Friday, April 3, 2020

75 ವರ್ಷದ ಸಮರ ವೀರೆ ಮೀನಾಕ್ಷಿ ಅಮ್ಮ

0

ಮೂರು ಸಾವಿರ ವರ್ಷಗಳ ಇತಿಹಾಸವುಳ್ಳ ಪ್ರಾಚೀನ ಕಲೆಯಾದ ಕಲರಿಪಯಟ್ಟು ಇಂದು ವಿಶ್ವಪ್ರಸಿದ್ದಿ ಪಡೆದಿದೆ. ಶರೀರವನ್ನೇ ಆಯುಧವಾಗಿ ಬಳಸುವ ಮತ್ತು ದೇಹವನ್ನು ಬೇಕಾದಂತೆ ತಿರುಗಿಸೋದು ಈ ಕಲೆಯ ವಿಶೇಷ. ಇದ್ದಕ್ಕಿದ್ದಂತೆ ದಾಳಿ ಮಾಡಿದರೆ ವ್ಯಕ್ತಿ ತನ್ನನ್ನು ರಕ್ಷಿಸಿಕೊಳ್ಳುವುದನ್ನು ಕಲಿಸಿಕೊಡುವ ವಿದ್ಯೆಯೇ ಕಲರಿಪಯಟ್ಟು ಯುದ್ಧ ಕಲೆ.
ಕಲರಿಪಯಟ್ಟು ಕಲೆ ಸಾಂಪ್ರದಾಯಿಕ ಕುಸ್ತಿಯ ಕಲೆ. ಇದು ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅತ್ಯಂತ ವೈಜ್ಞಾನಿಕ ಸ್ವರೂಪದ ಕಲಾ ಪ್ರಕಾರವೆಂದು ಪರಿಗಣಿತವಾಗಿದೆ. ಈ ಕಲಾ ಪ್ರಕಾರವು ಆತ್ಮರಕ್ಷಣಾ ಕೌಶಲ್ಯವನ್ನು ಮತ್ತು ಶಕ್ತಿ ಸಾಮರ್ಥ್ಯಗಳನ್ನು ಹರಿತಗೊಳಿಸುವಲ್ಲಿ ನೆರವಾಗುತ್ತೆ. ಈ ಕಲರಿಪಯಟ್ಟು ಕಲೆಯನ್ನು ಕರಗತ ಮಾಡಿಕೊಂಡವರನ್ನು ವೀರರು, ಧೀರರು ಎನ್ನುತ್ತಾರೆ. ಈ ಯುದ್ಧದಲ್ಲಿ ಇವರಿಗೆ ಸರಿಸಾಟಿಯೇ ಇಲ್ಲ.
ಈ ಕಾಲದಲ್ಲಿ ಹೆಣ್ಣು ಮಕ್ಕಳು ಮನೆಕೆಲಸಕ್ಕೆ ಮಾತ್ರ ಸೀಮಿತ ಅಂತ ನೋಡುವವರೇ ಹೆಚ್ಚು. ಅಂತಹ ಸಮಾಜದಲ್ಲಿ ಇವ್ರು ನಿಜಕ್ಕೂ ಸ್ಫೂರ್ತಿಯಾಗಿ ನಿಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಕಲರಿಪಯಟ್ಟು ಎಂಬ ಸಮರಕಲೆಯನ್ನು ತಾವು ಕಲಿತಿರುವುದಲ್ಲದೆ ಮುಂದಿನ ಪೀಳಿಗೆಗೆ, ವಿಶೇಷವಾಗಿ ಮಹಿಳಾ ಬಲವರ್ಧನೆಗೆ ಧಾರೆಯೆರೆಯುತ್ತಿರುವ 75ರ ಹರೆಯದ ಇವರ ಸಾಧನಾಗಾಥೆಗೆ ಇಡೀ ದೇಶ ಹೆಮ್ಮೆ ಪಡಲೇಬೇಕು.
ಇವರ ಹೆಸರು ಮೀನಾಕ್ಷಿ ಅಮ್ಮ ಅಂತ. ಕಲರಿಪಯಟ್ಟು ಕಲೆಯ ಪ್ರವೀಣೆಯಾದ ಮೀನಾಕ್ಷಿ ಅಮ್ಮ ತನ್ನ ಪ್ರತಿಸ್ಫರ್ಧಿಗೆ ತಲೆಬಾಗಿದ ಇತಿಹಾಸವೇ ಇಲ್ಲ.

ರಕ್ಷಣಾತ್ಮಕ ಮತ್ತು ಆಕ್ರಮಣಾಕಾರಿ ತಂತ್ರಗಳನ್ನು ಕೌಶಲ್ಯ ಪೂರ್ವವಾಗಿ ಉಪಯೋಗಿಸುವುದರ ಮೂಲಕ ಎಲ್ಲರನ್ನು ದಂಗಾಗಿಸುವ ಸಾಹಸಿ ಮಹಿಳೆ. ಸಮರಕಲೆಯಾದ ಕಲರಿಪಯಟ್ಟು ಕಲೆಯ ಸಮರವೀರೆ ಮೀನಾಕ್ಷಿ ಅಮ್ಮ.
ಮೀನಾಕ್ಷಿ ಅಮ್ಮನವರಿಗೆ ಈ ಕಲೆ ರಕ್ತಗತವಾಗಿಯೇ ಬಂದಿದೆ ಅಂತಲೇ ಹೇಳಬಹುದು. ಮೀನಾಕ್ಷಿಯವರ ತಂದೆ ಓರ್ವ ಖ್ಯಾತ ಕಲರಿಪಯಟ್ಟು ಪಟುವಾಗಿದ್ರು. ಹೀಗಾಗಿ ಮೀನಾಕ್ಷಿ ಅಮ್ಮ ಆರನೇ ವಯಸ್ಸಿನಲ್ಲೇ ಕಲರಿಪಟ್ಟು ವಿದ್ಯೆ ಕಲಿಯಲು ಪ್ರಾರಂಭಿಸಿದ್ರು. ಮೀನಾಕ್ಷಿ ಅವರು ಕಲರಿ ಜೊತೆಗೆ ಸಾಂಪ್ರದಾಯಕ ನೃತ್ಯವನ್ನು ಅಭ್ಯಾಸವನ್ನು ಮಾಡುತ್ತಿದ್ರು. ಚಿಕ್ಕ ವಯಸ್ಸಿನಲ್ಲಿರುವಾಗಲೇ ಮನೆಯವ್ರು ಕಲರಿಪಯಟ್ಟು ಬಿಟ್ಟು ವಿದ್ಯಾಭ್ಯಾಸ ಮತ್ತು ನೃತ್ಯದತ್ತ ಹೆಚ್ಚು ಗಮನ ಹರಿಸುವಂತೆ ಸಾಕಷ್ಟು ಬಾರಿ ಹೇಳಿದ್ರೂ ಕೂಡ ಉಪಯೋಗವಾಗಲಿಲ್ಲ. ಕಲರಿ ಕಲೆಯನ್ನು ತಮ್ಮ ರಕ್ತದ ಕಣಕಣಗಳಲ್ಲೂ ತುಂಬಿಸಿಕೊಂಡಿದ್ದ ಮೀನಾಕ್ಷಿ ಅಮ್ಮನವ್ರು ಅದ್ರಲ್ಲೆ ಮುಂದುವರೆದ್ರು.
ಮೀನಾಕ್ಷಿ ಅಮ್ಮನವರಿಗೆ ಈಗ 75 ವರ್ಷವಾಗಿದೆ. ಆದ್ರೂ ಇವರ ಕೈ ನಡುಗುವುದಿಲ್ಲ. ಇಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ. ಕತ್ತಿವರಸೆಯಲ್ಲಿ ಮತ್ತು ಕೋಲುವರಸೆಯಲ್ಲಿ ಇವರನ್ನು ಸೋಲಿಸುವ ಗಂಡೇ ಇಲ್ಲ. ಎದುರಾಳಿ ಯಾರೇ ಆದರು ಇವರ ಮನಸ್ಸು ಕುಗ್ಗುವುದಿಲ್ಲ. ಕೈಯಲ್ಲಿ ದೊಣ್ಣೆ, ಕತ್ತಿಯನ್ನು ಹಿಡಿದ್ರೆ ಮುಗಿಯಿತು ಎದುರಾಳಿಯ ಒಂದೊಂದೇ ಪಟ್ಟಿಗೆ ಪ್ರತಿ ಪಟ್ಟು ಹಾಕುವ ಸಮರಕಲೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.


ಮೀನಾಕ್ಷಿ ಅಮ್ಮನವರು ತಮ್ಮ ಪತಿಯ ಜೊತೆಗೆ ಕಲರಿಪಯಟ್ಟು ವಿದ್ಯೆಯನ್ನು ಹೇಳಿಕೊಡಲು ಒಂದು ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಅಲ್ಲಿಂದ ಮೀನಾಕ್ಷಿ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇಂದಿಗೂ ಅವರ ಗುರುಕುಲ ಎಂಬ ಹೆಸರಿನಲ್ಲಿ ಕಲರಿ ಸಂಗಮ ಶಾಲೆಯನ್ನು ತೆರೆದು ಕಲಿಯುವ ಆಸಕ್ತರಿಗೆ ಹೇಳಿಕೊಡುತ್ತಿದ್ದಾರೆ. ಪ್ರತಿ ವರ್ಷವೂ 150 ರಿಂದ 200 ವಿದ್ಯಾರ್ಥಿಗಳು ಈ ವಿದ್ಯೆಯನ್ನು ಕಲಿತು ಹೊರಬರುತ್ತಾರೆ.
ತಮ್ಮ ವಿದ್ಯಾರ್ಥಿಗಳು ಕಲರಿಪಯಟ್ಟು ವಿದ್ಯೆಯಲ್ಲಿ ಪರಿಣಿತಿ ಹೊಂದಿದರೆ ಅದೇ ನನಗೆ ಕೊಡುವ ಶುಲ್ಕ ಎನ್ನುತ್ತಾರೆ ಮೀನಾಕ್ಷಿ ಅಮ್ಮ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸ್ವತಃ ಗುರುದಕ್ಷಿಣೆಯನ್ನು ಬಲವಂತವಾಗಿ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ ಅಷ್ಟೇ. ಈ ಗುರುದಕ್ಷಿಣೆಯೇ ಇವರಿಗೆ ಪ್ರಮುಖ ಆದಾಯ. ಆರ್ಥಿಕ ಸಂಕಷ್ಟ ಎದುರಿಸಿದರೂ ತಮ್ಮ ವಿದ್ಯೆಯನ್ನು ಹೇಳಿ ಕೊಡಲು ಯಾವುದೇ ರೀತಿಯ ಹೆಚ್ಚಿನ ಹಣಕಾಸು ನಿರೀಕ್ಷಿಸಲು ಮೀನಾಕ್ಷಿ ಅಮ್ಮನವರು ಒಪ್ಪುವುದೇ ಇಲ್ಲ.
ಆತ್ಮರಕ್ಷಣೆಗೆ ಜನರು ಬೇರೆ ಬೇರೆ ದೇಶದ ಫೈಟಿಂಗ್ ಸ್ಟೈಲ್​​ಗಳಿಗೆ ಮರುಳಾಗುತ್ತಾರೆ. ಬೇರೆ ದೇಶದ ಸ್ಟೈಲ್​ನ್ನು ಮೀರಿಸುವಂತೆ ಇರುವುದು ಕಲರಿಪಯಟ್ಟು. ಕೇರಳದ ಈ ಆತ್ಮರಕ್ಷಣಾ ಕಲೆಯನ್ನು ಹತ್ತಾರು ವೇದಿಕೆಗಳಲ್ಲಿ ಮೀನಾಕ್ಷಿ ಅಮ್ಮನವರು ಪ್ರದರ್ಶನ ನೀಡಿ ಸೈ ಎನ್ನಿಸಿಕೊಂಡಿದ್ದಾರೆ.

75 ವರ್ಷದ ವಯಸ್ಸಿನಲ್ಲಿಯು ಕಲರಿಪಯಟ್ಟು ಕಲೆಯಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಮೀನಾಕ್ಷಿ ಅಮ್ಮನವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ವಿಶ್ವದ ಅತ್ಯಂತ ಪ್ರಾಚೀನ ಯುದ್ಧಕಲೆಗಳಲ್ಲೊಂದಾಗಿರುವ ಕಲರಿಪಯಟ್ಟು ಕಲೆಯನ್ನು 75ರ ಇಳಿಯವಸ್ಸಿನಲ್ಲಿಯೂ ಮೀನಾಕ್ಷಿ ಅಮ್ಮನವರು ಯುವಕರನ್ನೇ ಸೋಲಿಸುತ್ತಾರೆ! ನನ್ನ ಶರೀರದಲ್ಲಿ ಶಕ್ತಿ ಇರುವವರೆಗೂ ನಾನು ಕಲರಿಪಯಟ್ಟು ಕಲಿಸುತ್ತೇನೆ, ಕಲಿಯುತ್ತಲೂ ಇರುತ್ತೇನೆ ಎನ್ನುವ ಮೀನಾಕ್ಷಿ ಅಮ್ಮನವರ ಸಂಕಲ್ಪವನ್ನು ಮೆಚ್ಚಲೇ ಬೇಕು.

ಬಡತನಕ್ಕೆ ಸವಾಲೊಡ್ಡಿದ ಗಟ್ಟಿಗಿತ್ತಿ

0

ಇವರ ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಅದೆಷ್ಟರ ಮಟ್ಟಿಗೆ ಅಂದ್ರೆ ಸ್ಪರ್ಧೆಯಲ್ಲಿ ಓಡಲು ಒಂದು ಜೊತೆ ಶೂ ಖರೀದಿಸುವ ಶಕ್ತಿ ಕೂಡ ಇರಲಿಲ್ಲ! ಹಾಗಂತ ಇವರು ಹಠ ಬಿಡಲಿಲ್ಲ. ಬಡತನಕ್ಕೆ ಸವಾಲೊಡ್ಡಿ ಭಾರತಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆ ಮೆಚ್ಚಿ ಇಡೀ ದೇಶವೇ ಸಲಾಂ ಹೊಡೆಯುತ್ತಿದೆ!
ಪ್ರತಿಭೆಯನ್ನು ಗುರುತಿಸುವುದೂ ಕೂಡ ಒಂದು ಪ್ರತಿಭೆ! ಅದು ಸತ್ಯದ ಮಾತು ಕೂಡ. ಶಾಲೆಯ ಫಿಸಿಕಲ್ ಟೀಚರ್ ಈಕೆಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ರು. ಅಂದು ಟೀಚರ್​ನಿಂದ ಗುರುತಿಸಿಕೊಂಡ ಇವರು ಇಂದು ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ್ದಾರೆ. ಅಂತಹ ಅದ್ಭುತ ಸಾಧನೆ ಮಾಡಿದ ಓಟಗಾರ್ತಿಯೇ ಪಿ.ಯು ಚಿತ್ರಾ.
ಚಿತ್ರಾ ಅವರಿಗೆ ಆಗ ಕೇವಲ 12 ವರ್ಷ ವಯಸ್ಸು ಅಷ್ಟೇ. ಚಿತ್ರಾಳಲ್ಲಿ ಇದ್ದ ಒಬ್ಬ ಅಥ್ಲೀಟ್​ನ್ನು ಪಿ.ಟಿ ಮೇಷ್ಟ್ರು ಗುರುತಿಸಿದ್ರು. ಶಾಲೆಯಲ್ಲಿ ಸಾಧ್ಯವಿರುವ ಎಲ್ಲಾ ತರಬೇತಿಗಳನ್ನು ಕೊಟ್ಟು ಪ್ರೋತ್ಸಾಹ ನೀಡಿದ್ರು. ಟೀಚರ್​ ತರಬೇತಿ ಮತ್ತು ಪ್ರೋತ್ಸಾಹದಿಂದ ತನ್ನ ಶ್ರಮವನ್ನು ದುಪ್ಪಟ್ಟು ಹಾಕಿದ ಚಿತ್ರಾ ಅವರನ್ನು ಇಂದು ವಿಶ್ವವೇ ಮಿಂಚಿನ ಓಟಗಾರ್ತಿ ಎಂದು ಹೊಗಳುವಂತೆ ಮಾಡಿದೆ.
ಹೌದು.. ಚಿತ್ರಾ ಅವರ ಕುಟುಂಬದಲ್ಲಿ ಕಿತ್ತು ತಿನ್ನುವಷ್ಟು ಬಡತನವಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ, ಟ್ರ್ಯಾಕ್ ನಲ್ಲಿ ಓಡಲು ಒಂದು ಜೊತೆ ಶೂ ಖರೀದಿಸುವ ಶಕ್ತಿ ಕೂಡ ಇರಲಿಲ್ಲ. ಏಷ್ಯನ್ ಚಾಂಪಿಯನ್​​ಗೆ ಹೋಗುವ ಮುನ್ನ ಅಭ್ಯಾಸದ ವೇಳೆ ಉತ್ತಮ ಗುಣಮಟ್ಟದ ಶೂ ಇರಬೇಕೆಂದು ತರಬೇತುದಾರರು ತಾಕೀತು ಮಾಡಿದ್ರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡುವಾಗ ಅದಕ್ಕಿಂತ ಗುಣಮಟ್ಟದ ಶೂ ಇರಬೇಕು ಎಂದು ಎಲ್ಲಾರೂ ಹೇಳುತ್ತಿದ್ರು. ಆದ್ರೆ, ಚಿತ್ರಾ ಅವರಿಗೆ ಮನೆಯಲ್ಲಿ ತಾಂಡವವಾಡುತ್ತಿದ್ದ ಬಡತನ ನೋಡಲಾಗದೆ ಹೆತ್ತವರ ಬಳಿ ಹೇಳಿಕೊಳ್ಳಲಿಲ್ಲ.
ಚಿತ್ರಾ ಕೇರಳದ ಪಲಕ್ಕಾಡ್ ಜಿಲ್ಲೆಯ ಮುನ್ರಾಡ್ ಗ್ರಾಮದವರು. 4 ಮಕ್ಕಳ ಪೈಕಿ ಚಿತ್ರಾ ಕೂಡ ಒಬ್ಬರು. ತಂದೆ ತಾಯಿ ಇಬ್ಬರು ದಿನಗೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಅದನ್ನು ಕಣ್ಣಾರೆ ಕಂಡ ಚಿತ್ರಾ ಶೂ ಬಗ್ಗೆ ಹೇಳಿಕೊಳ್ಳಲಿಲ್ಲ.


ಸಿಕ್ಕ ಅವಕಾಶವನ್ನು ಕಳೆದುಕೊಳ್ಳಲು ಮನಸ್ಸು ಒಪ್ಪದೇ ಇರುವಾಗ ಚಿತ್ರಾ ತನ್ನ ಗೆಳತಿ ಹತ್ರ ಚಾಂಪಿಯನ್​​​ ಶಿಪ್​ಗೆ ಹೋಗುವ ಹಿಂದಿನ ದಿನ ಶೂ ಬಾಡಿಗೆಗೆ ಕೇಳಿದ್ರು. ಚಿತ್ರಾಳ ಸ್ನೇಹಿತೆ ಸಂತೋಷದಿಂದ ಕೊಡಲು ಒಪ್ಪಿಕೊಂಡಳು. ಆ ಶೂ ಧರಿಸಿ ಭುವನೇಶ್ವರದಲ್ಲಿ ನಡೆದ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ರು.
1500 ಮೀಟರ್ ರೇಸ್ ಗೆಲ್ಲುವುದು ಅಂದ್ರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಷ್ಟೇ ಅಲ್ಲ ಅತೀ ಕಠಿಣ ಸ್ಪರ್ಧೆಗಳ ಪೈಕಿ ಇದು. ಇಂತಹ ಆಟ ದಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಸಾಧನೆ ಮಾಡಿದ್ರು ಚಿತ್ರಾ. 1500 ಮೀಟರ್ ದೂರವನ್ನು ಕೇವಲ 4.17.92 ನಿಮಿಷಗಳಲ್ಲಿ ಓಡಿ ಮುಗಿಸಿದ ಚಿತ್ರಾ ಬಂಗಾರದ ಸಾಧನೆ ಮಾಡಿದ್ರು. ಅಷ್ಟೇ ಅಲ್ಲ ತನ್ನ ಬೆಸ್ಟ್ ರೆಕಾರ್ಡ್ ಅನ್ನು 7 ಸೆಕೆಂಡ್ಸ್ ನಿಂದ ಉತ್ತಮಗೊಳಿಸಿದ್ರು.
ಈ ಅದ್ಭುತ ಸಾಧನೆ ಮಾಡಿದ ಚಿತ್ರಾ ಈಗ “ಕ್ವೀನ್ ಆಫ್ ಏಷಿಯಾ ಇನ್ ದಿ ಮೈಲ್” ಅನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಏಷ್ಯನ್ ಸ್ಕೂಲ್ ಚಾಂಪಿಯನ್ ಶಿಪ್ ಗೆದ್ದ ಚಿತ್ರಾಳಿಗೆ ಕೇರಳ ಸರಕಾರ 2 ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಆದ್ರೆ ಚಿತ್ರಾಳಿಗೆ ಬೇರೆಯೇ ಕನಸುಗಳಿವೆ. ಹೊಟ್ಟೆ ತುಂಬಿಸಬಲ್ಲ ಉದ್ಯೋಗದ ಅವಶ್ಯಕತೆ ಇದೆ.
ಸಾಮಾನ್ಯವಾಗಿ ಅಥ್ಲೀಟ್ ಗಳು ಈ ರೀತಿಯ ಸಾಧನೆ ಮಾಡಿದ ಬಳಿಕ ಒಂದು ವಾರ ಅಥವಾ 15 ದಿನ ಸುದ್ದಿಯಲ್ಲಿರುತ್ತಾರೆ. ನಂತರ ಎಲ್ಲಾರೂ ಮರೆತು ಬಿಡುತ್ತಾರೆ. ಆದ್ರೆ ಸರ್ಕಾರ ಇಂತಹವರನ್ನು ಗುರುತಿಸಿ ಸಹಾಯ ಮಾಡಿ ಇನ್ನು ಹೆಚ್ಚು ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು.
ಒಟ್ಟಾರೆಯಾಗಿ ಚಿತ್ರಾಳ ಧೈರ್ಯ ಮತ್ತು ಸಾಧನೆ ನಮಗೆಲ್ಲಾ ಸ್ಪೂರ್ತಿ. ಚಿತ್ರಾ ಇನ್ನು ಎತ್ತರಕ್ಕೆ ಬೆಳೆದು ನಮ್ಮ ದೇಶಕ್ಕೆ ಇನ್ನು ಹೆಚ್ಚು ಕೀರ್ತಿ ತರಲಿ ಎಂಬುದೆ ನಮ್ಮಲ್ಲರ ಆಶಯ.

ಭಾರತದ ಹಳ್ಳಿಗೆ ಬೆಳಕಾದ ಇಂಗ್ಲೆಂಡ್​ ಮಹಿಳೆ!

0

ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ಇನ್ನೂ ಭಾರತದ ಸಾವಿರಾರು ಹಳ್ಳಿಗಳು ಇನ್ನು ಬೆಳಕೇ ಕಂಡಿಲ್ಲ. ನಡೆದಾಡಲು ಸರಿಯಾದ ರಸ್ತೆ ಇಲ್ಲದೆ, ಬಸ್ ಸೌಲಭ್ಯವಿಲ್ಲದೆ, ಕುಡಿಯಲು ನೀರು ಇಲ್ಲದೆ, ರಾತ್ರಿಯಾದರೆ ವಿದ್ಯುತ್ ಬೆಳಕು ಸಹ ಇಲ್ಲದೆ ಬದುಕುತ್ತಿರುವ ಜನ ಇಂದಿನ ಕಾಲದಲ್ಲಿಯೂ ಇದ್ದಾರೆ ಎಂದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಇದೀಗ ಭಾರತ ವಿಶ್ವಮಟ್ಟದಲ್ಲಿ ಗುರುತ್ತಿಸಿಕೊಳ್ಳುತ್ತಿದೆ. ಆದ್ರೆ ಭಾರತದಲ್ಲಿರೋ ಸುಮಾರು 10,000ಕ್ಕೂ ಅಧಿಕ ಹಳ್ಳಿಗಳು ಇನ್ನೂ ಬೆಳಕು ಕಂಡಿಲ್ಲ. ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇನ್ನು ಕೆಲವು ಹಳ್ಳಿಗಳು ವಿದ್ಯುತ್ ಸಂಪರ್ಕ ಅದೃಷ್ಟ ಪಡೆದುಕೊಂಡಿದ್ರೂ ಪ್ರತಿದಿನವೂ ವಿದ್ಯುತ್ ಪಡೆಯುವ ಅದೃಷ್ಟವಿಲ್ಲ. ಆದ್ರೆ, ಈಗ ಈ ದುಃಸ್ಥಿತಿಯನ್ನು ಬದಲಿಸಲು ಇಂಗ್ಲೆಂಡ್ ನ ಇಂಪೀರಿಯಲ್ ಕಾಲೇಜ್ ನ ವಿದ್ಯಾರ್ಥಿನಿ ಕ್ಲಮೆಂಟಿನ್ ಚಂಬನ್, ಮುಂದೆ ಬಂದಿದ್ದಾರೆ.
ಇವ್ರು ಉತ್ತರ ಪ್ರದೇಶದ ಕುಗ್ರಾಮಗಳ ಮನೆಗೆ ಪವರ್ ಕಟ್ ಇಲ್ಲದಂತೆ ಪವರ್ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರ ಶ್ರಮದಿಂದ ಈಗಾಗಲೇ ಸುಮಾರು 100 ಮನೆಗಳಿಗೆ ಈ ವಿದ್ಯುತ್ ಭಾಗ್ಯ ಸಿಕ್ಕಿದೆ.
ಊರ್ಜಾ ಸೋಶಿಯಲ್ ವೆಂಚರ್ ಸ್ಟಾರ್ಟ್ ಅಪ್ ಜೊತೆ ಕೈ ಜೋಡಿಸಿ ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಮಿನಿ ಸೋಲಾರ್ ಗ್ರಿಡ್ ಸ್ಥಾಪಿಸಿ, ಸುಮಾರು 1000 ಮನೆಗಳಿಗೆ ವಿದ್ಯುತ್ ಒದಗಿಸುವ ಸೌಲಭ್ಯವನ್ನು ಮಾಡುತ್ತಿದ್ದಾರೆ.
ವಿದ್ಯುತ್ ಹೊರತು ಪಡಿಸಿ ಸೋಲಾರ್ ಎನರ್ಜಿಯನ್ನು ಬಳಸಿಕೊಳ್ಳುವ ಬಗ್ಗೆಯೂ ಪ್ಲಾನ್ ಗಳು ನಡೆಯುತ್ತಿವೆ. ಸೋಲಾರ್ ಶಕ್ತಿಗೆ ಹೆಚ್ಚು ಮಾರ್ಕೆಟ್ ಕೂಡ ಸಿಗುತ್ತೆ. ಕಳೆದ ಮೂರು ವರ್ಷಗಳಲ್ಲಿ, ಭಾರತ ಸುಮಾರು 10,000 ಮೆಗಾವ್ಯಾಟ್ ಗಿಂತ ಅಧಿತ ವಿದ್ಯುತ್ ಅನ್ನು ಸೊಲಾರ್ ಮೂಲಕ ಉತ್ಪಾದಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಇದರ ಪ್ರಮಾಣ ಸುಮಾರು 20,000 ಮೆಗಾ ವ್ಯಾಟ್ ತಲುಪುವ ಸಾಧ್ಯತೆ ನಿಚ್ಚಳವಾಗಿದೆ.
ವಿದ್ಯುತ್ ಭಾಗ್ಯ ಪಡೆದ ಜನರ ಮುಖದಲ್ಲಿ ನಗು ಕಾಣುವುದೇ ಕ್ಲೆಮೆಂಟಿನ್ನವರಿಗೆ ಹೆಚ್ಚು ಸಂತಸ ತಂದುಕೊಡುತ್ತಂತೆ. ಈಗ ವಿದ್ಯುತ್ ಸಂಪರ್ಕದಿಂದಾಗಿ ಮಕ್ಕಳ ಓದು ಕೂಡ ಸುಗಮವಾಗುತ್ತಿದೆ. ಈ ಗ್ರಾಮಗಳಲ್ಲಿರುವ ಶಾಲೆಗಳಿಗೆ ನೀಡಿದ ವಿದ್ಯುತ್ ಸಂಪರ್ಕದಿಂದಾಗಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಸೇರಿದಂತೆ ಉತ್ತಮ ಶಿಕ್ಷಣ ಸಿಗುತ್ತಿದೆ.
ಉತ್ತರ ಪ್ರದೇಶದ ಹಲವು ಗ್ರಾಮಮಗಳಲ್ಲಿ ಕೃಷಿ ಮತ್ತು ಪಶುಸಂಗೋಪನೆಯೇ ಪ್ರಮುಖ ಜೀವನಾಧಾರ. ಸೊಲಾರ್ ಶಕ್ತಿಯ ಬಳಕೆಯಿಂದ ಗ್ರಾಮಗಳಲ್ಲಿ ಡಿಸೇಲ್ ಪಂಪ್ ಗಳ ಬಳಕೆ ಕಡಿಮೆಯಾಗಿದೆ. ಜನರು ಇಲ್ಲಿ ತನಕ ಡಿಸೇಲ್ ಪಂಪ್ ಗಳ ಮೂಲಕ ತಮ್ಮ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡ್ತಿದ್ರು. ಡಿಸೇಲ್ ದರ ಹೆಚ್ಚಾದಾಗ ಕೃಷಿಕರಿಗೂ ತೊಂದರೆಯಾಗ್ತಿತ್ತು. ಆದ್ರೆ ಈಗ ಆ ಸಮಸ್ಯೆಯನ್ನೆಲ್ಲಾ ಕ್ಲೆಮೆಂಟಿನ್ ದೂರ ಮಾಡಿದ್ದಾರೆ.
ಈಗಾಗಲೇ ಕ್ಲೆಮೆಂಟಿನ್ ಸಾಕಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ಆದ್ರೆ ಇಷ್ಟಕ್ಕೇ ತೃಪ್ತರಾಗಿಲ್ಲ. ಸಾಧ್ಯವಾದಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಪಣ ತೊಟ್ಟಿದ್ದಾರೆ. ವಿದ್ಯುತ್ ಶಕ್ತಿಯ ಜೊತೆಗೆ ಸೊಲಾರ್ ಪ್ಲಾಂಟ್ ಗಳನ್ನು ಜೋಡಿಸಿ, ಗ್ರಾಮಗಳಲ್ಲಿ ಪವರ್ ಕಟ್ ಆಗದೇ ಇರುವಂತೆ ಮಾಡುವ ಉದ್ದೇಶ ಹೊಂದಿದ್ದಾರೆ.
ಒಟ್ಟಿನಲ್ಲಿ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ನೂರಾರು ಕುಟುಂಬವನ್ನು ಬೆಳಕಿಗೆ ತಂದಿದ್ದಾರೆ. ಇದೀಗ ಆ ಕುಟುಂಬಗಳು ಪ್ರತಿದಿನ ದೀಪಾವಳಿ ಹಬ್ಬ ಆಚರಿಸಿದಷ್ಟು ಸಂಭ್ರಮ ಪಡುತ್ತಿದ್ದಾರೆ. ಇಂಗ್ಲೆಂಡಿನ ಯುವತಿ ಭಾರತದಲ್ಲಿ ನಿಸ್ವಾರ್ಥ ಸೇವೆ ಮಾಡ್ತಿರೋದು ಶ್ಲಾಘನೀಯ.

ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!

0

ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಸ್ವಾರ್ಥವನ್ನು ತೊರೆದು ಬೇರೆಯವರ ಏಳ್ಗೆಗಾಗಿ, ಅವರ ಸಹಾಯಕ್ಕಾಗಿ ದುಡಿಯುವ ಮಂದಿ ಸಿಗೋದು ತೀರಾ ವಿರಳ. ಆದ್ರೆ ಕೆಲವು ಮಂದಿಯ ಜೀವನ ಗಾಥೆ ಇತರರಿಗೆ ಸ್ಫೂರ್ತಿದಾಯಕವಾಗುತ್ತೆ. ಇಂತಹವರ ಮಧ್ಯದಲ್ಲಿ ಜನಸೇವೆಗಾಗಿಯೇ ಜನ್ಮ ತಾಳಿದ ದೇವತೆಯೇ ಸುಭಾಷಿಣಿ ಮಿಸ್ತ್ರಿ.
ಕಡು ಬಡತನದಲ್ಲಿ ಹುಟ್ಟಿದ ಇವ್ರು ಬದುಕಿನುದ್ದಕ್ಕೂ ನೂರಾರು ಸಂಕಷ್ಟಗಳನ್ನು ಎದುರಿಸಿ ಇಂದು ಸಾವಿರಾರು ಜನರಿಗೆ ಸಹಾಯ ಮಾಡ್ತಿದ್ದಾರೆ. ಸುಭಾಷಿಣಿ ಮಿಸ್ತ್ರಿಯರವರಿಗೆ 12ನೇ ವಯಸ್ಸಿಗೇ ಕೂಲಿ ಕಾರ್ಮಿಕನೊಂದಿಗೆ ಮದುವೆ ಮಾಡಿ ತಂದೆ ತಾಯಿ ತಮ್ಮ ಜವಾಬ್ದಾರಿ ಕಳೆದುಕೊಂಡ್ರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಸುಭಾಷಿಣಿ ಮಿಸ್ತ್ರಿಯವರ ಗಂಡ ಕಾಯಿಲೆ ಬೀಳ್ತಾರೆ. ಕೊಲ್ಕತ್ತಾದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡ್ತಾರೆ. ಆದ್ರೆ ಆ ಆಸ್ಪತ್ರೆಯಲ್ಲಿ ನರ್ಸ್​ಗಳಿಗೆ ಮತ್ತು ಡಾಕ್ಟರ್ಗಳಿಗೆ ಕೈ ಬೆಚ್ಚಗೆ ಮಾಡಿದ್ರೆ ಮಾತ್ರ ರೋಗಿಗಳ ತಪಾಸಣೆ ಶುರುವಾಗ್ತಿತ್ತು. ಇಲ್ಲವಾದಲ್ಲಿ ರೋಗಿಗೂ ನಮಗೂ ಸಂಬಂಧನೇ ಇಲ್ಲದಂತೆ ವಾತಾವರಣ ಸೃಷ್ಟಿ ಮಾಡ್ತಿದ್ರು.
ಸಂಬಂಧಿಕರ ಬಳಿ, ಆಸ್ಪತ್ರೆಯಲ್ಲಿದ್ದವರಲ್ಲಿ ಅಂಗಲಾಚಿದರೂ ಒಂದು ನಯಾ ಪೈಸೆ ಕೂಡ ಸಿಗಲಿಲ್ಲ. ಕೊನೆಗೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಗಂಡನನ್ನೇ ಕಳೆದುಕೊಳ್ಳುವಂಥಾ ಸ್ಥಿತಿ ನಿರ್ಮಾಣವಾಯ್ತು. ಇದು ತನ್ನೊಬ್ಬ ಗಂಡನ ಕತೆಯಲ್ಲ, ಸಾವಿರಾರು ಅಮಾಯಕರು ತಮ್ಮದಲ್ಲದ ತಪ್ಪಿಗಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಬಡ ಜನರ ಪ್ರಾಣ ಉಳಿಸುವ, ಬಡ ರೋಗಿಗಳನ್ನು ಮನುಷ್ಯರಂತೆ ಕಾಣುವ ಒಂದು ಆಸ್ಪತ್ರೆ ತೆರೆಯಲೇಬೇಕೆಂದು ಅಂದೇ ಧೃಡ ನಿರ್ಧಾರ ಮಾಡಿದ್ರು. ತಮ್ಮ ನಾಲ್ಕು ಮಕ್ಕಳಲ್ಲಿ ನನ್ನ ಒಬ್ಬ ಮಗನನ್ನಾದರೂ ಡಾಕ್ಟರ್ ಮಾಡಲೇಬೇಕೆಂದು ಸುಭಾಷಿಣಿ ಪಣ ತೊಟ್ಟರು.

ಗಂಡ ತೀರಿ ಹೋದ ಮೇಲೆ ಮನೆ ಕೆಲಸ ಮಾಡ್ತಿದ್ರು. ತಿಂಗಳಿಗೆ ಕೇವಲ 200 ರೂ ಸಿಗ್ತಿತ್ತು ಅಷ್ಟೇ. ಮಕ್ಕಳ ವಿದ್ಯಾಭ್ಯಾಸ ಮತ್ತು ಹೊಟ್ಟೆ ಬಟ್ಟೆಗೆ ನೋಡಿಕೊಂಡು ಉಳಿತಾಯ ಮಾಡಿದ್ದ ಹಣದಿಂದ ತರಕಾರಿ ವ್ಯಾಪಾರ ಮಾಡಲು ಬಂಡವಾಳ ಹೂಡಿದ್ರು. ವ್ಯಾಪಾರದಿಂದ ದಿನಕ್ಕೆ 500 ಗಳಿಸೋ ಮಟ್ಟಿಗೆ ಬೆಳೆದ್ರು. ಪೋಸ್ಟಾಫಿಸ್​ನಲ್ಲಿ ಖಾತೆ ತೆರೆದು ದುಡಿದ ಹಣವೆನ್ನೆಲ್ಲ ಜಮಾ ಮಾಡುತ್ತಾ ಬಂದ್ರು.
ಉಳಿತಾಯದ ಹಣದಿಂದ ಒಂದು ಎಕರೆ ಜಾಗದಲ್ಲಿ ಪುಟ್ಟ ಗುಡಿಸಲನ್ನು ಕಟ್ಟಿಕೊಂಡ್ರು. ಅದು ವಾಸ್ತವ್ಯಕ್ಕೆ ಮಾಡಿಕೊಳ್ಳಲಿಲ್ಲ ಕುಟುಂಬ ಗುಡಿಸಲಿನ ಹೊರಗಿದ್ದು ಅದನ್ನೆ ಆಸ್ಪತ್ರೆ ಮಾಡಿದ್ರು. ಈ ಆಸ್ಪತ್ರೆಗೆ ಸ್ವಯಂ ಪ್ರೇರಿತರಾಗಿ ವಾರಕ್ಕೆ ಕೆಲ ಗಂಟೆ ತಿಂಗಳಿಗೆ ಒಂದು ದಿನವಾದರೂ ವೈದರು ಉಚಿತವಾಗಿ ಬಂದು ಕೆಲಸ ಮಾಡುವಂತೆ ರಿಕ್ಷಾಕ್ಕೆ ಮೈಕ್ ಕಟ್ಟಿಕೊಂಡು ಹತ್ತಾರು ಊರುಗಳಲ್ಲಿ ಪ್ರಚಾರ ಮಾಡಿದ್ರು. ಡಾ. ರಘುಪತಿ ಚಟರ್ಜಿ ಎಂಬವವರು ದೊಡ್ಡ ಮನಸ್ಸು ಮಾಡಿ ಮುಂದೆ ಬಂದ್ರು. ಆಸ್ಪತ್ರೆ ಆರಂಭವಾದ ಮೊದಲ ವಾರದಲ್ಲಿ 252 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಹ್ಯೂಮಾನಿಟಿ ಹಾಸ್ಪಿಟಲ್ ಎಂದು ಆ ಗುಡಿಸಲಿಗೆ ಹೆಸರಿಡಲಾಯಿತು.
ನಂತ್ರ ಮೂರು ಎಕರೆ ಭೂಮಿಯಲ್ಲಿ ಸುಮಾರು ಒಂಬತ್ತು ಸಾವಿರ ಚದರ ಅಡಿ ವಿಸ್ತಾರದಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದ್ರು. ಆ ಆಸ್ಪತ್ರೆಯಲ್ಲಿ ಈಗ ನುರಿತ ವೈದ್ಯರಿದ್ದಾರೆ. ಆಧುನಿಕ ಉಪಕರಣಗಳಿವೆ, ಆಪರೇಶನ್ ಥಿಯೇಟರ್​ಗಳಿವೆ, ಆಂಬ್ಯೂಲೆನ್ಸ್ ಸೇವೆಯೂ ಈ ಮಾನವೀಯತೆಯ ಆಸ್ಪತ್ರೆಯಲ್ಲಿದೆ. ಇಷ್ಟಾಗಿಯೂ ಇದು ಬಡವರ ಆಸ್ಪತ್ರೆಯಾಗಿಯೇ ಉಳಿದಿದೆ.
ಸಣ್ಣಪುಟ್ಟ ರೋಗಗಳಿಗೆ ಹತ್ತು ರೂಪಾಯಿ ಗಿಂತ ಹೆಚ್ಚು ಚಾರ್ಜ್ ಮಾಡುವುದಿಲ್ಲ. ಎಂತಹ ದೊಡ್ಡ ಕಾಯಿಲೆ ಇದ್ದರೂ ಶಸ್ತ್ರ ಚಿಕಿತ್ಸೆಗೆ 500 ರೂಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಬರೀ ಗ್ರಾಮದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆ ಮತ್ತು ಗ್ರಾಮಗಳಿಂದ ರೋಗಿಗಳು ಹ್ಯೂಮಾನಿಟಿ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ಬರುವ ರೋಗಿಗಳನ್ನು ಅತಿಥಿಗಳಂತೆ ನೋಡಿಕೊಳ್ಳುತ್ತಾರೆ. ತೀರಾ ಬಡತನವನ್ನು ಅಥವಾ ಹಣವಿಲ್ಲದವರನ್ನು ಹಾಗೇ ಕಳುಹಿಸುವುದಿಲ್ಲ. ಉಚಿತ ಶಸ್ತ್ರ ಚಿಕಿತ್ಸೆ ನೀಡಿಯೇ ಕಳುಹಿಸುತ್ತಾರೆ.
ತಮ್ಮ ಕನಸು ನನಸಾದರೂ ಸುಭಾಷಿಣಿ ಮಿಸ್ತ್ರಿ ವಿರಮಿಸುವುದಿಲ್ಲ. ಆಸ್ಪತ್ರೆಯಲ್ಲಿ ಸದಾ ರೋಗಿಗಳ ಆರೋಗ್ಯ ವಿಚಾರಿಸುತ್ತಾರೆ. ಸಂಜೆಯ ನಂತರ ಇಂದಿಗೂ ಸಾಯಂಕಾಲವಾಗುತ್ತಿದ್ದಂತೆ ತರಕಾರಿ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲಿ ಸಿಗುವ ನಾಲ್ಕು ಕಾಸನ್ನು ಆಸ್ಪತ್ರೆಗೆ ಕೊಡುತ್ತಾರೆ. ಈಕೆಯ ಜೊತೆಗೆ ದೊಡ್ಡ ಮಗಳು ಹಾಗೂ ಎರಡನೆ ಮಗ ತರಕಾರಿ ಅಂಗಡಿಯಲ್ಲಿ ಸಹಾಯಕರಾಗಿದ್ದಾರೆ. ಕೊನೆಯ ಮಗಳು ಇದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒಟ್ಟಾರೆಯಾಗಿ ಸುಭಾಷಿಣಿ ಮಿಸ್ತ್ರಿಯವರ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕವೇ ಸರಿ. ಇವರ ಕನಸ್ಸಿನಂತೆ ರೂಪಗೊಂಡ ಹ್ಯೂಮಾನಿಟಿ ಆಸ್ಪತ್ರೆ ಸದಾ ರೋಗಿಗಳಿಂದ ತುಂಬಿದ್ರೂ ವಿಸ್ಮಯವೆನ್ನಿಸುವ ಆತ್ಮೀಯತೆ ಶಾಂತ ವಾತಾವರಣ ಇಲ್ಲಿದೆ. ಸುಭಾಷಿಣಿ ಅವರ ಸೇವೆ, ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

-ಪ್ರಶಾಂತ್ ಎಸ್, ಸ್ಪೆಷಲ್ ಡೆಸ್ಕ್​

ಮರಗಳನ್ನು ಮಕ್ಕಳಂತೆ ಬೆಳೆಸಿದ ವೃಕ್ಷಮಾತೆ!

0

ಮರ ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರೋದು ಸಾಲು ಮರದ ತಿಮ್ಮಕ್ಕ. ಸುಮಾರು ನಾಲ್ಕು ಕಿಲೋ ಮೀಟರ್ ಉದ್ದಕ್ಕೂ ಪ್ರಕೃತಿ ಮಾತೆಯನ್ನೇ ಬೆಳೆಸಿ ಪೋಷಿಸುವ ಮಹತ್ಕಾರ್ಯ ಮಾಡಿದವ್ರು. ಸಾಲು ಮರದ ತಿಮ್ಮಕ್ಕ ನಮ್ಮೆಲ್ಲರ ಹೆಮ್ಮೆಯ ಪರಿಸರವಾದಿ.
ಸಾಲು ಮರದ ತಿಮ್ಮಕ್ಕ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? 280ಕ್ಕೂ ಹೆಚ್ಚು ಆಲದ ಸಸಿಗಳನ್ನು ನೆಟ್ಟು ತಮಗೆ ಮಕ್ಕಳಿಲ್ಲಾ ಎಂಬ ಕೊರಗನ್ನು ನೀಗಿಸಿಕೊಂಡವರು ಇವರು! ತಿಮ್ಮಕ್ಕ ಮೂಲತಃ ಮಾಗಡಿ ತಾಲೂಕಿನ ಹುಳಿಕಲ್ ಗ್ರಾಮದವರು. ಕುಟುಂಬದಲ್ಲಿದ್ದ ಬಡತದಿಂದ ತಿಮ್ಮಕ್ಕನವ್ರು ಹೆಚ್ಚು ಓದಲಿಲ್ಲ. ಮುಂದೆ ಚಿಕ್ಕಯ್ಯ ಎನ್ನುವರನ್ನು ವರಿಸಿದ್ರು. ಆದ್ರೆ ದುರಾದೃಷ್ಟಾವತ್ ಇವರಿಗೆ ಮಕ್ಕಳು ಆಗಲಿಲ್ಲ. ಮಕ್ಕಳಿಲ್ಲ ಎನ್ನುವ ಕೊರಗು ಎಲ್ಲರಿಗೂ ಕಾಡುವಂತೆ ಇವರ ಮನಸ್ಸಿಗೂ ತುಂಬಾ ಘಾಸಿ ಮಾಡಿತ್ತು. ಆದ್ರೆ ತಿಮ್ಮಕ್ಕ ಕುಗ್ಗಲಿಲ್ಲ ತಮಗೆ ಮಕ್ಕಳಿಲ್ಲದ ಕೊರಗನ್ನು ಮರೆಯಲು ಮರಗಳನ್ನು ನೆಡಲಾರಂಭಿಸಿದ್ರು.
ತಿಮ್ಮಕ್ಕ ಹುಟ್ಟುತ್ತಲೇ ಬಡತನವನ್ನು ಹಾಸಿ ಹೊದ್ದು ಬಂದವರು. ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವನ ಅವರದ್ದು. ಮೊದಲ ವರ್ಷದಲ್ಲಿ ಹತ್ತು ಆಲದ ಸಸಿಗಳನ್ನು ಕುದೂರು ಹಳ್ಳಿಯ ಬಳಿ ನೆಟ್ರು. ಮರು ವರ್ಷ 20 ಸಸಿಗಳನ್ನು ನೆಡಲಾಯ್ತು. ಇವರು ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಅದಾಯವನ್ನೇ ಬಳಸಿಕೊಳ್ತಿದ್ರು. ಬಿಂದಿಗೆ, ಕೊಳಗಗಳಲ್ಲಿ ನೀರನ್ನು ನಾಲ್ಕು ಕಿಮೀ ದೂರ ಸಾಗಿಸಿ ಗಿಡಗಳಿಗೆ ನೀರುಣಿಸುತ್ತಿದ್ರು.
ಇನ್ನು ಸಸಿಗಳ ಸಂರಕ್ಷಣೆಗಾಗಿ ಮೇವಿನ ಜಾನುವಾರಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದ್ರು. ತಿಮ್ಮಕ್ಕನವ್ರು ಬರೋಬ್ಬರಿ 280ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹೆಮ್ಮರವಾಗಿ ಬೆಳೆಯುವಂತೆ ನೋಡ್ಕೊಂಡ್ರು. ಈ ನೂರಾರು ಗಿಡಗಳು ಮರಗಳಾಗಿ ಸಾವಿರಾರು ಹಕ್ಕಿ ಪಕ್ಷಿಗಳಿಗೆ, ವಾಸಸ್ಥಾನ ಆಗಿವೆ.
ತಿಮ್ಮಕ್ಕರಿಗೆ ಸಂಘ ಸಂಸ್ಥೆಗಳು ಧನಸಹಾಯ ಮಾಡಿದ್ರೆ, ತಿಮ್ಮಕ್ಕನವರು ತಮ್ಮ ಹಳ್ಳಿಯಲ್ಲಿರೋ ಹೆರಿಗೆ ಆಸ್ಪತ್ರೆಗೆ ಮತ್ತು ಇನ್ನಿತರ ಸೇವೆಗಳಿಗೆ ಹಣ ನೀಡುತ್ತಾರೆ. ಚೈತನ್ಯದ ಚಿಲುಮೆಯಾಗಿ ಪರಿಸರಕ್ಕಾಗಿ ಕೆಲಸ ಮಾಡುತ್ತಿರುವ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಶಾಲೆಗೆ ಹೋಗಿ ಏನು ಕಲಿಯದೇ ಇದ್ದರೂ, ಪರಿಸರ ಪ್ರೀತಿಯಿಂದ ಸಸ್ಯ ಲೋಕದ ಜ್ಞಾನವನ್ನು ಸಂಪಾದಿಸಿದ್ದಾರೆ.
ಯಾವುದೇ ಗಿಡದ ಎಲೆಯಾದ್ರೂ ಸರಿ ತಟ್ಟನೆ ಗುರುತಿಸಿ ಹೇಳುತ್ತಾರೆ. ವಿದ್ಯೆ ಇಲ್ಲದಿದ್ದರೂ, ಬುದ್ಧಿವಂತೆಯಾಗಿರೋ ತಿಮ್ಮಕ್ಕ, ಇಂದು ಶಾಲಾ ಮಕ್ಕಳ ಪುಸ್ತಕದಲ್ಲಿ ಪಾಠವಾಗಿದ್ದಾರೆ. ಅಮೆರಿಕಾದ ಸಂಯುಕ್ತ ಸಂಸ್ಥಾನದ ನಾಲ್ಕು ವಿ.ವಿಗಳಲ್ಲಿ ಅವರ ಹೆಸರಿನ ಪರಿಸರ ಅಧ್ಯಯನಗಳಿವೆ.
ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ವೃಕ್ಷಮಾತೆ. ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿರೋದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ .
ಹೀಗೆ ಸಾಲು ಮರದ ತಿಮ್ಮಕ್ಕ ತಮ್ಮ ನಿಸ್ವಾರ್ಥ ಕರ್ಮದ ಮೂಲಕ ಜನಜನಿತರಾಗಿದ್ದಾರೆ. ಅಷ್ಟೇ ಅಲ್ಲ ಪರಿಸರ ರಕ್ಷಣೆಯ ಕಾರ್ಯದ ಜೊತೆಗೆ ಸಮಾಜ ಸೇವೆಯ ಕೈಂಕರ್ಯವನ್ನು ತಿಮ್ಮಕ್ಕ ನಡೆಸಿಕೊಂಡು ಬರುತ್ತಿದ್ದಾರೆ. ಯಾರಿಂದಲೂ ಏನನ್ನೂ ಬಯಸದೇ ತಿಮ್ಮಕ್ಕೆ ಮಾಡಿರುವ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿ.
-ಪ್ರಶಾಂತ್​ ಎಸ್​, ಸ್ಪೆಷಲ್​ ಡೆಸ್ಕ್​

ಒಲಪಿಂಕ್ಸ್​ನತ್ತ ಆನೇಕಲ್ ಶಾಲಿನಿ ಚಿತ್ತ

0

ಯಾವುದೇ ಒಂದು ಸಾಧನೆ ಮಾಡಬೇಕು ಅಂದ್ರೆ ಛಲ ಇರಬೇಕು. ಛಲ ಇಲ್ಲದೇ ಹೋದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಇದು ಕಿರಿಯರಿಂದ ಹಿರಿಯವರವರೆಗೂ ಅನ್ವಯಿಸುತ್ತೆ. ಈ ಮಾತನ್ನು ಇಲ್ಲಿ ಹೇಳ್ತೀರೋದಕ್ಕೆ ಕಾರಣ ಆನೇಕಲ್ ತಾಲೂಕಿನ ಸೋಲೂರು ಗ್ರಾಮದ ಶಾಲಿನಿ.
ಅಂದಹಾಗೆ ಈಕೆಯ ಹೆಸರು ಶಾಲಿನಿ‌. ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕಿನ ಗಡಿಭಾಗ‌ದ ಸೋಲೂರಿನವರು.ಗುರುಮೂರ್ತಿ ಹಾಗೂ ವನಜಾಕ್ಷಿ ದಂಪತಿಯ ಮುದ್ದಿನ ಮಗಳು. ಶಾಲಿನಿಗೆ ಚಿಕ್ಕಂದಿನಿಂದಲೂ ಕ್ರೀಡೆಗಳ ಮೇಲೆ ಬಹಳ ಕ್ರೇಜ್. ಈಕೆಗೆ ಮೊದಲಿನಿಂದಲೂ ಏನಾದರೂ ಸಾಧಿಸಬೇಕು ಅನ್ನೋ ಹಂಬಲ. ಸತತ ಪ್ರಯತ್ನದ ಫಲವಾಗಿ ಈಕೆ ಇಂದು ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.


ಇವರ ಪ್ರತಿಭೆಯನ್ನ ಮನಗಂಡ ಆಳ್ವಾಸ್ ಸಂಸ್ಥೆ ತಮ್ಮ ಸಂಸ್ಥೆ ಗೆ ಸೇರಿಸಿಕೊಂಡಿತು. ಇದು ಶಾಲಿನಿಯ ಕ್ರೀಡಾ ಆಸಕ್ತಿಗೆ ಇನ್ನಷ್ಟು ಬಲ ನೀಡಿತು. ಇನ್ನು, ಇದೇ ಸಂಸ್ಥೆ ಯಲ್ಲಿ ವಿದ್ಯಾರ್ಥಿಯಾಗಿ ಜೊತೆಗೆ ಒಳ್ಳೆಯ ಕ್ರೀಡಾಪಟು ಆದ್ರು. ಪವರ್ ಲಿಫ್ಟಿಂಗ್ ಗೂ ಮೊದಲು ಶಾಲಿನಿ‌ ಕುಂಗ್ ಫೂ‌ ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಕಬ್ಬಡ್ಡಿಯಲ್ಲಿ ಈಗಾಗಲೇ ಐದು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.
ಪದವಿಯಲ್ಲಿದ್ದಾಗ ಪವರ್ ಲಿಫ್ಟಿಂಗ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ಬರೆದಿದ್ದಾರೆ. ನಂತರ ಜಮ್ಮು ಹಾಗು ಕಾಶ್ಮೀರದಲ್ಲಿ ಪ್ರಥಮ , ತಮಿಳುನಾಡಿನಲ್ಲಿ ಪ್ರಥಮ ಸ್ಥಾನ , ಪಂಜಾಬ್ ನಲ್ಲಿ‌ಯೂ ಸಹ ಪ್ರಥಮ ಸ್ಥಾನ ಪಡೆದರು. ಇದಾದ ನಂತರ 2015 ರಲ್ಲಿ ಹಾಂಗ್ ಕಾಂಗ್ ನಲ್ಲಿ ಇದೇ ಪವರ್ ಲಿಫ್ಟಿಂಗ್ ನಲ್ಲಿ ಭಾರತದ ಪರ ಕಂಚನ್ನ ಗೆದ್ದಿದ್ದಾರೆ . ಇದಿಷ್ಟೇಅಲ್ಲ. ಸೆಪ್ಟೆಂಬರ್ ನಲ್ಲಿ ದುಬೈ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಪವರ್ ಲಿಫ್ಟಿಂಗ್ 63 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆಯಯನ್ನ ಎತ್ತಿಹಿಡಿದಿದ್ದಾರೆ‌.
ಹೀಗೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಿರೋ ಶಾಲಿನಿಗೆ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಆಸೆ. ಆಕೆಯ ಆಸೆ ಈಡೇರಲಿ. ಶಾಲಿನಿ ಕನಸು ನನಸಾಗಲಿ ಅನ್ನೋದು ನಮ್ಮ ಆಶಯವೂ…
-ರಾಘವೇಂದ್ರ, ಪಿ. ಎನ್, ಪವರ್ ಟಿವಿ, ಆನೇಕಲ್

ಕ್ರೀಡೆಯಷ್ಟೇ ಅಲ್ಲ ಸಿನಿಮಾ ಕ್ಷೇತ್ರದಲ್ಲೂ ಛಾಪು ಮೂಡಿಸಿರೋ ಅಶ್ವಿನಿ ನಾಚಪ್ಪ..!

0

ಸಾಧನೆಯ ಹಾದಿಯಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ನಿಂತಿದ್ದಾರೆ. ಅದು ಯಾವುದೇ ಕ್ಷೇತ್ರವಿರಲಿ ಮಹಿಳೆ ತನ್ನ ಛಾಪು ಮೂಡಿಸಿದ್ದಾಳೆ. ತಮ್ಮ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಚಟುವಟಿಕೆಗಳಿಂದ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿದ್ದಾಳೆ. ಅಂಥಾ ಸಾಧಕಿಯರಲ್ಲಿ ಅಶ್ವಿನಿ ನಾಚಪ್ಪ ಕೂಡ ಒಬ್ರು.
1967ರ ಅಕ್ಟೋಬರ್ 21ರಂದು ಕೊಡಗಿನಲ್ಲಿ ಜನಿಸಿದ ಅಶ್ವಿನಿ, ಮುಂದೆ ಕ್ರೀಡಾ ಲೋಕದಲ್ಲಿ ತನ್ನ ಅದ್ಭುತ ಛಾಪು ಮೂಡಿಸುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಬಾಲ್ಯದಿಂದಲೇ ಸ್ಪೋರ್ಟ್ಸ್ ನಲ್ಲಿ ಒಲವಿದ್ದ ಅಶ್ವಿನಿ, ಅಥ್ಲೀಟ್ ಆಗುವತ್ತ ಗಮನಹರಿಸ್ತಾರೆ.
1984ರಲ್ಲಿ ಸೌತ್ ಏಷಿಯನ್ ಗೇಮ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸ್ತಾರೆ. ತಮ್ಮ ಮೊದಲ ಟೂರ್ನಿಯಲ್ಲೇ 2 ಬೆಳ್ಳಿಯ ಪದಕಗಳನ್ನು ಗೆಲ್ಲುವ ಮೂಲಕ ದೇಶದ ಗಮನ ಸೆಳೀತಾರೆ. 1986ರಲ್ಲಿ ಬಾಂಗ್ಲಾದಲ್ಲಿ ನಡೆದ ಚಾಂಪಿಯನ್ ಟ್ರೋಫಿಯಲ್ಲಿ ಭಾಗವಹಿಸಿ ಜನಮನ ಗೆಲ್ತಾರೆ.
1986ರಲ್ಲಿ ಸೌತ್ ಕೊರಿಯಾದಲ್ಲಿ ನಡೆದ ಏಷ್ಯಾನ್ ಗೇಮ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸ್ತಾರೆ. 1990ರಲ್ಲಿ ಬೀಜಿಂಗ್‍ನಲ್ಲಿ ನಡೆದ ವರ್ಲ್ಡ್​ ಚಾಂಪಿಯನ್​ಶಿಪ್‍ನಲ್ಲಿ ಭಾಗವಹಿಸಿ 4 X 400 ಮೀಟರ್ ರಿಲೆಯಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಳ್ತಾರೆ. 1991ರ ಟೋಕಿಯೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್​ಶಿಪ್‍ನಲ್ಲಿ 4 X 400 ಮೀಟರ್ ರಿಲೆಯಲ್ಲಿ ಭಾಗವಹಿಸುತ್ತಾರೆ.
ತನ್ನ ಕ್ರೀಡಾ ಬದುಕಿಗೆ ನಿವೃತ್ತಿ ಹೇಳಿದ ಬಳಿಕ ಸಿನಿಮಾರಂಗದಲ್ಲಿ ತಮ್ಮನ್ನ ತೊಡಗಿಸಿಕೊಳ್ಳಾರೆ. ತೆಲುಗಿನನಲ್ಲಿ ತನ್ನ ಜೀವನಾಧಾರಿತ ಚಿತ್ರವಾದ ‘ಅಶ್ವಿನಿ’ಯಲ್ಲಿ ನಟಿಸ್ತಾರೆ. ಈ ಚಿತ್ರದ ಅತ್ಯುತ್ತಮ ನಟನೆಗಾಗಿ ತಮಿಳುನಾಡು ಸರ್ಕಾರ ನೀಡುವ ಶ್ರೇಷ್ಠ ನಂದಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ತಾರೆ.
ಇಷ್ಟೇ ಅಲ್ಲ ತಮ್ಮನ್ನ ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶನಕ್ಕೆ ತಮ್ಮ ಸೇವೆಯನ್ನ ಮುಡಿಪಾಗಿಡುತ್ತಾರೆ. ಇನ್ಸ್ ಪೆಕ್ಟರ್ ಅಶ್ವಿನಿ, ಆದರ್ಶಮಂ, ಮಿಸ್ 420, ಎಂಬ ತೆಲುಗಿನ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತಮ್ಮ ಕ್ರೀಡಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ, ಭಾರತ ಸರ್ಕಾರ 1988ರಲ್ಲಿ ಅರ್ಜುನ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಸದ್ಯ ಬೆಂಗಳೂರು ನಗರ ಅಥ್ಲೀಟ್ ಸಂಸ್ಥೆಯ ಅಧ್ಯಕ್ಷೆಯಾಗಿ ಕ್ರೀಡಾ ಕ್ಷೇತ್ರದಲ್ಲಿ ಸೇವೆಯನ್ನ ಸಲ್ಲಿಸುತ್ತಿದ್ದಾರೆ.
-ಶಿವಪ್ರಸಾದ್, ಸ್ಪೋರ್ಟ್ಸ್ ಬ್ಯೂರೋ

ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!

0

ಶಾಲೆಯಲ್ಲಿ ಒಂದು ದಿನ ಗಣಿತ ತರಗತಿಯಲ್ಲಿ ಶೂನ್ಯ ಗುಂಪಿನ ಪರಿಕಲ್ಪನೆಗೆ ಉದಾಹರಣೆ ಕೊಡು ಎಂದಾಗ, “ಈವರೆಗೂ ಯಾರೂ ಭಾರತೀಯ ಮಹಿಳೆ ಗಗನಯಾತ್ರಿಯಾಗಿಲ್ಲ, ಹಾಗಾಗಿ ಭಾರತೀಯ ಮಹಿಳಾ ಗಗನಯಾತ್ರಿಯದು ಶೂನ್ಯ ಗುಂಪು” ಎಂದು ಉತ್ತರಿಸಿದ್ದಳು. ಆ ಹುಡುಗಿ ಮುಂದೊಂದು ದಿನ ಮೊದಲ ಭಾರತ ಸಂಜಾತ ಗಗನಯಾತ್ರಿಯಾಗಿ ಆ ಜಾಗ ತುಂಬುತ್ತಾಳೆ ಅಂತ ಯಾರೂ ಅಂದುಕೊಂಡಿರ್ಲಿಲ್ಲ..!
ಹೌದು, ಅಂತಾರಾಷ್ಟ್ರೀಯ ಗಗನಯಾತ್ರಿ ಕಲ್ಪನಾ ಚಾವ್ಲಾ. ನಿಜಕ್ಕೂ ಮರೆಯಲಾಗದ ಗಗನತಾರೆ. ಹೆಣ್ಣು ಮಕ್ಕಳಿಗೆ ಅಪೂರ್ವ ಮಾದರಿ. ಹಿಡಿದಿಟ್ಟ ವ್ಯವಸ್ಥೆಯಿಂದ ಕನಸು, ನಿರೀಕ್ಷೆಯ ಆಗಸಕ್ಕೆ ಲಕ್ಷಾಂತರ ಭಾರತೀಯ ಹೆಣ್ಣು ಮಕ್ಕಳಿಗೆ ಪುಟಿಯಲು ಚೈತನ್ಯದ ಚಿಲುಮೆ.


ಕಲ್ಪನಾ ಚಾವ್ಲಾ, ಹುಟ್ಟಿದ್ದು 1962ರ ಮಾರ್ಚ್ 17ರಂದು. ಹರಿಯಾಣದ ಕರ್ನಾಲ್​ನಲ್ಲಿ. ಚಿಕ್ಕಂದಿನಿಂದಲೇ ವಿಜ್ಞಾನ ಅಂದರೆ ಅಚ್ಚುಮೆಚ್ಚು. ಸಮಯ ಹಾಳು ಮಾಡುವುದೆಂದರೆ ಆಗದು. ಅವರ ವಯಸ್ಸಿನವರೆಲ್ಲರೂ ಮನೆಯಲ್ಲಿ ಸಮಾರಂಭವಿದ್ದರೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರು. ಆದರೆ, ಕಲ್ಪನಾ ಮಾತ್ರ ತಮ್ಮ ಸ್ವಂತ ಅಕ್ಕನ ಮದುವೆಯಲ್ಲಿಯೂ ವಿಶೇಷ ಉಡುಗೆ ತೊಟ್ಟು ಸಂಭ್ರಮಿಸಲಿಲ್ಲ.
ನೋಡಿ, ಅವರಿಗಿದ್ದ ಸಹಜ ಕುತೂಹಲ, ಅನ್ವೇಷಕ ಬುದ್ಧಿ, ಸ್ವತಂತ್ರ ಸ್ವಭಾವ ಅನನ್ಯವಾದದ್ದು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಅನವಶ್ಯಕ ಎನ್ನುವ ಕಾಲದಲ್ಲೂ ಅವರು ಅಮ್ಮನ ಪ್ರೋತ್ಸಾಹದಿಂದ ಕಾಲೇಜಿಗೆ ಹೋದರು. ಫ್ಲೈಟ್ ಇಂಜಿನಿಯರ್ ಬಿಟ್ಟು ಬೇರೆ ಏನೂ ಆಗಲಾರೆ ಎಂದು ಪಣ ತೊಟ್ಟ ಕಲ್ಪನಾ ವಾಯುಯಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಕಲೆ ಹಾಕಿ ಬಿಡದೇ ಓದುತ್ತಿದ್ದರು.
ಕಾಲೇಜಿನಿಂದ ಮೂರನೇ ರ್ಯಾಂಕ್​ನಲ್ಲಿ ಉತ್ತೀರ್ಣರಾದರು. ದೇಶದ ಮೊದಲ ಮಹಿಳಾ ಏರೋನಾಟಿಕಲ್ ಇಂಜಿನಿಯರ್ ಆದರು. ವಿದೇಶದಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಮಾಸ್ಟರ್ ಕೋರ್ಸ್ ಮುಗಿಸಿ ಅಮೆರಿಕಾದ ಜೀನ್ ಪಿಯರ್ ಹ್ಯಾರಿಸನ್ ಜತೆ ಮದುವೆಯಾದರು. ಮೊದಲು ಒಂದು ಇಂಜಿನ್​ ಅನಂತರ, ಬಹು ಇಂಜಿನ್​ಗಳುಳ್ಳ ವಿಮಾನ ಹಾರಿಸುವುದನ್ನು ತನ್ನ ಗಂಡನಿಂದಲೇ ಕಲಿತರು. ಜತೆಗೆ ಪರವಾನಗಿ ಕೂಡ ಪಡೆದು ವೈಮಾನಿಕ ಹಾರಾಟದ ಬೋಧಕರಾಗಿಯೂ ಬಡ್ತಿ ಪಡೆದರು.


ಏರೋಸ್ಪೇಸ್ ಇಂಜಿನಿಯರಿಂಗ್​ನಲ್ಲಿ ಡಾಕ್ಟರೇಟ್ ಮುಗಿಸಿ ನಾಸಾದಲ್ಲಿ ಕೆಲಸ ಮಾಡಲು ಆರಂಭಿಸಿದರು. 1977ರಲ್ಲಿ ಸ್ಪೇಸ್ ಶಟಲ್ ಎಸ್​ಟಿಎಸ್-87ನ ಪ್ರೈಮ್ ರೊಬೋಟಿಕ್ ಆಮ್ರ್ ಆಪರೇಟರ್ ಆಗಿ ಕಲ್ಪನಾ ಅವರನ್ನು ನಿಯೋಜಿಸಲಾಗಿತ್ತು. ತನ್ನ ಮಿಷನ್​ನ ಮೊದಲ ಭಾಗವಾಗಿ ಭೂಮಿಯ 252 ಕಕ್ಷೆಗಳಲ್ಲಿ 3.5 ದಶಲಕ್ಷ ಮೈಲು ಕ್ರಮಿಸಿ, 376 ಗಂಟೆ 34 ನಿಮಿಷ ಬಾಹ್ಯಾಕಾಶದಲ್ಲಿದ್ದರು. ಪ್ರಪ್ರಥಮವಾಗಿ ಬಾಹ್ಯಾಕಾಶಕ್ಕೆ ತೆರಳಿದ ಭಾರತ ಸಂಜಾತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೆಲವು ಕಾರಣಗಳಿಂದ 2003ರಲ್ಲಿ ತಡವಾಗಿ ಎಸ್​ಟಿಎಸ್-107 ಮಿಷನ್ ಪ್ರಾರಂಭವಾಯಿತು. 16 ದಿನಗಳ ಹಾರಾಟದಲ್ಲಿ ಒಟ್ಟು ಏಳು ಜನರ ತಂಡ 80ಕ್ಕೂ ಹೆಚ್ಚು ಪ್ರಯೋಗ ನಡೆಸಿ ಇನ್ನೇನು ಭೂಮಿಯ ಮೇಲಿರುವ ಕೆನಡಿ ಸ್ಪೇಸ್ ಸೆಂಟರ್ ತಲುಪಬೇಕು ಅನ್ನುವಷ್ಟರಲ್ಲಿ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿ ಕಲ್ಪನಾ ಆಕಾಶದಲ್ಲಿರುವ ನಕ್ಷತ್ರಗಳ ಸಾಲಿಗೆ ಸೇರಿದರು.
ಏನೇ ಹೇಳಿ, ಇಂದಿಗೂ ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಯಶಸ್ವಿ ಸಾಹಸಿ ಮಹಿಳೆಯರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಕಲ್ಪನಾ. ಭಾರತೀಯರಿಗಷ್ಟೇ ಅಲ್ಲ, ವಿಶ್ವಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.
-ಎನ್​.ಜಿ. ರಮೇಶ್​, ಸ್ಪೆಷಲ್​ ಡೆಸ್ಕ್, ಪವರ್​ ಟಿವಿ

ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಧೀರನಾರಿಯ ಲೈಫ್ ಸ್ಟೋರಿ

0

ಆಕೆ ಹೆಣ್ಣಾದರೂ ಅವಳ ಕನಸು ಮಾತ್ರ ಮಹತ್ತರವಾದದ್ದಾಗಿತ್ತು. ತನ್ನ ಅಸಹಾಯಕತೆಯನ್ನು ನೆನೆದು  ಆಗಾಗ ದುಃಖಕ್ಕೆ  ಒಳಗಾಗುತ್ತಿದ್ದಳು. ಆದರೂ ತನ್ನ ಗುರಿಯನ್ನು ಮರೆತಿರಲಿಲ್ಲ. ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಅನ್ನುವುದೊಂದೇ ಅವಳ ಛಲ. ಆ ಛಲದೊಂದಿಗೆ ಒಂದು ನಿರ್ದಿಷ್ಟ ಗುರಿಯ ಕನಸು ಅವಳದ್ದು. ಈಗ ಅವಳನ್ನು ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕೊಂಡಾಡುತ್ತಿದೆ.

ಹೌದು, ಆ ಛಲಗಾರ್ತಿ ಹೆಸರು ಅರುಣಿಮಾ ಸಿನ್ಹಾ.. ಇವರು ವಿಶ್ವದ ಅತಿದೊಡ್ಡ ಹಿಮಪರ್ವತ, ಮೌಂಟ್ ಎವೆರೆಸ್ಟ್  ಏರಿದ ಪ್ರಪಂಚದ ಹಾಗೂ ಭಾರತದ ಮೊದಲ ಮಹಿಳೆ. ಒಂಟಿ ಕಾಲಲ್ಲೇ ಮೌಂಟ್ ಎವರೆಸ್ಟ್ ಏರಿದ ಧೀರನಾರಿಯ ಲೈಫ್ ಸ್ಟೋರಿ ಇಲ್ಲಿದೆ. 

ಅರುಣಿಮಾ ಸಿನ್ಹಾ, ಉತ್ತರ ಪ್ರದೇಶ, ಲಕ್ನೋ ಸಮೀಪದ ಅಂಬೇಡ್ಕರ್ ನಗರ ಎನ್ನುವ ಸಣ್ಣ ಪಟ್ಟಣದಲ್ಲಿ 1988 ಜುಲೈ 20ರಂದು ಜನಿಸಿದರು.  ಇವರು 3ನೇ ವಯಸ್ಸಿನಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡರು. ತಂದೆ ಭಾರತೀಯ ಸೇನೆಯಲ್ಲಿ ಇಂಜಿನಿಯರ್ ಆಗಿದ್ದರು. ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿ.

ಚಿಕ್ಕ ವಯಸ್ಸಿನಿಂದಲೂ ಆಟದಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲ್ನಲ್ಲಿ ತನ್ನದೇ ಆದ ಪ್ರತಿಭೆಯನ್ನು ಹೊಂದಿದ್ದರು. ಅವರ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರ್ತಿಯಾಗಿ ಮಿಂಚಿದ್ರು. ತನ್ನ ಕ್ರೀಡಾ ಆಸಕ್ತಿಯನ್ನು ಸಿಎಸ್ಐಎಫ್​ನಲ್ಲಿ ಅನ್ವಯಿಸಲು ನಿರ್ಧರಿಸಿದ್ರು.

ಈ ನಡುವೆ ದೆಹಲಿಯಿಂದ ಒಂದು ಕರೆ ಪತ್ರ ಬಂದಿತ್ತು. ಆ ಕರೆ ಪತ್ರ ಮೇಲ್ನೋಟಕ್ಕೆ ಆಕೆಗೊಂದು ಅದೃಷ್ಟವಾಗಿದ್ದುದಾಗಿದ್ದರೂ ಆಕೆಯ ಬದುಕಿನ ತಿರುವು ಮಾತ್ರ ದುಃಖಕರವಾಗಿತ್ತು.

2011 ಏಪ್ರಿಲ್ 11ರಂದು  ಅರುಣಿಮಾ, ಸಿಆರ್ ಎಫ್  ಪೊಲೀಸ್ ಕಾನ್ಸ್ ಟೇಬಲ್ ಕೆಲಸಕ್ಕಾಗಿ ಇಂಟರ್ ವ್ಯೂಗೆ ಲಕ್ನೊದಿಂದ ದೆಹಲಿಗೆ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಟ್ರೈನಿನಲ್ಲಿ  ಕಳ್ಳರ ಗುಂಪೊಂದು ಅರುಣಿಮಾ ಅವರಿಗೆ ಚಿನ್ನದ ಸರವನ್ನು ನೀಡೆಂದು ಹೆದರಿಸಿತು. ಅದಕ್ಕೆ ಅವರು ಜಗ್ಗಲಿಲ್ಲ. ಆಮೇಲೆ, ಅರುಣಿಮಾರನ್ನು ಟ್ರೈನಿನಿಂದ ಹೊರಗಡೆ ಎಸೆದರು ಆ ದುಷ್ಕರ್ಮಿಗಳು. ಆಗ ಅವರು ಅಲ್ಲಿಂದ ಎದ್ದು ಪಾರಾಗುವಷ್ಟರಲ್ಲಿ  ಮತ್ತೊಂದು ರೈಲು ಅವರ ಕಾಲಿನ ಮೇಲೆ ಹರಿದು ಹೋಯಿತು..!

 ಅದೃಷ್ಟವಶಾತ್ ಅವರ ಜೀವ ಉಳಿದಿತ್ತು . ಅವರು ತನ್ನ ಗುರಿಯನ್ನು ತಲುಪುವ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಎವರೆಸ್ಟ್ ಏರುವುದಕ್ಕಾಗಿ ಏನು ಮಾಡಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಿದರು. ಕನಸು ನನಸಾಯಿತು ದೃಢವಾದ ಮನಸ್ಸು ಹಾಗೂ ಗುರಿಯಿಂದಾಗಿ 2014 ಮೇ 21ರಂದು  ಎವರೆಸ್ಟ್ ತುದಿಯನ್ನು ತಲುಪಿದರು. ನೋಡು ನೋಡುತ್ತಿದ್ದಂತೆಯೇ ಅವರು, ವಿಶ್ವದ ಅತ್ಯುನ್ನತ ಶಿಖರವನ್ನು ತಲುಪಿದ ಮೊದಲ ವಿಶೇಷಚೇತನ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾದರು.

ಮೌಂಟ್ ಎವರೆಸ್ಟ್ ಏರಿದ ಮಹಿಳೆ ಎನ್ನುವುದರ ಮೂಲಕ ವಿಶ್ವ ದಾಖಲೆಯನ್ನು ಮಾಡಿದರು. 2015ರ ಜನವರಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಭಾರತದ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯನ್ನು ಆಗಿನ ರಾಷ್ಟ್ರಪತಿ ಪ್ರಬಬ್ ಮುಖರ್ಜಿ ಅವರಿಂದ ಪಡೆದುಕೊಂಡಿದ್ರು.

ಅರುಣಿಮಾ, ಅವರು ತಮ್ಮ ಆತ್ಮಕಥನ ‘Born Again Moutain’ ಪುಸ್ತಕವನ್ನು  ಪ್ರಧಾನಿ ನರೇಂದ್ರ ಮೋದಿಯ ಅವರಿಂದ ಬಿಡುಗಡೆ ಮಾಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಸಾಧಕಿ ಅರುಣಿಮಾ ಅವರ ಮನಸ್ಸು  ನೋಡಿ, ಸಾಮಾನ್ಯವಾಗಿ ಕೃತಕ ಕಾಲಿನ ಜೋಡಣೆಯಾದ ಬಳಿಕ  ನಡೆದಾಡಲು ಹಲವಾರು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗುವುದು.ಆದರೆ, ಅರುಣಿಮಾ, ಆಶ್ಚರ್ಯ ಎನ್ನುವಂತೆ ಕೇವಲ ಎರಡೇ ದಿನದಲ್ಲಿ ನಡೆಯಲು ಕಲಿತಿದ್ದರು..!

 ಮಾನಸಿಕವಾಗಿ ದೃಢ ಆಲೋಚನೆ ಹಾಗೂ ಸಂಕಲ್ಪಗಳಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದನ್ನುಅರುಣಿಮಾ  ಸಿನ್ಹಾ ತೋರಿಸಿಕೊಟ್ಟಿದ್ದಾರೆ. ಇತರಿಗೆ ಮಾದರಿಯಾಗಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಮತ್ತು ವಿಕಲಚೇತನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

-ಎನ್.ಜಿ ರಮೇಶ್, ಸ್ಪೆಷಲ್ ಡೆಸ್ಕ್, ಪವರ್ ಟಿವಿ

 

 

 

Popular posts