Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Monday, June 17, 2019

ತಂದೆ ಕೊಟ್ಟ ಆ 10 ಸಾವಿರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು..!

0

ಅವರೊಬ್ಬರು ಖ್ಯಾತ ಉದ್ಯಮಿ. ಆದ್ರೆ, ಉದ್ಯಮಿಯಾಗೋಕು ಮೊದ್ಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮಾಡ್ತಿದ್ದ ಔಷಧ ವ್ಯಾಪಾರವೇ ಆವರಿಗೆ ಆಧಾರವಾಗಿತ್ತು. ಕೇವಲ 10 ಸಾವಿರ ರೂಪಾಯಿ ಅವರ ಬಾಳನ್ನೇ ಬದಲಿಸಿ ಬಿಡ್ತು. ಇವತ್ತು ಅವರು ಭಾರತ ದೇಶದ ಎರಡನೇ ಶ್ರೀಮಂತ. ಹಾಗಾದ್ರೆ, ಅವರು ಯಾರು..?
ಅವರು ದಿಲೀಪ್ ಸಾಂಘ್ವಿ. ಹುಟ್ಟಿದ್ದು ಮುಂಬೈಯಲ್ಲಿ.. ನಂತರ ತಂದೆ ಜೊತೆ ಕೋಲ್ಕತ್ತಾಗೆ ಶಿಫ್ಟ್ ಆಗಿದ್ರು. ಅಲ್ಲೇ ಪದವಿ ಮೂಗಿಸಿದ್ರು. ಓದೋ ವಯಸ್ಸಿನಲ್ಲೇ ಹಲವು ಆಸೆಗಳನ್ನು ಹೊತ್ತುಕೊಂಡಿದ್ದ ಸಾಂಘ್ವಿಯವರು, ತಂದೆಯಂತೆ ಔಷಧ ಉದ್ಯಮಕ್ಕೆ ಕಾಲಿಟ್ಟರು. ಕೋಲ್ಕತ್ತಾದಲ್ಲೇ ಸ್ವಂತದೊಂದು ಉದ್ಯಮ ಪ್ರಾರಂಭಿಸಿದ್ರು. ಆದ್ರೆ, ಈ ಉದ್ಯಮಕ್ಕಾಗಿ ತಂದೆಯಿಂದ 10 ಸಾವಿರ ರೂಪಾಯಿ ಹಣ ಪಡೆದಿದ್ರು.
ಆದ್ರೆ, ಉದ್ಯಮ ಪ್ರಾರಂಭಿಸಿದ ಆರಂಭದ ದಿನಗಳು ಅಷ್ಟೇನು ಸುಲಭದ್ದಾಗಿರಲಿಲ್ಲ.. ದಿಲೀಪ್ ಸಾಂಘ್ವಿ ಜೊತೆ ಕೇವಲ ಒಬ್ಬ ನೌಕರ ಮಾತ್ರ ಇದ್ದ. ಆ ಸಮಯದಲ್ಲಿ ದಿಲೀಪ್ ಮನೋವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಔಷಧಗಳನ್ನು ಮಾರಾಟ ಮಾಡುತ್ತಿದ್ರು. ನಂತರ ಮುಂಬೈಗೆ ಶಿಫ್ಟ್ ಆದ ದಿಲೀಪ್, ಗುಜರಾತ್​ನ ವಪಿ ಎಂಬಲ್ಲಿ ಔಷಧಿಗಳ ತಯಾರಿಸೋ ಕಾರ್ಖಾನೆ ಶುರುಮಾಡಿದ್ರು.
ವ್ಯಾಪಾರದಲ್ಲಿ ತಂದೆಗೆ ನೆರವಾಗುತ್ತಿದ್ದಾಗ್ಲೇ ಸ್ವಂತ ಫ್ಯಾಕ್ಟರಿ ಆರಂಭಿಸಬೇಕೆಂಬ ಆಲೋಚನೆ ದಿಲೀಪ್ ಸಾಂಘ್ವಿ ಅವರಿಗೆ ಬಂದಿತ್ತು. ಹಾಗಾಗಿ ಟ್ರೇಡಿಂಗ್ ಬ್ಯುಸಿನೆಸ್ ಬಿಟ್ಟು ಸ್ವಂತ ಕಾರ್ಖಾನೆ ಆರಂಭಿಸಿದ ದಿಲೀಪ್, ತಮ್ಮದೇ ಆದ ಬ್ರಾಂಡ್ ಒಂದನ್ನು ಸೃಷ್ಟಿಸಿದ್ರು.
1982ರಲ್ಲಿ ‘ಸನ್ ಫಾರ್ಮಾಸುಟಿಕಲ್’ ಕಂಪನಿಯನ್ನು ಆರಂಭಿಸಿದ್ರು. ತಂದೆ, ಸ್ನೇಹಿತರು ಹಾಗೂ ಪರಿಚಯಸ್ಥರಿಂದ ಸಹಾಯ ಪಡೆದು ಹೊಸ ಸಾಹಸಕ್ಕೆ ಕೈಹಾಕಿದ್ರು. ಮನೋರೋಗ ಚಿಕಿತ್ಸೆಗೆ ಬೇಕಾದ 5 ಬಗೆಯ ಔಷಧಗಳನ್ನು ಉತ್ಪಾದಿಸಲು ಶುರು ಮಾಡಿದ್ರು.
ಹೀಗೆ ಯಶಸ್ಸಿನ ಒಂದೊಂದೇ ಮೆಟ್ಟಿಲೇರುತ್ತಾ ಬಂದ ‘ಸನ್ ಫಾರ್ಮಾಸುಟಿಕಲ್’ ಕಂಪನಿ 1996ರಲ್ಲಿ 24 ದೇಶಗಳಲ್ಲಿ ಕಾರ್ಯಾರಂಭ ಮಾಡಿತ್ತು. 2011ರಲ್ಲಿ ಸನ್ ಫಾರ್ಮಾ 2 ಬಿಲಿಯನ್ ಆದಾಯ ಗಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತೀಯ ಮೂಲದ ಮೊದಲ ಕಂಪನಿ ಎನಿಸಿಕೊಂಡಿತ್ತು.
1987ರಲ್ಲಿ ‘ಮಿಲ್ಮೆಟ್ ಲ್ಯಾಬ್ಸ್’ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸನ್ ಫಾರ್ಮಾ ನೇತ್ರವಿಜ್ಞಾನ ಕ್ಷೇತ್ರಕ್ಕೂ ಕಾಲಿಟ್ಟಿತ್ತು. ಕಳೆದ ವರ್ಷ ಅಮೆರಿಕದಲ್ಲಿ ದಿಲೀಪ್ ‘ಬ್ರಾಂಡೆಡ್ ಒಫ್ತಾಲ್ಮಿಕ್’ ಬ್ಯುಸಿನೆಸ್ ಶುರು ಮಾಡಿದ್ದಾರೆ.
‘ಸನ್ ಫಾರ್ಮಾ’ವನ್ನು ದಿಲೀಪ್ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ವಿಸ್ತರಿಸಿದ್ದಾರೆ. ಈಗ ‘ಸನ್ ಫಾರ್ಮಾ’ ಭಾರತದ ನಂಬರ್ ಒನ್ ಕಂಪನಿ, ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಐದನೇ ಸ್ಥಾನ ಪಡೆದಿದೆ.
ಇತರರಿಗೂ ಮುನ್ನವೇ ಅವಕಾಶವನ್ನು ಗುರುತಿಸುವವನೇ ನಿಜವಾದ ಉದ್ಯಮಿ. ಹಣಕ್ಕಾಗಿ ಆತ ಅವಕಾಶ ಕಳೆದುಕೊಳ್ಳುವುದಿಲ್ಲ. ತನ್ನ ದೃಷ್ಟಿಕೋನವನ್ನು ಹಂಚಿಕೊಳ್ಳಬಲ್ಲ ಅದ್ಭುತ ತಂಡವನ್ನು ಕಟ್ಟುತ್ತಾನೆ. ಅದನ್ನು ಕಾರ್ಯರೂಪಕ್ಕೆ ತರುತ್ತಾನೆ. ಕಲಿಕೆ ಅನ್ನೋದು ಯಾವಾಗಲೂ ಇರುತ್ತದೆ’’ ಎನ್ನುವುದು ದಿಲೀಪ್ ಸಾಂಘ್ವಿ ಅವರ ನಿಲುವು.
ಏನೇ ಹೇಳಿ, ಸಮರ್ಪಣೆ, ಪರಿಶ್ರಮ, ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ದಿಲೀಪ್ ಅವರನ್ನು ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಲ್ಲಿಸಿದೆ. ಇವತ್ತು, ಇಡೀ ವಿಶ್ವವೇ ಕೊಂಡಾಡುವಂತೆ ಮಾಡಿದೆ..
-ಎನ್. ಜಿ. ರಮೇಶ್

ಆಕೆಯ ಸಾಧನೆಗೆ ಸಭೆಯೇ ಚಪ್ಪಾಳೆ ತಟ್ಟುತ್ತಿದ್ದರೆ, ಚಪ್ಪಾಳೆ ಧ್ವನಿಯೂ ಆಕೆಗೆ ಕೇಳಿಸುತ್ತಿರಲಿಲ್ಲ..!

0

ಕೊಪ್ಪಳ: ಇತ್ತೀಚೆಗೆ ಶ್ರೀ ಕೃಷ್ಣದೇವರಾಯ ಕಾಲೇಜಿನ 7ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಳ್ಳಾರಿ ವಿಶ್ವವಿದ್ಯಾನಿಲಯಕ್ಕೆ 5ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ರೇಷ್ಮಾಗೆ ಸನ್ಮಾನ ಮಾಡಲಾಯ್ತು. ಕಡುಬಡತನದಲ್ಲಿಯೇ ಬೆಳೆದ ರೇಷ್ಮಾಳ ಸಾಧನೆಗೆ ಗ್ರಾಮಸ್ಥರೆಲ್ಲರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ರು. ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸುತ್ತಿರಬೇಕಾದ್ರೆ ಸಭೆಯಲ್ಲಿ ಜೋರು ಕರತಾಡನ.. ದುರಾದೃಷ್ಟ ಅಂದ್ರೆ ಅಷ್ಟೊಂದು ಜನರ ಮೆಚ್ಚುಗೆ ಮಾತುಗಳನ್ನು, ಚಪ್ಪಾಳೆಯ ಧ್ವನಿಯನ್ನು ಕೇಳಿಸಿಕೊಳ್ಳೋ ಭಾಗ್ಯ ರೇಷ್ಮಾ ಅವರಿಗಿಲ್ಲ.

ಗಂಗಾವತಿ ತಾಲೂಕಿನ ಬರಗೂರು ಗ್ರಾಮದ ರೇಷ್ಮಾಗೆ ಎರಡೂ ಕಿವಿಗಳು ಕೇಳಿಸುತ್ತಿರಲಿಲ್ಲ. ಜೊತೆಗೆ ಬಡತನ ಬೇರೆ. ಆದರೆ ಓದಬೇಕೆಂಬ ಛಲವಿತ್ತು. ಆ ಛಲವೇ ರೇಷ್ಮಾಳ ಸಾಧನೆಗೆ ಕಾರಣವಾಯ್ತು. ಛಲವಿದ್ದರೆ ಏನಾದರೂ ಸಾಧಿಸಬಹುದು ಅನ್ನೋದನ್ನು ಬಳ್ಳಾರಿಯ ಯುವತಿ ಸಾಧಿಸಿ ತೋರಿಸಿದ್ದಾರೆ. ರೇಷ್ಮಾ ಲಿಪ್​ ಮೂವ್​ಮೆಂಟ್​ ನೋಡಿಯೇ ಉಪನ್ಯಾಸಕರು ಮಾಡ್ತಿದ್ದ ಪಾಠವನ್ನು ಅರ್ಥ ಮಾಡ್ಕೊಳ್ತಿದ್ರು. ಚಿಕ್ಕಂದಿನಿಂದಲೂ ಹೀಗೆಯೇ ಓದಿ ಈಗ ಎಂ. ಎ. ಎಕನಾಮಿಕ್ಸ್​ನಲ್ಲಿ ಬಳ್ಳಾರಿ ವಿಶ್ವವಿದ್ಯಾನಿಲಯಕ್ಕೇ 5 ನೇ ರ‍್ಯಾಂಕ್ ಪಡೆದಿದ್ದಾರೆ.

ರೆಷ್ಮಾ ಬಾಲ್ಯದಲ್ಲಿ‌ ಮಕ್ಕಳ ಜೊತೆ ಆಡ್ತಿರಬೇಕಾದ್ರೆ ಪುಟ್ಟ ಮಕ್ಕಳು ರೇಶ್ಮಾಳ‌ ಎರೆಡು ಕಿವಿಯಲ್ಲಿ ಮರಳನ್ನು ಹಾಕಿದ್ದಾರೆ. ಈ ವಿಷಯ ಮನೆಯಲ್ಲಿ ಗೊತ್ತಾಗಿ‌ ಮನೆಯವರು ಕಿವಿಯಿಂದ ಮರಳನ್ನು ತಗೆಯಲು ಹೋಗಿ ರೇಶ್ಮಾಳ ಎರೆಡು ಕೀವಿಗೆ ತೀವ್ರ ಗಾಯವಾಗಿ ಕಿವಿ ಕೇಳದಂತಾಗಿತ್ತು. ಶ್ರೀರಾಮನಗರದ ತಾಲೂಕು ಪಂಚಾಯತ್ ಸದಸ್ಯರಾಗಿರುವ ಮಹಮ್ಮದ್ ರಫಿ ಎನ್ನುವವರು ವಿಧ್ಯಾರ್ಥಿನಿಗೆ ಧೈರ್ಯ ತುಂಬಿ ಶ್ರೀರಾಮನಗರದ ಸಿ.ಎನ್.ಆರ್ ಡಿಗ್ರಿ ಕಾಲೇಜ್ ಗೆ ಸೆರಿಸುತ್ತಾರೆ. ಅಲ್ಲೂ ರೆಷ್ಮಾ ಉತ್ತಮ ಅಂಕ ಪಡೆದು ತೇರ್ಗಡೆಯಾಗುತ್ತಾರೆ. ಅಲ್ಲಿಂದ ಗಂಗಾವತಿಯ ಕೊಲ್ಲಿನಾಗೇಶ್ವರ ಕಾಲೇಜಿನಲ್ಲಿ ಎಂ.ಎ‌ ಮಾಡಿ ಎಕನಾಮಿಕ್ಸ್ ಅಲ್ಲಿ 5ನೇ ರ್ಯಾಂಕ್ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರೆಶ್ಮಾಳ‌ ಈ ಸಾಧನೆಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

“ಮೇಷ್ಟ್ರು ಪಾಠ ಹೇಳುವಾಗ ಅವರ ಲಿಪ್ ಮೂವ್​ಮೆಂಟ್​ ಆಧಾರದ ಮೇಲೆ ರೇಷ್ಮಾ ಪಾಠವನ್ನು ಅರ್ಥೈಸಿಕೊಳ್ಳುತ್ತಿದ್ದಳು. ನನ್ನ‌ ಮಗಳಿಗೆ ಕಿವಿ ಕೇಳುವಂತೆ ಮಾಡಿ. ಅವಳು ಇನ್ನಷ್ಟು ಸಾಧನೆ ಮಾಡ್ತಾಳೆ. ನಾನು ದುಡಿದು ಓದಿಸಿದ್ದೀನಿ, ಅವಳು ಸಾಧನೆ ಮಾಡಿ ತೋರಿಸಿದ್ದಾಳೆ. ಸರ್ಕಾರ ನೇರವು ನೀಡಿ ನನ್ನ ಮಗಳಿಗೆ ಕಿವಿ ಕೇಳಿಸುವಂತೆ ಮಾಡಿ” ಅಂತ ರೇಷ್ಮಾಳ ತಾಯಿ ಕೇಳಿಕೊಂಡಿದ್ದಾರೆ. ರೇಷ್ಮಾಳಿಗೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗಲಿ ಅಂತ ಹಾರೈಸೋಣ.

ಮಾರ್ಷಿಯಲ್​ ಆರ್ಟ್​​​ಗೂ ಅಗಸ್ತ್ಯರಿಗೂ ಅದೆಂಥಾ ನಂಟು?

0

ಹುಟ್ಟಿದ ಪ್ರತಿ ಮಗುವೂ, ಅಷ್ಟೆಯಾಕೆ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಯೂ ಕೂಡ ಮೊದಲು ಕಲಿಯುವುದು ಆಟ ಆಡುವುದನ್ನು. ಅಂಥಾ ನಿಮ್ಮೆಲ್ಲರಿಗೂ ಗೊತ್ತಿರೋ ವಿಷಯ ಅನ್ನೋದು ನನಗೂ ಗೊತ್ತಿದೆ. ಆದ್ರೆ ಆಟಗಳನ್ನ ಕ್ರಮಬದ್ಧವಾಗಿ ನಿಯಮಗಳ ಸಮೇತ ಆಡುವುದಾದರೇ ಅದನ್ನ ಕ್ರೀಡೆಯೆಂದು ಕರೆಯುತ್ತಾರೆ ಎನ್ನುವುದು ಸಾಮಾನ್ಯ ಜ್ಞಾನಕೂಡ ಹೌದು.

 ನಮ್ಮ ಭಾರತದಲ್ಲಿ ಹಲವಾರು ಕ್ರೀಡೆಗಳಿವೆ ಅವುಗಳಲ್ಲಿ ಕೆಲವೊಂದು ಮಾತ್ರ ಬಹಳ ಪ್ರಖ್ಯಾತಿಯನ್ನ ಪಡೆದರೇ , ಇನ್ನೂ ಕೆಲವಷ್ಟು ಕ್ರೀಡೆಗಳು ಎಲೆಮರೆಯ ಕಾಯಿಯಂತೆ ಮೂಲೆಗುಂಪಾಗಿದೆ, ಅದೇನೇ ಇರಲಿ ನಾನು ಇನ್ನು ಮುಂದೆ ಕ್ರೀಡೆಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿಗಳನ್ನ, ಆ ಕ್ರೀಡೆಯ ಇತಿಹಾಸವನ್ನ ಮತ್ತು ಅದರ ನಿಯಮಗಳನ್ನ, ಆ ಒಂದು ಕ್ರೀಡೆಯನ್ನ ಆಭ್ಯಾಸಿಸಬೇಕಾದರೆ ಯಾವೆಲ್ಲ ಗುಣಗಳಿರಬೇಕು, ಅಭ್ಯಾಸ ಮಾಡಿದರೆ ಏನೆಲ್ಲ ಲಾಭಗಳಿವೆ ಎನ್ನುವ ಹಲವಾರು ನಿಮ್ಮ ಕುತೂಹಲಕ್ಕೆ ನಾನು ಉತ್ತರ ಹುಡುಕುವ ಪ್ರಯತ್ನ ಇನ್ನುಮುಂದೆ ಸಾಗುತ್ತಲೇ ಇರುತ್ತದೆ.. ಈ ಕೆಳಗಿನಂತೆ..!

 ಮನುಷ್ಯ ಅಂದಮೇಲೆ ಬೇಜಾರು, ಗಲಾಟೆ, ಕೋಪ ಇನ್ನೂ ಹೆಚ್ಚೆಂದರೆ ಹೊಡೆದಾಟ ಸರ್ವೆಸಾಮಾನ್ಯ ಅಲ್ವಾ? ಇದು ಇನ್ನೂ ಅತೀರೇಕಕ್ಕೆ ಹೋದ್ರೆ ಗುಂಪು ಘರ್ಷಣೆ, ಆಫ್ ಮರ್ಡರ್​, ಕೊಲೆ, ಸಾವು ಇದೆಲ್ಲ ಸಂಭವಿಸುವುದು ಈಗಿನ ಸಮಾಜದಲ್ಲಿ ಕೆಡುಕನ್ನ ಸೃಷ್ಠಿಸೋದು ಇತ್ತೀಚೆಗೆ ಸಾಮನ್ಯ ಪ್ರಕ್ರಿಯೆಯಾಗಿದೆ. ಆದರೆ ನಮ್ಮ ರಾಜರ ಕಾಲದಲ್ಲಿ ಹೀಗಿರಲಿಲ್ಲ , ಯಾರಾದರೂ ತಪ್ಪು ಮಾಡಿದರೂ ಅವರಿಗೆ ಏನೇ ಶಿಕ್ಷೆಯಾಗಬೇಕಾದರೂ ಅದೆಲ್ಲದಕ್ಕೂ ರಾಜನ ಅಪ್ಪಣೆಯಾಗಬೇಕಿತ್ತು. ಹಾಗಾಗಿ ಅಲ್ಲಿ ಕೊಲೆ ಸಾವು ನೋವು ಇರಲಿ ಹೊಡೆದಾಡುವ ಮಾತೆ ಇದ್ದಿಲ್ಲ. ಹಾಗಾಗಿ ಆಗಿನ ಜನ ಹೊಡೆದಾಟವನ್ನೆ ಒಂದು ನಿಗದಿತ ಪ್ರದೇಶದಲ್ಲಿ ಗೊತ್ತು ಪಡಿಸಿಕೊಂಡು ಅಲ್ಲಿ ಹೊಡೆದಾಡಿ ನಂತರ ಯಾರೊ ಒಬ್ಬಗೆಲ್ಲುತ್ತಿದ್ದ ಇನ್ಯಾರೊ ಒಬ್ಬ ಸೋಲುತ್ತಿದ್ದ , ಅಲ್ಲಿಗೆ ಈ ಹೊಡೆದಾಟದ ಆಟ ಮುಗಿಯುತಿತ್ತು, ಅದರಿಂದ ನೋಡುಗರಿಗೂ ಮನೋರಂಜನೆಯೂ ಇರುತ್ತಿತ್ತು.

  ಹೀಗೆ ಮುಂದುವರೆದು ಅದನ್ನೆ ನಿಯಮಬದ್ಧವಾಗಿ ಮತ್ತು ಕ್ರಮಬದ್ಧವಾಗಿ ಆಡುವ ಮೂಲಕ ಮಾರ್ಷಿಯಲ್​ ಆರ್ಟ್​ ಅನ್ನೋದನ್ನ ಹುಟ್ಟುಹಾಕಲಾಗಿದೆ ಎನ್ನುವುದು ನಂಬಲೇಬೇಕಾದ ಸಂಗತಿ. ಯಾಕೆಂದರೆ ಒಂದು ಸತ್ಯ ಏನು ಗೊತ್ತಾ? ಈ ಮಾರ್ಷಿಯಲ್​ ಆರ್ಟ್​ ಅಂದರೆ ಕನ್ನಡದಲ್ಲಿ ಕದನ ಕಲೆ ಅಂತ, ಅಂದರೆ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನ ಅಥವಾ ತನ್ನ ಎದುರಾಳಿಯನ್ನ ಧೈಹಿಕವಾಗಿ ಮಣಿಸಲು ಅಂದರೆ ಸೋಲಿಸಲು ಬಳಸುವ ಯಾವುದೇ ರೀತಿಯ ತಂತ್ರವನ್ನ ಅವನು ಪ್ರಯೋಗಿಸಿದರೆ ಅದುವೇ ಕದನ ಕಲೆ , ಮಾರ್ಷಿಯಲ್​ ಆರ್ಟ್​! ಹೀಗೆ ಶುರುವಾದ ಮಾರ್ಷಿಯಲ್​ ಆರ್ಟ್​ ಮೊದಲು ಒಂದು ಹೊಸರೂಪವನ್ನ ಪಡೆದಿದ್ದು ನಮ್ಮ ಭಾರತದಲ್ಲಿ ಅದರಲ್ಲೂ ಪಕ್ಕದ ರಾಜ್ಯ ಕೇರಳದಲ್ಲಿ ಅನ್ನೋದು ಹೆಮ್ಮೆಯನ್ನ ತರುವಂತಹ ವಿಷಯ.

  ಗೆಳೆಯರೆ, ಹಾಗೆ ಹುಟ್ಟುಪಡೆದ ಆ ಸಮರ ಕಲೆ ಯಾವುದು ಗೊತ್ತಾ? ಇಂದು ಜಗತ್ಪಸಿದ್ಧಿ ಪಡೆದು ಜನಮನ್ನಣೆಯನ್ನ ಗಳಿಸಿರುವಂತಹ ಕಳರಿ ಪಯಟ್ಟು ಎನ್ನುವ ಕದನ ಕಲೆ ಕಂಡ್ರಿ! ಶಿವನ ರುದ್ರತಾಂಡವವೇ ಈ ಸಮರ ಕಲೆಯ ಮೂಲ. ಸ್ನೇಹಿತರೆ, ಈ ಸಮರ ಕಲೆಯ ಹುಟ್ಟಿಗೆ ಕಾರಣರಾದವರು ಅಗಸ್ತ್ಯ ಮುನಿಗಳು.!

ಅರೆ, ಈ ಅಗಸ್ತ್ಯ ಮುನಿಗಳು ಈ ಕಲೆಯನ್ನು ಇದನ್ನ ಯಾವಾಗ ಅಭ್ಯಾಸ ಮಾಡಿದರಪ್ಪ ಅಂತಾ ಯೋಚಿಸ ಬೇಡಿ ಇಲ್ಲೇ ಇರೋದು ಟ್ವಿಸ್ಟ್. ಯಸ್, ಅಗಸ್ತ್ಯ ಮುನಿಗಳು ಶಿವನ ಪರಮ ಭಕ್ತರು.. ಇವರು ಸದಾ ಶಿವನ ಆರಾಧನೆಯಲ್ಲೇ ಕಾಲಕಳೆಯುತ್ತಿದ್ದರು. ಹೀಗಿರುವಾಗಲೇ ಅವರಿಗೆ ಒಂದು ಹೊಸ ಆಲೋಚನೆ ಉಂಟಾಗುತ್ತದೇ. ಶಿವನು ದುಷ್ಟರನ್ನು ಸಂಹರಿಸಲು, ಸಿಟ್ಟಿನಲ್ಲಿ ರುದ್ರ ತಾಂಡವವಾಡುತ್ತಾನೆ, ಈ ತಾಂಡವದ ಕೆಲವು ಬಂಗಿಗಳನ್ನ ಹೆಕ್ಕಿ ದೇಹವನ್ನ ಸದೃಢವಾಗಿಡಲು ವ್ಯಾಯಾಮದ ರೀತಿಯಲ್ಲಿ ಪ್ರತಿದಿನ ಅಭ್ಯಾಸಿಸಲು ಮುಂದಾಗುತ್ತಾರೆ. ಹಾಗೆ ತನ್ನ ಕೆಲ ಶಿಷ್ಯರಿಗೂ ಕಲಿಸಿ ಕೊಡಲು ಮುಂದಾಗುತ್ತಾರೆ. ಹೀಗೆ ಶುರುವಾದ ವ್ಯಾಯಾಮ ಮುಂದೆ ರೀತಿ, ನೀತಿ, ನಿಯಮಗಳನ್ನ ಹೊಂದುತ್ತದೆ.. ಆ ಶಿಷ್ಯಂದಿರುಗಳು ಹಾಗೆ ಅಲ್ಲಿಂದ ಮುಂದೆ ರಾಜರುಗಳ ಆಸ್ತಾನವನ್ನ ಸೇರಿ ಅಲ್ಲಿ ತರಬೇತಿಯನ್ನ ಶುರುಮಾಡುತ್ತಾರೆ. ಹೀಗೆ, ಶುರುವಾಗಿದ್ದೇ ಈ ಸಮರ ಕಲೆ ಅಥವಾ ಕಧನಕಲೆ ಅಥವಾ ಮಾರ್ಷಿಯಲ್​ ಆರ್ಟ್​.

-ಮೋಹನ್​ ಕುಮಾರ್ ಆಳಲಗೇರೆ

ಶಿವಮೊಗ್ಗಕ್ಕೂ ಬಂದೆ ಬಿಟ್ಟಳು ರೋಬೋಟ್​ ವೈಟರ್​..!

0

ಅಲ್ಲಿ ನೀವು ಕುಳಿತಲ್ಲಿಗೆ ರೋಬೋಟ್ ಬರುತ್ತೆ. ನೀವು ಆರ್ಡರ್ ಮಾಡಿದ ತಿಂಡಿ-ತಿನಿಸುಗಳನ್ನು ನಿಮ್ಮಲ್ಲಿಗೆ ತಂದು ನೀಡುತ್ತೆ. ರೋಬೋಟ್ ಕೈಯಲ್ಲಿರುವ ಗುಂಡಿಯನ್ನ ಒತ್ತಿದ ಕೂಡಲೇ ಥ್ಯಾಂಕ್ಸ್ ಹೇಳಿ ಮುಂದೆ ಸಾಗತ್ತೆ. ಇದೇನಪ್ಪ ಅನ್ಕೊಂಡ್ರಾ!? ಇದು ಶಿವಮೊಗ್ಗದಲ್ಲಿರುವ ಹೋಟೆಲ್​​​ವೊಂದರಲ್ಲಿ ರೋಬೋಟ್ ಕಾರ್ಯನಿರ್ವಹಿಸುತ್ತಿರುವ ಶೈಲಿ.
‘ಹಲೋ, ಹಾಯ್, ನಮಸ್ಕಾರ, ನಮ್ಮ ಉಪಹಾರ ದರ್ಶಿನಿಗೆ ಸ್ವಾಗತ. ನಿಮ್ಮ ಆರ್ಡರ್ ನನ್ನ ಕೈಯಲ್ಲಿದೆ. ತೆಗೆದುಕೊಳ್ಳಿ. ನಂತರ ನನ್ನ ಕೈ ಬಳಿ ಇರುವ ಗುಂಡಿಯನ್ನ ಒತ್ತಿ’..! ಈ ರೀತಿ ಹೇಳುತ್ತಾ ಒಂದು ಗೊಂಬೆ ಬಂದು ನೀರು, ತಿಂಡಿ, ತಿನಿಸುಗಳನ್ನ ನೀಡಿ, ನಂತರ ಥ್ಯಾಂಕ್ಸ್ ಹೇಳಿ ಹೋಗುತ್ತೆ.
ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿಯಲ್ಲಿರುವ ಉಪಹಾರ ದರ್ಶಿನಿಯಲ್ಲಿ ಈ ರೋಬೋಟ್​​​ ವೈಟರ್​​ ಇದ್ದಾಳೆ. ಗ್ರಾಹಕರ ಸೇವೆಗಾಗಿ, ರೋಬೋಟ್ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಶಿವಮೊಗ್ಗ ಮಾತ್ರವಲ್ಲದೇ, ರಾಜ್ಯದಲ್ಲಿಯೇ ಪ್ರಥಮ ಮತ್ತು ದೇಶದಲ್ಲಿಯೇ ಎರಡನೆಯ ರೋಬೋಟ್​​​ ವೈಟರ್ ಈ ಉಪಹಾರ ದರ್ಶಿನಿಯ ಹೊಸ ಸಪ್ಲೈಯರ್.
ಶಿವಮೊಗ್ಗದಲ್ಲೀಗ ಈ ರೋಬೋಟ್​ ವೈಟರ್ ಮನೆ ಮಾತಾಗಿದೆ. ಈ ರೋಬೋಟ್​ನ ಬ್ಯಾಟರಿಯನ್ನು 2 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, ಸುಮಾರು 3 ದಿನಗಳ ಕಾಲ ಸೇವೆ ನೀಡಲಿದೆ. ಕುಡಿಯಲು ನೀರು ಸೇರಿದಂತೆ, ಯಾವುದೇ ತಿನಿಸುಗಳನ್ನು ಆರ್ಡರ್ ಮಾಡಿದಲ್ಲಿ, ಅದನ್ನು ಟೇಬಲ್ ಗೆ ತಂದು ನೀಡಲಿದೆ. ಅಲ್ಲದೇ ಸೇವೆ ಪೂರೈಸಿದ ಬಳಿಕ ಕೈ ಬಳಿ ಇರುವ ಗುಂಡಿ ಒತ್ತಿದರೆ, ಥ್ಯಾಂಕ್ಸ್ ಹೇಳಿ ಮುಂದಿನ ಟೇಬಲ್ ಗೆ ತೆರಳಿ ಅಲ್ಲಿನ ಆರ್ಡರ್ ಪೂರೈಸತ್ತೆ.

ಸುಮಾರು 6-7 ಕೆ.ಜಿ. ವರೆಗೂ ತೂಕವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಈ ರೋಬೋಟ್ ಚಲನೆಗೆ, ಮೊಬೈಲ್ ಆ್ಯಪ್ ಕೂಡ ಸಿದ್ಧಪಡಿಸಲಾಗಿದ್ದು, ಈ ಆ್ಯಪ್ ಮೂಲಕ, ರಿಮೋಟ್ ಕಂಟ್ರೋಲ್​​ನಿಂದ ರೋಬೋಟ್ ನಿಯಂತ್ರಿಸಬಹುದಾಗಿದೆ.
ಇನ್ನು ಈ ಚೈನಾ ನಿರ್ಮಿತ, ರೋಬೊಟ್ ನ್ನು, ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ, ಶಿವಮೊಗ್ಗಕ್ಕೆ, ಆಂಧ್ರದ ವಿಜಯವಾಡದ ಮೂಲಕ ತರಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ, ಹೊಟೆಲ್​​ಗಳಲ್ಲಿ, ಗ್ರಾಹಕರಿಗೆ ಸೇವೆ ನೀಡಲು ಸಿಬ್ಬಂದಿ ಕೊರತೆ ಇರೋದ್ರಿಂದ ಲಾಭದಾಯಕ ಉದ್ಯಮವಾಗಿದ್ದರೂ, ಕೆಲವು ಹೋಟೆಲ್ ಗಳು ಮುಚ್ಚಿ ಹೋಗುತ್ತಿವೆ. ಹೋಟೆಲ್​ಗಳಲ್ಲಿ ಸಪ್ಲೆಯರ್ ಹುದ್ದೆ ಖಾಲಿ ಇದ್ದರೂ ಸಹ ಯುವ ಪೀಳಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ, ಹಲವಾರು ಹೋಟೆಲ್ ಗಳಲ್ಲಿ ಸ್ವ-ಸಹಾಯ ಪದ್ದತಿ ಜಾರಿಯಲ್ಲಿದೆ. ಅದರಂತೆ, ಈ ಹೋಟೆಲ್​ನಲ್ಲಿ, ರೋಬೋಟ್ ಸೇವೆಯನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿದ್ದು, ಇದನ್ನ ನೋಡಲು ಮತ್ತು ಇದರ ಸೇವೆ ಪಡೆಯಲು ಜನರು ಬರುತ್ತಿದ್ದು, ರೋಬೋಟ್​ನ ಸೇವೆಯನ್ನ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದು, ತಿಂಡಿ, ಊಟದ ನಂತರ ರೋಬೋಟ್ ಜೊತೆ ಸೆಲ್ಫಿ ತೆಗೆದುಕೊಂಡು ಸಕತ್ ಖುಷಿ ಪಡುತ್ತಿದ್ದಾರೆ.
ಒಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ, ಮೊದಲ ಬಾರಿಗೆ ರೋಬೋಟ್ ವೊಂದು, ಹೋಟೆಲ್​ನಲ್ಲಿ ಸೇವೆ ನೀಡುತ್ತಿರುವುದರಿಂದ ಪುಟ್ಟ ಮಕ್ಕಳು ಸೇರಿದಂತೆ, ಗ್ರಾಹಕರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇತ್ತ ಹೊಟೆಲ್ ಗೆ ಆಗಮಿಸುವ ಗ್ರಾಹಕರು ಕೂಡ ಈ ರೋಬೋಟ್ ನ ವಿಶೇಷತೆ ಕಂಡು ಪುಳಕಿತರಾಗುತ್ತಿದ್ದಾರೆ.

– ಗೋ.ವ. ಮೋಹನಕೃಷ್ಣ, ಶಿವಮೊಗ್ಗ

ಪಟ್ಟಾಭಿಷೇಕಕ್ಕೂ ಮುನ್ನ ಅಂಗರಕ್ಷಕಿಯನ್ನ ಮದ್ವೆಯಾದ ರಾಜ..!

0

ಥಾಯ್ಲೆಂಡ್​​ನ ರಾಜ ಮಹಾ ವಾಜಿರಲಾಂಗ್​​ ಕಾರ್ನ್​ ತನ್ನ ಪಟ್ಟಾಭಿಷೇಕಕ್ಕೂ ಮುನ್ನ ಅಂಗರಕ್ಷಕಿಯನ್ನು ಮದ್ವೆ ಆಗಿ ರಾಣಿ ಅಂತ ಘೋಷಿಸಿದ್ದಾರೆ.
ಥಾಯ್ಲೆಂಡ್​​​ನ ದೊರೆ ಭೂಮಿಬೋಲ್​ ಅದುಲ್ಯದೇಜ್​​ 2016ರ ಅಕ್ಟೋಬರ್​ನಲ್ಲಿ ನಿಧನರಾಗಿದ್ದರು. ಅವರ ನಿಧನದ 3 ವರ್ಷಗಳ ನಂತರ ಇದೀಗ ಅವರ ಪುತ್ರ ಮಹಾ ವಾಜಿರಲಾಂಗ್ ಕಾರ್ನ್ ಅವರು ದೊರೆಯಾಗಿ ಪಟ್ಟ ಅಲಂಕರಿಸುತ್ತಿದ್ದಾರೆ.
ಮಹಾ ವಾಜಿರಲಾಂಗ್​​ ಕಾರ್ನ್​ ಅವರಿಗೆ ಈಗ 66 ವರ್ಷ. ಅವರು 40 ವರ್ಷದ ಸುತಿದಾ ಅವರನ್ನು ಮದುವೆ ಆಗಿದ್ದಾರೆ. ಅಂಗರಕ್ಷಕಿ ಆಗಿದ್ದ ಸುತಿದಾ ಈಗ ಮಹಾರಾಣಿ..! ಮಹಾ ವಾಜಿರಲಾಂಗ್​​ ಕಾರ್ನ್​ಗೆ ಇದು ನಾಲ್ಕನೇ ಮದ್ವೆ. 2014ರಲ್ಲಿ ಅವರು ತನ್ನ ಮೂರನೇ ಪತ್ನಿಗೆ ಡಿವೋರ್ಸ್​ ಕೊಟ್ಟಿದ್ದರು.
ಸುತಿದಾ ಹಿಂದೆ ಥಾಯ್​ ಏರ್​ ವೇಸ್​​​ನಲ್ಲಿ ಫ್ಲೈಟ್​​​ ಅಟೆಂಡೆಂಟ್​​ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2013ರಲ್ಲಿ ರಾಜನ ಭದ್ರತಾ ಪಡೆಯಲ್ಲಿ ಕಮಾಂಡೋ ಆಗಿ ಸೇರಿಕೊಂಡಿದ್ದರು.

ಪವರ್​ ಟಿವಿ ಅಭಿಯಾನಕ್ಕೆ ಅನ್ಸುಲ್​ ಸಕ್ಸೇನಾ ಮೆಚ್ಚುಗೆ..!

0

ಬೆಂಗಳೂರು: ಪವರ್ಟಿವಿ ನಡೆಸುತ್ತಿರುವ ಜಸ್ಟೀಸ್ ಫಾರ್ಮಧು ಅಭಿಯಾನಕ್ಕೆ ಅನ್ಸುಲ್ ಸಕ್ಸೇನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆರಾಯಚೂರಿನ ಮಧು ಪತ್ತಾರ್ ಸಾವಿಗೆ ನ್ಯಾಯ ಬೇಕು ಅಂತ ಪವರ್ ಟಿವಿ ದಿನವಿಡೀ ಸುದ್ದಿ ಬಿತ್ತರಿಸಿತ್ತು. ಪವರ್ ಟಿವಿಯ ಅಭಿಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪುಲ್ವಾಮಾ ದಾಳಿಯಾದ ಸಂದರ್ಭದಲ್ಲಿ ಪಾಕಿಸ್ತಾನದ ವೆಬ್​​​ಸೈಟ್​​ಗಳನ್ನು ಹ್ಯಾಕ್ ಮಾಡಿ ಜನಮನ್ನಣೆ ಗಳಿಸಿದ್ದ ಅನ್ಸುಲ್ ಸಕ್ಸೇನಾ ಪವರ್ ಟಿವಿಯ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಫೇಸ್​​ಬುಕ್​​ ಪೇಜ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪವರ್ ಅಭಿಯಾನಕ್ಕೆ ಸಾಥ್ ಕೊಟ್ಟಿರೋ ಅನ್ಸುಲ್ ಸಕ್ಸೇನಾ, ಮಧು ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ. #ಜಸ್ಟಿಸ್ ಫಾರ್ ಮಧು, ಪವರ್ ಟಿವಿ ಹ್ಯಾಷ್ ಟ್ಯಾಗ್ ಬಳಸಿ ಅನ್ಸುಲ್ ಪೋಸ್ಟ್ ಮಾಡಿದ್ದಾರೆ. ಪುಲ್ವಾಮಾ ದಾಳಿ ಸಂದರ್ಭ ಪಾಕ್ ವೆಬ್ಸೈಟ್ ಹ್ಯಾಕ್ ಮಾಡಿದ್ದ ಅನ್ಸುಲ್ ಸಕ್ಸೇನಾ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದರು.

ಎಪ್ರಿಲ್ 13ರಂದು ಕಾಣೆಯಾಗಿದ್ದ ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಏಪ್ರಿಲ್.15ರಂದು ಕಾಲೇಜಿನಿಂದ 4 ಕಿಲೋ ಮೀಟರ್ ದೂರದ ಅಜ್ಞಾತ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶವದ ಪಕ್ಕದಲ್ಲಿಯೇ ಡೆತ್ ನೋಟ್ ಸಿಕ್ಕಿದ್ದು, ಅದನ್ನು ಆಧರಿಸಿ ಪೊಲೀಸರು ಆತ್ಮಹತ್ಯೆ ಕೇಸು ದಾಖಲಿಸಿಕೊಂಡಿದ್ದಾರೆ. ಡೆತ್​​ ನೋಟ್​​ ಇತ್ತಾದರೂ ಮಧು ಪತ್ತಾರ್ ಶವದ ಮೇಲಾದ ಗಾಯಗಳು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿತ್ತು. ಪೋಷಕರ ದೂರಿನನ್ವಯ ಪೊಲೀಸರು ಅತ್ಯಾಚಾರ ಹಾಗೂ ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಸುದರ್ಶನ್ ಯಾದವ್ ಎಂದ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ದೇಶದಲ್ಲಿ ಮತ್ತೊಂದು ನಿರ್ಭಯಾ ಹತ್ಯೆ ನಡೆದಿರೋ ಶಂಕೆ ಸಾವಿನ ಸುತ್ತ ಮೆತ್ತಿಕೊಂಡಿದೆ. ಮುಗ್ಧ ಯುವತಿಯ ಸಾವಿಗೆ ನ್ಯಾಯ ಕೊಡಿಸುವಲ್ಲಿ ನಿಮ್ಮ ಪವರ್ ಟಿವಿ ಸದಾ ಬದ್ಧವಾಗಿದೆ.

ಸಾವಿನ ಮನೆಯಲ್ಲಿ ಸಾಂತ್ವನ ಹೇಳಿದ ಕಪಿರಾಯ..!

0

ಗದಗ : ಪ್ರಾಣಿಗಳಲ್ಲಿರೋ ಪ್ರೀತಿ, ಪ್ರೀತಿಸೋ ಗುಣ ಮನುಷ್ಯರಲ್ಲಿ ಇಲ್ಲ..! ಮೂಕಪ್ರಾಣಿಗಳು ಬಾಯಿ ಮಾತಲ್ಲಿ ಪ್ರೀತಿಯನ್ನು ಹೇಳಿಕೊಳ್ಳಲ್ಲ, ಅವು ಮನಸ್ಸಲ್ಲಿ ಬೆಟ್ಟದಷ್ಟು ಪ್ರೀತಿ, ಕಾಳಜಿ ಇಟ್ಕೊಂಡಿರ್ತವೆ.
ಇಲ್ಲಿ ಇದೆಲ್ಲಾ ಹೇಳೋಕೆ ಕಾರಣ, ಒಂದು ಪುಟ್ಟ ಕೋತಿ! ಈ ಕೋತಿ ಅಂಥಾದ್ದೇನು ಮಾಡ್ತು ಅಂತ ತಿಳಿದ್ರೆ, ಇದನ್ನು ಓದಿದ್ರೆ ನೀವು ಖಂಡಿತಾವಾಗಿಯೂ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಿ…ನಿಮ್ಗೆ ಬಹಳ ಅಚ್ಚರಿ ಆಗುತ್ತೆ. ಕೋತಿ ಸಾವಿನ ಮನೆಗೆ ಹೋಗಿ ನೋವಿನಲ್ಲಿದ್ದವರ ಕಣ್ಣೀರು ಒರೆಸುವ ಕೆಲಸ ಮಾಡಿದೆ.
ಹೌದು, ಗದಗದ ನರಗುಂದ ಪಟ್ಟಣದಲ್ಲಿ ಇಂಥಾ ಒಂದು ನಂಬಲಸಾಧ್ಯವಾದ ಅಪರೂಪದ ಘಟನೆ ನಡೆದಿದೆ. ದೇವೇಂದ್ರಪ್ಪ ಕಮ್ಮಾರ್ ಅನ್ನೋರು ವಿಧಿವಶರಾಗಿದ್ದು, ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಸ್ಥರು ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತಿದ್ದಾಗ ಅಲ್ಲಿಗೆ ಬಂದ ಕಪಿ ದುಃಖದಲ್ಲಿರೋರ ಕಣ್ಣೀರನ್ನು ಒರೆಸಿದೆ. ತನ್ನದೇ ಭಾಷೆಯಲ್ಲಿ ಅವರಿಗೆ ಸಮಾಧಾನ ಮಾಡಿದೆ. ಅಲ್ಲಿ ಸೇರಿದ್ದ ಯಾರಿಗೂ ತೊಂದರೆ ಕೊಡದೇ ತನ್ನಪಾಡಿಗೆ ತಾನು ಕುಟುಂಬದವರ ಕಣ್ಣೀರು ಒರೆಸಿ, ಸಾಂತ್ವನ ಹೇಳಿದೆ. ಸದ್ಯ ಈ ಕರುಣಾಮಹಿ ಕಪಿರಾಯನ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಇದರದ್ದೇ ಸೌಂಡು.

ಕರುಣಾಮಹಿ ಕಪಿರಾಯ

Posted by Powertvnews on Wednesday, April 17, 2019

ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ ಟಿಕ್ ಟಾಕ್ ?

0

ಅತ್ಯಂತ ಜನಪ್ರಿಯ ಡಬ್​​ಸ್ಮ್ಯಾಶ್​​​​​​ ಆ್ಯಪ್​ ಟಿಕ್​​ ಟಾಕ್​ ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ? ಹೌದು, ಟಿಕ್​ ಟಾಕ್​ ಪ್ರಿಯರಿಗೆ ಇದು ಬೇಸರದ ನ್ಯೂಸ್​. 

ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡ್ತಿರೋ ಹಿನ್ನೆಲೆಯಲ್ಲಿ ಈ ಆ್ಯಪ್ ರಾಜ್ಯದಲ್ಲಿ ಬ್ಯಾನ್​ ಆಗೋ ಸಾಧ್ಯತೆ ಇದೆ.
ಟಿಕ್ ಟಾಕ್​ ಆ್ಯಪ್​ ಮೂಲಕ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಸಿಕೊಳ್ಳಲಾಗುತ್ತಿದೆ. ಅದನ್ನು ಬ್ಯಾನ್​ ಮಾಡ್ಬೇಕು ಅಂತ ಮಹಿಳಾ ಆಯೋಗ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದೆ. ಟಿಕ್ ಟಾಕ್​ ಆ್ಯಪ್ ಸಂಪೂರ್ಣ ನಿಷೇಧಕ್ಕೆ ಕೋರ್ಟ್​ ಮೊರೆ ಹೋಗುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಹೇಳಿದ್ದಾರೆ. ಮಹಿಳಾ ಆಯೋಗಕ್ಕೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಟಿಕ್​ ಟಾಕ್​ ಆ್ಯಪ್​ ನಿಷೇಧಿಸುಂತೆ ಮದ್ರಾಸ್​ ಹೈಕೋರ್ಟ್​ನಿಂದ ಕೇಂದ್ರಕ್ಕೆ ಮಧ್ಯಂತರ ನಿರ್ದೇಶನ

0

ಚೆನ್ನೈ: ಟಿಕ್​ ಟಾಕ್​ ಆ್ಯಪ್​ ನಿಷೇಧಿಸುವಂತೆ ಮದ್ರಾಸ್​ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮದ್ಯಂತರ ನಿರ್ದೇಶನ ನೀಡಿದೆ. ಟಿಕ್​ ಟಾಕ್​ನಂತಹ ಮೊಬೈಲ್​ ಅಪ್ಲಿಕೇಶನ್​ಗಳಲ್ಲಿ ಆಶ್ಲೀಲ ಚಿತ್ರಗಳು ಮತ್ತು ಅನುಚಿತ ಅಂಶಗಳು ಮಕ್ಕಳ ಕೈಗೂ ಲಭ್ಯವಾಗುತ್ತಿದೆ ಅಂತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹಾಗಾಗಿ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸಿದೆ. ಟಿಕ್​ ಟಾಕ್ ಮಾಡಿದ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶನ ಮಾಡುವಂತೆ ವಿಭಾಗಿಯ ಪೀಠ ಕೆಂದ್ರಕ್ಕೆ ನಿರ್ದೇಶನ ನೀಡಿದೆ.

ಟಿಕ್​ಟಾಕ್ ಆ್ಯಪ್​ ಬ್ಯಾನ್ ಮಾಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ, ನ್ಯಾ. ಎನ್​. ಕಿರುಭಕರಣ್, ನ್ಯಾ. ಎಸ್​. ಎಸ್​ ಸುಂದರ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರಕ್ಕೆ ಮಧ್ಯಂತರ ನಿರ್ದೇಶನ ನೀಡಿದೆ. ಚೀನಾ ಮೂಲದ ಟಿಕ್​ಟಾಕ್ ಆ್ಯಪ್​ನ್ನು ಭಾರತದಲ್ಲಿ 104 ಮಿಲಿಯನ್ ಜನ ಬಳಸುತ್ತಿದ್ದಾರೆ. ಇಂಡೋನೇಷ್ಯಾ, ಬಾಂಗ್ಲಾದೇಶದಲ್ಲಿ ಈಗಾಗಲೇ ಟಿಕ್​ಟಾಕ್​ ಬ್ಯಾನ್ ಮಾಡಲಾಗಿದ್ದು, ಅಮೆರಿಕವೂ ಚಿರ್ಲ್ಡ್​ನ್ ಆನ್​ಲೈನ್ ಪ್ರೈವಸಿ ಆ್ಯಕ್ಟ್​ ಜಾರಿ ಮಾಡಿದೆ. ಇಂತಹ ಒಂದು ಕ್ರಮ ಭಾರತದಲ್ಲಿಯೂ ಅಗತ್ಯವಿದೆ ಅಂತ ನಿರ್ದೇಶನದಲ್ಲಿ ತಿಳಿಸಲಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ತಮಿಳುನಾಡು ಮಾಹಿತಿ ತಂತ್ರಜ್ಷಾನ ಸಚಿವ ಎಂ. ಮಣಿಕಂಠನ್ ಅವರು ಟಿಕ್​ಟಾಕ್​ ಬ್ಯಾನ್ ಮಾಡಲು ಕೇಂದ್ರದ ನೆರವು ಪಡೆಯುವಂತೆ ಸರ್ಕಾರಕ್ಕೆ ಸೂಚಿಸಿದ್ದರು.

https://www.powertvnews.in/tamil-nadu-will-try-to-ban-tiktok-app-over-vulgar-content-minister/

82ರ ಈ ಅಜ್ಜಿ ವಿಶ್ವದ ಅತ್ಯಂತ ಹಿರಿಯ ಆಪ್ ಡೆವಲಪರ್..!

0

ಟ್ಯಾಲೆಂಟ್ ಅನ್ನೋದು ಯಾರ ಸ್ವತ್ತಲ್ಲ ಅದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಮನಸ್ಸು ಮಾಡಿ ಪ್ರಯತ್ನಿಸಿದ ಯಾರು ಬೇಕಾದ್ರೂ ಸಾಧನೆಯ ಶಿಖರವನ್ನ ಹತ್ತಬಹುದು. ನಿಶ್ಚಲ ಮನಸ್ಥಿತಿ, ಮಾಡೇ ಮಾಡುತ್ತೇನೆ ಎನ್ನುವ ಅತ್ಮಸ್ಥೈರ್ಯ, ಎಂತಹ ಪರಿಸ್ಥಿತಿಯೇ ಇರಲಿ ಮುನ್ನುಗ್ಗುವ ಉತ್ಸಾಹವಿದ್ದ ಯಾರಾದ್ರೂ ಸರಿಯೇ ಸಾಧಿಸಬಹುದು. ಅದು 60ರ ಅಜ್ಜಿಯೇ ಆಗಿರಬಹುದು.., 3 ವರ್ಷದ ಬಾಲಕನೇ ಆಗಿರಬಹುದು..!
ಇದೇ ರೀತಿ ವಯಸ್ಸಿನ ಅಂತರವನ್ನು ಮೀರಿ.., ಇಳಿ ವಯಸ್ಸಿನಲ್ಲಿ ಇಡೀ ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ  ಹಿರಿಯಜ್ಜಿ ಒಬ್ಬರು. ಅಂದಹಾಗೆ ಆ ಅಜ್ಜಿ ವಯಸ್ಸು ಬರೋಬ್ಬರಿ 82 ವರ್ಷ. ಆದ್ರೂ ಕೂಡ ಪುಟಿದೇಳುತ್ತಿರುವ ಉತ್ಸಾಹ. ಯುವಕರನ್ನು ನಾಚಿಸುವಂತಹ ವಾಕ್ ಚಾತುರ್ಯ… ಮಾತ್ತೇನ್ನನ್ನೋ ಸಾಧಿಸಿಬೇಕು ಎನ್ನುವ ಹಂಬಲ… ಬಿಸಿ ರಕ್ತದ ಯುವಕರು ಅವ್ರನ್ನು ನೋಡಿ ನಿಜವಾಗಿಯೂ ಕಲಿಯಬೇಕಿದೆ.
ಅಂದಹಾಗೆ ಅವರ ಹೆಸರು ಮಸಾಕೋ ವಕಾಮಿಯಾ. ವಿಶ್ವದ ಅತ್ಯಂತ ಹಿರಿಯ ಆಪ್ ಡೆವಲಪರ್. ಅದು ಕೂಡ ಐಫೋನ್ ಆಪ್ ಡೆವಲಪ್ ಮಾಡುವುದರಲ್ಲಿ ಇವ್ರು ನಿಸ್ಸೀಮರು. ಅಷ್ಟೇ ಅಲ್ಲದೇ ಆಪಲ್ ಆಯೋಜಿಸಿರುವ ಐಫೋನ್ ಡೆವಲಪರ್​ ಜಾಗತಿಕ ಸಮಾವೇಶಕ್ಕೆ ಆಹ್ವಾನಿತರು ಆಗಿದ್ದರು.
ಅಬಾಕಸ್ ಮೂಲಕ ಗಣಿತ ಕಲಿತ ಮಸಾಕೋ ವಕಾಮಿಯಾ ಅವ್ರು ಇಡೀ ಜಗತ್ತೇ ನಿಬ್ಬೆರರಾಗಿ ನೋಡುವಂತೆ ಮಾಡಿದ್ದಾರೆ. ಅಬ್ಬಾ..! 82 ವರ್ಷದ ಅಜ್ಜಿ ಇದನ್ನೆಲ್ಲಾ ಮಾಡಲು ಸಾಧ್ಯವಾ ಅಂತ ಒಂದ್ಸಲ ನಮಗೆ ಅನ್ನಿಸುತ್ತೆ. ಆದರೆ ಸಾಧಿಸಿ ತೋರಿಸಿದ್ದಾರೆ ಈ ಅಜ್ಜಿ. ಈ ರೀತಿಯ ಆ್ಯಪ್ ಡೆವಲಪ್ ಮಾಡುವುದರ ಮೂಲಕ ಹಿರಿಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ.
ಸಾಧಾರಣವಾಗಿ ವಯಸ್ಸು 60 ಆದ್ರೆ ಸಾಕು ಕೆಲವ್ರು ಜೀವನದಲ್ಲಿ ಆಸಕ್ತಿ, ಉತ್ಸಾಹ ಕಳೆದುಕೊಂಡು ಬಿಡುತ್ತಾರೆ. ಆದ್ರೆ ಈ ಸಮಯದಲ್ಲಿಯೇ ನಾವು ಇನ್ನೂ ಉತ್ಸಾಹದಿಂದಿರಬೇಕು ಎನ್ನುವ ಸಲಹೆ ನೀಡ್ತಾರೆ ಮೆಸಾಕೋ ಅವ್ರು.
ಅಸಲಿಗೆ ಮಸಾಕೋ ಮತ್ತು ಕಂಪ್ಯೂಟರ್ ನಂಟು ಶುರುವಾಗಿದ್ದು 1990ರಲ್ಲಿ. ಬ್ಯಾಂಕ್‍ನಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವ್ರು ನಿವೃತ್ತಿಯಾದ ನಂತರ ಎಲ್ಲರಂತೆ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಏನಾದ್ರೂ ಒಂದು ಸಾಧಿಸಬೇಕು ಎನ್ನುವ ತುಡಿತ ಸದಾ ಇವರಲ್ಲಿ ಕಾಡ್ತಾ ಇತ್ತು. ಹಾಗಾಗಿಯೇ ಕಂಪ್ಯೂಟರ್ ಮೇಲೆ ತೀವ್ರ ಆಸಕ್ತಿಯನ್ನ ಬೆಳೆಸಿಕೊಂಡರು. ನಂತರ ಅದ್ರ ಅಧ್ಯಯನವನ್ನು ಕೂಡ ಕೈಗೊಂಡರು. ಅಲ್ಲಿಂದ ಇಲ್ಲಿಯವರೆಗೆ ನಿರಂತರ ಅಧ್ಯಯನದ ಜೊತೆಗೆ ಆಪ್ ಡೆವಲಪ್‍ಮೆಂಟ್‍ನಲ್ಲಿ ತೊಡಗಿದ್ದಾರೆ ಮಸಾಕೋ ವಕಾಮಿಯಾ.
ಇನ್ನು ಮೆಸಾಕೋ ಅವ್ರು ಮಾಡಿರುವ ಹಿನಾದಾನ್ ಸೇರಿ ಬಹುತೇಕ ಆಪ್‍ಗಳು ಹಿರಿಯರನ್ನ ಗಮನದಲ್ಲಿರಿಸಿಕೊಂಡು ಅಭಿವೃದ್ಧಿ ಪಡಿಸಲಾಗಿವೆ. ಈ ಆಪ್‍ಗಳು ಹಿರಿಯರಿಗೆ ತುಂಬಾನೇ ಅನುಕೂಲವಾಗುವುದರ ಜೊತೆಗೆ ಜನಪ್ರೀಯವಾಗಿವೆ ಎಂಬುವುದನ್ನು ಗಮನಿಸಬಹುದಾದ ಸಂಗತಿ.
ತಮ್ಮ 82ನೇ ವಯಸ್ಸಿನಲ್ಲಿಯೂ ಪುಟಿದೇಳುವ ಉತ್ಸಾಹ ಹೊಂದಿರುವ ವಕಾಮಿಯಾ ಅವ್ರನ್ನ ನೋಡಿದ್ರೆ ನಿಜಕ್ಕೂ ಅಚ್ಚರಿಯಗುತ್ತೆ. ತಮ್ಮ 75ನೇ ವಯಸ್ಸಿಲ್ಲಿ ಪಿಯಾನೋ ಕಲಿತ ಇವ್ರ ತುಡಿತ, ಮತ್ತಷ್ಟು ಸಾಧಿಸಬೇಕು ಎನ್ನುವ ಹಂಬಲ ನಿಜಕ್ಕೂ ಮಾದರಿಯಾಗಿದೆ. ಈ 82ರ ವಯಸ್ಸಲ್ಲೂ ಇಂಥಾ ಉತ್ಸಾಹ ಇರೋ ಮಸಾಕೋ ವಕಾಮಿಯಾರಿಗೆ ನಮ್ಮದೊಂದು ಸಲಾಂ.

Popular posts