Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, February 24, 2019

ಸ್ಫೋಟಕ್ಕೆ ಬಲೂನ್​ನಲ್ಲಿದ್ದ ಹೀಲಿಯಂ ಕಾರಣ

0

ಮೈಸೂರು: ನಂಜನಗೂಡಿನ ಸುತ್ತೂರು ಜಾತ್ರಾಮಹೋತ್ಸವದಲ್ಲಿ ಸ್ಫೋಟಕ್ಕೆ ಬಲೂನ್‌ನಲ್ಲಿದ್ದ ಹೀಲಿಯಂ ಕಾರಣ ಅಂತ ತಿಳಿದುಬಂದಿದೆ. ಬಲೂನ್​​ನಲ್ಲಿದ್ದ ಹೀಲಿಯಂನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಅಂತ ಸುತ್ತೂರು ಜಾತ್ರಾಮಹೋತ್ಸವ ಸಮಿತಿ ಸ್ಪಷ್ಟನೆ ನೀಡಿದೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಜಾತ್ರಾ ಸಮಿತಿ ಘಟನೆ ಕುರಿತು ಸ್ಪಷ್ಟನೆ ನೀಡಿದೆ. ಕ್ರೀಡಾ ಜ್ಯೋತಿಯ ಜ್ವಾಲೆ ತಗಲಿ ಬಲೂನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೊಂದು ಆಕಸ್ಮಿಕ ಘಟನೆ ಅಷ್ಟೇ, ಸರ್ವರೂ ಕ್ಷೇಮವಾಗಿದ್ದಾರೆ. ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಪೂಜ್ಯ ಜಗದ್ಗುರುಗಳಿಗೆ ಯಾವುದೇ ತೊಂದರೆ ಆಗಿಲ್ಲ ಅಂತ ಜಾತ್ರಾ ಸಮಿತಿ ಸ್ಪಷ್ಟೀಕರಣ ನೀಡಿದೆ.

ಕ್ರೀಡಾ ಜ್ಯೋತಿಯ ಜ್ವಾಲೆ ತಗಲಿ ಬಲೂನ್​ ಸ್ಫೋಟಗೊಂಡು ಮೂವರು ಗಾಯಗೊಂಡಿದ್ದರು. ಬಲೂನ್​ ಸ್ಫೋಟಿಸಿದ ಸ್ಥಳದಲ್ಲಿಯೇ ಇದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ಮಹಾಸ್ವಾಮೀಜಿ ಅದೃಷ್ಟವಶಾತ್​ ಅಪಾಯದಿಂದ ಪಾರಾಗಿದ್ದರು.

ಸುತ್ತೂರು ಶ್ರೀ ಕ್ಷೇತ್ರದ ಜಾತ್ರೆ ಆರಂಭ: ಸಾಂಸ್ಕೃತಿಕ ಕ್ಷೇತ್ರಕ್ಕೆ ಒತ್ತು

0

ಮೈಸೂರು: ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಮೈಸೂರಿನ ಸುತ್ತೂರು ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವಕ್ಕೆ ನಿನ್ನೆ ವಿದ್ಯುಕ್ತ ಚಾಲನೆ ದೊರೆತಿದೆ. ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಜಾತ್ರಾಮಹೋತ್ಸವವನ್ನ ಉದ್ಘಾಟಿಸಿದರು.

ಈ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ವಿಚಾರಗಳಿಗೆ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳು ಸೇರಿ ಹತ್ತು ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಈ ಬಾರಿಯ ಜಾತ್ರೆಯಲ್ಲಿ ಕೃಷಿ ಮೇಳ, ವಸ್ತುಪ್ರದರ್ಶನ, ನಾಟಕ ಪ್ರದರ್ಶನ  ಸಾಮೂಹಿಕ ವಿವಾಹ ಸೇರಿದಂತೆ ಕ್ರೀಡೆಗಳಿಗೂ ಆದ್ಯತೆ ಕೊಡಲಾಗಿದೆ. ಈ ಐತಿಹಾಸಿಕ ಜಾತ್ರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಒಟ್ಟು ಏಳು ದಿನಗಳ ಕಾಲ ಜಾತ್ರೆ ನಡೆಯಲಿದೆ.

ಸುತ್ತೂರು ಕ್ಷೇತ್ರಕ್ಕೆ ಸಿಎಂ ಎಚ್​.ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ನೂತನ ಬಸ್ ನಿಲ್ದಾಣವನ್ನು ಸಿಎಂ ಉದ್ಘಾಟಿಸಲಿದ್ದು ನಂತರ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. 183 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದು ನೂತನ ವಧುವರರನ್ನ ಸಿಎಂ ಆಶೀರ್ವದಿಸಲಿದ್ದಾರೆ.

ಮೈಸೂರಿಗೂ ಕಾಲಿಟ್ಟಿತು ಮಂಗನ ಕಾಯಿಲೆ

0

ಮೈಸೂರು : ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಬಲಿ ಪಡೆದು ಆತಂಕ ಉಂಟುಮಾಡಿರೋ ಮಾರಕ ಮಂಗನ ಕಾಯಿಲೆ ಮೈಸೂರು ಜಿಲ್ಲೆಗೂ ಕಾಲಿಟ್ಟಿದೆ.
ಈ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ತಿಮ್ಮನಹೊಸಳ್ಳಿ ಹಾಡಿಯ ಸುರೇಶ್ ಮತ್ತು ಸುರೇಶಯ್ಯ ಎಂಬುವವರು ಈ ಕಾಯಿಲೆಯಿಂದ ಬಳಲುತ್ತಿದ್ದು, ಕೇರಳದ ಕೋಜಿಕೋಡ್ ಮತ್ತು ಮಾನಂದವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ರಕ್ತದ ಮಾದರಿಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಿದ್ದು, ಈ ಇಬ್ಬರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ವರದಿಯಿಂದ ದೃಢಪಟ್ಟಿರುವುದಾಗಿ ಮಾನಂದವಾಡಿ ಆಸ್ಪತ್ರೆ ವೈದ್ಯರು ಖಚಿತ ಪಡಿಸಿದ್ದಾರೆ.

ಕಾಡಾನೆ ದಾಳಿ: ವೃದ್ಧೆ ಸಾವು

0

ಚಾಮರಾಜನಗರ: ಕಾಡಾನೆ ದಾಳಿಯಿಂದ ವೃದ್ಧೆ ಮೃತಪಟ್ಟಿದ್ದಾರೆ. ಮಾತಾಡಪುರ ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಕಾಡಾನೆ ದಾಳಿಗೆ ವೃದ್ಧೆ ಶಿವಮ್ಮ ಸಾವನ್ನಪ್ಪಿದ್ದಾರೆ. ನಾಡಿಗೆ ಬಂದುಳಿಯುವ ಕಾಡಾನೆ ಹಿಂಡನ್ನು ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಶಿವಮ್ಮ ಅವರ ಸಾವಿನ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಈ ಮಕ್ಕಳಿಗೆ ಕಾಡಿನ ಜೋಪಡಿಯೇ ಕ್ಲಾಸ್​ ರೂಂ..!

0

ಚಾಮರಾಜನಗರ: ಕೆರೆದಿಂಬ ಪೋಡಿನ ಮಕ್ಕಳಿಗೆ ಶಾಲೆ, ಕ್ಲಾಸ್ ರೂಂ ಎಲ್ಲವೂ ಕಾಡಿನಲ್ಲಿರುವ ಚಿಕ್ಕದೊಂದು ಜೋಪಡಿ. ಶಾಲಾ ಕಟ್ಟಡದಲ್ಲಿ ಕುಳಿತು, ಕ್ಲಾಸ್​ ರೂಂ ಒಳಗೆ ಪಾಠ ಕೇಳೋ ಭಾಗ್ಯ ಈ ಮಕ್ಕಳಿಗಿಲ್ಲ. ಕಾಡಿನ ಮಧ್ಯೆ ಇರೋ ಜೋಪಡಿಯಲ್ಲೇ ಇವರು ಪಾಠ ಕೇಳ್ತಾರೆ.

ಕೊಳ್ಳೇಗಾಲ ತಾಲೂಕಿನ ಕೆರೆದಿಂಬ ಪೋಡಿನಲ್ಲಿ ಶಾಲಾ ಕಟ್ಟಡವೇ ಇಲ್ಲ. ಇಲ್ಲಿ 25 ಜನ ವಿದ್ಯಾರ್ಥಿಗಳಿದ್ದು ಪಾಠ ಮಾಡಲು ಸಾಧಾರಣ ಕೊಠಡಿಯೂ ಇಲ್ಲ. ಒಂದರಿಂದ ಮೂರನೇ ತರಗತಿಯವರೆಗಿರುವ ಈ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಕುಳಿತು ಓದಲು ಕ್ಲಾಸ್​ ರೂಂ ಮಾತ್ರ ಇಲ್ಲ.

ವ್ಯವಸ್ಥಿತ ಕಟ್ಟಡವಿರದ ಕಾರಣ ಕಾಡಿನ ಮಧ್ಯೆ ಜೋಪಡಿಯೊಂದರಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸಲಾಗ್ತಿದೆ. ಹಲವು ಬಾರಿ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಮಕ್ಕಳಿಗೆ ಜೋಪಡಿಯಲ್ಲಿ ಕುಳಿತು ಪಾಠ ಕೇಳೋ ದುಸ್ಥಿತಿಯೂ ತಪ್ಪಿಲ್ಲ.

ಜಲ್​ಮಹಲ್​ನಲ್ಲಿ ಸಿಎಂ ಔತಣಕೂಟ

0

ಒಂದಡೆ ಕಾಂಗ್ರೆಸ್‌ ಶಾಸಕರೆಲ್ಲ ರೆಸಾರ್ಟ್‌ ಪಾಲಿಟಿಕ್ಸ್‌ ನಡೆಸ್ತಿದ್ರೆ, ಸಿಎಂ ಎಚ್​.ಡಿ ಕುಮಾರಸ್ವಾಮಿ ಸಹ ಶಾಸಕರು ಹಾಗೂ ಸಚಿವರಿಗೆ ಔತಣಕೂಟ ನೀಡಿದ್ರು. ಮೈಸೂರಿನ ಜಲ್‌ ಮಹಲ್‌ನಲ್ಲಿ ಸಿಎಂ ಔತಣಕೂಟ ಏರ್ಪಡಿಸಿದ್ರು.

ಔತಣದ ನಂತರ ಶಾಸಕ, ಸಚಿವರ ಜೊತೆ ಸಿಎಂ ತಡರಾತ್ರಿವರೆಗೂ ಚರ್ಚೆ ನಡೆಸಿದ್ರು. ಬಳಿಕ ಇನ್ಫೋಸಿಸ್‌ ಹೋಟೆಲ್‌ಗೆ ತೆರಳಿ ವಾಸ್ತವ್ಯ ಹೂಡಿದ್ರು. ಇನ್ನು ಇದೇ ವೇಳೆ ಮಾತನಾಡಿದ ಸಿಎಂ ಪುತ್ರ ನಿಖಿಲ್‌ ಅವರು ‘ಸೀತಾರಾಮ ಕಲ್ಯಾಣ’ ಟೀಸರ್‌ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೀತು ಅಂತಾ ಹೇಳಿದ್ರು.

ಮೈಸೂರಲ್ಲಿ ಮರ್ಯಾದಾ ಹತ್ಯೆ?

0

ಮೈಸೂರು : ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಂಜನಗೂಡಿನಲ್ಲಿ‌ ನಡೆದಿದ್ದು, ಮರ್ಯಾದಾ ಹತ್ಯೆ ಶಂಕೆ ವ್ಯಕ್ತವಾಗಿದೆ.
ನಂಜನಗೂಡಿನ ಕೂಗಲೂರು ಗ್ರಾಮದ ಸವಿತಾ (25) ಮೃತೆ. ಸವಿತಾ ಕಾಳನಾಯಕ ಮತ್ತು ನಾಗಮ್ಮ ದಂಪತಿಯ ಪುತ್ರಿಯಾಗಿದ್ದು , ಇವರು ಬೆಂಗಳೂರಲ್ಲಿ ನರ್ಸಿಂಗ್ ಕೋರ್ಸ್ ಕಂಪ್ಲೀಟ್ ಮಾಡಿದ್ದರು. ಸ್ವಗ್ರಾಮ‌ ಕೂಗಲೂರಿನ ಗೌರಮ್ಮ ಅವರ‌ ಮಗ ಶಂಕರ್ ಅವರನ್ನು ಪ್ರೀತಿಸುತ್ತಿದ್ದು, ಅವರನ್ನು‌ ಮದ್ವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಇವರಿಬ್ಬರ ಜಾತಿ ಬೇರೆ ಬೇರೆಯಾಗಿದ್ದು, ಮದುವೆಗೆ ವಿರೋಧ ವ್ಯಕ್ತವಾಗಿತ್ತು ಎಂದು‌ ತಿಳಿದುಬಂದಿದೆ.
ಕೂಗಲೂರು ಮತ್ತು ಕಸುವಿನಹಳ್ಳಿ‌ ಮುಖ್ಯರಸ್ತೆಯ ಜಮೀನಲ್ಲಿ ಸವಿತಾ ಮೃತದೇಹ ಸಿಕ್ಕಿದ್ದು, ಮರ್ಯಾದಾ ಹತ್ಯೆ ಅನುಮಾನ ವ್ಯಕ್ತವಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

ಸಕ್ಕರೆ ನಾಡಲ್ಲಿ ಕಿಡ್ನಿ ಮಾರಾಟ ಜಾಲ..?

0

ಸಕ್ಕರೆ ನಾಡು ಮಂಡ್ಯದಲ್ಲಿ ಕಿಡ್ನಿ ಮಾರಾಟ ಜಾಲ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಂಡ್ಯದಲ್ಲಿ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆ ಕಿಡ್ನಿ ಮಾರಾಟ ಜಾಲದ ಆಮಿಷಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.

ಬರ, ಬಡತನ, ಜನರ ಮುಗ್ಧತೆಯನ್ನೇ ಲಾಭ ಮಾಡಿಕೊಳ್ತಿರೋ ಕೆಲವು ವಂಚಕರು ಹಣದ ಆಮಿಷ ನೀಡಿ ಮುಗ್ಧರ ಕಿಡ್ನಿ ಮಾರಾಟ ಮಾಡೋ ಪ್ರಕರಣ ಬಯಲಾಗ್ತಿವೆ. ಒಂದು ಕಾಲದಲ್ಲಿ ಇಡೀ ಮಂಡ್ಯವನ್ನೇ ಆವರಿಸಿದ್ದ ಕಿಡ್ನಿ ಮಾರಾಟ ಜಾಲ ಪ್ರಕರಣ ಮತ್ತೆ ಸದ್ದು ಮಾಡ್ತಿದೆ. ಇದೀಗ ಅಂತದ್ದೇ ಪ್ರಕರಣ ಮಂಡ್ಯದ ಮಳವಳ್ಳಿಯಲ್ಲಿ ಪತ್ತೆಯಾಗಿದ್ದು ಕಿಡ್ನಿ ಮಾರಾಟ ಜಾಲದ ಆಮಿಷಕ್ಕೆ ಮಹಿಳೆಯೊಬ್ರು ಬಲಿಯಾಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮಂಡ್ಯದ ಮಳವಳ್ಳಿಯಲ್ಲಿ ಸಾಲದ ಬಾಧೆಯಿಂದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳವಳ್ಳಿ ಪಟ್ಟಣದ ಗಂಗಾಮತಸ್ತ ಬೀದಿಯ ವೆಂಕಟಮ್ಮ(48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ವೆಂಕಟಮ್ಮ ಆತ್ಮಹತ್ಯೆ ಹಿಂದೆ ಕಿಡ್ನಿ ಮಾರಾಟ ಜಾಲದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ಯಪಡಿಸಿ ಪೊಲೀಸ್ ಮೊರೆ ಹೋಗಿದ್ದಾರೆ.

ತರಕಾರಿ ಮತ್ತು ಸೊಪ್ಪು ಮಾರುತ್ತಿದ್ದ ವೆಂಕಟಮ್ಮ ಹಣದ ಆಮಿಷಕ್ಕೆ ಒಳಗಾಗಿದ್ದರು ಎಂದು ಹೇಳಲಾಗ್ತಿದೆ. ವೆಂಕಟಮ್ಮಗೆ ಪರಿಚಯವಿದ್ದ ಮಹಿಳೆಯೊಬ್ಬರು ಕಿಡ್ನಿ ಮಾರಾಟ ಮಾಡುವಂತೆ ಸಲಹೆ ನೀಡಿ, 1.50 ಲಕ್ಷ ಕಮಿಷನ್ ಹಣ ಪಡೆದುಕೊಂಡಿದ್ದರಂತೆ. ವೆಂಕಟಮ್ಮ ಕಿಡ್ನಿ ನೀಡಿದರೆ 10 ಲಕ್ಷ ಸಿಗುತ್ತದೆಂಬ ಆಸೆಗೆ ಸಾಲ ಮಾಡಿ ಮಧ್ಯವರ್ತಿಗೆ ಹಣ ನೀಡಿದ್ರು. ಆದರೆ ಕಿಡ್ನಿ ಆಪರೇಷನ್ ತಡವಾದ ಹಿನ್ನಲೆಯಲ್ಲಿ ಕಮಿಷನ್ ಹಣ ನೀಡಲು ಮಾಡಿದ್ದ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಈ ಸಂಬಂಧ ಸ್ಥಳೀಯ ಮುಖಂಡರು ಮಳವಳ್ಳಿ ಪೊಲೀಸರ ಮೊರೆ ಹೋಗಿದ್ದಾರೆ.

ವೆಂಕಟಮ್ಮ ರೀತಿಯಾಗಿ ಮತ್ತಷ್ಟು ಮಹಿಳೆಯರು ಕಮಿಷನ್ ಹಣವನ್ನು ಮಧ್ಯವರ್ತಿಗೆ ನೀಡಿರೋ ಬಗ್ಗೆ ಅನುಮಾನವಿದೆ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ, ಹಣದ ಆಮಿಷವೊಡ್ಡಿ ಮುಗ್ಧರ ಬಲಿ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ

ಭಾರತ್​ ಬಂದ್​ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

0

ಭಾರತ್​ ಬಂದ್​ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತಿದೆ.

ಹಾಸನ

ವಿವಿಧ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ‌ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ‌ ಬಂದ್​​ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರಮೇಣ ಬಂದ್ ಆಗುವ ಸಾಧ್ಯತೆ ಇದ್ದು, ಸಾರಿಗೆ ಬಸ್ ಸಂಚಾರ ವಿರಳವಾಗಿದೆ. ಜಿಲ್ಲಾ ವ್ಯಾಪ್ತಿಯ ಬಸ್​ಗಳು ಸಂಚರಿಸುತ್ತಿದ್ದು, ಎಂದಿನಂತೆ ಆಟೋಗಳು ಓಡಾಡುತ್ತಿವೆ. ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. 10 ಗಂಟೆ ನಂತರ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ. ಭಾರತ್ ಬಂದ್ ಹಿನ್ನೆಲೆ ಹಾಸನದಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬಸ್ ವ್ಯವಸ್ಥೆ ಇಲ್ಲದೆ ಶಾಲಾ ಮಕ್ಕಳು ಪರದಾಡಿದ್ದಾರೆ.

ಮೈಸೂರು

ಭಾರತ್ ಬಂದ್​ಗೆ ಮೈಸೂರಿನ ಜನ ಬೆಂಬಲ ವ್ಯಕ್ತಪಡಿಸಿಲ್ಲ. ಮೈಸೂರಿನಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ನಗರದ ಬಸ್ ನಿಲ್ದಾಣದಿಂದ ಸೇವೆ ಆರಂಭವಾಗಿದೆ. ಆಟೋಗಳು ಸಂಚರಿಸುತ್ತಿದ್ದು ಕಾರ್ಮಿಕ ಸಂಘಟನೆಗಳು ಕರೆನೀಡಿರುವ ಬಂದ್​​ ನಗರದ ಜನರನ್ನು ಬಾಧಿಸಿಲ್ಲ.

ತುಮಕೂರು

ತುಮಕೂರಿನಲ್ಲಿ ಭಾರತ್ ಬಂದ್​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್​ ದಿನವಾಗಿದ್ದೂ ಕೆಎಸ್​ಆರ್​ಟಿಸಿ ಬಸ್​ಗಳು ಎಂದಿನಂತೆ ಸೇವೆ ಆರಂಭಿಸಿವೆ. ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದು ಜನಜೀವನಲ್ಲಿ ಬಂದ್​ ಎಫೆಕ್ಟ್​ ಅಷ್ಟಾಗಿ ಕಾಣಿಸುತ್ತಿಲ್ಲ. ಬಂದ್ ಹಿನ್ನೆಲೆ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಲಾಗಿದೆ. ಸಿಐಟಿಯುನಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ತುಮಕೂರು ಪ್ರಮುಖ ರಸ್ತೆಯಲ್ಲಿ ಬೈಕ್​ ರ‍್ಯಾಲಿ ನಡೆಸಿ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತುಮಕೂರು ಟೌನ್​ಹಾಲ್​ನಲ್ಲಿ ಎಐಟಿಯುಸಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಟೌನ್​ಹಾಲ್ ಸರ್ಕಲ್​ನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಆನೇಕಲ್

ಆನೇಕಲ್​ನಲ್ಲಿ ಭಾರತ್​ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಕೆಎಸ್​ಆರ್​ಟಿಸಿ ಬಸ್​ ರಸ್ತೆಗಿಳಿದಿಲ್ಲ. ನಿನ್ನೆ ರಾತ್ರಿ ಡಿಪೋಗೆ ಹೋಗಿದ್ದ ಕೆ‌ಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ಬಂದ್​ ಹಿನ್ನೆಲೆಯಲ್ಲಿ ಡಿಪೋದಿಂದ ಹೊರಗೆ ಬಂದಿಲ್ಲ. ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಐವತ್ತಕ್ಕೂ ಹೆಚ್ಚು ಬಿಎಂಟಿಸಿ ಬಸ್​ಗಳು ಡಿಪೋಗೆ ವಾಪಸ್ ಆಗಿವೆ. ಬಸ್​ಗಳಿಲ್ಲದೆ ಆನೇಕಲ್ ಬಸ್ ನಿಲ್ದಾಣ ಸದ್ಯ ಖಾಲಿಯಾಗಿದ್ದು, ಅಂಗಡಿ ಮುಂಗಟ್ಟು ತೆರೆಯದೆ ಜನರು ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಕಲುಬುರ್ಗಿ

ಭಾರತ್ ಬಂದ್‌ ಹಿನ್ನೆಲೆ AIUTUC ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಸ್ ನಿಲ್ದಾಣದ ಎದರುಗಡೆ ಸೇರಿದ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಮುಷ್ಕರ ಹಿನ್ನಲೆ NEKSRTC ಬಸ್ ಸಂಚಾರ ಸ್ಥಗಿತಗೊಳಿಸಿದೆ. ಬಸ್​ಪ್ರಯಾಣಿಕರಿಗೆ ಬಂದ್​ ಬಿಸಿ ತಟ್ಟಿದ್ದರೂ ಆಟೋಗಳು, ಖಾಸಗಿ ವಾಹನಗಳು ಎಂದಿನಂತೆ ರಸ್ತೆಗಿಳಿದಿವೆ. ಅಂಗಡಿ ಮಾಲೀಕರೂ ಎಂದಿನಂತೆ ತಮ್ಮ ಅಂಗಡಿಗಳನ್ನು ತೆರೆದಿದ್ದಾರೆ. ಬಂದ್ ಹಿನ್ನೆಲೆ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಚಿಕ್ಕಮಗಳೂರು

ವಿವಿಧ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ‌ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ‌ ಬಂದ್​ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್ ಸಂಚಾರ ವಿರಳವಾಗಿದ್ದು, ಜಿಲ್ಲಾ ವ್ಯಾಪ್ತಿಯ ಬಸ್​ಗಳು ಎಂದಿನಂತೆ ಓಡಾಟ ನಡೆಸುತ್ತಿವೆ. ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದು, ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. 11 ಗಂಟೆ ನಂತರ ಕಾರ್ಮಿಕ ಸಂಘಟನೆಗಳು ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನೆ ನಡೆಸಲಿದ್ದಾರೆ.

ಕೊಪ್ಪಳ

ಕೊಪ್ಪಳ ಜಿಲ್ಲೆಯಾದ್ಯಂತ ಬಂದ್​​​ಗೆ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸ್ತಬ್ಧವಾಗಿದ್ದು, ಯಾವುದೇ ಬಸ್​ಗಳು ರಸ್ತೆಗಿಳಿದಿಲ್ಲ. ಅಂಗಡಿ, ಮುಂಗಟ್ಟು ಮಾಲೀಕರು ಅಂಗಡಿ ತೆರೆಯದೆ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ಬಸ್ ಸಂಚಾರವಿರದ ಕಾರಣ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಬಂದ್​​ಗೆ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, 10 ಗಂಟೆಯ ನಂತರ ವಿವಿಧ ಕಾರ್ಮಿಕ ಸಂಘಟನೆಯಿಂದ ಮೆರವಣಿಗೆ ನಡೆಸಲಿವೆ. ಗಂಗಾವತಿ ನಗರದಲ್ಲಿ ಎಸ್‌.ಎಫ್.ಐ.ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಗಂಗಾವತಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋ‌ಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ

ಎರಡು ದಿನಗಳ ಭಾರತ್ ಬಂದ್​ಗೆ ಚಿಕ್ಕಬಳ್ಳಾಪುರದಲ್ಲಿ ಬೆಂಬಲ ವ್ಯಕ್ತವಾಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ಸಿಪಿಐಎಂ ಪಕ್ಷದ ವತಿಯಿಂದ ಬೈಕ್ ರ‍್ಯಾಲಿ ನಡೆದಿದ್ದು, ಬಾಗೇಪಲ್ಲಿ ನಗರದ ಟಿಬಿ ಕ್ರಾಸ್​​ನಲ್ಲಿ ರ‍್ಯಾಲಿಗೆ ಚಾಲನೆ ದೊರೆತಿದೆ. ಮೋದಿ‌ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದೆ. ರೈತ ಸಂಘ ಹಾಗೂ ಸಿಪಿಐಎಂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಹನಗಳನ್ನು ತಡೆದು ಬಂದ್​ಗೆ ಸಹಕರಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬಸ್ ನಿಲ್ದಾಣದಿಂದ ಬಸ್ ಡಿಪೋಗೆ ತೆಗೆದುಕೊಂಡು ಹೋಗುವಂತೆ ಸಂಚಾರಿ ನಿಯಂತ್ರಕ ಆವಲಪ್ಪ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ವಾರ್ನಿಂಗ್ ಮಾಡಿದ್ದಾರೆ.

ಮಂಡ್ಯ

ಭಾರತ್ ಬಂದ್ ಹಿನ್ನೆಲೆ ಬಂದ್​ಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ವಾಹನಗಳು ಓಡಾಡುತ್ತಿವೆ. KSRTC ಎಂದಿನಂತೆ ಸೇವೆ ಆರಂಭಿಸಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಖಾಸಗಿ ಬಸ್, ಆಟೋಗಳು ಎಂದಿನಂತೆ ರಸ್ತೆಗಿಳಿದಿವೆ. ಭಾರತ್ ಬಂದ್ ಹಿನ್ನೆಲೆ ಸಿಐಟಿಯುನಿಂದ ಪ್ರತಿಭಟನೆ ಆರಂಭವಾಗಿದೆ. ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಆರಂಭಿಸಿದ್ದು, ಮಂಡ್ಯದ ಮಹಾವೀರ ಸರ್ಕಲ್ ಬಳಿ ರಸ್ತೆ ತಡೆ ಆರಂಭವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಉಡುಪಿ

ಕಾರ್ಮಿಕ ಸಂಘಟನೆಗಳು ಬಸ್ ಸಂಚಾರ ಬಂದ್ ಮಾಡುವಂತೆ ಬಸ್ ಚಾಲಕರಿಗೆ ಮನವಿ ಮಾಡಿದ್ದಾರೆ. ಸಂಚಾರ ಸ್ಥಗಿತಗೊಳಿಸುವ ಕುರಿತು ಬಸ್ ಚಾಲಕರು ಮತ್ತು ಕಾರ್ಮಿಕ ಸಂಘಟನೆ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಟೋ ರಿಕ್ಷಾ ಬಂದ್‌ಮಾಡುವಂತೆ ಒತ್ತಾಯ ಮಾಡಿರುವ ಬಸ್​ ಚಾಲಕರು, ಅಟೋ ಬಂದ್ ಆಗದಿದ್ದರೆ, ಬಸ್ ಬಿಡುತ್ತೇವೆ ಎಂದಿದ್ದಾರೆ. ಅಂಚೆ ಕಚೇರಿ ಸಿಬ್ಬಂದಿ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಡೋಲು ಬಾರಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಾವೇರಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್​ಗೆ ಹಾವೇರಿಯಲ್ಲಿ‌ ಬೆಂಬಲ ದೊರೆತಿಲ್ಲ. ಕೆಎಸ್ಆರ್​ಟಿಸಿ ಬಸ್ಸುಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ. ಬಸ್ ನಿಲ್ದಾಣದಲ್ಲಿನ ಅಂಗಡಿ, ಮುಂಗಟ್ಟು ತೆರೆದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೂ ರಜೆ ನೀಡಿಲ್ಲ. ಕಾರ್ಮಿಕ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ಮಾಡಲಿದ್ದು, ಅದನ್ನು ಹೊರತುಪಡಿಸಿ ಹಾವೇರಿಯಲ್ಲಿ ಎಂದಿನ ಸಹಜ ಸ್ಥಿತಿ ಇದೆ. ೧೦ ಗಂಟೆ ನಂತರ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ಹುಬ್ಬಳ್ಳಿ

ಭಾರತ್ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಬಸ್​ಗಳು ಸಂಚಾರ ಸ್ಥಗಿತಗೊಳಿಸಿದ್ದು ವಾಯುವ್ಯ ಸಾರಿಗೆಯ 4,800 ಬಸ್​ಗಳು ಡಿಪೋದಲ್ಲಿ ನಿಂತಿವೆ. ಬಸ್ ಡಿಪೋಗಳಿಗೆ ಪೋಲಿಸ್ ಬಂದೊಬಸ್ತ್ ಒದಗಿಸಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಶಿವಮೊಗ್ಗ

ಭಾರತ್ ಬಂದ್​​ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ಎಂದಿನಂತೆ ಕಾರ್ಯಚಟುವಟಿಕೆಗಳು ಆರಂಭವಾಗಿದ್ದು, ಸಂಚಾರ ಎಂದಿನಂತಿದೆ. ಆಟೋ, ಖಾಸಗಿ ಬಸ್, ಲಾರಿಗಳೂ ಎಂದಿನಂತೆ ರಸ್ತೆಗಿಳಿದಿವೆ. ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ತೆರೆದಿದ್ದು, ಎಂದಿನಂತೆಯೇ ಹೂವಿನ ಅಂಗಡಿ, ತಿಂಡಿ ಗಾಡಿಗಳು ವ್ಯಾಪಾರ ನಡೆಸುತ್ತಿವೆ. ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ ಎಲ್ಲಾ ಖಾಸಗಿ ಬಸ್​ಗಳು ಎಂದಿನಂತೆ ಓಡಾಡುತ್ತಿವೆ. ಬಂದ್​​ಗೆ ಕೆಎಸ್​​ಆರ್​ಟಿಸಿ ಬೆಂಬಲ ವ್ಯಕ್ತಪಡಿಸಿದ್ದು, ಬಸ್​ಗಳು ಭದ್ರಾವತಿ ಡಿಪೋಗೆ ತೆರಳುತ್ತಿವೆ. ಕೆ.ಎಸ್.ಆರ್.ಟಿ.ಸಿ. ನೌಕರರು ಬಸ್ ಡಿಪೋ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಚಿಕ್ಕೋಡಿ

ರಾಯಬಾಗ ಬಸ್ ನಿಲ್ದಾನದಲ್ಲಿ ಬಸ್ ಚಾಲಕರು ಹಾಗೂ ಬಸ್ ನಿಯಂತ್ರಣಾಧಿಕಾರಿಗಳ ಮದ್ಯೆ ಮಾತಿನ ಚಕಮಕಿ ನಡೆದಿದೆ. ಸಾರಿಗೆ ಸಂಚಾರ ಆರಂಭಿಸುವಂತೆ ಅಧಿಕಾರಿಗಳು ಚಾಲಕರಿಗೆ ಒತ್ತಾಯಿಸಿದ್ದು, ಬಂದ್​ ಹಿನ್ನೆಲೆಯಲ್ಲಿ ಬಸ್​ ಓಡಿಸಲು ಚಾಲಕರು ನಿರಾಕರಿಸಿದ್ದಾರೆ. ಬಂದ್​ ನಡೆಯುತ್ತಿರುವುದರಿಂದ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ತಾವೇ ಜವಾಬ್ದಾರಿ ಎಂದು ಅಧಿಕಾರಿಗಳು ಬರೆದುಕೊಟ್ಟರೆ ಬಸ್ ಓಡಿಸುವುದಾಗಿ ಚಾಲಕರು ಪಟ್ಟು ಹಿಡಿದಿದ್ದಾರೆ. ಅಥಣಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದು ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿರುವ ಸಂಘಟನೆಗಳು, ಬೈಕ್ ರ‍್ಯಾಲಿ ಮಾಡಿ ಘೋಷಣೆ ಕೂಗಿದ್ದಾರೆ. ಸಂಚಾರ, ಅಹಾರ, ತರಕಾರಿ ಹಾಗೂ ವಿವಿಧ ಸಾಮಗ್ರಿಯ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಗದಗ

ಭಾರತ್ ಬಂದ್ ಹಿನ್ನೆಲೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬಸ್ ನಿಲ್ದಾಣದ ಸ್ವಚ್ಛತೆಗೆ ಮುಂದಾಗಿದ್ದಾರೆ. ಇಂದು ಕಾರ್ಮಿಕರು ಇಲ್ಲದ ಕಾರಣ ಸ್ವತಃ ಸಿಬ್ಬಂದಿ ಸ್ವಚ್ಚತೆಗೆ ಮುಂದಾಗಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಸಿಬ್ಬಂದಿ ಸ್ವತಃ ಇಡೀ ಬಸ್ ನಿಲ್ದಾಣಕ್ಕೆ ನೀರು ಹೊಡೆದು ಕಸ ಗುಡಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಗಿಗಳು ಪರದಾಡುವಂತಾಗಿದೆ. ಬಂದ್​ ಹಿನ್ನೆಲೆಯಲ್ಲಿ ಆಟೋ ಚಾಲಕರು ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ. ಆಟೋ ಚಾಲಕರು 400 ರಿಂದ 800 ರೂಪಾಯಿ ಬೇಡಿಕೆ ಇಟ್ಟಿರುವುದರಿಂದ ಕಲಬುರ್ಗಿ ಜಿಲ್ಲೆಯಿಂದ ಪಾರ್ಶ್ವವಾಯು ಚಿಕಿತ್ಸೆಗೆ ಆಗಮಿಸಿದ ತಾಯಿ, ಮಗ ಪರದಾಡುವಂತಾಯಿತು.

ಚಾಮರಾಜನಗರ

ದೇಶಾದ್ಯಾಂತ ಕಾರ್ಮಿಕ ಸ೦ಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಚಾಮರಾಜನಗರ ಜಿಲ್ಲೆ ಬೆಂಬಲವಿಲ್ಲದ ಕಾರಣ ಎಂದಿನಂತೆ ಸರ್ಕಾರಿ ಹಾಗೂ ಖಾಸಾಗಿ ಬಸ್​ಗಳು ಸಂಚಾರ ಆರಂಭಿಸಿವೆ. ಅ೦ಗಡಿ ಮುಂಗಟ್ಟುಗಳು ಹಾಗೂ ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ಕೆಲಸಕಾರ್ಯಗಳು ಬೆಳಗ್ಗೆಯಿಂದಲೇ ಆರಂಭವಾಗಿದೆ. ಜನಸಾಮಾನ್ಯರಿಗೆ ಪ್ರತಿ ದಿನದ ವ್ಯವಹಾರಕ್ಕೆಯಾವುದೇ ತೊಂದರೆ ಆಗದೆ ಎಂದಿನಂತೆ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿದೆ. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಬಾಗಲಕೋಟೆ

ಭಾರತ್​ ಬಂದ್​ಗೆ ಬಾಗಲಕೋಟೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಬಂದ್‌ ಆಗಿದೆ. ಬಸ್ ಇಲ್ಲದೆ ಸಾರ್ವಜನಿಕರ ಪರದಾಡುವಂತಾಗಿದ್ದು, ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕೆ ಶಾಂತರಾಮ ಇಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಬಂದ್​ಗೆ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಕೋ ಎನ್ನುತ್ತಿರೋ ಬಸ್ ನಿಲ್ದಾಣದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಖಾಲಿಯಾಗಿದೆ.

ರಾಯಚೂರು

ರಾಯಚೂರು ಜಿಲ್ಲೆಯಾದ್ಯಂತ ಬಂದ್​ಗೆ ಬೆಂಬಲ ವ್ಯಕ್ತವಾಗಿದ್ದು, ಕಾರ್ಮಿಕ ಸಂಘಟನೆಗಳಿಂದ ಬೈಕ್ ರ‍್ಯಾಲಿ ನಡೆದಿದೆ. ಮಧ್ಯಾಹ್ನ ನಂತರದಲ್ಲಿ ಬಂದ್ ಎಫೆಕ್ಟ್ ತ್ರೀವ್ರಗೊಳ್ಳಲಿದೆ. ಬೆಳಗಿನ ಜಾವ ಹಾಲು, ಅಟೋ ಹಾಗು ಟೀ ಅಂಗಡಿಗಳು ಆರಂಭವಾಗಿವೆ. ಬಸ್ ಓಡಾಟವು ಸಹ ಸ್ಥಗಿತಗೊಳ್ಳಲಿದೆ. ಮದ್ಯಾಹ್ನ ವೇಳೆ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ‌ರಜೆ ಘೋಷಿಸಿದೆ. ಕೆಲವು ಕಡೆ ಯಥಾವತ್ತಾಗಿ ಅಂಗಡಿ ಮಳಿಗೆಗಳು ತೆರೆದುಕೊಂಡಿವೆ. ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಆಟೋ ಚಾಲಕರಿಗೆ, ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಿದೆ.

ದಾವಣಗೆರೆ

ದಾವಣಗೆರೆಯಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಸರ್ಕಾರಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದಾರೆ. ಎಐಸಿಯುಸಿಟಿ ಸಂಘಟನೆ ಕಾರ್ಯಕರ್ತರು ಬಂದ್ ಯಶಸ್ವಿಗೊಳಿಸುವಂತೆ ಘೋಷಣೆ ಕೂಗಿದ್ದಾರೆ.

ಬೀದರ್

ಗಡಿ ಜಿಲ್ಲೆ ಬೀದರ್​ನಲ್ಲಿ ಬಂದ್​ಗೆ ‌ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರಿನಲ್ಲಿ ಎಂದಿನಂತೆ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಿದ್ದು, ಆಟೋ, ಕ್ಯಾಬ್​ಗಳು ಓಡಾಡುತ್ತಿವೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಕೊಡಗು

ಕಾರ್ಮಿಕ ಸಂಘಟನೆಗಳ ಭಾರತ್ ಬಂದ್‌ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಬಸ್ ಹೊರತುಪಡಿಸಿ ಉಳಿದಂತೆ ಎಲ್ಲವೂ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸೋ ಸರ್ಕಾರಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದು, ಆಟೋ, ಟ್ಯಾಕ್ಸಿ, ಹಾಗೂ ಖಾಸಗಿ ಬಸ್ಸುಗಳು ಓಡಾಡುತ್ತಿವೆ. ಅಂಗಡಿ ಮಳಿಗೆಗಳು ತಡವಾಗಿ ವ್ಯಾಪಾರ ಆರಂಭಿಸಿವೆ. ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ.

ಬಳ್ಳಾರಿ

ಎರಡು ದಿನ ಭಾರತ್ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪ್ರತಿಭಟನೆ ತೀವ್ರವಾಗಿದೆ. ಬಸ್ ಮತ್ತು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರು ಚಾಲಕರು ರಸ್ತೆಗಿಳಿಯದಂತೆ ತಾಕೀತು ಮಾಡಿದ್ದಾರೆ.

ದೇವಸ್ಥಾನ ಕಟ್ಟಿಸಲು ಜಾಗ ಕೊಡಲ್ಲ ಅಂದವರಿಗೆ ಊರಿನಿಂದಲೇ ಬಹಿಷ್ಕಾರ..!

0

ಸಕ್ಕರೆಯ ನಾಡು ಮಂಡ್ಯದಲ್ಲಿ ಕುಟುಂಬವೊಂದಕ್ಕೆ ಊರಿನಿಂದ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ದೇವಸ್ಥಾನ ಕಟ್ಟಿಸಲು ಜಾಗ ಕೊಡಲ್ಲ ಅಂದವರಿಗೆ ಊರಿನಿಂದಲೇ ಬಹಿಷ್ಕಾರ ಹಾಕಲಾಗಿದೆ. ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಿಸಲು ಜಮೀನಿನಲ್ಲಿ ಜಾಗ ಕೊಡಲಿಲ್ಲವೆಂದು ಊರಿನ ಯಜಮಾನರು ಪಂಚಾಯ್ತಿ ನಡೆಸಿ ರಾಮಕೃಷ್ಣೇಗೌಡ, ಸ್ವಾಮಿಗೌಡ, ಗವೀಗೌಡ, ಲೋಕೇಶ್ ಎಂಬುವರ ಕುಟುಂಬಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯವನ್ನು ನೀಡದಂತೆ ಊರಿನಿಂದಲೇ ಬಹಿಷ್ಕಾರ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆಂಚನಹಳ್ಳಿ ಈ ಘಟನೆ ನಡೆದಿದೆ. 

ಬಹಿಷ್ಕಾರಕ್ಕೆ ಒಳಗಾದ ಕುಟುಂಬ “ನಮಗೆ ಗ್ರಾಮದಲ್ಲಿ ಇರಲು ಅವಕಾಶ ಕೊಡಿ. ನಮಗೆ ಬಹಿಷ್ಕಾರದಿಂದ ಮುಕ್ತಿಕೊಡಿಸಿ” ಎಂದು ಪಾಂಡವಪುರದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Popular posts