ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ -169ಎ ರ ತೀರ್ಥಹಳ್ಳಿ – ಉಡುಪಿ ರಸ್ತೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನು ಆಗುಂಬೆ ಘಾಟಿಯ ರಸ್ತೆಯು ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಭಾರ ತಡೆಯುವ ಕ್ಷಮತೆ ಕ್ಷೀಣಿಸುತ್ತಿದೆ. ಇಲ್ಲಿ ಭಾರಿ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ರಸ್ತೆಯ ಬದಿಯ ಮಣ್ಣು ಕುಸಿತ ಉಂಟಾಗಿ, ರಸ್ತೆ ಸಂಚಾರಕ್ಕೆ ತೊಂದರೆಯಾಗಲಿದೆ. ಜೊತೆಗೆ, ಸಾಕಷ್ಟು ಅಪಘಾತಗಳಿಗೆ ಕಾರಣವಾಗುವ ಹಿನ್ನೆಲೆಯಲ್ಲಿ, ಮಳೆಗಾಲ ಮುಗಿಯುವವರೆಗೆ ಈ ಕ್ರಮ ಜರುಗಿಸಲಾಗಿದೆ.
ಜೂ. 15 ರಿಂದ ಅ. 15 ರವರೆಗೆ 12 ಟನ್ ಗಿಂತ ಜಾಸ್ತಿ ಭಾರದ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಇದಕ್ಕೆ ಪರ್ಯಾಯವಾಗಿ ಭಾರೀ ವಾಹನ ಚಾಲಕರು, ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಶೃಂಗೇರಿ – ಕೆರೆಕಟ್ಟೆ – ಕಾರ್ಕಳ – ಉಡುಪಿ – ಮಂಗಳೂರು ಮಾರ್ಗವಾಗಿ ಮತ್ತು ಶಿವಮೊಗ್ಗ – ತೀರ್ಥಹಳ್ಳಿ – ಮಾಸ್ತಿಕಟ್ಟೆ – ಹುಲಿಕಲ್ -ಹೊಸಂಗಡಿ – ಸಿದ್ದಾಪುರ – ಉಡುಪಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.