ದೇವನಹಳ್ಳಿ : ಇತ್ತೀಚಿಗೆ ಎಲ್ಲೆಡೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಭೂ ಕಬಳಿಕೆದಾರರಿಗೆ ಅಧಿಕಾರಿಗಳ ಭಯವೇ ಇಲ್ಲದಂತೆ ಆಗಿದೆ. ಆದ್ದರಿಂದ ಭೂಗಳ್ಳರು ಬಹಳ ಸುಲಭವಾಗಿ ಸರ್ಕಾರಿ ಆಸ್ತಿಗಳನ್ನು ಕಬಳಿಕೆ ಮಾಡಲು ಮುಂದಾಗುತ್ತಿದ್ದಾರೆ ಆದ್ರೆ ಇಲ್ಲೊಂದು ಸ್ಥಳದಲ್ಲಿ ಭೂ ಕಬಳಿಕೆದಾರರ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದು ಹೋರಾಟಕ್ಕೆ ನಿಂತಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸರ್ಕಾರಿ ಭೂ ಕಬಳಿಕೆ ಪ್ರಕರಣಗಳು ಎಗ್ಗಿಲ್ಲದೆ ಬೆಳೆಯುತ್ತಿವೆ ಇದಕ್ಕೆ ಅಧಿಕಾರಿಗಳ ಶಾಮೀಲು, ನಿರ್ಲಕ್ಷ್ಯ, ಬೇಜವಾಬ್ದಾರಿತನ ಈ ಎಲ್ಲ ಕಾರಣಗಳಿಂದ ಸರ್ಕಾರಿ ಆಸ್ತಿಗಳೆಲ್ಲ ಭೂಗಳ್ಳರ ಪಾಲಾಗುತ್ತಿದೆ. ಹೀಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ವಾರ್ಡ್ ನಂಬರ್ 15 ರಲ್ಲಿ ಪುರಸಭೆ ಸ್ವತ್ತನ್ನು ಕೆಲ ಸಮುದಾಯದವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಇನ್ನೂ ಈ ಬಗ್ಗೆ ಈಗಾಗಲೇ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರು ಇಲ್ಲಿಯವರೆಗೆ ಪುರಸಭೆ ಸ್ವತ್ತನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ ಇದರಿಂದ ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸ್ಥಳಿಯರು ಆರೋಪ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಗಳನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಇಷ್ಟರ ಮಟ್ಟಿಗೆ ನಿರ್ಲಕ್ಷ್ಯ ತೋರುತ್ತಿರುವುದು ಶೋಚನೀಯ ಸಂಗತಿ. ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ವಿಜಯಪುರ ಪುರಸಭೆ ಸ್ವತ್ತಿನ್ನು ಒತ್ತುವರಿ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಅದನ್ನು ತೆರವು ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶೀಘ್ರದಲ್ಲಿ ಒತ್ತುವರಿ ತೆರವು ಮಾಡಿಲ್ಲ ಅಂದ್ರೆ ಹೋರಾಟದ ಹಾದಿ ಹಿಡಿಯುವುದಾಗಿ ಮಾಜಿ ಪುರಸಭಾ ಸದಸ್ಯ ರಾಮಚಂದ್ರಪ್ಪ ನೇತೃತ್ವದಲ್ಲಿ ವಿಜಯಪುರ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.
ರಾಮಾಂಜಿ.ಎಂ ಬೂದಿಗೆರೆ.