ಬೆಂಗಳೂರು : ಕೇಂದ್ರ ಸರ್ಕಾರವು ಅಹಂಕಾರದಿಂದ ಮೂರು ಕಾಯ್ದೆ ಜಾರಿ ಮಾಡಿತ್ತು, ಲಂಕಾಧಿಪತಿ ಅಹಂಕಾರ ಹೇಗೆ ಹೋಯ್ತು, ಹಾಗೇ ರೈತರ ಮೂಲಕ ಮೋದಿ ಅಹಂಕಾರ ಹೊಯ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ನಗರದಲ್ಲಿಂದು ನಡೆದ ರೈತ ಹಾಗೂ ಜನಸಾಮಾನ್ಯರ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ರೈತರ ಹೋರಾಟದಿಂದ ಕಾಯ್ದೆ ವಾಪಸ್ಸು ಆಯ್ತು. ನಾನು ಕೂಡ ಹೋರಾಟ ಮಾಡುವ ಮೂಲಕ ಬಂದಿದ್ದೇನೆ. ನನಗೆ ಸವಾಲು ಹಾಕಿದ್ರು, ಭ್ರಷ್ಟಾಚಾರ ಕಡಿವಾಣ ಹಾಕಲು. ಚುನಾವಣೆಗೆ ನಿಲ್ಲಿ ಅಂದ್ರು, ನನಗೆ ಆ ಶಕ್ತಿ ಇಲ್ಲ ಅಂದೆ. ಸಾಮಾನ್ಯ ಜನರಾಗಿ ನಾವು ಚುನಾವಣೆ ಎದುರಿಸಿದ್ದೇವೆ. ದೆಹಲಿ, ಪಂಜಾಬ್ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು ಎಂದರು.
ಇಲ್ಲಿ ೪೦% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಇದನ್ನು ನಾನು ಹೇಳಿದ್ದಲ್ಲ, ಮೋದಿನೇ ಹೇಳಿದ್ದಾರೆ. ಇಲ್ಲಿ ಶಾಲೆ, ಆಸ್ಪತ್ರೆ ಹದಗೆಟ್ಟಿವೆ, ಅದನ್ನು ಸರಿಮಾಡಬೇಕು. ದೆಹಲಿ ಶಾಲೆಯಲ್ಲಿ ೯೯% ಫಲಿತಾಂಶ ಬಂದಿದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ. ಆರೋಗ್ಯ ಕ್ಷೇತ್ರ ಬಹಳ ಸುಧಾರಿಸಿದ್ದೇವೆ. ಯಾವುದೇ ಆಪರೇಷನ್ ಅದ್ರೂ ಉಚಿತ ಸೇವೆ ಸಿಗುತ್ತೆ. ವಿದ್ಯುತ್ ಕೂಡ ಉಚಿತ ಮಾಡಿದ್ದೇವೆ. ಯಾಕಂದ್ರೆ ನಾವು ಭ್ರಷ್ಟಾಚಾರ ಮಾಡಲ್ಲ. ನಾವು ನಿಷ್ಠಾವಂತ ಸರ್ಕಾರ ನಡೆಸುತ್ತಿದ್ದೇವೆ.ಇದರಿಂದ ಸಾಕಷ್ಟು ಹಣ ಉಳಿಸಿದ್ದೇವೆ. ನಮಗೆ ರಾಜಕೀಯ ಮಾಡಲು ಬರಲ್ಲ, ಕೆಲಸ ಮಾತ್ರ ಮಾಡುತ್ತೇವೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ತೆರೆದಿಟ್ಟರು.