ಬೆಂಗಳೂರು: ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಮತ್ತು ಮಗ ಗುರುರಾಜ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಗುರು’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಜಗ್ಗೇಶ್ ನಂತರ ಮೇಲುಕೋಟೆ ಮಂಜ' ಸಿನಿಮಾ ನಿರ್ದೇಶಿಸಿದ್ರು. ಇದೀಗ ಕೋಮಲ್ ಮತ್ತು ಗುರುಗೆ ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾ ಅವರು ನಿರ್ದೇಶಿಸ್ತಿರೋ 3ನೇ ಸಿನಿಮಾ. `ಇದೊಂದು ಹಾಸ್ಯ ಪ್ರಧಾನ ಸಿನಿಮಾ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಸಿನಿಮಾ ಮಾಡ್ತಿದ್ದೀನಿ. ಇಬ್ಬರ ನಡುವಿನ ಜುಗಲ್ಬಂದಿಯೇ ಸಿನಿಮಾದ ವಿಶೇಷ ಅಂದಿದ್ದಾರೆ’ ಜಗ್ಗೇಶ್.
ಇನ್ನು ಕೋಮಲ್ `ಅಣ್ಣನ ನಿರ್ದೇಶನದಲ್ಲಿ ನಟಿಸುತ್ತಿರೋದು ಖುಷಿಯ ವಿಷಯ. ಆ ಸಿನಿಮಾಕ್ಕಾಗಿ ಭರ್ಜರಿ ಪ್ಲ್ಯಾನ್ ನಡೆಯುತ್ತಿದೆ’ ಎಂದಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರಲಿದೆ.
ಸ್ಟಾರ್ ಗಳನ್ನು ಕಂಡರೆ ಹುಚ್ಚೆದ್ದು ಕುಣಿಯೋ ಅಭಿಮಾನಿಗಳನ್ನು ನೋಡಿರ್ತೀರಾ. ಸಿನಿಮಾ ಹೀರೋಗಳನ್ನು ಭೇಟಿ ಮಾಡಲು ತುದಿಗಾಲಲ್ಲಿ ನಿಂತಿರ್ತಾರೆ. ಈ ವ್ಯಕ್ತಿ ಕೂಡಾ ಹಾಗೆನೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಅವರನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು ಅನ್ನೋದು ಆತನಾಸೆ. ಈಗ ಆತನ ಇಚ್ಛೆಯನ್ನು ರಜನಿಕಾಂತ್ ನೆರವೇರಿಸಿದ್ದಾರೆ. ಅಷ್ಟೇ ಅಲ್ಲ ರಜನಿಕಾಂತ್ ವಿಶೇಷಚೇತನನ ಷೇಕ್ ಹ್ಯಾಂಡ್ ರೀತಿಯಲ್ಲಿ ಪಾದ ಹಿಡಿದು ಪ್ರೀತಿ ತೋರಿದ್ದಾರೆ. ಆ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು, ವಿಶೇಷಚೇತನನಾಗಿದ್ದರೂ ಚಿತ್ರಕಲಾವಿದನಾಗಿ ಎಲ್ಲರ ಗಮನ ಸೆಳೆದಿರುವವರ ಪ್ರಣವ್ ಅವರನ್ನು ರಜನಿ ಭೇಟಿಯಾಗಿದ್ದಾರೆ. ಕೈಗಳಿಲ್ಲದ ಪ್ರಣವ್ ತನ್ನ ಎಲ್ಲಾ ಕೆಲಸಗಳನ್ನು ತನ್ನ ಕಾಲುಗಳಿಂದಲೇ ಮಾಡುತ್ತಾರೆ. ವರ್ಣಚಿತ್ರ ಕಲಾ ಪ್ರಪಂಚದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾರೆ. ಈ ಹಿಂದೆ ಕೇರಳದಲ್ಲಿ ಪ್ರವಾಹ ಉಂಟಾದಾಗ ಪ್ರಣವ್ ತಾನು ರಿಯಾಲಿಟಿ ಶೋ ನಲ್ಲಿ ಗೆದ್ದ ಹಣವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಕೈಗೆ ನೀಡಿದ್ದರು. ಗೆದ್ದ ಹಣವನ್ನು ತಾನು ಉಪಯೋಗಿಸದೇ ನಿರಾಶ್ರಿತರಿಗಾಗಿ ನೀಡಿದ್ದರಿಂದ ಸುದ್ದಿಯಲ್ಲಿದ್ದರು. ಈಗ ರಜನಿಕಾಂತ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸುದ್ದಿಯಾಗಿದ್ದಾರೆ. ಪ್ರಣವ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿದ್ದು, ರಜನಿಕಾಂತ್ ಅವರ ಭಾವಚಿತ್ರವನ್ನು ಚಿತ್ರಿಸಿ ಅವರಿಗೆ ಗಿಫ್ಟಾಗಿ ನೀಡಿದ್ದಾರೆ. ಅಲ್ಲದೆ ಪ್ರಣವ್ ಅವರ ಪಾದವನ್ನುಹಿಡಿದು ಷೇಕ್ ಹ್ಯಾಂಡ್ ಮಾಡೋ ಹಾಗೇ ಪೋಸ್ ಕೊಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Lovely pics of Thalaivar with the differently abled Kerala Artist Pranav 😍😍😍😍 watta stunning painting by him 🔥🔥👌👌👌👌 such…
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ತ್ರಿವಿಕ್ರಮ್ ಬೆಂಗಳೂರಿನ ನೈಸ್ ರಸ್ತೆಯಲ್ಲಿ ರೌಡಿಗಳ ಜೊತೆ ಫೈಟ್ ಮಾಡಿದ್ದಾರೆ. ತನ್ನ ತಂಟೆಗೆ ಬಂದ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ. ಅರೆ, ಏನಿದು? ಯಾವ ಗಲಾಟೆ? ಯಾರು ಅಟ್ಯಾಕ್ ಮಾಡಿದ್ದು? ಏನಾಯ್ತು ಅಂತ ಕೇಳ್ತಿದ್ದೀರಾ? ಇದು ರಿಯಲ್ ಅಲ್ಲ… ರೀಲ್ ಹಿಂದಿನ ಕಹಾನಿ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ತ್ರಿವಿಕ್ರಮ್ ಗೌರಿ ಎಂಟರ್ಟ್ರೈನರ್ ಬ್ಯಾನರ್ ಅಡಿಯಲ್ಲಿ ಸೋಮಣ್ಣ ನಿರ್ಮಿಸುತ್ತಿರೋ, ಸಹಾನ ಮೂರ್ತಿ ಆ್ಯಕ್ಷನ್ ಕಟ್ ಹೇಳುತ್ತಿರೋ ‘ತ್ರಿವಿಕ್ರಮ್’ ಎಂಬ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನೈಸ್ ರಸ್ತೆಯಲ್ಲಿ ಸಿನಿಮಾದ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೀತಾ ಇದ್ದು, ತ್ರಿವಿಕ್ರಮ್ ಖಳ ನಟರ ಜೊತೆ ಫೈಟ್ ಮಾಡಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ – ಸೆಂಟಿಮೆಂಟ್ ಮೂವಿಯಾಗಿದ್ದು, ರಾಷ್ಟ್ರಮಟ್ಟದ ಫೈಟ್ ಮಾಸ್ಟರ್ಗಳನ್ನು ಕರೆಸಿಕೊಂಡಿದೆ ಚಿತ್ರತಂಡ.
ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿರುವ ಮದ್ರಾಸ್ , ಕಬಾಲಿ, ಕೆಜಿಎಫ್ನಂತಹ ಸೂಪರ್ ಹಿಟ್ ಚಿತ್ರಗಳ ಸಾಹಸ ದೃಶ್ಯಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಟ್ವಿನ್ ಸಹೋದರರು ತ್ರಿವಿಕ್ರಮನ ಸಾಹಸ ದೃಶ್ಯಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಆ್ಯಕ್ಷನ್ ಸೀನ್ ಗಳಿಗಾಗಿ ನೈಸ್ ರಸ್ತೆಯಲ್ಲಿ ಸೆಟ್ ಹಾಕಲಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.
ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೀಘ್ರದಲ್ಲೇ ನಿಮ್ಮ ಮನೆ – ಮನೆಗೆ ಬರಲಿದ್ದಾರೆ. ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್ ಅವರ ಸಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ದರ್ಶನ್ ಕಿರುತೆಗೆ ಬರ್ತಿದ್ದಾರೆ. ರಿಯಾಲಿಟಿ ಶೋವೊಂದರ ನಿರೂಪಣೆಯನ್ನು ಮಾಡುವ ಹೊಸ ಪ್ರಯತ್ನಕ್ಕೆ ದರ್ಶನ್ ಕೈ ಹಾಕುತ್ತಿದ್ದಾರೆ. ಖಾಸಗಿ ವಾಹಿಯ ಅತೀ ದೊಡ್ಡ ರಿಯಾಲಿಟಿ ಶೋವೊಂದರ ನಿರೂಪಣೆ ಹೊಣೆಯನ್ನು ದರ್ಶನ್ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಪವರ್ ಟಿವಿಗೆ ಉನ್ನತ ಮೂಲಗಳಿಂದ ಸಿಕ್ಕಿದೆ. ಈಗಾಗಲೇ ವಾಹಿನಿ ದರ್ಶನ್ ಜೊತೆ ಮಾತು ಕತೆ ನಡೆಸಿದ್ದು, ದರ್ಶನ್ ಕೆಲವು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್ಗಿಂದು ಹುಟ್ಟುಹಬ್ಬದ ಸಂಭ್ರಮ. ಯಶ್ -ರಾಧಿಕಾ ಮೊದಲ ವರ್ಷದ ಬರ್ತ್ಡೇ ಖುಷಿಯಲ್ಲಿರೋ ಐರಾಳ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋದಲ್ಲಿ ಐರಾ ತುಂಬಾ ಕ್ಯೂಟ್ ಆಗಿ ಕಾಣಿಸ್ತಿದ್ದಾಳೆ. ರಾಧಿಕಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಮಾಡಿಸಿದ್ದು, ಅದರಲ್ಲಿ ಐರಾ ಬಿಸಿಲು ನೋಡುವುದು ಹೇಗೆ ಅಂತ ಮುದ್ದು ಮುದ್ದಾಗಿ ತೋರಿಸಿದ್ದಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
ಅಲ್ಲದೆ ರಾಧಿಕಾ ನನ್ನ ಹೃದಯದ ಒಂದು ತುಣುಕು ಹಾಗೂ ಆತ್ಮದ ಭಾಗವಾಗಿರೋ ನಮ್ಮ ಮುದ್ದಿನ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ವಿಶ್ ಮಾಡಿದ್ದಾರೆ.
ಸದ್ಯ ಯೂಟ್ಯೂಬ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ಒಡೆಯ’ ಸಿನಿಮಾದ್ದೇ ದರ್ಬಾರು. ಒಡೆಯನ ಡೈಲಾಗ್ಗೆ ಅಭಿಮಾನಿಗಳು ಕಳೆದೋಗಿದ್ದಾರೆ. ‘ನಮ್ಮ ಜೊತೆ ಇರೋರನ್ನು ನಾವು ಚೆನ್ನಾಗಿ ನೋಡ್ಕೊಂಡ್ರೆ, ಮೇಲ್ಗಡೆ ಇರೋನು ನಮ್ಮನ್ನು ಚೆನ್ನಾಗಿ ನೋಡಿಕೊಳ್ತಾನೆ’ ಅನ್ನೋ ಡೈಲಾಗಂತೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಈ ಡೈಲಾಗ್ನದ್ದೇ ಸದ್ದು. ನಿನ್ನೆಯಷ್ಟೇ ಬಿಡುಗಡೆಯಾಗಿರೋ ಟ್ರೈಲರ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದ್ದು, ಈಗಾಗಲೇ 14 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದ್ದು, ಅಭಿಮಾನಿಗಳಿಗೆ ‘ಒಡೆಯ’ ಇಷ್ಟವಾಗಿದ್ದಾನೆ. ಇನ್ನು ಎಂ ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳಿರೋ ಚಿತ್ರ ಇದಾಗಿದ್ದು, ಅರ್ಜುನ್ ಜನ್ಯಾ ಸಂಗೀತದ ಬಲವಿದೆ. ಸಂದೇಶ್ ನಾಗರಾಜ್ ಬಂಡವಾಳ ಹಾಕಿದ್ದು, ಡಿಸೆಂಬರ್ 12ರಂದು ತೆರೆಗೆ ಬರಲಿದೆ.
ಶಿವಮೊಗ್ಗ: ತಮಿಳಿನ ಸೂಪರ್ ಸ್ಟಾರ್ ವಿಜಯ್ ಸದ್ಯ ಬಿಗಿಲ್ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದು, ವಿಜಯ್ ಅವರ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿದೆ. ಅದರಂತೆ ಸೂಪರ್ ಸ್ಟಾರ್ ನಟ ವಿಜಯ್ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ. ಇದೇನಪ್ಪಾ ವಿಜಯ್ ಅಂತಾ ತಪ್ಪೇನು ಅಂತಾ ನೀವು ತಲೆ ಕೆಡಿಸ್ಕೋಬೇಡಿ.
ಅಂದಹಾಗೆ, ಸೂಪರ್ ಸ್ಟಾರ್ ವಿಜಯ್, ಅವರ ಮುಂದಿನ ಸಿನಿಮಾ ದಳಪತಿ-64 ಸಿನಿಮಾದ ಶೂಟಿಂಗ್ಗಾಗಿ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ. ಅಂದಹಾಗೆ ಶಿವಮೊಗ್ಗದ ಜೈಲು ಕೊರಿಯನ್ ಮಾದರಿ ಜೈಲಾಗಿದ್ದು, ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರಾಗೃಹವಾಗಿದೆ. ಹೀಗಾಗಿ, ಈ ಜೈಲಿನಲ್ಲಿ ಸಿನಿಮಾ ಶೂಟಿಂಗ್ಗಳು ನಡೆಯುತ್ತಲೇ ಇರುತ್ತವೆ.
ವಿಲನ್ ಸಿನಿಮಾದಲ್ಲಿಯೂ ಶಿವರಾಜ್ ಕುಮಾರ್ ಫೈಟಿಂಗ್ ನ ಸಾಹಸ ದೃಶ್ಯ ಇದೇ ಜೈಲಿನಲ್ಲಿ ಚಿತ್ರೀಕರಣಗೊಂಡಿತ್ತು. ಇದೀಗ ವಿಜಯ್ ನಟನೆಯ ದಳಪತಿ ಸಿನಿಮಾ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದೆ. ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಿರುವ ವಿಜಯ್ ಅಂಡ್ ಟೀಂ ಈಗ ಶಿವಮೊಗ್ಗದ ಕಡೆ ಹೊರಟ್ಟಿದ್ದಾರೆ. ಶಿವಮೊಗ್ಗದ ಜೈಲಿನ ಸುತ್ತಮುತ್ತ ದಳಪತಿ-64 ಚಿತ್ರದ ಶೂಟಿಂಗ್ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿದೆ. ಡಿಸೆಂಬರ್ 1 ರಿಂದ ಜನವರಿ 18ರ ವರೆಗೆ ಅನುಮತಿ ನೀಡಿದೆ. ವಿಜಯ್ ಜೊತೆ ವಿಜಯ್ ಸೇತುಪತಿ ಕೂಡ ಈ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಸ ಅವತಾರ ಕಣ್ತುಂಬಿಕೊಳ್ಳಲು ಕಾಯ್ತಿರೋ ಅಭಿಮಾನಿಗಳಿಗೆ ‘ಶ್ರೀಮನ್ನಾರಾಯಣ’ನ ಸಣ್ಣ ಝಲಕ್ ದರ್ಶನವಾಗಿದೆ. ನಮ್ ‘ನಾರಾಯಣ’ ಹೆಂಗಿರಬಹುದು ಅನ್ನೋ ಕುತೂಹಲವನ್ನು ಬಿಡುಗಡೆಯಾಗಿರೋ ಟ್ರೈಲರ್ ತಣಿಸಿದೆ..ಜೊತೆಗೆ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಸಿಕ್ಕಾಪಟ್ಟೆ ಹೆಚ್ಚಿಸಿದೆ.
ಎಲ್ಲೋದ್ರಪ್ಪಾ ಸಿಂಪಲ್ ಸ್ಟಾರ್? ಹೇಗಿದ್ದಾರಪ್ಪಾ ನಮ್ಮ ‘ಕಿರಿಕ್’ ಸ್ಟಾರ್? ಮೂರ್ ವರ್ಷ ಆಗ್ತ ಬಂತು ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿಲ್ವಲ್ರೀ ಅಂತ ಬೇಜಾರಲ್ಲಿದ್ದ ಅಭಿಮಾನಿಗಳು ಒಂದಷ್ಟು ಸಮಯದಿಂದ ‘ಶ್ರೀಮನ್ನಾರಾಯಣ’ನ ಜಪ ಮಾಡ್ತಿದ್ದಾರೆ. ಆದ್ರೆ ಇನ್ನೂ ಕೂಡ ದರ್ಶನ ಭಾಗ್ಯ ಸಿಕ್ಕಿಲ್ಲ. ಆದ್ರೆ, ಆಗಾಗ ಸಿಹಿ ಪ್ರಸಾದ ಅರ್ಥಾತ್ ಗಿಫ್ಟ್ `ಶ್ರೀಮನ್ನಾರಾಯಣ’ನ ಕಡೆಯಿಂದ ಸಿಗುತ್ತಲೇ ಬಂದಿದೆ. ಈಗ ಮತ್ತೊಂದು ಮಹಾ ಉಡುಗೊರೆಯನ್ನು ‘ಶ್ರೀಮನ್ನಾರಾಯಣ’ ಅಭಿಮಾನಿಗಳಿಗೆ ಕರುಣಿಸಿದ್ದಾನೆ….ಆ ಗಿಫ್ಟ್ ಏನು ಅಂದ್ರಾ..? ಅದುವೇ ಸಿನಿಮಾ ಟ್ರೈಲರ್.
2010ರಲ್ಲಿ ಸ್ಯಾಂಡಲ್ವುಡ್ ಜರ್ನಿ ಆರಂಭಿಸಿದ ರಕ್ಷಿತ್ ಶೆಟ್ಟಿ ಕನಿಷ್ಠ ಒಂದು – ಒಂದುವರೆ ವರ್ಷಕ್ಕೆ ಒಂದಾದ್ರು ಸಿನಿಮಾ ಮೂಲಕ ಕಾಣಿಸಿಕೊಳ್ತಿದ್ರು. ಆದ್ರೆ, 2016ರ ಬಳಿಕ ಕಾಣೆಯಾಗಿ ಬಿಟ್ರು..! ಮೂರು ವರ್ಷವನ್ನು ಒಂದೇ ಒಂದು ಸಿನಿಮಾಕ್ಕೆ ಮೀಸಲಿಟ್ರು.. ಆ ಸಿನಿಮಾವೇ ರಿಲೀಸ್ಗೆ ರೆಡಿಯಾಗಿರೋ ‘ಅವನೇ ಶ್ರೀಮನ್ನಾರಾಯಣ’.
ಅರವಿಂದ್ ಕೌಶಿಕ್ ನಿರ್ದೇಶನದ ‘ನಮ್ ಏರಿಯಾಲ್ ಒಂದ್ ದಿನ ‘ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದವ್ರು ರಕ್ಕಿ. ಆ ಬಳಿಕ ಅದೇ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳಿದ ಮತ್ತೊಂದು ಮೂವಿ ತುಘಲಕ್ ಮೂಲಕ ಪೂರ್ಣಪ್ರಮಾಣದ ನಾಯಕನಟನಾಗಿ ಮಿಂಚಿದ್ರು. ಬಳಿಕ ಸಿಂಪಲ್ ಸುನಿ ನಿರ್ದೇಶನದ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಮೂವಿ ಮೂಲಕ ಮನೆ ಮಾತಾದ್ರು.
ಆಮೇಲೆ ನಾನೇಕೆ ಮೂವಿ ಡೈರೆಕ್ಷನ್ ಮಾಡ್ಬಾರ್ದು ಅಂತ ಯೋಚ್ನೆ ಮಾಡಿದ ರಕ್ಷಿತ್ ಜೈ ಡೈರೆಕ್ಷನ್ ಕ್ಯಾಪ್ ತೊಟ್ಟೇ ಬಿಟ್ರು. ಆಗ ಬಂದಿದ್ದೇ ‘ಉಳಿದವರು ಕಂಡಂತೆ’! ಈ ಉಳಿದವರು ಕಂಡಂತೆ ಮೂವಿ ಮೂಲಕ ರಕ್ಷಿತ್ ಶೆಟ್ಟಿ ತಾನೊಬ್ಬ ನಟ ಮಾತ್ರವಲ್ಲ.. ಅದ್ಭುತ ನಿರ್ದೇಶಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಬಲ್ಲೆ ಅನ್ನೋ ಭರವಸೆ ಮೂಡಿಸಿದ್ರು. ಆದರೆ, ಆ ಬಳಿಕ ನಟನೆಯಲ್ಲಿ ಬ್ಯುಸಿಯಾದ ರಕ್ಕಿ ಸಿನಿಮಾ ನಿರ್ದೇಶನ ಮಾಡಿಲ್ಲ.
ಒಂದಂರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ನಟನಾಗಿ ಮಿಂಚಲಾರಂಭಿಸಿದ್ರು. ವಾಸ್ತುಪ್ರಕಾರ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳ ಮೂಲಕ ಕನ್ನಡಿಗರಿಗೆ ಬಹಳ ಆಪ್ತರಾದ ರಕ್ಷಿತ್ ಶೆಟ್ಟಿ 2016ರ ಕೊನೆಯಲ್ಲಿ ತೆರೆಕಂಡ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಸ್ಟಾರ್ ನಟರ ಪಂಕ್ತಿಯಲ್ಲಿ ಅಗ್ರ ಸಾಲಿಗೆ ಸೇರಿದ್ರು.
‘ಕಿರಿಕ್ ಪಾರ್ಟಿ’ ಬಳಿಕ ಆ ಸಿನಿಮಾ ಡೈರೆಕ್ಟರ್ ರಿಷಭ್ ಶೆಟ್ಟಿ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ರು. ಜೊತೆಗೆ ಆ ಸಿನಿಮಾದಲ್ಲಿ ಆ್ಯಕ್ಟ್ ಕೂಡ ಮಾಡಿದ್ರು. ಬೆಲ್ ಬಾಟಂ ಸಿನಿಮಾದಲ್ಲಿ ನಾಯ ನಟನಾಗಿ ಮಿಂಚಿದ್ರು. ಇದೇ ಕಿರಿಕ್ ಪಾರ್ಟಿ ಮೂಲಕ ಸಿನಿರಂಗ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ಮಾತ್ರವಲ್ಲದೆ ಪರಭಾಷೆಗಳಲ್ಲೂ ಬಹ ಬೇಡಿಕೆ ಹೊಂದಿರೋ ನಟಿಯಾಗಿದ್ದಾರೆ. ಇನ್ನೊಬ್ಬ ನಾಯಕಿ ಸಂಯುಕ್ತಕೂಡ ಸಿನಿಮಾ , ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮಟ್ಟಿಗೆ ಕಿರಿಕ್ ಪಾರ್ಟಿ ಇಡೀ ಟೀಮ್ ಗೆ ಯಶಸ್ಸು ತಂದುಕೊಟ್ಟಿತ್ತು. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ಆ ಬಳಿಕ ಯಾವ್ದೇ ಸಿನಿಮಾದಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತಂದಿತ್ತು.
ಹಾಗೆಂದ ಮಾತ್ರಕ್ಕೆ ರಕ್ಷಿತ್ ಖಾಲಿ ಕೂತಿರ್ಲಿಲ್ಲ. ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಸಿನಿಮಾವೊಂದನ್ನು ಕೊಡ್ಬೇಕು ಅಂತ ಆ ನಿಟ್ಟಿನಲ್ಲಿ ಬ್ಯುಸಿ ಇದ್ರು. ಆ ಪ್ರಯತ್ನವೀಗ ‘ಅವನೇ ಶ್ರೀಮನ್ನಾರಾಯಣ’ನ ರೂಪದಲ್ಲಿ ಅಭಿಮಾನಿಗಳ ಮುಂದೆ ಬರ್ತಿದೆ. ಈಗಾಗಲೇ ಪೋಸ್ಟರ್, ಟೀಸರ್ಗಳಿಂದ ಸಖತ್ ಸೌಂಡು ಮಾಡಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.
ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದ್ದು… ‘ಶ್ರೀಮನ್ನಾರಾಯಣ’ ಪವರ್ ಫುಲ್ ಆಗಿ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಪಂಚಭಾಷೆಗಳಲ್ಲೂ ಆಯಾ ನೇಟಿವಿಟಿಗೆ ತಕ್ಕಂತೆ ಸಿನಿಮಾ ಬರಲಿದೆ ಅನ್ನೋದನ್ನು ಟ್ರೈಲರ್ ಸಾರುತ್ತಿದೆ.
ಸಚಿನ್ ರವಿ `ಶ್ರೀಮನ್ನಾರಾಯಣ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಹೆಚ್ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 27ಕ್ಕೆ ಪಂಚ ಭಾಷೆಗಳಲ್ಲಿ ‘ಶ್ರೀಮನ್ನಾರಾಯಣ’ನ ದರ್ಶನವಾಗಲಿದ್ದು,4 ನಿಮಿಷ 13 ಸೆಕೆಂಡ್ ಇರೋ ಟ್ರೈಲರ್ ನೋಡಿದವರು ಇನ್ನೊಂದು ತಿಂಗಳು ಯಾವಗಪ್ಪಾ ಆಗುತ್ತಂತ ಕಾಯ್ತಿದ್ದು, ‘ಶ್ರೀಮನ್ನಾರಯಣ’ ಗೆ ನಮ್ ಕಡೆಯಿಂದಲೂ ಪ್ರೀತಿಯ ಸ್ವಾಗತ.
ಆಶಿಕಾ ರಂಗನಾಥ್.. ಸ್ಯಾಂಡಲ್ವುಡ್ನ ಬಹು ಬೇಡಿಕೆ ನಟಿಯರಲ್ಲೊಬ್ಬರು. 2016ರಲ್ಲಿ ಕ್ರೇಜಿಬಾಯ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ತುಮಕೂರು ಬೆಡಗಿ ಆಶಿಕಾ ಅಲ್ಲಿಂದ ಹಂತ ಹಂತವಾಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅಭಿನಯದ ಮಾಸ್ ಲೀಡರ್, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಗುಳು ನಗೆ’, ಶರಣ್ ನಟನೆಯ ರ್ಯಾಂಬೋ 2. ರಾಜು ಕನ್ನಡ ಮೀಡಿಯಂ, ತಾಯಿಗೆ ತಕ್ಕಮಗ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಇವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್ ಜೊತೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಆಶಿಕಾ ಯಾವಾಗ ಈ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಾರೆ ಅನ್ನೋ ಕುತೂಹಲ ಪ್ರತಿಯೊಬ್ಬ ಅಭಿಮಾನಿಗಳದ್ದು. ಅಂತೆಯೇ ಲಿಖಿತ್ ಶೆಟ್ಟಿ ಎಂಬ ಅಭಿಮಾನಿ ‘ಪವರ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಸುದೀಪ್ ಸರ್, ರಾಕಿಂಗ್ ಸ್ಟಾರಂತಹ ನಟರ ಜೊತೆ ಯಾವಾಗ ನಟಿಸ್ತೀರಾಅಂತ ಟ್ವೀಟ್ ಮೂಲಕ ಪ್ರಶ್ಮಿಸಿದ್ದು ಅದಕ್ಕೆ ಆಶಿಕಾ ನಾನು ಕೂಡ ಅದನ್ನೇ ಬಯಸುತ್ತೇನೆ. ಆದಷ್ಟು ಬೇಗ ಆಗುತ್ತೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಚಂದನವನದ ‘ಬಹದ್ದೂರ್’ ಹುಡುಗ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಜೆಪಿ ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲಲ್ಲಿ ಧ್ರುವ – ಪ್ರೇರಣಾ ಹೊಸ ಜೀವನಕ್ಕೆ ಎಂಟ್ರಿಕೊಟ್ಟರು. ವೃಶ್ಚಿಕ ಶುಭಲಗ್ನದಲ್ಲಿ ಸ್ಯಾಂಡಲ್ವುಡ್ ನ ‘ಅದ್ದೂರಿ’ ಹೀರೋ ಪ್ರೇರಣಾ ಕೈ ಹಿಡಿದರು. ತಿರುಪತಿ ವೆಂಕಟೇಶ್ವರನ ಥೀಮ್ ನಲ್ಲಿ ಮುಖ್ಯ ಮಂಟಪವಿದ್ದು, ಶಿವ -ಪಾರ್ವತಿ , ಗಣಪ ಬ್ಯಾಕ್ ಡ್ರಾಪ್ ನಲ್ಲಿ ಮತ್ತೊಂದು ಮಂಟಪ ಸೇರಿದಂತೆ ಒಟ್ಟು ಮೂರು ಮಂಟಪ, ಸ್ವಾಗತ ದ್ವಾರದಿಂದಲೇ ಬಗೆ ಬಗೆಯ ಹೂವಿನನಿಂದ ಸಿಂಗಾರಗೊಂಡಿರುವ ‘ಭರ್ಜರಿ’ ಸೆಟ್ ನಲ್ಲಿ ಧ್ರುವ – ಪ್ರೇರಣಾ ವಿವಾಹ ಮಹೋತ್ಸವ ಜರುಗಿದೆ. ಸಂಬಂಧಿಕರು, ಸ್ನೇಹಿತರು, ಚಿತ್ರರಂಗದವರು ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಾಳೆ ಅಭಿಮಾನಿಗಳಿಗಾಗಿ ವಿಶೇಷ ಔತಣಕೂಟ ನಡೆಯಲಿದೆ