ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ದನಗಳ ಜಾತ್ರೆಯಲ್ಲಿ ವಹಿವಾಟು ಜೋರಾಗಿ ನಡೆಯುತ್ತಿದೆ.
ಪ್ರತಿ ವರ್ಷಕ್ಕಿಂತಲೂ ಈ ವರ್ಷ ದನಗಳ ಮಾರಾಟ, ಖರೀದಿ ಹೆಚ್ಚಾಗಿ ಕಾಣಿಸುತ್ತಿದೆ. ಕೊರೋನಾ ಕಾರಣ ಈ ಬಾರಿ ದನಗಳ ವಹಿವಾಟು ಕಡಿಮೆ ಇರುತ್ತೆ ಅಂತಾ ಎಲ್ಲ ರೈತರು ನಿರಾಸೆಯಿಂದಲೇ ಜಾತ್ರೆಗೆ ಆಗಮಿಸಿದ್ದರು. ಆದರೆ ಈ ಬಾರಿ ಆದಷ್ಟು ವಹಿವಾಟು ಯಾವ ವರ್ಷವೂ ಸಹ ನಡೆದಿಲ್ಲ ಅಂತಾರೆ ಜಾತ್ರೆಗೆ ಬಂದಂತಹ ರೈತರು.
ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ರಥೋತ್ಸವ ಇನ್ನೂ ಡಿ.19 ಕ್ಕೆ ನಡೆಯುವುದು ಅದಕ್ಕಿಂತ ಮೊದಲೇ ದನಗಳ ಜಾತ್ರೆ ಮುಗಿಯುವ ರೀತಿ ಕಾಣುತ್ತಿದೆ, ಕಾರಣ ವಹಿವಾಟು ಹೆಚ್ಚಾಗಿ ನಡೆದಿರುವುದು. ಈಗಾಗಲೇ ದನಗಳ ಜಾತ್ರೆ ಬಹುತೇಕ ಮುಗಿದಿದ್ದು, ನಾಳೆಗೆ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿದೆ.
ಈ ಬಾರಿ ದನಗಳ ವಹಿವಾಟು ಹೆಚ್ಚಾಗಿ ಆಗಲು ಕಾರಣ ಕೊರೊನಾ ವೈರಸ್! ಕೊರೋನಾ ವೈರಸ್ ಪ್ರಪಂಚಾದ್ಯಂತ ಹರಡಿರುವ ಹಿನ್ನೆಲೆ ಬಹುತೇಕ ಐಟಿಬಿಟಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ ಲಕ್ಷಾಂತರ ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ. ಯುವಕರು ಹಳ್ಳಿಗಳತ್ತ ಆಗಮಿಸಿ ಕೃಷಿ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದಾರೆ. ಇದರಿಂದ ದನಗಳ ವಹಿವಾಟು ಹೆಚ್ಚಾಗಿ ಆಗಲು ಪ್ರಮುಖ ಕಾರಣ. ಇನ್ನೂ ರಾಜ್ಯದಲ್ಲಿ ಬಹುತೇಕ ಕಡೆ ದನಗಳ ಜಾತ್ರೆ ರದ್ದು ಮಾಡಿರುವುದು ಸಹ ಘಾಟಿ ಕ್ಷೇತ್ರದಲ್ಲಿ ದನಗಳ ಮಾರಾಟ, ಖರೀದಿ ಹೆಚ್ಚಾಗಲು ಕಾರಣವಾಗಿದೆ.