭಿಸಬೇಕೆಂಬ ಆಲೋಚನೆ ದಿಲೀಪ್ ಸಾಂಘ್ವಿ ಅವರಿಗೆ ಬಂದಿತ್ತು. ಹಾಗಾಗಿ ಟ್ರೇಡಿಂಗ್ ಬ್ಯುಸಿನೆಸ್ ಬಿಟ್ಟು ಸ್ವಂತ ಕಾರ್ಖಾನೆ ಆರಂಭಿಸಿದ ದಿಲೀಪ್, ತಮ್ಮದೇ ಆದ ಬ್ರಾಂಡ್ ಒಂದನ್ನು ಸೃಷ್ಟಿಸಿದ್ರು.
1982ರಲ್ಲಿ ‘ಸನ್ ಫಾರ್ಮಾಸುಟಿಕಲ್’ ಕಂಪನಿಯನ್ನು ಆರಂಭಿಸಿದ್ರು. ತಂದೆ, ಸ್ನೇಹಿತರು ಹಾಗೂ ಪರಿಚಯಸ್ಥರಿಂದ ಸಹಾಯ ಪಡೆದು ಹೊಸ ಸಾಹಸಕ್ಕೆ ಕೈಹಾಕಿದ್ರು. ಮನೋರೋಗ ಚಿಕಿತ್ಸೆಗೆ ಬೇಕಾದ 5 ಬಗೆಯ ಔಷಧಗಳನ್ನು ಉತ್ಪಾದಿಸಲು ಶುರು ಮಾಡಿದ್ರು.
ಹೀಗೆ ಯಶಸ್ಸಿನ ಒಂದೊಂದೇ ಮೆಟ್ಟಿಲೇರುತ್ತಾ ಬಂದ ‘ಸನ್ ಫಾರ್ಮಾಸುಟಿಕಲ್’ ಕಂಪನಿ 1996ರಲ್ಲಿ 24 ದೇಶಗಳಲ್ಲಿ ಕಾರ್ಯಾರಂಭ ಮಾಡಿತ್ತು. 2011ರಲ್ಲಿ ಸನ್ ಫಾರ್ಮಾ 2 ಬಿಲಿಯನ್ ಆದಾಯ ಗಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತೀಯ ಮೂಲದ ಮೊದಲ ಕಂಪನಿ ಎನಿಸಿಕೊಂಡಿತ್ತು.
1987ರಲ್ಲಿ ‘ಮಿಲ್ಮೆಟ್ ಲ್ಯಾಬ್ಸ್’ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸನ್ ಫಾರ್ಮಾ ನೇತ್ರವಿಜ್ಞಾನ ಕ್ಷೇತ್ರಕ್ಕೂ ಕಾಲಿಟ್ಟಿತ್ತು. ಕಳೆದ ವರ್ಷ ಅಮೆರಿಕದಲ್ಲಿ ದಿಲೀಪ್ ‘ಬ್ರಾಂಡೆಡ್ ಒಫ್ತಾಲ್ಮಿಕ್’ ಬ್ಯುಸಿನೆಸ್ ಶುರು ಮಾಡಿದ್ದಾರೆ.
‘ಸನ್ ಫಾರ್ಮಾ’ವನ್ನು ದಿಲೀಪ್ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ವಿಸ್ತರಿಸಿದ್ದಾರೆ. ಈಗ ‘ಸನ್ ಫಾರ್ಮಾ’ ಭಾರತದ ನಂಬರ್ ಒನ್ ಕಂಪನಿ, ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಐದನೇ ಸ್ಥಾನ ಪಡೆದಿದೆ.
ಇತರರಿಗೂ ಮುನ್ನವೇ ಅವಕಾಶವನ್ನು ಗುರುತಿಸುವವನೇ ನಿಜವಾದ ಉದ್ಯಮಿ. ಹಣಕ್ಕಾಗಿ ಆತ ಅವಕಾಶ ಕಳೆದುಕೊಳ್ಳುವುದಿಲ್ಲ. ತನ್ನ ದೃಷ್ಟಿಕೋನವನ್ನು ಹಂಚಿಕೊಳ್ಳಬಲ್ಲ ಅದ್ಭುತ ತಂಡವನ್ನು ಕಟ್ಟುತ್ತಾನೆ. ಅದನ್ನು ಕಾರ್ಯರೂಪಕ್ಕೆ ತರುತ್ತಾನೆ. ಕಲಿಕೆ ಅನ್ನೋದು ಯಾವಾಗಲೂ ಇರುತ್ತದೆ’’ ಎನ್ನುವುದು ದಿಲೀಪ್ ಸಾಂಘ್ವಿ ಅವರ ನಿಲುವು.
ಏನೇ ಹೇಳಿ, ಸಮರ್ಪಣೆ, ಪರಿಶ್ರಮ, ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ದಿಲೀಪ್ ಅವರನ್ನು ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಲ್ಲಿಸಿದೆ. ಇವತ್ತು, ಇಡೀ ವಿಶ್ವವೇ ಕೊಂಡಾಡುವಂತೆ ಮಾಡಿದೆ..
-ಎನ್. ಜಿ. ರಮೇಶ್

LEAVE A REPLY

Please enter your comment!
Please enter your name here