ಹಂಪಿಯ ಕಂಬ ಉರುಳಿಸಿದವರೇ ನಿಲ್ಲಿಸಬೇಕು..!

0
256

ಹಂಪಿ: ಮಧ್ಯಯುಗದ ದಕ್ಷಿಣ ಭಾರತದ ಅತೀ ದೊಡ್ಡ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ. ಈ ವಿಸ್ತೃತ ಸಾಮ್ರಾಜ್ಯದ ರಾಜಧಾನಿ ವಿಶ್ವ ವಿಖ್ಯಾತ ಹಂಪಿ. ಇಂದಿಗೂ ಗತಕಾಲದ ವೈಭವ ಸಾರುವ ಹಂಪಿ ನಮ್ಮ ಹೆಮ್ಮೆ. ಆದರೆ ಕೆಲದಿನಗಳ ಹಿಂದೆ ಕಿಡಿಗೇಡಿಗಳು ಇಲ್ಲಿನ ಪುರಾತನ ಕಂಬಗಳನ್ನು ಉರುಳಿಸಿ ವಿಕೃತ ಮೆರೆದಿದ್ರು. ಇದೀಗ ಈ ಕೆಲಸ ಮಾಡಿದವರಿಗೆ ಕೋರ್ಟ್​ ತಕ್ಕ ಶಾಸ್ತಿ ಮಾಡಿದೆ.

ವಿಶ್ವವಿಖ್ಯಾತ ಹಂಪಿಯ ಕಂಬಗಳನ್ನು ಯುವಕರು ಕೆಡವಿ ಹಾಕಿದ್ದ ದೃಶ್ಯ ಜನರಲ್ಲಿ ಆಕ್ರೋಶದ ಕಿಚ್ಚು ಹೊತ್ತಿಸಿತ್ತು. ಇದೀಗ ಈ ಕಿಡಿಗೇಡಿಗಳಿಗೆ ಕೋರ್ಟ್​ ವಿನೂತನ ಶಿಕ್ಷೆ ವಿಧಿಸಿದೆ. ಘಟನೆ ಬಗ್ಗೆ ತೀರ್ಪು ನೀಡಿರುವ ಹೊಸಪೇಟೆ ಜೆಎಂಎಫ್ ಕೋರ್ಟ್​ ಕೆಡವಿದ ಸ್ಮಾರಕಗಳನ್ನ ಆರೋಪಿಗಳೇ ಮರಳಿ ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಆರೋಪಿಗಳಿಗೆ ಬಿಸಿಮುಟ್ಟಿಸಿದೆ.

ಹಂಪಿಯ ಗಜಶಾಲೆಯ ಹಿಂಭಾಗ ಶ್ರೀ ವಿಷ್ಣು ದೇವಾಲಯದ ಗಜಶಾಲೆಯ ಬಳಿಯ ಸಾಲು ಕಂಬಗಳನ್ನ ಕೆಡವಿ ಸ್ಮಾರಕಗಳನ್ನು ಹಾಳುಗೆಡವಲಾಗಿತ್ತು. ಯುವಕರ ವರ್ತನೆಯ ವೀಡಿಯೊ ಪೆಬ್ರವರಿ 1ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯ ನಂತರ ಎಚ್ಚೆತ್ತುಕೊಂಡಿದ್ದ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿತ್ತು.

ಸ್ಮಾರಕಗಳನ್ನ ಕೆಡವಿದ ಆಯುಷ್ ಸಾಹು, ರಾಜಬಾಬು, ರಾಜ್ ಆರ್ಯನ್, ರಾಜೇಶ್ ಚೌದರಿಯನ್ನ ಬಳ್ಳಾರಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಆರೋಪಿಗಳಿಗೆ 70 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಅಲ್ಲದೇ ಮರಳಿ ಸ್ಮಾರಕಗಳನ್ನ ನಿಲ್ಲಿಸಿದ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಹಾಗೂ ಪೊಲೀಸರು ವರದಿ ನೀಡಿದ ನಂತರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಒಟ್ಟಿನಲ್ಲಿ ಯಾವುದೇ ಸ್ಮಾರಕ ಹಾಳುಗೆಡಹುವುದು ಬಹಳ ಸುಲಭ. ಆದರೆ, ಅದನ್ನು ಕಾಪಾಡುವುದು ಎಷ್ಟು ಕಷ್ಟ ಎನ್ನುವುದು ಕೆಡವಿದ ವಿದ್ಯಾವಂತ ಯುವಕರಿಗೆ ಗೊತ್ತಾಗಲಿ ಎಂಬುದು ಎಲ್ಲರ ಆಶಯ. ನ್ಯಾಯಲಯದ ಈ ತೀರ್ಪಿಗೆ ಶ್ಲಾಘನೆ ವ್ಯಕ್ತವಾಗಿದೆ.

ಭೀಮಪ್ಪ ಕೊಳಚಿ, ಬಳ್ಳಾರಿ

LEAVE A REPLY

Please enter your comment!
Please enter your name here