‘FACE BOOK’ನಿಂದ ಉದ್ಧಾರವಾಯ್ತು ಸರ್ಕಾರಿ ಶಾಲೆ..!

0
313

ಸರ್ಕಾರಿ ಶಾಲೆಗಳೆಂದರೆ ಸಾಕು ಎಲ್ಲರೂ ಮೂಗು ಮುರಿಯುವಂತೆ ಇರುತ್ತವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಸಂಖ್ಯೆಯೂ ಸಹ ಎಲ್ಲ ಕಡೆ ಕಡಿಮೆ ಇರುತ್ತೆ. ಆದ್ರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆದು ನಿಂತಿದೆ. ಅದಕ್ಕೆಲ್ಲ ಕಾರಣ ಫೇಸ್​ಬುಕ್​..! 
ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದಲ್ಲಿರೋ ಸರ್ಕಾರಿ ಶಾಲೆಗೆ ಒಮ್ಮೆ ಎಂಟ್ರಿ ಕೊಟ್ರೆ ಯಾವುದೋ ಖಾಸಗಿ ಕಾನ್ವೆಂಟಿಗೆ ಬಂದಂತೆ ಫೀಲಾಗುತ್ತೆ. ಸುಂದರವಾದ ಆಟದ ಮೈದಾನ, ಮಕ್ಕಳಿಗೆ ಕೂರಲು ಗ್ರಾನೈಟ್ ಬೆಂಚುಗಳು.. ಬಣ್ಣ-ಬಣ್ಣದ ಬಾವುಟಗಳು… ಕೊಠಡಿಯ ಮುಂದೆ ಸ್ವಾಗತ ಕಮಾನು.. ಇವೆಲ್ಲ ಶಾಲೆಯ ಅಂದ ಹೆಚ್ಚಿಸೋ ಜೊತೆಗೆ ಆಹ್ಲಾದಕರ ವಾತಾವರಣ ಸೃಷ್ಟಿಸಿವೆ.
ಈ ಶಾಲೆಯ ಉದ್ದಾರಕ್ಕೆ ಕಾರಣ ಆಗಿರೋದು ಫೇಸ್​ಬುಕ್​. ಶಾಲೆಯ ಪ್ರಗತಿಗೋಸ್ಕರ ಫೇಸ್​ಬುಕ್​ ಬಳಸಿಕೊಳ್ಳೋಕೆ ಐಡಿಯಾ ಮಾಡಿದ್ದೇ, ದೈಹಿಕ ಶಿಕ್ಷಕ ನಾರಾಯಣ ಸ್ವಾಮಿ. ಪ್ರತಿದಿನ ಇವ್ರು ಫೇಸ್ ಬುಕ್​​ನಲ್ಲಿ ಸಮಾಜ ಸೇವಕರು, ಎನ್ ಜಿಒಗಳು, ಹೊಸ ಸ್ನೇಹಿತರನ್ನು ಸಂಪರ್ಕಿಸಿ ಶಾಲಾಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡುತ್ತಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕಕೋತ್ಸವ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಕೋರುತ್ತಾರೆ. ಹೀಗಾಗಿ 5 ಲಕ್ಷ ರೂ.ಗಿಂತಲೂ ಹೆಚ್ಚಿನ ಮೌಲ್ಯದ ವಸ್ತುಗಳು ಕೊಡುಗೆ ರೂಪದಲ್ಲಿ ಶಾಲೆಗೆ ಹರಿದುಬಂದಿದೆ.
ಇನ್ನು ಈ ಶಾಲೆಯಲ್ಲಿ 1-8 ನೇ ತರಗತಿವರೆಗೆ ಒಟ್ಟು 182 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದಾನಿಗಳು ನೀಡಿದ ಕೊಡುಗೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ವ್ಯಾಸಂಗಕ್ಕೆ ಅನುಕೂಲವಾಗಿದೆ. ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಮಕ್ಕಳಿಗೇ ನೇರವಾಗಿ ದಾನಿಗಳೇ ವಿತರಿಸುವುದರಿಂದ ಅವರಿಗೂ ಒಂದು ಆತ್ಮತೃಪ್ತಿ ಸಿಗಲಿದೆ. ಶಾಲೆಯು ಯಾವುದೇ ರೀತಿಯ ನಗದು ದಾನವನ್ನು ಪಡೆಯದಿರುವುದು ಫೇಸ್ ಬುಕ್ ಸ್ನೇಹಿತರಲ್ಲಿ ವಿಶ್ವಾಸಾರ್ಹತೆ ಮೂಡಲು ಕಾರಣವಾಗಿದೆ.
ಶಾಲಾವರಣದ ಸುತ್ತ ಗಿಡಗಳನ್ನು ನೆಟ್ಟಿರೋ ಶಿಕ್ಷಕರು ತಾವೂ ಒಳಗೊಂಡಂತೆ ಮಕ್ಕಳಿಗೆ ಒಂದೊಂದು ಗಿಡಗಳನ್ನು ದತ್ತು ನೀಡಿದ್ದು ಆ ಗಿಡಗಳ ಪಾಲನೆಯನ್ನು ದತ್ತು ಪಡೆದವರೇ ನೋಡಿಕೊಳ್ಳಬೇಕಿದೆ. ಇನ್ನು, ಶಾಲೆಗೆ ಕೊಡುಗೆ ನೀಡಲು ಬಂದ ದಾನಿಗಳು ಒಂದೊಂದು ಗಿಡವನ್ನು ನೆಡಲಿದ್ದಾರೆ.
ಚಾಲೆಂಜಿಂಗ್​ ಸ್ಟಾರ್​ ದ​ರ್ಶನ್ ಅಭಿಮಾನಿಗಳ ಸಂಘವು ಕೂಡ ಶಾಲೆಗೆ ಕೊಡುಗೆ ನೀಡಲು ಮುಂದೆ ಬಂದಿದೆ. ಡಿಬಾಸ್ ಅವರ ಮೂಲಕವೇ ಶಾಲೆಗೆ ಸುಸಜ್ಜಿತ ಲ್ಯಾಬ್ ನೀಡುವ ಭರವಸೆ ಕೊಡಲಾಗಿದೆ.
ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಒಂದು ಕಾಳಜಿಯಿಂದ ಯಾವ ಖಾಸಗಿ ಶಾಲೆಗೂ ನಾವೇನೂ ಕಡಿಮೆಯಿಲ್ಲ ಎನ್ನುವಂತೆ ಎಲ್ಲಾ ಸೌಲಭ್ಯಗಳನ್ನು ದಾನಿಗಳಿಂದ ಪಡೆದು ಇಲ್ಲಿನ ಮಕ್ಕಳಿಗೆ ಶಿಕ್ಷಣದಲ್ಲಿ ಮತ್ತಷ್ಟು ಉತ್ಸಾಹ ತುಂಬುವ ಕೆಲಸವನ್ನು ಮಾಡಿದ್ದಾರೆ. ಏನೇ ಆದರೂ ಇಂದು ಸಾಮಾಜಿಕ ಜಾಲತಾಣಗಳಿಂದ ಕೆಟ್ಟದ್ದೇ ಹೆಚ್ಚು ಎನ್ನುವ ಸಂದರ್ಭದಲ್ಲಿ ಈ ಶಿಕ್ಷಕರೊಬ್ಬರು ಕಾಳಜಿ ಮತ್ತು ಸಮಯ ಪ್ರಜ್ಞೆ ಬದಲಾವಣೆಗೆ ನಾಂದಿಹಾಡಿದೆ. ಸಾಮಾಜಿಕ ಜಾಲತಾಣದಿಂದ ಒಳ್ಳೆಯ ಕೆಲಸವನ್ನು ಮಾಡಬಹುದು ಅನ್ನೋದನ್ನ ತೋರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

-ಶ್ರೀನಿವಾಸ್ ನಾಯಕ್​,ಚಾಮರಾಜನಗರ

LEAVE A REPLY

Please enter your comment!
Please enter your name here