ಬೆಂಗಳೂರು: ನಗರ ಸೇಫ್ ಸಿಟಿ ಪ್ರಾಜೆಕ್ಟ್ ವಿಚಾರವಾಗಿ ತಮ್ಮ ಮೇಲಿನ ಆರೋಪದ ಬಗ್ಗೆ ಕುರಿತು ಐಜಿಪಿ ಡಿ.ರೂಪಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಾವು ಪ್ರಾಜೆಕ್ಟ್ ಕನ್ಸಲ್ಟೆಂಟ್ಗೆ ಕರೆ ಮಾಡಿದ ಬಗ್ಗೆ ಕೆಲವು ಅಂಶಗಳನ್ನ ಉಲ್ಲೇಖ ಮಾಡಿದ್ದು, ಅಧಿಕಾರಿಗಳ ನಡುವಿನ ಈ ಪತ್ರ ಕುತೂಹಲ ಕೆರಳಿಸಿದೆ.
ನಿರ್ಭಯ ಫಂಡ್ ಅಡಿಯಲ್ಲಿ ಬೆಂಗಳೂರು ನಗರದ ಸೇಫ್ ಸಿಟಿ ಪ್ರಾಜೆಕ್ಟ್ ವಿಚಾರದಲ್ಲಿ ಪ್ರಾಜೆಕ್ಟ್ ಕನ್ಸಲ್ಟೆಂಟ್ ಗೆ ಐಜಿಪಿ ಡಿ ರೂಪಾ ಕರೆ ಮಾಡಿದ ವಿಚಾರ ಸಂಬಂಧ ಈಗ ಪತ್ರ ಸಮರ ಶುರುವಾಗಿದೆ. ಐಜಿಪಿ ಹೇಮಂತ್ ನಿಂಬಾಳ್ಕರ್ ಮತ್ತು ಡಿ.ರೂಪಾ ನಡುವೆ ದೊಡ್ಡ ಸಮರವೇ ನಡೆಯುತ್ತಿದೆ. ರೂಪಾ ಕರೆ ಮಾಡಿದ್ದ ಬಗ್ಗೆ ಬೆಂಗಳೂರು ನಗರ ಪೊಲೀಸರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. ಆ ಪತ್ರದ ಬಳಿಕ ಇದೀಗ ಡಿ ರೂಪಾ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಡಿ ರೂಪ ಬರೆದ ಪತ್ರದಲ್ಲಿ ಐಜಿಪಿ ಹೇಮಂತ್ ನಿಂಬಾಳ್ಕರ್ ಬಗ್ಗೆ ಪ್ರಸ್ತಾಪಿಸಿದ್ದು, ಐಎಂಎ 4500 ಕೋಟಿ ಹಗರಣದಲ್ಲಿ ನಿಂಬಾಳ್ಕರ್ ವಿರುದ್ಧ ಚಾರ್ಜ್ ಶೀಟ್ ಆಗಿದೆ. ಹಾಗೂ ಸರ್ಕಾರ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದೆ. ಇಂತವರನ್ನ ಕಮಿಟಿ ಸೆಕ್ರೆಟರಿ ಮಾಡಿದ್ದೀರಿ ಇದು ನ್ಯಾಯಯುತವಲ್ಲ. ಇದರಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ. ಅಲ್ಲದೆ ಟೆಂಡರ್ ಕರೆದ ಬಗ್ಗೆ ಬಿಇಎಲ್ ಪ್ರಧಾನಿ ಕಚೇರಿಗೆ ದೂರು ಕೊಟ್ಟಿದ್ದಾರೆ. ನಾನು ಹೋಂ ಸೆಕ್ರೆಟರಿ ಇದ್ದೀನಿ, ನಾನು ಅಧಿಕಾರ ದುರುಪಯೋಗ ಮಾಡಿಲ್ಲ. ನನಗೆ ಆಡಿಷನಲ್ ಚೀಫ್ ಸೆಕ್ರೆಟರಿ ಸೇಫ್ ಸಿಟಿ ಪ್ರಾಜೆಕ್ಟ್ ಬಗ್ಗೆ ಸ್ಟಡಿ ಮಾಡೋಕೆ ಕೊಟ್ಟಿದ್ದಾರೆ. ಪ್ರಾಜೆಕ್ಟ್ ನಲ್ಲಿ ಕೆಲವು ಲೋಪಗಳು ಸಹ ಕಂಡು ಬಂದಿವೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಡಿ ರೂಪಾ ಉಲ್ಲೇಖಿಸಿದ್ದಾರೆ.
ಇನ್ನೂ ಸೇಫ್ ಸಿಟಿ ಪ್ರಾಜೆಕ್ಟ್ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದು, ನಿರ್ಭಯ ಸೇಫ್ ಸಿಟಿ ಪ್ರಾಜೆಕ್ಟ್ ಪಾರದರ್ಶಕವಾಗಿ ಎಲ್ಲವನ್ನೂ ಮಾಡಲಾಗುತ್ತೆ. ಟೆಂಡರ್ ಪ್ರೊಸೆಸ್ ಜನವರಿ 8ಕ್ಕೆ ಇದೆ. ಇನ್ನೂ ನ್ಯೂ ಟೆಂಡರ್ ಬಿಡ್ಸ್ ಬಂದಿಲ್ಲ. ಸದ್ಯ ಚಾಲ್ತಿ ಇರೋ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗಲ್ಲ. ಪಾರದರ್ಶಕವಾಗಿ ಮಾಡಲಾಗುತ್ತೆ ಎಂದರು.