ಮೈಸೂರು: ಕೊರೋನಾ ಸೋಂಕು ಭೀತಿಗೆ ಅಷಾಢ ಶುಕ್ರವಾರದ ಆಚರಣೆಗಳಿಗೆ ಸಾಂಸ್ಕೃತಿಕ ನಗರಿಯಲ್ಲಿ ಬ್ರೇಕ್ ಹಾಕಲಾಗಿದೆ.ಜೊತೆಗೆ ಅದ್ದೂರಿಯಾಗಿ ನಡೆಯುತ್ತಿದ್ದ ಚಾಮುಂಡೇಶ್ವರಿ ವರ್ಧಂತಿಗೂ ಸಹ ಬ್ರೇಕ್ ಹಾಕಲಾಗಿದೆ.
ಆಷಾಢ ಶುಕ್ರವಾರಗಳಲ್ಲಿ ಹಾಗೂ ತಾಯಿ ಚಾಮುಂಡೇಶ್ವರಿ ವರ್ಧಂತಿ ವೇಳೆ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸುವ ಹಿನ್ನೆಲೆ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇಂದು ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದ್ದು, ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಕೊಟ್ಟರೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವೇಳೆ ಕೊರೋನಾ ಸೋಂಕು ಮತ್ತೆ ಸ್ಫೋಟಗೊಳ್ಳುವ ಸಂಭವ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಅದ್ದೂರಿ ಆಚರಣೆ ರದ್ದುಪಡಿಸಲು ನಿರ್ಧರಿಸಲಾಗಿದೆ. ಸಭೆ ತೀರ್ಮಾನದಂತೆ ಆಷಾಢ ಮಾಸದ ಎಲ್ಲಾ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಹೇರಲಾಗಿದೆ.
ಈ ವೇಳೆ ಸಾಂಪ್ರದಾಯಿಕವಾಗಿ ಪೂಜೆ ನಡೆಯಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದೆ. ಅಮ್ಮನವರ ವರ್ಧಂತಿ ದಿನ ರಾಜವಂಶಸ್ಥರಿಂದ ವಿಶೇಷ ಪೂಜೆ ನಡೆಯಲಿದೆ. ಸಾಂಪ್ರದಾಯಿಕವಾಗಿ ಪೂಜೆ ನಡೆಯಲು ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ಚಾಮುಂಡಿ ಬೆಟ್ಟದ ಗ್ರಾಮಸ್ಥರೂ ಸಹ ಜಿಲ್ಲಾಡಳಿತಕ್ಕೆ ಆಷಾಢ ಶುಕ್ರವಾರ ಆಚರಣೆಗಳನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ನಗರದ ಹಲವೆಡೆ ಆಷಾಢದ ಹೆಸರಲ್ಲಿ ಪ್ರಸಾದ ವಿನಿಯೋಗಕ್ಕೂ ಬ್ರೇಕ್ ಹಾಕಲಾಗಿದೆ. ಆಷಾಢದ ಹೆಸರಲ್ಲಿ ಪ್ರಸಾದ ನೀಡದಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಒಟ್ಟಾರೆ ನೂರಾರು ವರ್ಷಗಳಿಂದ ಚಾಮುಂಡಿ ಬೆಟ್ಟದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಅಷಾಢ ಶುಕ್ರವಾರಗಳ ಆಚರಣೆಗೆ ಕೊರೋನಾ ಕರಿನೆರಳು ಬಿದ್ದಂತಾಗಿದೆ.