ಬೆಂಗಳೂರು: ಚೀನಾದೆಲ್ಲೆಡೆ ಭಯ ಹುಟ್ಟಿಸಿರುವ ಕೊರೋನಾ ವೈರಸ್ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿದೆ. ನಮ್ಮ ಸಿಲಿಕಾನ್ ಸಿಟಿ ಮೇಲೂ ಕೊರೋನಾದ ಕೆಂಗಣ್ಣು ಬಿದ್ದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ.
ಈ ಮಹಾಮಾರಿ ಕೊರೋನಾವನ್ನು ಪತ್ತೆ ಹಚ್ಚುವುದಾದರೂ ಹೇಗೆ? ಅದರ ಲಕ್ಷಣಗಳೇನು? ಅದು ಯಾವ ರೀತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ? ಕೊರೋನಾ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳಾದರೂ ಏನು? ಅನ್ನೋದನ್ನು ಗಮನಿಸಬೇಕು. ಆ ಬಗ್ಗೆ ಇಲ್ಲಿದೆ ವಿವರಣೆ.
ಕೊರೋನಾ ವೈರಸ್ ಹೇಗೆ ಹರಡುತ್ತದೆ?
ಈ ವೈರಸ್ಗೆ ತುತ್ತಾಗಿರುವವರು ಕೆಮ್ಮಿದಾಗ, ಸೀನಿದಾಗ ವೈರಸ್ಗಳು ಆರೋಗ್ಯವಂತ ವ್ಯಕ್ತಿಯನ್ನು ತಗುಲುತ್ತದೆ. ಅಲ್ಲದೆ ಸೋಂಕು ಪೀಡಿತ ವ್ಯಕ್ತಿಯು ಬಳಕೆ ಮಾಡಿದ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿಯು ಮುಟ್ಟುವುದರಿಂದಲೂ ಈ ವೈರಸ್ ಹರಡುತ್ತದೆ.
ಕೊರೋನಾ ವೈರಸ್ನ ಲಕ್ಷಣಗಳೆನು?
ಸಣ್ಣ ಪ್ರಮಾಣದಲ್ಲಿ ಜ್ವರ, ಕೆಮ್ಮು, ಸುಸ್ತು, ತಲೆನೋವು, ಅತಿಸಾರ, ಉಸಿರಾಟದ ಸಮಸ್ಯೆ ಹಾಗೂ ಬಹು ಅಂಗಾಂಗಗಳ ವೈಫಲ್ಯದಂತಹ ಲಕ್ಷಣಗಳು ಕಂಡು ಬರುತ್ತದೆ.
ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು:
- ಮೊದಲನೆಯದಾಗಿ ಶುಚಿತ್ವ ಕಾಪಾಡಬೇಕು. ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕೈ ತೊಳೆದುಕೊಳ್ಳದೆ ಬಾಯಿ, ಮೂಗು, ಕಣ್ಣು ಮುಟ್ಟಿಕೊಳ್ಳಬೇಡಿ. ಪದೇ ಪದೇ ಬಳಸುವ ವಸ್ತುಗಳನ್ನು ಶುಚಿಯಾಗಿಟ್ಟುಕೊಳ್ಳಿ.
- ಕೆಮ್ಮು, ಶೀತ ಅಥವಾ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯಿಂದ ಆದಷ್ಟು ದೂರವಿರುವುದು ಉತ್ತಮ. ಒಂದು ಮೇಲೆ ಹೇಳಿರುವ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೂ ಮನೆಯಲ್ಲಿರೋದು ಒಳ್ಳೆಯದು.
- ಜನಸಂದಣಿಯಿಂದ ಆದಷ್ಟು ದೂರವಿರಿ.
- ಜ್ವರ, ಕೆಮ್ಮು ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅದರಲ್ಲೂ ಎನ್ – 95 ಮಾಸ್ಕ್ ಧರಿಸಿಕೊಳ್ಳಿ.
- ಇನ್ನು ನೀವು ತಿನ್ನುವಂತಹ ಪ್ರತಿಯೊಂದು ಆಹಾರವನ್ನು ಸರಿಯಾಗಿ ಬೇಯಿಸಿ.
- ನೀವು ಈಗಾಗಲೇ ವಿದೇಶ ಪ್ರಯಾಣ ಬೆಳೆಸಿ ಬಂದಿದ್ದರೆ ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ವಿದೇಶ ಪ್ರವಾಸವನ್ನು ಹಮ್ಮಿಕೊಳ್ಳುವ ಯೋಚನೆಯಲ್ಲಿದ್ದರೆ ಅದನ್ನು ಮುಂದೂಡಿ. ಅಲ್ಲದೆ ವಿದೇಶದಿಂದ ಬಂದವರಿಂದ ದೂರವಿರಿ.