ಮೈಸೂರು: ರಾಜ್ಯದ ಸೂಪರ್ ಸಿಎಂ ಎಂದೇ ಪ್ರಖ್ಯಾತಿಯಾಗುತ್ತಿರುವ ಸಿಎಂ ಪುತ್ರ ವಿಜಯೇಂದ್ರ ವಿರುದ್ದ ಬಾಂಬ್ ಸಿಡಿಸಲಾಗಿದೆ. 5 ಸಾವಿರ ಕೋಟಿ ಅಕ್ರಮ ಆಸ್ತಿಗಳಿಸಿದ್ದಾರೆ ಎಂಬ ಆರೋಪ ಇದಾಗಿದೆ. ಅಕ್ರಮ ಕೂಟ ಕಟ್ಟಿಕೊಂಡು ಭ್ರಷ್ಟತನ ಎಸಗುತ್ತಿದ್ದಾರೆಂಬ ಆರೋಪ ಇದಾಗಿದೆ. ಬಿಜೆಪಿ ಶಾಸಕರೇ ಬರೆದಿದ್ದಾರೆ ಎನ್ನಲಾದ ಪತ್ರವನ್ನ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಲಕ್ಷ್ಮಣ್ ರವರು ಬಿಡುಗಡೆ ಮಾಡಿದ ಪತ್ರ ಸಧ್ಯಕ್ಕೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಇದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ರವರು ಬಿಜೆಪಿ ಸರ್ಕಾರದ ವಿರುದ್ದ ಮಾಡುತ್ತಿರುವ ಎರಡನೇ ಗಂಭೀರ ಆರೋಪ. ಕೊರೋನಾ ನಿಯಂತ್ರಣ ವಿಚಾರದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿ ವೇಳೆ ಸುಮಾರು 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗಷ್ಟೆ ಬಾಂಬ್ ಸಿಡಿಸಿದ್ದ ಲಕ್ಷ್ಮಣ್ ಇದೀಗ ಮತ್ತೊಂದು ಆರೋಪ ಹೊರಡಿಸಿದ್ದಾರೆ. ಅದೇನಂದ್ರೆ ಸಿಎಂ ಪುತ್ರ ವಿಜಯೇಂದ್ರ ಭಾರಿ ಅಕ್ರಮ ಸಂಪತ್ತು ಸಂಗ್ರಹಿಸಿರುವ ಆರೋಪ. ಬಿಜೆಪಿಯ 7 ಶಾಸಕರು ಬರೆದಿರುವ ಪತ್ರವೊಂದನ್ನ ಬಿಡುಗಡೆ ಮಾಡುವ ಮೂಲಕ ಭಾರಿ ಆರೋಪ ಹೊರೆಸಿದ್ದಾರೆ. ಸಿಎಂ v/s ಸೂಪರ್ ಸಿಎಂ ಎಂಬ ಹೆಡ್ ಲೈನ್ಸ್ ಇರುವ ಪತ್ರ ಇದಾಗಿದೆ. 7 ಶಾಸಕರ ಸಹಿ ಇರುವ ಪತ್ರ ಇದಾಗಿದೆ. ಪತ್ರದಲ್ಲಿ ಸಂಪೂರ್ಣವಾಗಿ ಸಿಎಂ ಪುತ್ರ ವಿಜಯೇಂದ್ರರವರ ಅಧಿಕಾರ ದುರುಪಯೋಗವನ್ನ ಉಲ್ಲೇಖಿಸಲಾಗಿದೆ. 31 ಮಂದಿಯ ಅಕ್ರಮ ಕೂಟವನ್ನ ರಚಿಸಿಕೊಂಡು 5 ಸಾವಿರ ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ಕೈಗೆ ಸಿಕ್ಕ ಪತ್ರವನ್ನ ಗಂಭೀರವಾಗಿ ಪರಿಗಣಿಸಿದ ಲಕ್ಷ್ಮಣ್ ಆಂತರಿಕ ತನಿಖಾ ತಂಡ ರಚಿಸಿ ಬೆನ್ನತ್ತಿದಾಗ ಪತ್ರದಲ್ಲಿ ಆರೋಪಿಸಲಾದ ಅಂಶಗಳ ಪೈಕಿ ಶೇಕಡಾ 90 ರಷ್ಟು ಸಾಬೀತಾಗಿದೆ. ಇದಕ್ಕೆ ದಾಖಲೆಗಳೂ ಇವೆ ಎಂದು ತಿಳಿಸಿದ್ದಾರೆ. ಬಿ.ವೈ.ವಿಜಯೇಂದ್ರ ರಚಿಸಿಕೊಂಡ ಅಕ್ರಮ ಕೂಟದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ವರ್ಗಾವಣೆ, ಟೆಂಡರ್ಗಳು ಹೀಗೆ ಹತ್ತು ಹಲವು ವಿಚಾರದಲ್ಲಿ ಅಕ್ರಮ ನಡೆದಿರುವುದು ನಮ್ಮ ತನಿಖೆಯಲ್ಲಿ ಧೃಢವಾಗಿದೆ. ಸೆಪ್ಟೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಲಕ್ಷ್ಮಣ್ ತಿಳಿಸಿದ್ದಾರೆ.
ಅಕ್ರಮಕೂಟ ಕಟ್ಟಿಕೊಂಡು ಬೇನಾಮಿ ಆಸ್ತಿ ಮಾಡಿದ್ದಾರೆಂದು ಆರೋಪಿಸಿರುವ ಪತ್ರ ಯಾರಿಗೆ ತಲುಪಿದೆ ಗೊತ್ತಿಲ್ಲ. ಒಂದೂವರೆ ತಿಂಗಳ ಹಿಂದೆ ಬಹಿರಂಗವಾದ ಪತ್ರಕ್ಕೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಪತ್ರ ಒರಿಜಿನಲ್ಲೋ ಅಥವಾ ಡೂಪ್ಲಿಕೇಟೋ ಗೊತ್ತಿಲ್ಲ. ಆದ್ರೆ ಸಧ್ಯಕ್ಕೆ ಈ ಪತ್ರ ರಾಜ್ಯ ರಾಜಕೀಯದಲ್ಲಿ ತಲ್ಲಣವಾಗಿದೆ. ದೆಹಲಿಯಲ್ಲಿ ಲಕ್ಷ್ಮಣ್ ಬಿಡುಗಡೆ ಮಾಡಲಿರುವ ದಾಖಲೆಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.