ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋರೋನಾ ವಿರುದ್ಧಹೋರಾಡಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು,‘ದೇಶದಿಂದ ಕೊರೋನಾವನ್ನು ಓಡಿಸಬೇಕು. ನಮಗೆ ಎಲ್ಲರಿಗೂ ದೇಶ ಮೊದಲಾಗಿರಬೇಕೆ ಹೊರತು ರಾಜಕೀಯ ಪಕ್ಷವಲ್ಲ. ಅಲ್ಲದೆ ನಾವು ಸದೃಢವಾಗಿ ಕೊರೋನಾ ವಿರುದ್ಧ ಹೋರಾಡಬೇಕು. ಈ ಕೊರೋನಾದಿಂದ ಇಡೀ ದೇಶವೇ ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ಜಾತಿ, ಧರ್ಮ ಮೀರಿ ಕೊರೋನಾ ವಿರುದ್ಧ ಹೋರಾಡೋಣ‘ ಎಂದು ಕರೆ ಕೊಟ್ಟರು.
ಈಗ ದೇಶಕ್ಕೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳುವ ಅವಕಾಶ ಬಂದಿದ್ದು, ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡಬೇಕಿದೆ. ನಮ್ಮ ದೇಶಕ್ಕೆ ಇದೊಂದು ಸವಾಲಿನ ಸಮಯವಾಗಿದೆ. ಇನ್ನು ಈಗಾಗಲೇ ಕೊರೋನಾವನ್ನು ದೇಶದಿಂದ ಓಡಿಸಲು ಹೋರಾಡುತ್ತಿರುವವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಣ್ಣ ಗ್ರಾಮಗಳಿಂದ ಹಿಡಿದು ನಗರದವರೆಗೂ ಎಲ್ಲರೂ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಅಲ್ಲದೆ ಪಿಎಂ-ಕೇರ್ಸ್ ಫಂಡ್ಗೆ ಉದಾರವಾಗಿ ದೇಣಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಷ್ಟೆ ಅಲ್ಲದೆ ಬಿಜೆಪಿ ಕಾರ್ಯಕರ್ತರಿಗೆ ಬಡವರು ಹಸಿವಿನಿಂದ ನರಳದಂತೆ, ಹಾಗೆಯೇ ಅವರಿಗೆ ಪಡಿತರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೀಗೆ ಬಡವರ ಕಲ್ಯಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.