ಬೆಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಆದೇಶವನ್ನು ಹೊರಡಿಸಲಾಗಿತ್ತು. ಹಾಗಾಗಿ ರಾಜ್ಯದಲ್ಲಿಯೂ ಲಾಕ್ಡೌನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನಿಂದ ಯಾವ ರೀತಿಯಾಗಿ ಪರಿಣಾಮ ಬೀರುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಯ ರಕ್ಷಣೆಗಾಗಿ ಏಪ್ರಿಲ್ 14ರವರೆಗೆ ಲಾಕ್ಡೌನ್ ಆದೇಶವನ್ನು ಹೊರಡಿಸಿದ್ದರು‘ ಎಂದು ಹೇಳಿದರು.
ರಾಜ್ಯದಲ್ಲಿಯೂ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಮೈಸೂರು, ಮಂಗಳೂರು, ಬೀದರ್, ಬೆಂಗಳೂರು ನಗರ, ಕಲಬುರಗಿ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಾಗಾಗಿ ಸೋಂಕು ಹರಡುವಿಕೆಯ ನಿಯಂತ್ರಣಕ್ಕಾಗಿ ಸಾರ್ವಜನಿಕರು ಹೆಚ್ಚಾಗಿ ಓಡಾಡುವಂತಹ ಪ್ರದೇಶಗಳು, ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರದಂತೆ ನಿರ್ಬಂಧಿಸುವುದರೊಂದಿಗೆ ಸರ್ಕಾರ ಹಲವಾರು ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದೆ. ರಾಜ್ಯದ ಜನತೆಯು ಲಾಕ್ಡೌನ್ ಹಿಂದಿನ ಮಹತ್ವವನ್ನು ಅರಿತುಕೊಂಡು ಕಟ್ಟುನಿಟ್ಟಾಗಿ ಲಾಕ್ಡೌನ್ ಆದೇಶವನ್ನು ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ನರೇಂದ್ರ ಮೋದಿಯವರು ಘೋಷಿಸಿದ ಲಾಕ್ಡೌನ್ ಅವಧಿಯು ಏಪ್ರಿಲ್ 14ರಂದು ಕೊನೆಗೊಳ್ಳಲಿದ್ದು, ಲಾಕ್ಡೌನ್ ಆದೇಶವನ್ನು ವಿಸ್ತರಿಸಬೇಕೋ, ಬೇಡವೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರ ಬಗ್ಗೆ ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ತಿಳಿಸಿ ಎಂದು ಯಡಿಯೂರಪ್ಪ ಹೇಳಿದ್ದಾರೆ.
1armoury