ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಿಸುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಹೈಕಮಾಂಡ್ ಮತ್ತು ರಾಜ್ಯ ನಾಯಕರ ನಡುವೆ ಜಿದ್ದಾಜಿದ್ದಿ ಮುಂದುವರೆದೇ ಇದೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿ ಪ್ರತಿಕ್ರಿಯೆ ನೀಡಿ, ಇನ್ನೂ ಎರಡುವರೆ ವರ್ಷ ನಾನೇ ಸಿಎಂ ಆಗಿ ಇರುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸಿಎಂ ಬದಲಾವಣೆ ಗುಸುಗುಸು ಜೋರಾಗಿದೆ. ಯಾರೇ ಎಷ್ಟೇ ನಾಯಕತ್ವದ ಬಗ್ಗೆ ಮಾತನಾಡಿದರೂ ಯಾವುದೇ ರಿಯಾಕ್ಷನ್ ನೀಡದ ಸಿಎಂ ಮೊದಲ ಬಾರಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ನಾಯಕತ್ವದ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಈಗಾಗಲೇ ನಮ್ಮ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದು, ಮುಂದಿನ ಎರಡೂವರೇ ವರ್ಷಗಳ ಕಾಲ ನಾನೇ ಸಿಎಂ ಅಂತ ಹೇಳಿದ್ದಾರೆ. ಯಾರೋ ಒಂದಿಬ್ಬರು ಏನೋ ಹೇಳ್ತಾರೆ. ಆದರೆ ಎರಡೂವರೇ ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಇತ್ತ ಶಾಸಕ ಯತ್ನಾಳ್, ಸಿಎಂ ಬಿಎಸ್ವೈ ಅವರನ್ನ ಮತ್ತೆ ಕೆಣಕುವ ಪ್ರಯತ್ನ ಮಾಡಿದ್ದಾರೆ. ಸಿಎಂ ಇದೇ 4 ಮತ್ತು 5 ಶಾಸಕರ ವಿಭಾಗವಾರು ಸಭೆಯ ಬದಲು ಶಾಸಕಾಂಗ ಸಭೆ ಕರೆಯಲಿ. ಕೆಲ ಕ್ಷೇತ್ರದಲ್ಲಿ ಅನುದಾನದ ತಾರತಮ್ಯವಾಗಿದ್ದು, ಈ ಬಗ್ಗೆ ಮಾತನಾಡಬೇಕು ಎಂದು ರಾಜ್ಯಾಧ್ಯಕ್ಷರಿಗೆ ವಿಜಯಪುರ ಶಾಸಕ ಪುಟಗಟ್ಟಲೇ ಪತ್ರ ಬರೆದಿದ್ದಾರೆ. ಈ ಮೂಲಕ ಮತ್ತೆ ಸಿಎಂ ವಿರುದ್ದ ಅಸಮಾಧಾನ ತೋಡಿಕೊಂಡಿದ್ದಾರೆ.
ಇನ್ನೊಂದೆಡೆ ಯತ್ನಾಳ್ ಮಾತಿನ ಬಗ್ಗೆ ತರಾಟೆಗೆ ತೆಗೆದುಕೊಂಡ ಸಚಿವ ಈಶ್ವರಪ್ಪ, ಯಾವನೋ ಕುಡಿದೋನು ಮಾತನಾಡಿದರೆ ಅದಕ್ಕೆಲ್ಲಾ ತಲೆ ಕೆಡಸಿಕೊಳ್ಳೋದಕ್ಕೆ ಆಗುತ್ತಾ ಅಂತಾ ಕಿಡಿ ಕಾರಿದ್ದಾರೆ.