ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಬಳಿಕ ಚಂದನವನದ ನಾಯಕ ಯಾರು ಅನ್ನೋ ಚರ್ಚೆ ಪದೇ ಪದೇ ಕೇಳಿಬಂದಿತ್ತು. ಕಷ್ಟ, ಸಮಸ್ಯೆಗಳು ಎದುರಾದಾಗ ಯಾರ ಬಳಿ ಹೋಗೋದು, ಯಾರೊಡನೆ ಹೇಳಿಕೊಳ್ಳೋದು, ಯಾರು ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಸೂಕ್ತ ಪರಿಹಾರ, ತೀರ್ಮಾನ ನೀಡ್ತಾರೆ ಅನ್ನೋ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರವಾಗಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಿಂತಿದ್ದಾರೆ.
ಹೌದು ಸೆಂಚುರಿ ಸ್ಟಾರ್ ಇದೀಗ ಸ್ಯಾಂಡಲ್ವುಡ್ಗೆ ಲೀಡರ್! ಇಂದು ಚಿತ್ರರಂಗದ ಗಣ್ಯರೆಲ್ಲ ಒಡಗೂಡಿ ಶಿವಣ್ಣಗೆ ಪಟ್ಟಾಭಿಷೇಕ ಮಾಡಿದ್ದಾರೆ. ಕೊರೋನಾ ಮತ್ತು ಅದರ ನಿಯಂತ್ರಣಕ್ಕಾಗಿ ಮಾಡಿದ ಲಾಕ್ಡೌನ್ನಿಂದಾಗಿ ಸಿನಿರಂಗ ಎದುರಿಸುತ್ತಿರೋ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಗವರದಲ್ಲಿನ ಶಿವರಾಜ್ಕುಮಾರ್ ಮನೆಯಲ್ಲಿ ಇಂದು ಸಭೆ ನಡೆಸಲಾಯ್ತು. ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿ, ಅದರ ಸಂಸ್ಥೆಗಳು ಮತ್ತು ಅದರ ಅಂಗ ಸಂಸ್ಥೆಗಳು ಭಾಗಿಯಾಗಿದ್ದವು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ‘’ ಸಾವಿರ ಜನರನ್ನು ಹಿಂದೆ ಇಟ್ಕೊಂಡರಷ್ಟೇ ನಾಯಕ ಆಗಲ್ಲ. ಎಲ್ರನ್ನೂ ಒಟ್ಟಾಗಿ ಕರೆದುಕೊಂಡು ಹೋಗ್ಬೇಕು. ಆಗ್ಲೇ ನಾಯಕನಾಗಲು ಸಾಧ್ಯ. ಚಿತ್ರರಂಗದ ಎಲ್ಲಾ ವಿಭಾಗಗಳಿಂದ ಒಗಟ್ಟಾಗಿ ಬಂದಿರೋದು ಖುಷಿ ತಂದಿದೆ. ಸಾಕಷ್ಟು ಸಮಸ್ಯೆಗಳನ್ನು ನನ್ನೊಡನೆ ಹಂಚಿಕೊಂಡಿದ್ದಾರೆ. ನನ್ನನ್ನು ಕಂಡ್ರೆ ಇಲ್ರೂ ಇಷ್ಟಪಡ್ತಾರೆ. ನಾವೆಲ್ಲರೂ ಒಟ್ಟಿಗೆ ಹೋಗೋಣ, ಒಟ್ಟಿಗೆ ಬಾಳೋಣ’’ ಅಂದ್ರು.
ಕೊರೋನಾದಿಂದ ಎದುರಾದ ಸಮಸ್ಯೆಗಳ ಬಗ್ಗೆ 3-4 ದಿನಗಳಲ್ಲಿ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ಸಭೆ ಸೇರಿ, ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡ್ತೀವಿ ಎಂದು ತಿಳಿಸಿದರು.