ಕೋಲಾರ: ಕೋಲಾರದ ಜಿಲ್ಲಾ ಪಂಚಾಯಿತಿ ಸದಸ್ಯನೋರ್ವ ಅಕ್ರಮ ಹಣಕ್ಕಾಗಿ ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವ ‘ಆಡಿಯೋ’ ಇದೀಗ ವೈರಲ್ ಆಗಿದೆ. ಮಾಲೂರು ತಾಲೂಕಿನ ಕುಡಿಯನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಚಿನ್ನಸ್ವಾಮಿಗೌಡ ಅವರು ಹಣಕ್ಕಾಗಿ ಕಂಟ್ರಾಕ್ಟರ್ಗೆ ಬೆದರಿಕೆ ಹಾಕಿದ್ದಾರೆ. ತಕ್ಷಣವೇ ಹಣವನ್ನು ಕೊಡದಿದ್ದರೆ ಕಾರ್ಮಿಕರಿಗೆ ಊಟ ಪೂರೈಸುವ ವಾಹನದಲ್ಲಿನ ಆಹಾರಕ್ಕೆ ವಿಷ ಬೆರೆಸುವ ಧಮಕಿಯನ್ನೂ ಚಿನ್ನಸ್ವಾಮಿಗೌಡ ಹಾಕಿದ್ದಾರೆ. ಊಟದ ವಾಹನವನ್ನು ರಸ್ತೆಯಲ್ಲಿಯೇ ಅಡ್ಡಗಟ್ಟಿ ರಾದ್ದಾಂತ ಮಾಡಿರುವ ಚಿನ್ನಸ್ವಾಮಿಗೌಡ ಅವರು ಜೆಡಿಎಸ್ ಪಕ್ಷದವರಾಗಿದ್ದಾರೆ. ಕೋಲಾರದ ವಿಸ್ಟ್ರನ್ ಕಂಪೆನಿಯಲ್ಲಿ ನಡೆದ ದಾಂದಲೆ ನಡೆದ ಘಟನೆಯು ಇನ್ನೂ ಹಸಿರಾಗಿರುವಾಗಲೇ ಜನಪ್ರತಿನಿಧಿಯೋರ್ವರು ಈ ಮಟ್ಟಕ್ಕೆ ಇಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ಹೊರವಲಯದಲ್ಲಿ ಕೈಗಾರಿಕಾ ವಲಯವಿದೆ. ಇಲ್ಲಿರುವ ಕೈಗಾರಿಕೆಗಳಲ್ಲಿನ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಅನೇಕ ಕ್ಯಾಟರಿಂಗ್ ಗುತ್ತಿಗೆದಾರರು ಇಲ್ಲಿದ್ದಾರೆ. ಮೊನ್ನೆಯಷ್ಟೇ ಇಂಥದೊಂದು ಕ್ಯಾಟರಿಂಗ್ ವಾಹನವನ್ನು ಕುಡಿಯನೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿಗೌಡ ರಸ್ತೆಯಲ್ಲಿಯೇ ಅಡ್ಡಗಟ್ಟಿದ್ದಾರೆ. ಕಾರ್ಮಿಕರಿಗೆ ಊಟವನ್ನು ಕೊಂಡೊಯ್ಯುತ್ತಿದ್ದ ವಾಹನದ ಸಿಬಂದಿಯನ್ನು ಅವಾಚ್ಯವಾಗಿ ನಿಂದಿಸಿದ ಚಿನ್ನಸ್ವಾಮಿಗೌಡ, ತನ್ನ ಅನುಮತಿಯಿಲ್ಲದೇ ಇಲ್ಲಿನ ವ್ಯವಹಾರ ನಡೆಸಕೂಡದು ಅಂತ ಘರ್ಜಿಸಿದ್ದಾರೆ. ಈ ಭಾಗದಲ್ಲಿನ ವ್ಯವಹಾರಗಳು ನನ್ನ ಆಣತಿಯ ಮೇರೆಗೆ ನಡೆಯಬೇಕು ಅಂತ ಸಿಬಂದಿಗೆ ಆವಾಜ್ ಹಾಕಿರುವ ಚಿನ್ನಸ್ವಾಮಿಗೌಡ, ಇಲ್ಲಿ ಕ್ಯಾಟರಿಂಗ್ ಕಂಟ್ರಾಕ್ಟ್ ಪಡೆದುಕೊಂಡಿರುವ ಮಾಲೀಕರು ಮತ್ತು ಸಿಬಂದಿಯ ಮೇಲೆ ದಾದಾಗಿರಿಯನ್ನು ಪ್ರದರ್ಶಿಸಿದ್ದಾರೆ. ತಕ್ಷಣವೇ ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಕ್ಯಾಟರಿಂಗ್ ವಾಹನದಲ್ಲಿನ ಊಟಕ್ಕೆ ವಿಷ ಬೆರೆಸುವುದಾಗಿ ಸಿಬಂದಿಯನ್ನು ಚಿನ್ನಸ್ವಾಮಿಗೌಡ ಬೆದರಿಸಿರೋದು ಆಡಿಯೋದಲ್ಲಿದೆ. ಮಾರಸಂದ್ರ ಗ್ರಾಮ ಪಂಚಾಯಿತಿ ಏರಿಯಾಗೆ ನನ್ನ ಮಗ ಪಂಚಾಯಿತಿ ಸದಸ್ಯ, ನನ್ನ ಹೆಂಡತಿ ಉಪಾಧ್ಯಕ್ಷೆ. ಚುನಾವಣೆಗೆ ನಮಗೆ ಖರ್ಚುಗಳಿರುತ್ತೆ. ನಮ್ಮನ್ನ ಮಾತನಾಡಿಸದೇ ನಿಮ್ಮ ಕೆಲಸ ಮಾಡಿಕೊಂಡಿದ್ರೆ ಹೇಗೆ ಅಂತ ಚಿನ್ನಸ್ವಾಮಿಗೌಡ ಹೇಳಿದ್ದಾರೆ. ಚಿನ್ನಸ್ವಾಮಿಗೌಡ ಬಹಳ ಅಸಭ್ಯವಾಗಿ ಮಾತನಾಡಿರುವುದು ಆಡಿಯೋದಲ್ಲಿದ್ದು, ಕ್ಯಾಟರಿಂಗ್ ಮಾಲೀಕರು ಮತ್ತು ಸಿಬಂದಿಯು ಪರಿಪರಿಯಾಗಿ ಬೇಡಿಕೊಳ್ಳುವುದು ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ.