ಬೆಂಗಳೂರು: ಕರುನಾಡಿಗೂ ಕೂಡ ಕಿಲ್ಲರ್ ಬ್ರಿಟನ್ ವೈರಸ್ ಲಗ್ಗೆ ಇಟ್ಟಿದೆ. ಆದರೆ ಸರ್ಕಾರ ಮಾತ್ರ ಶಾಲೆ ಆರಂಭದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಸ್ಪಷ್ಟಪಡಿಸಿದೆ. ಆದರೆ ಈಗ ಬ್ರಿಟನ್ ರೂಪಾಂತರಿ ಕೊರೋನಾ ಆತಂಕದ ಮಧ್ಯೆ ಶಾಲಾರಂಭ ಸಿದ್ದತೆ ನಡೆಸುತ್ತಿರುವ ಸರ್ಕಾರದ ನಿರ್ಧಾರಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿದೆ.
ಬ್ರಿಟನ್ ಕೊರೋನಾತಂಕದ ಮಧ್ಯೆ ಶಾಲೆಗಳು ಪುನಾರಂಭ..! ಕಳೆದ 10 ತಿಂಗಳಿಂದ ಲಾಕ್ ಆಗಿದ್ದ ಶಾಲಾ ಕಾಲೇಜುಗಳು ಅನ್ಲಾಕ್ ಆಗೋಕೆ ಕೌಂಟ್ ಡೌನ್ ಶುರುವಾಗಿದೆ. ಒಂದು ಕಡೆ ಬ್ರಿಟನ್ ರೂಪಾಂತರಿ ಕೊರೋನಾ ಕೇಸ್ಗಳು ದಾಖಲಾಗಿದ್ರೂ ಕೂಡ ಹತ್ತು ಹನ್ನೆರಡನೇ ತರಗತಿ ಆರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರ ಮೂಲಕ ಶಾಲೆ ಆರಂಭಿಸಲು ಮುಂದಾಗಿದೆ. ರೂಪಾಂತರಿ ಕೊರೋನಾದ ಬಗ್ಗೆ ತಜ್ಞರು ವರದಿ ಕೊಡೋವರೆಗೂ ಶಾಲಾರಂಭದ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾಭ್ಯಾಸಕ್ಕಿಂತ ಮಕ್ಕಳ ಆರೋಗ್ಯವೇ ಮುಖ್ಯ ಎಂದು ಪೋಷಕರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 3 ಜನರಿಗೆ ಬ್ರಿಟನ್ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಪೋಷಕರು ಪುಲ್ ಟೆನ್ಷನ್ ಆಗಿದ್ದಾರೆ. ಹೊಸ ವೈರಸ್ ಹಾವಳಿ ಮಧ್ಯೆ ಸರ್ಕಾರದ ನಿರ್ಧಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜನವರಿ ಅಂತ್ಯದವರೆಗೂ ಚಳಿಗಾಲ ಇರುತ್ತೆ. ಚಳಿಗಾಲದಲ್ಲಿ ವೈರಸ್ಗಳು ಬೇಗ ಹರಡುತ್ವೆ. ಹೊಸ ವೈರಸ್ ಹೇಗೆ ಮಕ್ಕಳನ್ನು ಕಾಡುತ್ತೋ ಗೊತ್ತಿಲ್ಲ. ಹಾಗಾಗಿ ಮಕ್ಕಳಿಗೆ ತೊಂದರೆಯಗುತ್ತೆ. ಜೀವ ಇದ್ದರೆ ಶಿಕ್ಷಣವನ್ನು ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಶಾಲಾರಂಭ ವಿಚಾರದಲ್ಲಿ ಶಿಕ್ಷಣ ಸಚಿವರು ಪೋಷಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ವಿಫಲವಾಗಿದ್ದಾರೆ. ಅಟ್ ಲಿಸ್ಟ್ ನಗರ ಪ್ರದೇಶಗಳ ಶಾಲೆ ಆರಂಭವಾದರೂ ಮುಂದೂಡಿಕೆ ಮಾಡಿ ಎಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ಇತ್ತ ವೈದ್ಯರು ಹೇಳೋ ಪ್ರಕಾರ ಇದು ಶೇ.70 ರಷ್ಟು ವೇಗವಾಗಿ ಹರಡುತ್ತೆ. ಯುಕೆಯಲ್ಲಿ ಸದ್ಯ ಸಂಪೂರ್ಣ ಲಾಕ್ಡೌನ್ ಮಾಡಿದ್ದಾರೆ. ನಮ್ಮ ದೇಶದಲ್ಲಿ ಈ ವೈರಸ್ ಹೇಗೆ ರಿಯಾಕ್ಟ್ ಮಾಡುತ್ತೆ ನೋಡಬೇಕಿದೆ. ಹೀಗಾಗಿ ಕೆಲ ದಿನಗಳವರೆಗೆ ಜಾಗೃತಿಯಿಂದ ಇರೋದು ಒಳಿತು ಅಂತ ತಿಳಿಸಿದ್ದಾರೆ. ಹೀಗಾಗಿ ಪೋಷಕರು ನಾವು ಮೆಡಿಕಲ್ ಸ್ಟೋರ್ ನಲ್ಲಿ ಕೊರೋನಾಗೆ ಮಾನ್ಯತೆ ಪಡೆದ ವ್ಯಾಕ್ಸಿನ್ ಬರೋವರೆಗೂ ಶಾಲೆ ಬೇಡ ಅಂತ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಸರ್ಕಾರವೇನೋ ಶಾಲಾರಂಭ ಮಾಡೋಕೆ ಉತ್ಸುಕವಾಗಿದ್ದು, ತುದಿಗಾಲಲ್ಲಿ ನಿಂತಿದೆ. ಆದರೆ ಶಾಲೆ ಆರಂಭ ಆದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸ್ತಾರಾ ಅನ್ನೋದಕ್ಕೆ ಜನವರಿ 1 ರ ಬಳಿಕವಷ್ಟೇ ಉತ್ತರ ಸಿಗಲಿದೆ.