Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, April 21, 2019

ಸಿಎಂಗೆ ಮಾಧ್ಯಮಗಳು ಕಾಟ ಕೊಡ್ತಿವೆಯಂತೆ..!

0

ಮಂಗಳೂರು: ಪದೇ ಪದೇ ಮಾಧ್ಯಮಗಳ ಕುರಿತು ತಮ್ಮ ಅಸಮಾಧಾನವನ್ನು ತೋರಿಸುತ್ತಿರುವ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರು ಮತ್ತೆ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳ ಮೇಲೆ ಕೋಪ ವ್ಯಕ್ತಪಡಿಸಿದ ಸಿಎಂ ಅವರು, “ಮಾಧ್ಯಮಗಳು ಕೆಲಸ ಮಾಡಲು ಬಿಡ್ತಿಲ್ಲ. ಕಾಟ ಕೊಡ್ತಿವೆ” ಅಂತ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಿಎಂ, “ಮಾಧ್ಯಮಗಳು ನನ್ನ ವಿರುದ್ಧವಾಗಿ ಪ್ರಚಾರ ಕೊಡುತ್ತಾ ಬಂದಿದ್ದಾರೆ. ನನ್ನ ಪ್ರತಿಕ್ರಿಯೆ ವೇಳೆ ನಮ್ಮ ವಿರೋಧಿಗಳನ್ನ ತೋರಿಸುತ್ತೀರಿ. ಇದು ಯಾವ ರೀತಿಯ ಪ್ರಚಾರ..? ನನಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಹಾಗಿರುವಾಗ ನಿಮಗೇಕೆ ನನ್ನ ಬಗ್ಗೆ ದ್ವೇಷ” ಅಂತ ಪ್ರಶ್ನಿಸಿದ್ದಾರೆ. “ನೀವು ಕೇಳೋ ಪ್ರಶ್ನೆಗಳಿಗೆ ಅರ್ಥ ಇದೆಯಾ? ನಿಮಗೆ ಸಮಾಧಾನ ಇದೆಯಾ? ನೀವು ತೋರಿಸಿದ್ದನ್ನ ರಿವೈಂಡ್ ಮಾಡಿ ನೋಡಿಕೊಳ್ಳಿ” ಎಂದು ಫುಲ್ ಗರಂ ಆಗಿದ್ದಾರೆ.

‘ನಳಿನ್​ಗೆ ಟಿಕೆಟ್​ ಕೊಡಬೇಡಿ’: ಕಾರ್ಯಕರ್ತನ ಬೆದರಿಕೆ ಏನು..?

0

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಬದಲಾವಣೆಗೆ ಒತ್ತಡ ಹೆಚ್ಚಿದೆ. ಈ ಬಗ್ಗೆ ಇಬ್ಬರು‌ ಕಾರ್ಯಕರ್ತರ ಫೋನ್ ಸಂಭಾಷಣೆ ವೈರಲ್ ಆಗಿದೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೊಟ್ಟರೆ ವಿಷ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ. ಶಕ್ತಿಕೇಂದ್ರದ ಮೀಟಿಂಗ್​ಗೆ ಆಹ್ವಾನಿಸಿದಾಗ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತ, “ನಳಿನ್​ ಕುಮಾರ್​ಗೆ ಟಿಕೆಟ್ ಕೊಟ್ಟರೆ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ವಿಷ ತೆಗೆದುಕೊಳ್ಳುತ್ತೇನೆ. ಇಲ್ಲದಿದ್ದರೆ ಸಂಘ ನಿಕೇತನ ಮುಂದೆ ವಿಷ ತೆಗೆದುಕೊಳ್ಳುತ್ತೇನೆ” ಅಂತ ಹೇಳಿದ್ದಾರೆ. ಕಾರ್ಯಕರ್ತರಿಬ್ಬರು ತುಳುವಿನಲ್ಲಿ ಮಾತನಾಡಿದ್ದು, ಆಡಿಯೋ ಸಂಭಾಷಣೆಯ ತುಣುಕು ಈಗ ವೈರಲ್ ಆಗಿದೆ.

ಯಕ್ಷಗಾನದಲ್ಲೂ ‘ಎಲ್ಲಿದ್ದೀಯಪ್ಪಾ’ ಹಾಸ್ಯ ತುಣುಕು..!

0

ಮಂಗಳೂರು: ಈಗಾಗಲೇ ಟ್ರೋಲ್​ಗೊಳಗಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಯಕ್ಷಲೋಕದಲ್ಲೂ ಹಾಸ್ಯದ ಹೊನಲು ಹರಿಸಿದೆ. ನಿಖಿಲ್ ಎಲ್ಲಿದ್ದೀಯಪ್ಪಾ, ಜನರ ಮಧ್ಯೆ ಆಗ್ಲೇ ಸೇರಿಬಿಟ್ಟಿದ್ದೀಯಾ ಅನ್ನೋ ಈ ಸಂಭಾಷಣೆ ಈಗ ಎಲ್ಲರ ಅಚ್ಚುಮೆಚ್ಚಿನ ಸ್ಟೇಟಸ್ ಟ್ರೋಲ್ ಆಗಿದೆ.

ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲೂ ಈ ಹಾಸ್ಯ ತುಣುಕು ಇಣುಕು ಹಾಕಿದೆ. ತಂದೆ ಮಗನ ಸಂಭಾಷಣೆ ಯಾವ ರೀತಿ ನಗು ಬುಗ್ಗೆ ಹರಿಸಿತು ಅನ್ನೋದಕ್ಕೆ ಈಗ ಕರಾವಳಿಯಾದ್ಯಂತ ಹರಿದಾಡುತ್ತಿರುವ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರಸಂಗದ ತುಣುಕು ಸಾಕ್ಷಿಯಾಗಿದೆ. ಅದರಲ್ಲೂ ಈ ಹಾಸ್ಯದ ತುಣುಕು ಪ್ರಸಿದ್ಧ ಹಾಸ್ಯ ಕಲಾವಿದರ ಬಾಯಲ್ಲಿ ವಿಭಿನ್ನವಾಗಿ ಯಕ್ಷ ಪ್ರಿಯರನ್ನು ತಲುಪಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೊಳಗಾಗಿ ಹಾಸ್ಯಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಈ ಋತುವಿನ ಜನಪ್ರಿಯ ಯಕ್ಷಗಾನ ಪ್ರಸಂಗ ‘ಬೊಳ್ಳಿದ ಬೊಲ್ಗೊಡೆ’ (ಬೆಳ್ಳಿಯ ಛತ್ರಿ)ಯಲ್ಲಿ ಈ ಹಾಸ್ಯದ ತುಣುಕು ಕಾಣಿಸಿಕೊಂಡಿದೆ. ಖ್ಯಾತ ಹಾಸ್ಯ ಕಲಾವಿದರಾದ ಪ್ರಸನ್ನ ಶೆಟ್ಟಿ ಬೈಲೂರು, ಕಡಬ ಶ್ರೀನಿವಾಸ ರೈ ಯಕ್ಷ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೆ, ಸಭಿಕರ ಮಧ್ಯೆಯಿಂದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೊಡಪಡವು ನಟಿಸಿದ್ದಾರೆ. ಯಕ್ಷಗಾನದ ಚೌಕಟ್ಟು ಮೀರದಂತೆ ಹಾಗೂ ಯಾರಿಗೂ ನೋವಾಗಬಾರದೆನ್ನುವ ದೃಷ್ಟಿಕೋನದಿಂದ ಯಥಾವತ್ತಾಗಿ ಸಂಭಾಷಣೆ ಗೊತ್ತು ಮಾಡದೇ, ‘ವಾಮನ ಎಲ್ಲಿದ್ದೀಯಾ, ನೀನು ಬಿರುದು ಸಿಕ್ಕಿದ ಕೂಡಲೇ ಜನರ ಮಧ್ಯೆ ಹೋಗಿ ಕೂತಿದ್ದೀಯ ಮಗಾ’ ಎನ್ನುವ ಕಾಲ್ಪನಿಕ ಸಂಭಾಷಣೆ ನಡೆಯುತ್ತೆ. ಇದು ಹೆಚ್​​ಡಿಕೆ- ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆಯಂತೆಯೇ ಭಾಸವಾಗುತ್ತಿದ್ದು, ಯಕ್ಷಾಭಿಮಾನಿಗಳ ಅಚ್ಚುಮೆಚ್ಚಿನ ಟ್ರೋಲ್ ತುಣುಕಾಗಿ ಹರಿದಾಡತೊಡಗಿದೆ.‌ ಅಂದಹಾಗೆ ಈ ಯಕ್ಷಗಾನ ಪ್ರಸಂಗವು ಉಡುಪಿಯ ಪಳ್ಳಿಯಲ್ಲಿ ಅತಿಥಿ ಕಲಾವಿದರ ಸಹಯೋಗದೊಂದಿಗೆ ಬಪ್ಪನಾಡು ಮೇಳದ ಕಲಾವಿದರು ನಿನ್ನೆಯಷ್ಟೇ ಪ್ರದರ್ಶಿಸಿದ್ದರು.‌

ನೀವು ಹೆಣ್ಮಕ್ಕಳಿಗೆ ಕೊಡೋ ಗೌರವ ಇದೇನಾ..? ರೇವಣ್ಣ ವಿರುದ್ಧ ಶೋಭಾ ವಾಗ್ದಾಳಿ

0

ಮಂಗಳೂರು: ಹೆಣ್ಮಕ್ಕಳಿಗೆ ನೀವು ಕೊಡುವ ಗೌರವ ಇದೇನಾ ಅಂತ ಸಂಸದೆ ಶೋಭಾ ಕರಂದ್ಲಾಜೆ ಲೋಕೋಪಯೋಗಿ ಸಚಿವ ಹೆಚ್.​ ಡಿ ರೇವಣ್ಣ ಅವರ ವಿರುದ್ಧ ಮಂಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರೋ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅವರು ನೀಡಿದ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಶೋಭಾ ಅವರು, “ಅಂಬರೀಶ್ ಸತ್ತಾಗ ನೀವು ಹಾಕಿದ್ದು ಮೊಸಳೆ ಕಣ್ಣೀರಾ? ಗಂಡ ಸತ್ತವರು ತಲೆ ಬೋಳಿಸಿಕೊಂಡು ಮನೆಯಲ್ಲಿರಬೇಕಾ? ನೀವು ಯಾವ ಶತಮಾನದಲ್ಲಿ ಇದ್ದೀರಾ? ವಿಧವೆಯೊಬ್ಬರ ಬಗ್ಗೆ ಈ ರೀತಿ ಮಾತನಾಡಿರೋದು ದುಃಖ ತಂದಿದೆ” ಅಂತ ಹೇಳಿದ್ದಾರೆ.

ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, “ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಹಕ್ಕಿದೆ. ಸುಮಲತಾ ಅಂಬರೀಶ್ ಕನ್ನಡದ ಸೊಸೆ” ಅಂತ ಹೇಳಿದ್ದಾರೆ.

ಸುಮಲತಾ ಅವರನ್ನು ಬೆಂಬಲಿಸೋ ತೀರ್ಮಾನ ಮಾಡಿಲ್ಲ: ಯಡಿಯೂರಪ್ಪ

0

ಮಂಗಳೂರು: ಸುಮಲತಾ ಅವರಿಗೆ ಬೆಂಬಲ ನೀಡುವ ತೀರ್ಮಾನ ಮಾಡಿಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪ ಅವರು ಮಂಗಳೂರಿನಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪ ಅವರು, “ಸುಮಲತಾ ಅವರ ವಿರುದ್ಧ ರೇವಣ್ಣ ಅವರು ನೀಡಿರೋ ಹೇಳಿಕೆ ಸರಿಯಲ್ಲ. ಸುಮಲತಾ ಅವರಿಗೆ ಬೆಂಬಲ ನೀಡೋ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ” ಅಂತ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಕುರಿತು ಪ್ರತಿಕ್ರಿಯಿಸಿ, “ಮಾರ್ಚ್​​​​ 15ರೊಳಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಅಮಿತ್ ಶಾ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಮುಂದಿನ ವಾರ ಮತ್ತೆ ಭೇಟಿಯಾಗಿ ಚರ್ಚೆ ಮಾಡಲಿದ್ದೇವೆ” ಅಂತ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಮಂಗಳೂರಿಗೆ

0

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳೂರಿಗೆ ಆಗಮಿಸಲಿದ್ದಾರೆ. ನಗರಕ್ಕೆ ಆಗಮಿಸಲಿರುವ ಅವರು ಪ್ರಮುಖ ಎರಡು ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಮಾತಾಡಲಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ದೆಹಲಿಯಿಂದ ಆಗಮಿಸಲಿರುವ ಅವರು ಮಂಗಳೂರು ವಿಮಾನ ನಿಲ್ದಾಣ ತಲುಪಿ ಬಳಿಕ ರಸ್ತೆ ಮಾರ್ಗವಾಗಿ‌ ನಗರದ ಖಾಸಗಿ ಹೊಟೇಲ್ ತಲುಪಲಿದ್ದಾರೆ. ನಂತರ ಕೇಂದ್ರ ಗೃಹ ಸಚಿವರು ಪತ್ರಕರ್ತರನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಬಳಿಕ ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮದ್ವೇಲಿ ‘ಮನ್​ ಕೀ ಬಾತೇ’ ಮಂತ್ರ ಘೋಷ..!

0

ಮಂಗಳೂರು: ವಿಶೇಷವಾಗಿ ವಿವಾಹವಾಗುವುದು ಈಗ ಟ್ರೆಂಡ್​ ಆಗಿದೆ. ಇಂತಹ ಟ್ರೆಂಡೀ ಮ್ಯಾರೇಜ್​ಗಳ ಲಿಸ್ಟ್​ಗೆ ಇನ್ನೊಂದು ಯುವಜೋಡಿಯ ಹೆಸರೂ ಸೇರಿದೆ. ಪ್ರಧಾನಿ ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್ ಕೀ ಬಾತ್ ಕೇಳುತ್ತಲೇ ಯುವ  ಜೋಡಿ ಸಪ್ತಪದಿ ತುಳಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಯರಾಮ-ದಮಯಂತಿ ಮೋದಿ ಮನಸಿನ ಮಾತುಗಳನ್ನು ಕೇಳುತ್ತಲೇ ಸತಿಪತಿಗಳಾಗಿದ್ದಾರೆ. ಸುಳ್ಯ ನಗರದ ಮಹಾವಿಷ್ಣು ದೇವಾಲಯದಲ್ಲಿ ವಿವಾಹ ನಡೆದಿದ್ದು, ಪ್ರಧಾನಿ ಮೋದಿಯವರು ಯೋಧರ ಬಗ್ಗೆ ನೆನೆಯುತ್ತಿರುವಾಗ ಯುವಕ ತಾಳಿ ಕಟ್ಟಿದ್ದಾರೆ. ಮನ್​ ಕೀ ಬಾತ್​ ಕಾರ್ಯಕ್ರಮವನ್ನು ಎಲ್ಲರೂ ಕೇಳಬೇಕೆಂದು ರೇಡಿಯೋ ಮತ್ತು ಸ್ಪೀಕರ್​ ವ್ಯವಸ್ಥೆಯನ್ನೂ ಮುಂಚಿತವಾಗಿಯೇ ಮಾಡಲಾಗಿತ್ತು. ಪ್ರಧಾನಿಯವರ ಮನ್ ಕೀ ಬಾತ್ ಆಲಿಸುತ್ತಲೇ ಯುವ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿರುವುದು ವಿಶೇಷ.

ಯುವಕ ಹಾಗೂ ಯುವತಿ ಇಬ್ಬರೂ ಪ್ರಧಾನಿ ಮೋದಿ ಅವರ ‌ ಅಭಿಮಾನಿಗಳಾಗಿದ್ದು ವಿಶೇಷವಾಗಿ ವಿವಾಹವಾಗಲು ನಿರ್ಧರಿಸಿದ್ರು. ಈಗ ಜಯರಾಮ-ದಮಯಂತಿ ವಿವಾಹದ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿದೆ.

ಬಾಹುಬಲಿಗೆ 1008 ಕಲಶಗಳ ಅಭಿಷೇಕ

0

ಮಂಗಳೂರು : ಧರ್ಮಸ್ಥಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಭಗವಾನ್​ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ನಿನ್ನೆ ಅದ್ಧೂರಿ ಚಾಲನೆ ದೊರೆತಿದೆ. ಇಂದು ಮತ್ತು ನಾಳೆಯೂ ಸಹ ಮಹಾಮಜ್ಜನ ನಡೆಯಲಿದ್ದು, ಭಗವಾನ್​ ಬಾಹುಬಲಿಯ ಅಭಿಷೇಕ ಕಣ್ತಂಬಿಕೊಳ್ಳಲು ಸಾವಿರಾರು ಭಕ್ತರು ಧರ್ಮಸ್ಥಳದತ್ತ ಆಗಮಿಸುತ್ತಿದ್ದಾರೆ.
2ನೇ ದಿನವಾದ ಇಂದು ಭಗವಾನ್​​ ಬಾಹುಬಲಿ ಮೂರ್ತಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ 1008 ಕಲಶಗಳ ಅಭಿಷೇಕ ನಡೆಯಲಿದೆ. ಹೆಗ್ಗಡೆ ಕುಟುಂಬಸ್ಥರಿಂದ ಕ್ಷೀರ, ಅಕ್ಕಿಹಿಟ್ಟು, ಚಂದನ, ಗಂಧ, ಸೀಯಾಳ, ಕಷಾಯ ಸೇರಿ ಅನೇಕ ಅಭಿಷೇಕಗಳು ನಡೆಯಲಿವೆ.

ರಾಂಗ್​ಸೈಡ್​​ನಲ್ಲಿ ಕಾರು ಓಡಿಸಿ ನಿವೃತ್ತ ಎಸ್​ಪಿ ರಂಪಾಟ!

0

ಮಂಗಳೂರು : ನಿವೃತ್ತ ಎಸ್​ಪಿ​ಯೊಬ್ಬರು ರಾಂಗ್​ ಸೈಡ್​ನಲ್ಲಿ ಕಾರು ಓಡಿಸಿ ರಂಪಾಟ ನಡೆಸಿರೋ ಘಟನೆ ಮಂಗಳೂರಿನ ಬಿಜೈನಲ್ಲಿ ನಡೆದಿದೆ.
ನಿವೃತ್ತ ಎಸ್​ಪಿ ಮಿತ್ರ ಹೆರಾಜೆ ಆರೋಪಿ. ಕುಡಿದ ಮತ್ತಿನಲ್ಲಿ ಹೆರಾಜೆ ರಂಪಾಟ ಮಾಡಿದ್ದಾರೆ ಎನ್ನಲಾಗಿದೆ. ಬೇಕಾಬಿಟ್ಟಿ ರಾಂಗ್​ಸೈಡ್​ನಲ್ಲಿ ಕಾರು ಚಲಾಯಿಸಿದ್ದರಿಂದ ನಾಲ್ಕೈದು ವಾಹನಗಳ ನಡುವೆ ಸರಣಿ ಅಪಘಾತವೂ ಸಂಭವಿಸಿದ್ದು, ಸಿಟ್ಟಿಗೆದ್ದ ಜನ ಹೆರಾಜೆ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್​​ ನಡೆಸಿದ್ದಾರೆ. ಕದ್ರಿ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹರಾಜೆ ಅವರನ್ನು ಕಾರು ಸಮೇತ ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಅಂತ ತಿಳಿದುಬಂದಿದೆ.

ಭಾರತ್​ ಬಂದ್​ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

0

ಭಾರತ್​ ಬಂದ್​ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತಿದೆ.

ಹಾಸನ

ವಿವಿಧ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ‌ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ‌ ಬಂದ್​​ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರಮೇಣ ಬಂದ್ ಆಗುವ ಸಾಧ್ಯತೆ ಇದ್ದು, ಸಾರಿಗೆ ಬಸ್ ಸಂಚಾರ ವಿರಳವಾಗಿದೆ. ಜಿಲ್ಲಾ ವ್ಯಾಪ್ತಿಯ ಬಸ್​ಗಳು ಸಂಚರಿಸುತ್ತಿದ್ದು, ಎಂದಿನಂತೆ ಆಟೋಗಳು ಓಡಾಡುತ್ತಿವೆ. ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. 10 ಗಂಟೆ ನಂತರ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ. ಭಾರತ್ ಬಂದ್ ಹಿನ್ನೆಲೆ ಹಾಸನದಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬಸ್ ವ್ಯವಸ್ಥೆ ಇಲ್ಲದೆ ಶಾಲಾ ಮಕ್ಕಳು ಪರದಾಡಿದ್ದಾರೆ.

ಮೈಸೂರು

ಭಾರತ್ ಬಂದ್​ಗೆ ಮೈಸೂರಿನ ಜನ ಬೆಂಬಲ ವ್ಯಕ್ತಪಡಿಸಿಲ್ಲ. ಮೈಸೂರಿನಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ನಗರದ ಬಸ್ ನಿಲ್ದಾಣದಿಂದ ಸೇವೆ ಆರಂಭವಾಗಿದೆ. ಆಟೋಗಳು ಸಂಚರಿಸುತ್ತಿದ್ದು ಕಾರ್ಮಿಕ ಸಂಘಟನೆಗಳು ಕರೆನೀಡಿರುವ ಬಂದ್​​ ನಗರದ ಜನರನ್ನು ಬಾಧಿಸಿಲ್ಲ.

ತುಮಕೂರು

ತುಮಕೂರಿನಲ್ಲಿ ಭಾರತ್ ಬಂದ್​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್​ ದಿನವಾಗಿದ್ದೂ ಕೆಎಸ್​ಆರ್​ಟಿಸಿ ಬಸ್​ಗಳು ಎಂದಿನಂತೆ ಸೇವೆ ಆರಂಭಿಸಿವೆ. ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದು ಜನಜೀವನಲ್ಲಿ ಬಂದ್​ ಎಫೆಕ್ಟ್​ ಅಷ್ಟಾಗಿ ಕಾಣಿಸುತ್ತಿಲ್ಲ. ಬಂದ್ ಹಿನ್ನೆಲೆ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಲಾಗಿದೆ. ಸಿಐಟಿಯುನಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ತುಮಕೂರು ಪ್ರಮುಖ ರಸ್ತೆಯಲ್ಲಿ ಬೈಕ್​ ರ‍್ಯಾಲಿ ನಡೆಸಿ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತುಮಕೂರು ಟೌನ್​ಹಾಲ್​ನಲ್ಲಿ ಎಐಟಿಯುಸಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಟೌನ್​ಹಾಲ್ ಸರ್ಕಲ್​ನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಆನೇಕಲ್

ಆನೇಕಲ್​ನಲ್ಲಿ ಭಾರತ್​ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಕೆಎಸ್​ಆರ್​ಟಿಸಿ ಬಸ್​ ರಸ್ತೆಗಿಳಿದಿಲ್ಲ. ನಿನ್ನೆ ರಾತ್ರಿ ಡಿಪೋಗೆ ಹೋಗಿದ್ದ ಕೆ‌ಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ಬಂದ್​ ಹಿನ್ನೆಲೆಯಲ್ಲಿ ಡಿಪೋದಿಂದ ಹೊರಗೆ ಬಂದಿಲ್ಲ. ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಐವತ್ತಕ್ಕೂ ಹೆಚ್ಚು ಬಿಎಂಟಿಸಿ ಬಸ್​ಗಳು ಡಿಪೋಗೆ ವಾಪಸ್ ಆಗಿವೆ. ಬಸ್​ಗಳಿಲ್ಲದೆ ಆನೇಕಲ್ ಬಸ್ ನಿಲ್ದಾಣ ಸದ್ಯ ಖಾಲಿಯಾಗಿದ್ದು, ಅಂಗಡಿ ಮುಂಗಟ್ಟು ತೆರೆಯದೆ ಜನರು ಬಂದ್​ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಕಲುಬುರ್ಗಿ

ಭಾರತ್ ಬಂದ್‌ ಹಿನ್ನೆಲೆ AIUTUC ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಸ್ ನಿಲ್ದಾಣದ ಎದರುಗಡೆ ಸೇರಿದ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಮುಷ್ಕರ ಹಿನ್ನಲೆ NEKSRTC ಬಸ್ ಸಂಚಾರ ಸ್ಥಗಿತಗೊಳಿಸಿದೆ. ಬಸ್​ಪ್ರಯಾಣಿಕರಿಗೆ ಬಂದ್​ ಬಿಸಿ ತಟ್ಟಿದ್ದರೂ ಆಟೋಗಳು, ಖಾಸಗಿ ವಾಹನಗಳು ಎಂದಿನಂತೆ ರಸ್ತೆಗಿಳಿದಿವೆ. ಅಂಗಡಿ ಮಾಲೀಕರೂ ಎಂದಿನಂತೆ ತಮ್ಮ ಅಂಗಡಿಗಳನ್ನು ತೆರೆದಿದ್ದಾರೆ. ಬಂದ್ ಹಿನ್ನೆಲೆ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಚಿಕ್ಕಮಗಳೂರು

ವಿವಿಧ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ‌ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ‌ ಬಂದ್​ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್ ಸಂಚಾರ ವಿರಳವಾಗಿದ್ದು, ಜಿಲ್ಲಾ ವ್ಯಾಪ್ತಿಯ ಬಸ್​ಗಳು ಎಂದಿನಂತೆ ಓಡಾಟ ನಡೆಸುತ್ತಿವೆ. ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದು, ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. 11 ಗಂಟೆ ನಂತರ ಕಾರ್ಮಿಕ ಸಂಘಟನೆಗಳು ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನೆ ನಡೆಸಲಿದ್ದಾರೆ.

ಕೊಪ್ಪಳ

ಕೊಪ್ಪಳ ಜಿಲ್ಲೆಯಾದ್ಯಂತ ಬಂದ್​​​ಗೆ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸ್ತಬ್ಧವಾಗಿದ್ದು, ಯಾವುದೇ ಬಸ್​ಗಳು ರಸ್ತೆಗಿಳಿದಿಲ್ಲ. ಅಂಗಡಿ, ಮುಂಗಟ್ಟು ಮಾಲೀಕರು ಅಂಗಡಿ ತೆರೆಯದೆ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ಬಸ್ ಸಂಚಾರವಿರದ ಕಾರಣ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಬಂದ್​​ಗೆ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, 10 ಗಂಟೆಯ ನಂತರ ವಿವಿಧ ಕಾರ್ಮಿಕ ಸಂಘಟನೆಯಿಂದ ಮೆರವಣಿಗೆ ನಡೆಸಲಿವೆ. ಗಂಗಾವತಿ ನಗರದಲ್ಲಿ ಎಸ್‌.ಎಫ್.ಐ.ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಗಂಗಾವತಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋ‌ಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ

ಎರಡು ದಿನಗಳ ಭಾರತ್ ಬಂದ್​ಗೆ ಚಿಕ್ಕಬಳ್ಳಾಪುರದಲ್ಲಿ ಬೆಂಬಲ ವ್ಯಕ್ತವಾಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ಸಿಪಿಐಎಂ ಪಕ್ಷದ ವತಿಯಿಂದ ಬೈಕ್ ರ‍್ಯಾಲಿ ನಡೆದಿದ್ದು, ಬಾಗೇಪಲ್ಲಿ ನಗರದ ಟಿಬಿ ಕ್ರಾಸ್​​ನಲ್ಲಿ ರ‍್ಯಾಲಿಗೆ ಚಾಲನೆ ದೊರೆತಿದೆ. ಮೋದಿ‌ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದೆ. ರೈತ ಸಂಘ ಹಾಗೂ ಸಿಪಿಐಎಂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಹನಗಳನ್ನು ತಡೆದು ಬಂದ್​ಗೆ ಸಹಕರಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬಸ್ ನಿಲ್ದಾಣದಿಂದ ಬಸ್ ಡಿಪೋಗೆ ತೆಗೆದುಕೊಂಡು ಹೋಗುವಂತೆ ಸಂಚಾರಿ ನಿಯಂತ್ರಕ ಆವಲಪ್ಪ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ವಾರ್ನಿಂಗ್ ಮಾಡಿದ್ದಾರೆ.

ಮಂಡ್ಯ

ಭಾರತ್ ಬಂದ್ ಹಿನ್ನೆಲೆ ಬಂದ್​ಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ವಾಹನಗಳು ಓಡಾಡುತ್ತಿವೆ. KSRTC ಎಂದಿನಂತೆ ಸೇವೆ ಆರಂಭಿಸಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಖಾಸಗಿ ಬಸ್, ಆಟೋಗಳು ಎಂದಿನಂತೆ ರಸ್ತೆಗಿಳಿದಿವೆ. ಭಾರತ್ ಬಂದ್ ಹಿನ್ನೆಲೆ ಸಿಐಟಿಯುನಿಂದ ಪ್ರತಿಭಟನೆ ಆರಂಭವಾಗಿದೆ. ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಆರಂಭಿಸಿದ್ದು, ಮಂಡ್ಯದ ಮಹಾವೀರ ಸರ್ಕಲ್ ಬಳಿ ರಸ್ತೆ ತಡೆ ಆರಂಭವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಉಡುಪಿ

ಕಾರ್ಮಿಕ ಸಂಘಟನೆಗಳು ಬಸ್ ಸಂಚಾರ ಬಂದ್ ಮಾಡುವಂತೆ ಬಸ್ ಚಾಲಕರಿಗೆ ಮನವಿ ಮಾಡಿದ್ದಾರೆ. ಸಂಚಾರ ಸ್ಥಗಿತಗೊಳಿಸುವ ಕುರಿತು ಬಸ್ ಚಾಲಕರು ಮತ್ತು ಕಾರ್ಮಿಕ ಸಂಘಟನೆ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಟೋ ರಿಕ್ಷಾ ಬಂದ್‌ಮಾಡುವಂತೆ ಒತ್ತಾಯ ಮಾಡಿರುವ ಬಸ್​ ಚಾಲಕರು, ಅಟೋ ಬಂದ್ ಆಗದಿದ್ದರೆ, ಬಸ್ ಬಿಡುತ್ತೇವೆ ಎಂದಿದ್ದಾರೆ. ಅಂಚೆ ಕಚೇರಿ ಸಿಬ್ಬಂದಿ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಡೋಲು ಬಾರಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಾವೇರಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್​ಗೆ ಹಾವೇರಿಯಲ್ಲಿ‌ ಬೆಂಬಲ ದೊರೆತಿಲ್ಲ. ಕೆಎಸ್ಆರ್​ಟಿಸಿ ಬಸ್ಸುಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ. ಬಸ್ ನಿಲ್ದಾಣದಲ್ಲಿನ ಅಂಗಡಿ, ಮುಂಗಟ್ಟು ತೆರೆದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೂ ರಜೆ ನೀಡಿಲ್ಲ. ಕಾರ್ಮಿಕ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ಮಾಡಲಿದ್ದು, ಅದನ್ನು ಹೊರತುಪಡಿಸಿ ಹಾವೇರಿಯಲ್ಲಿ ಎಂದಿನ ಸಹಜ ಸ್ಥಿತಿ ಇದೆ. ೧೦ ಗಂಟೆ ನಂತರ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ಹುಬ್ಬಳ್ಳಿ

ಭಾರತ್ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಬಸ್​ಗಳು ಸಂಚಾರ ಸ್ಥಗಿತಗೊಳಿಸಿದ್ದು ವಾಯುವ್ಯ ಸಾರಿಗೆಯ 4,800 ಬಸ್​ಗಳು ಡಿಪೋದಲ್ಲಿ ನಿಂತಿವೆ. ಬಸ್ ಡಿಪೋಗಳಿಗೆ ಪೋಲಿಸ್ ಬಂದೊಬಸ್ತ್ ಒದಗಿಸಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಶಿವಮೊಗ್ಗ

ಭಾರತ್ ಬಂದ್​​ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ಎಂದಿನಂತೆ ಕಾರ್ಯಚಟುವಟಿಕೆಗಳು ಆರಂಭವಾಗಿದ್ದು, ಸಂಚಾರ ಎಂದಿನಂತಿದೆ. ಆಟೋ, ಖಾಸಗಿ ಬಸ್, ಲಾರಿಗಳೂ ಎಂದಿನಂತೆ ರಸ್ತೆಗಿಳಿದಿವೆ. ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ತೆರೆದಿದ್ದು, ಎಂದಿನಂತೆಯೇ ಹೂವಿನ ಅಂಗಡಿ, ತಿಂಡಿ ಗಾಡಿಗಳು ವ್ಯಾಪಾರ ನಡೆಸುತ್ತಿವೆ. ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ ಎಲ್ಲಾ ಖಾಸಗಿ ಬಸ್​ಗಳು ಎಂದಿನಂತೆ ಓಡಾಡುತ್ತಿವೆ. ಬಂದ್​​ಗೆ ಕೆಎಸ್​​ಆರ್​ಟಿಸಿ ಬೆಂಬಲ ವ್ಯಕ್ತಪಡಿಸಿದ್ದು, ಬಸ್​ಗಳು ಭದ್ರಾವತಿ ಡಿಪೋಗೆ ತೆರಳುತ್ತಿವೆ. ಕೆ.ಎಸ್.ಆರ್.ಟಿ.ಸಿ. ನೌಕರರು ಬಸ್ ಡಿಪೋ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಚಿಕ್ಕೋಡಿ

ರಾಯಬಾಗ ಬಸ್ ನಿಲ್ದಾನದಲ್ಲಿ ಬಸ್ ಚಾಲಕರು ಹಾಗೂ ಬಸ್ ನಿಯಂತ್ರಣಾಧಿಕಾರಿಗಳ ಮದ್ಯೆ ಮಾತಿನ ಚಕಮಕಿ ನಡೆದಿದೆ. ಸಾರಿಗೆ ಸಂಚಾರ ಆರಂಭಿಸುವಂತೆ ಅಧಿಕಾರಿಗಳು ಚಾಲಕರಿಗೆ ಒತ್ತಾಯಿಸಿದ್ದು, ಬಂದ್​ ಹಿನ್ನೆಲೆಯಲ್ಲಿ ಬಸ್​ ಓಡಿಸಲು ಚಾಲಕರು ನಿರಾಕರಿಸಿದ್ದಾರೆ. ಬಂದ್​ ನಡೆಯುತ್ತಿರುವುದರಿಂದ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ತಾವೇ ಜವಾಬ್ದಾರಿ ಎಂದು ಅಧಿಕಾರಿಗಳು ಬರೆದುಕೊಟ್ಟರೆ ಬಸ್ ಓಡಿಸುವುದಾಗಿ ಚಾಲಕರು ಪಟ್ಟು ಹಿಡಿದಿದ್ದಾರೆ. ಅಥಣಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದು ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿರುವ ಸಂಘಟನೆಗಳು, ಬೈಕ್ ರ‍್ಯಾಲಿ ಮಾಡಿ ಘೋಷಣೆ ಕೂಗಿದ್ದಾರೆ. ಸಂಚಾರ, ಅಹಾರ, ತರಕಾರಿ ಹಾಗೂ ವಿವಿಧ ಸಾಮಗ್ರಿಯ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಗದಗ

ಭಾರತ್ ಬಂದ್ ಹಿನ್ನೆಲೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬಸ್ ನಿಲ್ದಾಣದ ಸ್ವಚ್ಛತೆಗೆ ಮುಂದಾಗಿದ್ದಾರೆ. ಇಂದು ಕಾರ್ಮಿಕರು ಇಲ್ಲದ ಕಾರಣ ಸ್ವತಃ ಸಿಬ್ಬಂದಿ ಸ್ವಚ್ಚತೆಗೆ ಮುಂದಾಗಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಸಿಬ್ಬಂದಿ ಸ್ವತಃ ಇಡೀ ಬಸ್ ನಿಲ್ದಾಣಕ್ಕೆ ನೀರು ಹೊಡೆದು ಕಸ ಗುಡಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಗಿಗಳು ಪರದಾಡುವಂತಾಗಿದೆ. ಬಂದ್​ ಹಿನ್ನೆಲೆಯಲ್ಲಿ ಆಟೋ ಚಾಲಕರು ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ. ಆಟೋ ಚಾಲಕರು 400 ರಿಂದ 800 ರೂಪಾಯಿ ಬೇಡಿಕೆ ಇಟ್ಟಿರುವುದರಿಂದ ಕಲಬುರ್ಗಿ ಜಿಲ್ಲೆಯಿಂದ ಪಾರ್ಶ್ವವಾಯು ಚಿಕಿತ್ಸೆಗೆ ಆಗಮಿಸಿದ ತಾಯಿ, ಮಗ ಪರದಾಡುವಂತಾಯಿತು.

ಚಾಮರಾಜನಗರ

ದೇಶಾದ್ಯಾಂತ ಕಾರ್ಮಿಕ ಸ೦ಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಚಾಮರಾಜನಗರ ಜಿಲ್ಲೆ ಬೆಂಬಲವಿಲ್ಲದ ಕಾರಣ ಎಂದಿನಂತೆ ಸರ್ಕಾರಿ ಹಾಗೂ ಖಾಸಾಗಿ ಬಸ್​ಗಳು ಸಂಚಾರ ಆರಂಭಿಸಿವೆ. ಅ೦ಗಡಿ ಮುಂಗಟ್ಟುಗಳು ಹಾಗೂ ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ಕೆಲಸಕಾರ್ಯಗಳು ಬೆಳಗ್ಗೆಯಿಂದಲೇ ಆರಂಭವಾಗಿದೆ. ಜನಸಾಮಾನ್ಯರಿಗೆ ಪ್ರತಿ ದಿನದ ವ್ಯವಹಾರಕ್ಕೆಯಾವುದೇ ತೊಂದರೆ ಆಗದೆ ಎಂದಿನಂತೆ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿದೆ. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಬಾಗಲಕೋಟೆ

ಭಾರತ್​ ಬಂದ್​ಗೆ ಬಾಗಲಕೋಟೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಬಂದ್‌ ಆಗಿದೆ. ಬಸ್ ಇಲ್ಲದೆ ಸಾರ್ವಜನಿಕರ ಪರದಾಡುವಂತಾಗಿದ್ದು, ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕೆ ಶಾಂತರಾಮ ಇಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಬಂದ್​ಗೆ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಕೋ ಎನ್ನುತ್ತಿರೋ ಬಸ್ ನಿಲ್ದಾಣದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಖಾಲಿಯಾಗಿದೆ.

ರಾಯಚೂರು

ರಾಯಚೂರು ಜಿಲ್ಲೆಯಾದ್ಯಂತ ಬಂದ್​ಗೆ ಬೆಂಬಲ ವ್ಯಕ್ತವಾಗಿದ್ದು, ಕಾರ್ಮಿಕ ಸಂಘಟನೆಗಳಿಂದ ಬೈಕ್ ರ‍್ಯಾಲಿ ನಡೆದಿದೆ. ಮಧ್ಯಾಹ್ನ ನಂತರದಲ್ಲಿ ಬಂದ್ ಎಫೆಕ್ಟ್ ತ್ರೀವ್ರಗೊಳ್ಳಲಿದೆ. ಬೆಳಗಿನ ಜಾವ ಹಾಲು, ಅಟೋ ಹಾಗು ಟೀ ಅಂಗಡಿಗಳು ಆರಂಭವಾಗಿವೆ. ಬಸ್ ಓಡಾಟವು ಸಹ ಸ್ಥಗಿತಗೊಳ್ಳಲಿದೆ. ಮದ್ಯಾಹ್ನ ವೇಳೆ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ‌ರಜೆ ಘೋಷಿಸಿದೆ. ಕೆಲವು ಕಡೆ ಯಥಾವತ್ತಾಗಿ ಅಂಗಡಿ ಮಳಿಗೆಗಳು ತೆರೆದುಕೊಂಡಿವೆ. ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಆಟೋ ಚಾಲಕರಿಗೆ, ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಿದೆ.

ದಾವಣಗೆರೆ

ದಾವಣಗೆರೆಯಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಸರ್ಕಾರಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದಾರೆ. ಎಐಸಿಯುಸಿಟಿ ಸಂಘಟನೆ ಕಾರ್ಯಕರ್ತರು ಬಂದ್ ಯಶಸ್ವಿಗೊಳಿಸುವಂತೆ ಘೋಷಣೆ ಕೂಗಿದ್ದಾರೆ.

ಬೀದರ್

ಗಡಿ ಜಿಲ್ಲೆ ಬೀದರ್​ನಲ್ಲಿ ಬಂದ್​ಗೆ ‌ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರಿನಲ್ಲಿ ಎಂದಿನಂತೆ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಿದ್ದು, ಆಟೋ, ಕ್ಯಾಬ್​ಗಳು ಓಡಾಡುತ್ತಿವೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಕೊಡಗು

ಕಾರ್ಮಿಕ ಸಂಘಟನೆಗಳ ಭಾರತ್ ಬಂದ್‌ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಬಸ್ ಹೊರತುಪಡಿಸಿ ಉಳಿದಂತೆ ಎಲ್ಲವೂ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸೋ ಸರ್ಕಾರಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದು, ಆಟೋ, ಟ್ಯಾಕ್ಸಿ, ಹಾಗೂ ಖಾಸಗಿ ಬಸ್ಸುಗಳು ಓಡಾಡುತ್ತಿವೆ. ಅಂಗಡಿ ಮಳಿಗೆಗಳು ತಡವಾಗಿ ವ್ಯಾಪಾರ ಆರಂಭಿಸಿವೆ. ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ.

ಬಳ್ಳಾರಿ

ಎರಡು ದಿನ ಭಾರತ್ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪ್ರತಿಭಟನೆ ತೀವ್ರವಾಗಿದೆ. ಬಸ್ ಮತ್ತು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರು ಚಾಲಕರು ರಸ್ತೆಗಿಳಿಯದಂತೆ ತಾಕೀತು ಮಾಡಿದ್ದಾರೆ.

Popular posts