ವುಹಾನ್: ಕೊರೋನಾ ವೈರಸ್ನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ಪೀಡಿತರ ಸಂಖ್ಯೆ ಪ್ರತಿ ಕ್ಷಣ ಏರುತ್ತಿದೆ. ಇದೀಗ 6000 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 132ಕ್ಕೆ ಏರಿದೆ.
ಈ ಮಾರಣಾಂತಿಕ ವೈರಸ್ಗೆ ಒಟ್ಟು 9238 ಮಂದಿ ತುತ್ತಾಗಿದ್ದು, ಮಂಗಳವಾರ ಒಂದೇ ದಿನದಲ್ಲಿ 1459 ಜನ ತುತ್ತಾಗಿರುವುದು ಕಂಡು ಬಂದಿದೆ. ಪ್ರಮುಖ ನಗರಗಳಾದ ಬೀಜಿಂಗ್ನಲ್ಲಿ 91 ಹಾಗೂ ಶಾಂಘೈನಲ್ಲಿ 80 ಜನರಿಗೆ ಸೋಂಕು ತಗಲಿದೆ.
ಚೀನಾದ ನೆರೆಹೊರೆ ರಾಷ್ಟ್ರಗಳು ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಜಪಾನ್ ತನ್ನ 200 ಪ್ರಜೆಗಳನ್ನು ಹಾಗೂ ಅಮೆರಿಕಾ 240 ಪ್ರಜೆಗಳನ್ನು ಏರ್ಲಿಫ್ಟ್ ಮೂಲಕ ವಾಪಸ್ ಕರೆಸಿಕೊಂಡಿದೆ.
ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಗರಗಳಲ್ಲಿ ಸಂಚಾರ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ 4.10 ಕೋಟಿ ಮಂದಿಯ ಜೀವನ ಅಸ್ತವ್ಯಸ್ತವಾಗಿದೆ.
ಸಂಚಾರ ನಿರ್ಬಂಧ ಹೇರಿರುವ ಕಾರಣ ಜನರು ಮನೆಗಳಿಂದ ಹೊರಬರುತ್ತಿಲ್ಲ. ಔಷಧ ಅಂಗಡಿಗಳು ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಸಾರ್ವಜನಿಕ ಸಮಾರಂಭಗಳು, ಕೌಟುಂಬಿಕ ಕಾರ್ಯಕ್ರಮಗಳನ್ನೂ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.