ಬೆಳಗಾವಿ : ಲೋಕಸಭಾ ಚುನಾವಣೆಗೆ ಮುನ್ನ ಬೆಳಗಾವಿಯಲ್ಲಿ ರಕ್ತಪಾತ ನಡೆದಿದೆ. ಮಾಜಿ ಶಾಸಕರೊಬ್ಬರ ಪುತ್ರನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಬೆಳಗಾವಿ ಗ್ರಾಮಾಂತರ ಶಾಸಕ ಪರಶುರಾಮ ಬಾವು ಅವರ ಪುತ್ರ ಅರುಣ್ ನಂದಿಹಳ್ಳಿ (50) ಕೊಲೆಯಾದ ದುರ್ದೈವಿ. ಬೆಳಗಾವಿ ತಾಲೂಕಿನ ಧಾಮಣೆ ಬಳಿ ಈ ದುರ್ಘಟನೆ ನಡೆದಿದೆ. ಅವರು ತನ್ನ ಪತ್ನಿಯನ್ನು ಧಾಮನೆ ಗ್ರಾಮಕ್ಕೆ ಬಿಟ್ಟು ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿರುವಾಗ ಕಾರನ್ನು ಅಡ್ಡಗಟ್ಟಿ ಗುಂಡುಹಾರಿಸಿ ಪರಾರಿಯಾಗಿದ್ದಾರೆ. ಹಣಕಾಸಿನ ವಿಚಾರದ ಸಂಬಂಧ ಹತ್ಯೆ ನಡೆದಿರೋ ಶಂಕೆ ಇದೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಸಭೆ ಚುನಾವಣೆಗೆ ಮುನ್ನ ಬೆಳಗಾವಿಯಲ್ಲಿ ರಕ್ತಪಾತ – ಮಾಜಿ ಎಂಎಲ್ಎ ಪುತ್ರನ ಹತ್ಯೆ..!
ಊರಿಗೆ ಬರ್ತಿದ್ದ ಯೋಧರು ಅರ್ಧ ದಾರಿಯಿಂದಲೇ ಕರ್ತವ್ಯಕ್ಕೆ ವಾಪಸ್..!
ಅಥಣಿ: ಊರಿಗೆ ಹೊರಟಿದ್ದ ಯೋಧರು ಅರ್ಧ ದಾರಿಯಿಂದಲೇ ಮತ್ತೆ ಕಾಶ್ಮೀರಕ್ಕೆ ವಾಪಾಸು ಹೋಗಿದ್ದಾರೆ. ಸೈನ್ಯದ ಕರೆ ಬಂದ ಹಿನ್ನೆಲೆಯಲ್ಲಿ ರಜೆಯ ಮೇಲೆ ಊರಿಗೆ ಬರಬೇಕಿದ್ದ ಯೋಧರು ಅರ್ಧ ದಾರಿಗೆ ಮತ್ತೆ ಸೇವೆಗೆ ಮರಳಿದ್ದಾರೆ. ರಜೆಯ ಮೇಲೆ ಅಥಣಿ ತಾಲೂಕಿನ ಕಿರಣಗಿ ಗ್ರಾಮಕ್ಕೆ ಬರಬೇಕಿದ್ದ ಸಂತೋಷ ಲೋಹಾರ್,ಅಶೋಕ ಲೋಹಾರ್ ಎಂಬ ಯೋಧರು ಮತ್ತೆ ಸೈನ್ಯಕ್ಕೆ ವಾಪಸ್ ಹೋಗಿದ್ದಾರೆ. ಈ ವೀರ ಯೋಧರು ಜಮ್ಮು ಕಾಶ್ಮೀರ ಮತ್ತು ಪಠಾಣಕೋಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪಾಕಿಸ್ತಾನದ ಪುಂಡಾಟಿಕೆಯಿಂದ ಈಗಾಗಲೇ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದ್ದು, ಕಳೆದೊಂದು ವಾರದಿಂದ ರಜೆಯ ಮೇಲೆ ಊರಿಗೆ ಬಂದ ಯೋಧರನ್ನು ಸೇನೆ ಕರೆಸಿಕೊಂಡಿತ್ತು. ಇನ್ನೂ ಕೆಲವರು ಊರಿಗೆ ಬಂದ ಎರಡೇ ದಿನಕ್ಕೆ ಕರ್ತವ್ಯಕ್ಕೆ ಮರಳಿದ್ದರು. ಇದೀಗ ರಜೆಯ ಮೇಲೆ ಊರಿಗೆ ಹೊರಟು ಅರ್ಧ ದಾರಿ ತಲುಪಿದ್ದ ಯೋಧರನ್ನೂ ಸೇನೆ ಕರೆಸಿಕೊಂಡಿದೆ.
ಬೆಳಗಾವಿ ಯೋಧ ವಿಧಿವಶ
ಬೆಳಗಾವಿ : ಅನಾರೋಗ್ಯದಿಂದ ಬೆಳಗಾವಿಯ ಯೋಧ ಮಂಜುನಾಥ್ ಮುಸಲ್ಮಾರಿ ವಿಧಿವಶರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರು ಗ್ರಾಮದವರಾದ ಮಂಜುನಾಥ್ ಮುಸಲ್ಮಾರಿ ಉತ್ತರ ಪ್ರದೇಶದ ಮೀರತ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಆರ್.ಆರ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಸ್ವಗ್ರಾಮ ಮಾವನೂರಿನಲ್ಲಿ ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.
ಪ್ರತ್ಯೇಕ ಅಪಘಾತ : ಐವರು ದುರ್ಮರಣ
ಬೆಳಗಾವಿ, ಮೈಸೂರು : ಪ್ರತ್ಯೇಕ ಅಪಘಾತದಲ್ಲಿ ಐವರು ದುರ್ಮರಣವನ್ನು ಹೊಂದಿರುವ ಘಟನೆ ಬೆಳಗಾವಿ ಮತ್ತು ಮೈಸೂರಿನಲ್ಲಿ ನಡೆದಿದೆ.
ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗ ಬಳಿ ಚಾಲಕನ ನಿಯಂತ್ರಣ ತಪ್ಪಿ ದ್ರಾಕ್ಷಿ ಸಾಗಿಸುತ್ತಿದ್ದ ವಾಹನ ಪಲ್ಟಿ ಹೊಡೆದು ಮೂವರು ಅಸುನೀಗಿದ್ದಾರೆ. ಸುವರ್ಣ (40). ಮಾದೇವಿ (30), ರಾಜು (28) ಮೃತ ದುರ್ದೈವಿಗಳು. ಐವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೈಸೂರಿನ ಮಳವಳ್ಳಿ ಮುಖ್ಯರಸ್ತೆಯಲ್ಲಿ ಕಾರು, ಆಟೋ, ಸ್ಕೂಟರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಆಟೋ ಡ್ರೈವರ್, ಮಳವಳ್ಳಿ ನಿವಾಸಿ ಅಪ್ಜರ್ ಪಾಷಾ (38), ಸ್ಕೂಟರ್ ಸವಾರ, ಅಗ್ರಹಾರ ನಿವಾಸಿ ತಿಮ್ಮಯ್ಯ (66) ಮೃತರು. ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಬೆಳಗಾವಿ: ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿಯ ಕಿತ್ತೂರು ತಾಲೂಕಿನ ಮರಡಿ ನಾಗಲಾಪುರ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಬಿಸಿಯೂಟ ಸೇವಿಸಿ ಒಟ್ಟು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಎಂದಿನಂತೆಯೇ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಊಟ ಮಾಡಿದ್ದರು. ಸಂಜೆಯ ವೇಳೆಗೆ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಶಾಲೆ ಅವಧಿ ಮುಗಿದ ನಂತರ ಮಕ್ಕಳು ವಾಂತಿ ಮಾಡಿಕೊಂಡಿದ್ದು ಅಸ್ವಸ್ಥರಾಗಿದ್ದಾರೆ. ನಂತರ ಅಸ್ವಸ್ಥ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆಸ್ಪತ್ರೆಗೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಬಿಇಒ ಪಾರ್ವತಿ ವಸ್ತ್ರದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದುವೆ ಸಮಾರಂಭದಲ್ಲಿ ಫೋಟೋಗ್ರಾಫರ್ ಆದ್ರು ಕುಡಚಿ ಶಾಸಕ..!
ಚಿಕ್ಕೋಡಿ : ಇದು ವಿಐಪಿ ಜಮಾನ.. ಇಲ್ಲಿ ಜನಪ್ರತಿನಿಧಿಗಳು ಜನರ ಜೊತೆ ಬೆರೆಯುವುದು ಬಹಳ ವಿರಳ..! ‘ನಾವು ಶಾಸಕರು, ಸಂಸದರು. ನಾವೇಕೆ ಸಾಮಾನ್ಯ ಜೀವನ ಮಾಡಬೇಕು’ ಅನ್ನುವರೇ ಹೆಚ್ಚು..! ಆದರೆ, ಕುಡಚಿ ಶಾಸಕರು ನಾನು ಎಲ್ಲರಂತಲ್ಲಾ.. ನನ್ನ ನಡುವಳಿಕೆಯೇ ಬೇರೆ ಅಂತ ಸಾರಿದ್ದಾರೆ..!
ಹೌದು, ಸದಾ ಜನರೊಂದಿಗೆ ಬೆರೆತು ಸುದ್ದಿಯಲ್ಲಿರುವ ಶಾಸಕ ಪಿ.ರಾಜೀವ್ ಅವರು ಇಂದು ಫೋಟೋಗ್ರಾಫರ್ ಆಗಿದ್ದಾರೆ..! ಶಾಸಕರು ಫೋಟೋಗ್ರಾಫರ್ ಆದ್ರಾ ಅಂತ ಆಶ್ಚರ್ಯವೆನಿಸಿದ್ರೂ ಸತ್ಯ.
ರಾಜೀವ್ ಅವರು ಇಂದು ಮದ್ವೆ ಸಮಾರಂಭವೊಂದರಲ್ಲಿ ಸ್ವತಃ ತಾವೇ ಕ್ಯಾಮರಾ ಹಿಡಿದು ನವಜೋಡಿಯ ಫೋಟೋ ಕ್ಲಿಕ್ಕಿಸಿದ್ದಾರೆ..! ಶಾಸಕರು ಮದ್ವೆಮನೆಯಲ್ಲಿ ಫೋಟೋಗ್ರಾಫರ್ ಆಗಿ ಫೋಟೋ ಕ್ಲಿಕ್ಕಿಸುವ ಫೋಟೋ ಈಗ ಫುಲ್ ವೈರಲ್ ಆಗ್ತಾ ಇದೆ. ರಾಜೀವ್ ಅವರ ಈ ಕೆಲಸ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಳೆಗಲ್ಲ, ಕುಡಿಯೋಕೆ ನೀರ್ ಕೊಡಿ ಅಂದ್ರೂ ಕ್ಯಾರೇ ಅಂತಿಲ್ಲ ಅಧಿಕಾರಿಗಳು..!
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಡೊಣವಾಡ ಮತ್ತು ಕರಗಾಂವ್ ಗ್ರಾಮದಲ್ಲಿ ಕುಡಿಯೋಕೆ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಬೆಳೆಗಲ್ಲ, ಕುಡಿಯೋಕೆ ನೀರ್ ಕೊಡಿ ಅಂದ್ರೂ ಅಧಿಕಾರಿಗಳು ಮಾತ್ರ ಅಗತ್ಯ ಕ್ರಮ ಕೈಗೊಳ್ತಿಲ್ಲ. ಕಾಲುವೆ ಸ್ವಚ್ಛಗೊಳಿಸಿ ಅಂತ ಅಧಿಕಾರಿಗಳಿಗೆ ಮನವಿ ಮಾಡಿ ಬೇಸತ್ತ ರೈತರು ತಾವೇ ಹಣ ಸೇರಿಸಿ ಕಾಲುವೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಕಾಲುವೆ ಸ್ವಚ್ಛ ಮಾಡಿ ಅಂತ ರೈತರು ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಇದ್ಯಾವುದನ್ನೂ ಕ್ಯಾರೇ ಅನ್ನದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಜನಪ್ರತಿನಿಧಿಗಳು ಕಾಲುವೆ ಸ್ವಚ್ಛತೆಯ ಭರವಸೆ ನೀಡಿ ಮತ ಪಡೆದು ಮತ್ತೆ ಆ ಕಡೆ ತಲೆ ಹಾಕೋದೇ ಇಲ್ಲ. ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಬೇಸತ್ತ ಜನ ಕಾಲುವೆ ಸ್ವಚ್ಛತೆಗೆ ತಾವೇ ಟೊಂಕ ಕಟ್ಟಿ ನಿಂತಿದ್ದಾರೆ.
ಕಾನಲ್ ಸ್ವಚ್ಛ ಮಾಡಿ ನೀರು ಬಿಡಿ ಅಂತ ಎಷ್ಟೇ ಮನವಿ ಮಾಡಿದ್ರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ ಜನರೇ ಹಣ ಸಂಗ್ರಹಿ ತಾವೇ ಸಲಿಕೆ ಹಿಡಿದು ಕೆನಾಲ್ ಸ್ವಚ್ಛ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಡೊಣವಾಡ ಮತ್ತು ಕರಗಾಂವ್ ಗ್ರಾಮದಲ್ಲಿ ರೈತರು ಸ್ವಂತ 35 ಸಾವಿರ ದುಡ್ಡು ಸೇರಿಸಿ ಕಾಲುವೆ ಸ್ವಚ್ಛಮಾಡುತ್ತಿದ್ದಾರೆ. ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ರೈತರೇ ಮಾಡಿದರೂ ನೀರು ಮಾತ್ರ ಸರಿಯಾಗಿ ಬರುತ್ತಿಲ್ಲ. ಹುಕ್ಕೇರಿ ಮತ್ತು ರಾಯಭಾಗ ಮತಕ್ಷೇತ್ರ ಸದ್ಯಇವೆರಡೂ ಕ್ಷೇತ್ರಗಳು ಸಹ ಬಿಜೆಪಿ ಶಾಸಕರೇ ಪ್ರತಿನಿಧಿಸುತ್ತಿರುವ ಕ್ಷೇತ್ರಗಳು. ಘಟಪ್ರಭಾ ನದಿಯಿಂದ ಕೊಟಬಾಗಿ ಏತ ನೀರಾವರಿ ಮಾಡಿ ಎರಡು ಮತ ಕ್ಷೇತ್ರದ ರೈತರಿಗೆ ನೀರುಣಿಸುವ ಕೆಲಸವೇನೋ ಆಗ್ತಿದೆ. ಆದರೆ ಅಧಿಕಾರಿಗಳ ಬೇಜವಾದ್ದಾರಿತನದಿಂದ ರೈತರ ನೀರನ್ನು ಬೇರೆ ಕೆಲವು ರೈತರು ನಿರಂತರವಾಗಿ ಕದಿಯುತ್ತಲೇ ಇದ್ದಾರೆ.
ಹುಕ್ಕೇರಿ ಮತಕ್ಷೇತ್ರದಿಂದಲೇ ರಾಯಭಾಗ ಮತಕ್ಷೇತ್ರಕ್ಕೆ ಕಾಲುವೆ ಮುಖಾಂತರ ನೀರು ಬರಬೇಕು. ಹುಕ್ಕೇರಿ ಮತಕ್ಷೇತ್ರದ ಕೊಟಬಾಗಿ ಏತನೀರಾವರಿ ಯೋಜನೆಯ ಮೂಲಕವೇ ಬರಬೇಕಾಗಿರುವುದರಿಂದ ಕಾಲುವೆಗೆ ಅಲ್ಲಲ್ಲಿ ಪೈಪ್ಲೈನ್ ಅಳವಡಿಸಿಕೊಂಡು ರೈತರು ತಮ್ಮ ಬಾವಿಗಳಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ನೂರು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಸ್ವಾಮೀ ನಾವು ಬೆಳೆಗಾಗಿ ಅಲ್ಲ, ಕುಡಿಯುವ ನೀರು ಕೇಳ್ತಿದ್ದೀವಿ ಅಂದ್ರು ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಅನ್ನೋ ತರ ಕೂತಿದ್ದಾರೆ. ಕಾಲುವೆಗೆ ನೀರು ಬಂದರೆ ಬಾವಿ ಬೋರ್ವೆಲ್ಗಳು ರಿಚಾರ್ಜ್ ಆಗುತ್ತವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ.
ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ವಿಷ ಕುಡಿದು ಆತ್ಮಹತ್ಯೆಮಾಡಿಕೊಳ್ಳಬೇಕಾಗುತ್ತೆ ಅಂತ ರೈತರು ಹೆದರಿಸಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಮಾಡುತ್ತಿರುವ ತಪ್ಪಿನಿಂದ ಅನ್ನದಾತರು ನೀರಿಲ್ಲದೆ ಕೊರಗುತ್ತಿದ್ದಾರೆ. ಅಧಿಕಾರಿಗಳು ಅನಧಿಕೃತವಾಗಿ ನೀರು ಕದಿಯುತ್ತಿರುವ ರೈತರ ಮೇಲೆ ಕ್ರಮ ಕೈಗೊಂಡು ರಾಜಕೀಯ ಒತ್ತಡಕ್ಕೆ ಮಣಿಯದೆ ಎರಡು ಮತಕ್ಷೇತ್ರದ ಜನರಿಗೆ ಸರಿಯಾಗಿ ನೀರು ಹಂಚಿಕೆ ಆಗುವಂತೆ ನೋಡಿಕೊಳ್ಳಬೇಕಿದೆ.
ರಾಜ್ಯದ ವಿವಿಧೆಡೆ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ
ಬಳ್ಳಾರಿ, ರಾಮನಗರ: ಭಾರತ್ ಬಂದ್ ಹಿನ್ನೆಲೆ ಬಳ್ಳಾರಿಯಲ್ಲಿ ನಾಲ್ಕು ಸಾರಿಗೆ ಬಸ್ಗಳಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ನಿನ್ನೆ ರಾತ್ರಿ ಬಳ್ಳಾರಿಯ ಡಿಪೊ 2ನೇ ಘಟಕ ಹಾಗೂ ಸಿರುಗುಪ್ಪ ಡಿಪೋದ ತಲಾ ಎರಡು ಬಸ್ಗೆ ಕಲ್ಲೆಸೆಯಲಾಗಿದೆ. ಬಳ್ಳಾರಿ ನಿಪ್ಪಾಣಿ ಅಲಿಪುರದ ಬಳಿ ರಾಜಹಂಸ ಬಸ್ಗೆ ಕಲ್ಲೆಸೆಯಲಾಗಿದೆ. ಸಿರುಗುಪ್ಪ ಬೆಂಗಳೂರು ಬಸ್ಗೆ ಮೋತಿ ವೃತ್ತದ ಬಳಿ ಹಾಗೂ ಇನ್ನೆರಡು ಬಸ್ಗಳಿಗೆ ನಗರದ ಹೊರವಲಯದಲ್ಲಿ ಕಲ್ಲೆಸೆಯಲಾಗಿದೆ. ಸದ್ಯ ಬಸ್ ಸಂಚಾರ ಸ್ಥಗಿತವಾಗಿದ್ದು, ಡಿಪೋ ಮುಂಭಾಗ ಪ್ರತಿಭಟನೆ ಮುಂದುವರಿದಿದೆ.
ಮಾಗಡಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಐದು ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಾವರೆಕೆರೆ ಬಳಿ ನಡೆದಿದೆ. ಸದ್ಯ ಮಾಗಡಿಯಿಂದ ಹೋಗಬೇಕಿದ್ದ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.ಕಡಬಗೆರೆ ಕ್ರಾಸ್ ಬಳಿಯೂ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಕೊಪ್ಪಳ: ಭಾರತ್ ಬಂದ್ನ ಎರಡನೇ ದಿನ ಶಾಲಾ, ಕಾಲೇಜಿಗೆ ಕೊಪ್ಪಳ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿರದಿದ್ದರೂ ಪ್ರಾಂಶುಪಾಲರು, ಉಪನ್ಯಾಸಕರೂ, ವಿದ್ಯಾರ್ಥಿಗಳು ಶಾಲೆಗೆ ಬಂದಿಲ್ಲ. ಡಿಸಿ ಆದೇಶಕ್ಕೆ ಕ್ಯಾರೆ ಎನ್ನದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಕಾಲೇಜು ಇದ್ದರೂ ಕಾಲೇಜಿನತ್ತ ಸುಳಿಯದಿಲ್ಲ. ಬಸ್ ಓಡಾಟವಿರದ ಕಾರಣ ನಗರದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡುಬಂದಿದೆ.
ಬಾಗಲಕೋಟೆ: ಎರಡನೇ ದಿನದ ಭಾರತ್ ಬಂದ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತವಾಗಿದೆ. ಬಾಗಲಕೋಟೆ ಬಸ್ ನಿಲ್ದಾನದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ರಾತ್ರಿ ಆರಂಭಗೊಂಡ ಕೆಎಸ್ಆರ್ಟಿಸಿ ಬಸ್ ಸಂಚಾರ ಬೆಳಗ್ಗೆ ಮತ್ತೆ ಸ್ಥಗಿತವಾಗಿದೆ.
ಕಾರವಾರ: ಭಾರತ ಬಂದ್ ಹಿನ್ನಲೆ ಕಾರವಾರದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಸ್ ತಡೆದು ಪ್ರತಿಭಟನೆ ಮಾಡಲು ಮುಂದಾದ ಸಿಐಟಿಯು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ, ತುಮಕೂರು, ಆನೇಕಲ್, ಚಿಕ್ಕಮಗಳೂರು, ಕಲಬುರ್ಗಿ, ಬೆಳಗಾವಿ: ಭಾರತ್ ಬಂದ್ನ ಎರಡನೇ ದಿನ ಚಿತ್ರದುರ್ಗ, ತುಮಕೂರು, ಆನೇಕಲ್, ಚಿಕ್ಕಮಗಳೂರು, ಕಲಬುರ್ಗಿ, ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲಿ ಖಾಸಗಿ ಬಸ್ಗಳು ಎಂದಿನಂತೆ ಸೇವೆ ಆರಂಭಿಸಿದ್ದು, 11 ಗಂಟೆಗೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ತುಮಕೂರಿನಲ್ಲಿ ಖಾಸಗಿ, ಸರ್ಕಾರಿ ಬಸ್ ಎಂದಿನಂತೆ ಸಂಚಾರ ಆರಂಭಿಸಿವೆ. ಬಂದ್ನ ಎರಡನೇ ದಿನವಾದ ಇಂದು ಆನೇಕಲ್ ತಾಲೂಕಿನಲ್ಲಿ ಎಂದಿನಂತೆ ಸರ್ಕಾರಿ ಹಾಗು ಖಾಸಗಿ ಬಸ್ಗಳು ಸೇವೆ ಆರಂಭಿಸಿವೆ. ಚಿಕ್ಕಮಗಳೂರಿನಲ್ಲಿ ಎಂದಿನಂತೆ ಸರ್ಕಾರಿ ಬಸ್ಗಳು ಸೇವೆ ಆರಂಭಿಸಿದರೂ, ಬಸ್ ನಿಲ್ದಾಣ ಮಾತ್ರ ಪ್ರಯಾಣೀಕರಿಲ್ಲದೆ ಬಿಕೋ ಎನ್ನುತ್ತಿದೆ.೧೧ ಗಂಟೆಗೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ಗದಗ: ಗದಗನಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಬಸ್ ಓಡಿಸದಿರಲು ಗದಗ ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.ಬೇರೆ ಜಿಲ್ಲೆಗಳಲ್ಲಿ ಕಲ್ಲು ತೂರಾಟ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಅಂತ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸಾರಿಗೆ ಇಲಾಖೆ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಯಿತು.
ಭಾರತ್ ಬಂದ್ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಭಾರತ್ ಬಂದ್ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಬಂದ್ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತಿದೆ.
ಹಾಸನ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರಮೇಣ ಬಂದ್ ಆಗುವ ಸಾಧ್ಯತೆ ಇದ್ದು, ಸಾರಿಗೆ ಬಸ್ ಸಂಚಾರ ವಿರಳವಾಗಿದೆ. ಜಿಲ್ಲಾ ವ್ಯಾಪ್ತಿಯ ಬಸ್ಗಳು ಸಂಚರಿಸುತ್ತಿದ್ದು, ಎಂದಿನಂತೆ ಆಟೋಗಳು ಓಡಾಡುತ್ತಿವೆ. ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. 10 ಗಂಟೆ ನಂತರ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ. ಭಾರತ್ ಬಂದ್ ಹಿನ್ನೆಲೆ ಹಾಸನದಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬಸ್ ವ್ಯವಸ್ಥೆ ಇಲ್ಲದೆ ಶಾಲಾ ಮಕ್ಕಳು ಪರದಾಡಿದ್ದಾರೆ.
ಮೈಸೂರು
ಭಾರತ್ ಬಂದ್ಗೆ ಮೈಸೂರಿನ ಜನ ಬೆಂಬಲ ವ್ಯಕ್ತಪಡಿಸಿಲ್ಲ. ಮೈಸೂರಿನಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ನಗರದ ಬಸ್ ನಿಲ್ದಾಣದಿಂದ ಸೇವೆ ಆರಂಭವಾಗಿದೆ. ಆಟೋಗಳು ಸಂಚರಿಸುತ್ತಿದ್ದು ಕಾರ್ಮಿಕ ಸಂಘಟನೆಗಳು ಕರೆನೀಡಿರುವ ಬಂದ್ ನಗರದ ಜನರನ್ನು ಬಾಧಿಸಿಲ್ಲ.
ತುಮಕೂರು
ತುಮಕೂರಿನಲ್ಲಿ ಭಾರತ್ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ದಿನವಾಗಿದ್ದೂ ಕೆಎಸ್ಆರ್ಟಿಸಿ ಬಸ್ಗಳು ಎಂದಿನಂತೆ ಸೇವೆ ಆರಂಭಿಸಿವೆ. ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದು ಜನಜೀವನಲ್ಲಿ ಬಂದ್ ಎಫೆಕ್ಟ್ ಅಷ್ಟಾಗಿ ಕಾಣಿಸುತ್ತಿಲ್ಲ. ಬಂದ್ ಹಿನ್ನೆಲೆ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಗಿದೆ. ಸಿಐಟಿಯುನಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ತುಮಕೂರು ಪ್ರಮುಖ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತುಮಕೂರು ಟೌನ್ಹಾಲ್ನಲ್ಲಿ ಎಐಟಿಯುಸಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಟೌನ್ಹಾಲ್ ಸರ್ಕಲ್ನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಆನೇಕಲ್
ಆನೇಕಲ್ನಲ್ಲಿ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಕೆಎಸ್ಆರ್ಟಿಸಿ ಬಸ್ ರಸ್ತೆಗಿಳಿದಿಲ್ಲ. ನಿನ್ನೆ ರಾತ್ರಿ ಡಿಪೋಗೆ ಹೋಗಿದ್ದ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಬಂದ್ ಹಿನ್ನೆಲೆಯಲ್ಲಿ ಡಿಪೋದಿಂದ ಹೊರಗೆ ಬಂದಿಲ್ಲ. ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಐವತ್ತಕ್ಕೂ ಹೆಚ್ಚು ಬಿಎಂಟಿಸಿ ಬಸ್ಗಳು ಡಿಪೋಗೆ ವಾಪಸ್ ಆಗಿವೆ. ಬಸ್ಗಳಿಲ್ಲದೆ ಆನೇಕಲ್ ಬಸ್ ನಿಲ್ದಾಣ ಸದ್ಯ ಖಾಲಿಯಾಗಿದ್ದು, ಅಂಗಡಿ ಮುಂಗಟ್ಟು ತೆರೆಯದೆ ಜನರು ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಕಲುಬುರ್ಗಿ
ಭಾರತ್ ಬಂದ್ ಹಿನ್ನೆಲೆ AIUTUC ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಸ್ ನಿಲ್ದಾಣದ ಎದರುಗಡೆ ಸೇರಿದ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಮುಷ್ಕರ ಹಿನ್ನಲೆ NEKSRTC ಬಸ್ ಸಂಚಾರ ಸ್ಥಗಿತಗೊಳಿಸಿದೆ. ಬಸ್ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿದ್ದರೂ ಆಟೋಗಳು, ಖಾಸಗಿ ವಾಹನಗಳು ಎಂದಿನಂತೆ ರಸ್ತೆಗಿಳಿದಿವೆ. ಅಂಗಡಿ ಮಾಲೀಕರೂ ಎಂದಿನಂತೆ ತಮ್ಮ ಅಂಗಡಿಗಳನ್ನು ತೆರೆದಿದ್ದಾರೆ. ಬಂದ್ ಹಿನ್ನೆಲೆ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಚಿಕ್ಕಮಗಳೂರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್ ಸಂಚಾರ ವಿರಳವಾಗಿದ್ದು, ಜಿಲ್ಲಾ ವ್ಯಾಪ್ತಿಯ ಬಸ್ಗಳು ಎಂದಿನಂತೆ ಓಡಾಟ ನಡೆಸುತ್ತಿವೆ. ಆಟೋಗಳು ಎಂದಿನಂತೆ ರಸ್ತೆಗಿಳಿದಿದ್ದು, ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿಲ್ಲ. 11 ಗಂಟೆ ನಂತರ ಕಾರ್ಮಿಕ ಸಂಘಟನೆಗಳು ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನೆ ನಡೆಸಲಿದ್ದಾರೆ.
ಕೊಪ್ಪಳ
ಕೊಪ್ಪಳ ಜಿಲ್ಲೆಯಾದ್ಯಂತ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸ್ತಬ್ಧವಾಗಿದ್ದು, ಯಾವುದೇ ಬಸ್ಗಳು ರಸ್ತೆಗಿಳಿದಿಲ್ಲ. ಅಂಗಡಿ, ಮುಂಗಟ್ಟು ಮಾಲೀಕರು ಅಂಗಡಿ ತೆರೆಯದೆ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಬಸ್ ಸಂಚಾರವಿರದ ಕಾರಣ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಬಂದ್ಗೆ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, 10 ಗಂಟೆಯ ನಂತರ ವಿವಿಧ ಕಾರ್ಮಿಕ ಸಂಘಟನೆಯಿಂದ ಮೆರವಣಿಗೆ ನಡೆಸಲಿವೆ. ಗಂಗಾವತಿ ನಗರದಲ್ಲಿ ಎಸ್.ಎಫ್.ಐ.ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಗಂಗಾವತಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ
ಎರಡು ದಿನಗಳ ಭಾರತ್ ಬಂದ್ಗೆ ಚಿಕ್ಕಬಳ್ಳಾಪುರದಲ್ಲಿ ಬೆಂಬಲ ವ್ಯಕ್ತವಾಗಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಸಿಪಿಐಎಂ ಪಕ್ಷದ ವತಿಯಿಂದ ಬೈಕ್ ರ್ಯಾಲಿ ನಡೆದಿದ್ದು, ಬಾಗೇಪಲ್ಲಿ ನಗರದ ಟಿಬಿ ಕ್ರಾಸ್ನಲ್ಲಿ ರ್ಯಾಲಿಗೆ ಚಾಲನೆ ದೊರೆತಿದೆ. ಮೋದಿ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದೆ. ರೈತ ಸಂಘ ಹಾಗೂ ಸಿಪಿಐಎಂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಾಹನಗಳನ್ನು ತಡೆದು ಬಂದ್ಗೆ ಸಹಕರಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಬಸ್ ನಿಲ್ದಾಣದಿಂದ ಬಸ್ ಡಿಪೋಗೆ ತೆಗೆದುಕೊಂಡು ಹೋಗುವಂತೆ ಸಂಚಾರಿ ನಿಯಂತ್ರಕ ಆವಲಪ್ಪ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ವಾರ್ನಿಂಗ್ ಮಾಡಿದ್ದಾರೆ.
ಮಂಡ್ಯ
ಭಾರತ್ ಬಂದ್ ಹಿನ್ನೆಲೆ ಬಂದ್ಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ವಾಹನಗಳು ಓಡಾಡುತ್ತಿವೆ. KSRTC ಎಂದಿನಂತೆ ಸೇವೆ ಆರಂಭಿಸಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಖಾಸಗಿ ಬಸ್, ಆಟೋಗಳು ಎಂದಿನಂತೆ ರಸ್ತೆಗಿಳಿದಿವೆ. ಭಾರತ್ ಬಂದ್ ಹಿನ್ನೆಲೆ ಸಿಐಟಿಯುನಿಂದ ಪ್ರತಿಭಟನೆ ಆರಂಭವಾಗಿದೆ. ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಆರಂಭಿಸಿದ್ದು, ಮಂಡ್ಯದ ಮಹಾವೀರ ಸರ್ಕಲ್ ಬಳಿ ರಸ್ತೆ ತಡೆ ಆರಂಭವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಉಡುಪಿ
ಕಾರ್ಮಿಕ ಸಂಘಟನೆಗಳು ಬಸ್ ಸಂಚಾರ ಬಂದ್ ಮಾಡುವಂತೆ ಬಸ್ ಚಾಲಕರಿಗೆ ಮನವಿ ಮಾಡಿದ್ದಾರೆ. ಸಂಚಾರ ಸ್ಥಗಿತಗೊಳಿಸುವ ಕುರಿತು ಬಸ್ ಚಾಲಕರು ಮತ್ತು ಕಾರ್ಮಿಕ ಸಂಘಟನೆ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಟೋ ರಿಕ್ಷಾ ಬಂದ್ಮಾಡುವಂತೆ ಒತ್ತಾಯ ಮಾಡಿರುವ ಬಸ್ ಚಾಲಕರು, ಅಟೋ ಬಂದ್ ಆಗದಿದ್ದರೆ, ಬಸ್ ಬಿಡುತ್ತೇವೆ ಎಂದಿದ್ದಾರೆ. ಅಂಚೆ ಕಚೇರಿ ಸಿಬ್ಬಂದಿ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಡೋಲು ಬಾರಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹಾವೇರಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ಗೆ ಹಾವೇರಿಯಲ್ಲಿ ಬೆಂಬಲ ದೊರೆತಿಲ್ಲ. ಕೆಎಸ್ಆರ್ಟಿಸಿ ಬಸ್ಸುಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ. ಬಸ್ ನಿಲ್ದಾಣದಲ್ಲಿನ ಅಂಗಡಿ, ಮುಂಗಟ್ಟು ತೆರೆದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೂ ರಜೆ ನೀಡಿಲ್ಲ. ಕಾರ್ಮಿಕ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ಮಾಡಲಿದ್ದು, ಅದನ್ನು ಹೊರತುಪಡಿಸಿ ಹಾವೇರಿಯಲ್ಲಿ ಎಂದಿನ ಸಹಜ ಸ್ಥಿತಿ ಇದೆ. ೧೦ ಗಂಟೆ ನಂತರ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ಹುಬ್ಬಳ್ಳಿ
ಭಾರತ್ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಬಸ್ಗಳು ಸಂಚಾರ ಸ್ಥಗಿತಗೊಳಿಸಿದ್ದು ವಾಯುವ್ಯ ಸಾರಿಗೆಯ 4,800 ಬಸ್ಗಳು ಡಿಪೋದಲ್ಲಿ ನಿಂತಿವೆ. ಬಸ್ ಡಿಪೋಗಳಿಗೆ ಪೋಲಿಸ್ ಬಂದೊಬಸ್ತ್ ಒದಗಿಸಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವಮೊಗ್ಗ
ಭಾರತ್ ಬಂದ್ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಬಸ್ ನಿಲ್ದಾಣದಲ್ಲಿ ಎಂದಿನಂತೆ ಕಾರ್ಯಚಟುವಟಿಕೆಗಳು ಆರಂಭವಾಗಿದ್ದು, ಸಂಚಾರ ಎಂದಿನಂತಿದೆ. ಆಟೋ, ಖಾಸಗಿ ಬಸ್, ಲಾರಿಗಳೂ ಎಂದಿನಂತೆ ರಸ್ತೆಗಿಳಿದಿವೆ. ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ತೆರೆದಿದ್ದು, ಎಂದಿನಂತೆಯೇ ಹೂವಿನ ಅಂಗಡಿ, ತಿಂಡಿ ಗಾಡಿಗಳು ವ್ಯಾಪಾರ ನಡೆಸುತ್ತಿವೆ. ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ ಎಲ್ಲಾ ಖಾಸಗಿ ಬಸ್ಗಳು ಎಂದಿನಂತೆ ಓಡಾಡುತ್ತಿವೆ. ಬಂದ್ಗೆ ಕೆಎಸ್ಆರ್ಟಿಸಿ ಬೆಂಬಲ ವ್ಯಕ್ತಪಡಿಸಿದ್ದು, ಬಸ್ಗಳು ಭದ್ರಾವತಿ ಡಿಪೋಗೆ ತೆರಳುತ್ತಿವೆ. ಕೆ.ಎಸ್.ಆರ್.ಟಿ.ಸಿ. ನೌಕರರು ಬಸ್ ಡಿಪೋ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಚಿಕ್ಕೋಡಿ
ರಾಯಬಾಗ ಬಸ್ ನಿಲ್ದಾನದಲ್ಲಿ ಬಸ್ ಚಾಲಕರು ಹಾಗೂ ಬಸ್ ನಿಯಂತ್ರಣಾಧಿಕಾರಿಗಳ ಮದ್ಯೆ ಮಾತಿನ ಚಕಮಕಿ ನಡೆದಿದೆ. ಸಾರಿಗೆ ಸಂಚಾರ ಆರಂಭಿಸುವಂತೆ ಅಧಿಕಾರಿಗಳು ಚಾಲಕರಿಗೆ ಒತ್ತಾಯಿಸಿದ್ದು, ಬಂದ್ ಹಿನ್ನೆಲೆಯಲ್ಲಿ ಬಸ್ ಓಡಿಸಲು ಚಾಲಕರು ನಿರಾಕರಿಸಿದ್ದಾರೆ. ಬಂದ್ ನಡೆಯುತ್ತಿರುವುದರಿಂದ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ತಾವೇ ಜವಾಬ್ದಾರಿ ಎಂದು ಅಧಿಕಾರಿಗಳು ಬರೆದುಕೊಟ್ಟರೆ ಬಸ್ ಓಡಿಸುವುದಾಗಿ ಚಾಲಕರು ಪಟ್ಟು ಹಿಡಿದಿದ್ದಾರೆ. ಅಥಣಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದು ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿರುವ ಸಂಘಟನೆಗಳು, ಬೈಕ್ ರ್ಯಾಲಿ ಮಾಡಿ ಘೋಷಣೆ ಕೂಗಿದ್ದಾರೆ. ಸಂಚಾರ, ಅಹಾರ, ತರಕಾರಿ ಹಾಗೂ ವಿವಿಧ ಸಾಮಗ್ರಿಯ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಗದಗ
ಭಾರತ್ ಬಂದ್ ಹಿನ್ನೆಲೆ ಕೆಎಸ್ಆರ್ಟಿಸಿ ಸಿಬ್ಬಂದಿ ಬಸ್ ನಿಲ್ದಾಣದ ಸ್ವಚ್ಛತೆಗೆ ಮುಂದಾಗಿದ್ದಾರೆ. ಇಂದು ಕಾರ್ಮಿಕರು ಇಲ್ಲದ ಕಾರಣ ಸ್ವತಃ ಸಿಬ್ಬಂದಿ ಸ್ವಚ್ಚತೆಗೆ ಮುಂದಾಗಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಸಿಬ್ಬಂದಿ ಸ್ವತಃ ಇಡೀ ಬಸ್ ನಿಲ್ದಾಣಕ್ಕೆ ನೀರು ಹೊಡೆದು ಕಸ ಗುಡಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗದಗ ಕೇಂದ್ರ ಬಸ್ ನಿಲ್ದಾಣದಲ್ಲಿ ರೋಗಿಗಳು ಪರದಾಡುವಂತಾಗಿದೆ. ಬಂದ್ ಹಿನ್ನೆಲೆಯಲ್ಲಿ ಆಟೋ ಚಾಲಕರು ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ. ಆಟೋ ಚಾಲಕರು 400 ರಿಂದ 800 ರೂಪಾಯಿ ಬೇಡಿಕೆ ಇಟ್ಟಿರುವುದರಿಂದ ಕಲಬುರ್ಗಿ ಜಿಲ್ಲೆಯಿಂದ ಪಾರ್ಶ್ವವಾಯು ಚಿಕಿತ್ಸೆಗೆ ಆಗಮಿಸಿದ ತಾಯಿ, ಮಗ ಪರದಾಡುವಂತಾಯಿತು.
ಚಾಮರಾಜನಗರ
ದೇಶಾದ್ಯಾಂತ ಕಾರ್ಮಿಕ ಸ೦ಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಚಾಮರಾಜನಗರ ಜಿಲ್ಲೆ ಬೆಂಬಲವಿಲ್ಲದ ಕಾರಣ ಎಂದಿನಂತೆ ಸರ್ಕಾರಿ ಹಾಗೂ ಖಾಸಾಗಿ ಬಸ್ಗಳು ಸಂಚಾರ ಆರಂಭಿಸಿವೆ. ಅ೦ಗಡಿ ಮುಂಗಟ್ಟುಗಳು ಹಾಗೂ ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ಕೆಲಸಕಾರ್ಯಗಳು ಬೆಳಗ್ಗೆಯಿಂದಲೇ ಆರಂಭವಾಗಿದೆ. ಜನಸಾಮಾನ್ಯರಿಗೆ ಪ್ರತಿ ದಿನದ ವ್ಯವಹಾರಕ್ಕೆಯಾವುದೇ ತೊಂದರೆ ಆಗದೆ ಎಂದಿನಂತೆ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿದೆ. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಬಾಗಲಕೋಟೆ
ಭಾರತ್ ಬಂದ್ಗೆ ಬಾಗಲಕೋಟೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಬಂದ್ ಆಗಿದೆ. ಬಸ್ ಇಲ್ಲದೆ ಸಾರ್ವಜನಿಕರ ಪರದಾಡುವಂತಾಗಿದ್ದು, ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕೆ ಶಾಂತರಾಮ ಇಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಬಂದ್ಗೆ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಕೋ ಎನ್ನುತ್ತಿರೋ ಬಸ್ ನಿಲ್ದಾಣದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಖಾಲಿಯಾಗಿದೆ.
ರಾಯಚೂರು
ರಾಯಚೂರು ಜಿಲ್ಲೆಯಾದ್ಯಂತ ಬಂದ್ಗೆ ಬೆಂಬಲ ವ್ಯಕ್ತವಾಗಿದ್ದು, ಕಾರ್ಮಿಕ ಸಂಘಟನೆಗಳಿಂದ ಬೈಕ್ ರ್ಯಾಲಿ ನಡೆದಿದೆ. ಮಧ್ಯಾಹ್ನ ನಂತರದಲ್ಲಿ ಬಂದ್ ಎಫೆಕ್ಟ್ ತ್ರೀವ್ರಗೊಳ್ಳಲಿದೆ. ಬೆಳಗಿನ ಜಾವ ಹಾಲು, ಅಟೋ ಹಾಗು ಟೀ ಅಂಗಡಿಗಳು ಆರಂಭವಾಗಿವೆ. ಬಸ್ ಓಡಾಟವು ಸಹ ಸ್ಥಗಿತಗೊಳ್ಳಲಿದೆ. ಮದ್ಯಾಹ್ನ ವೇಳೆ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಕೆಲವು ಕಡೆ ಯಥಾವತ್ತಾಗಿ ಅಂಗಡಿ ಮಳಿಗೆಗಳು ತೆರೆದುಕೊಂಡಿವೆ. ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಆಟೋ ಚಾಲಕರಿಗೆ, ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಿದೆ.
ದಾವಣಗೆರೆ
ದಾವಣಗೆರೆಯಲ್ಲಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಸರ್ಕಾರಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದಾರೆ. ಎಐಸಿಯುಸಿಟಿ ಸಂಘಟನೆ ಕಾರ್ಯಕರ್ತರು ಬಂದ್ ಯಶಸ್ವಿಗೊಳಿಸುವಂತೆ ಘೋಷಣೆ ಕೂಗಿದ್ದಾರೆ.
ಬೀದರ್
ಗಡಿ ಜಿಲ್ಲೆ ಬೀದರ್ನಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರಿನಲ್ಲಿ ಎಂದಿನಂತೆ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಿದ್ದು, ಆಟೋ, ಕ್ಯಾಬ್ಗಳು ಓಡಾಡುತ್ತಿವೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಕೊಡಗು
ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಬಸ್ ಹೊರತುಪಡಿಸಿ ಉಳಿದಂತೆ ಎಲ್ಲವೂ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸೋ ಸರ್ಕಾರಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದು, ಆಟೋ, ಟ್ಯಾಕ್ಸಿ, ಹಾಗೂ ಖಾಸಗಿ ಬಸ್ಸುಗಳು ಓಡಾಡುತ್ತಿವೆ. ಅಂಗಡಿ ಮಳಿಗೆಗಳು ತಡವಾಗಿ ವ್ಯಾಪಾರ ಆರಂಭಿಸಿವೆ. ಖಾಸಗಿ, ಸರ್ಕಾರಿ ಶಾಲಾ ಕಾಲೇಜುಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ.
ಬಳ್ಳಾರಿ
ಎರಡು ದಿನ ಭಾರತ್ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪ್ರತಿಭಟನೆ ತೀವ್ರವಾಗಿದೆ. ಬಸ್ ಮತ್ತು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರು ಚಾಲಕರು ರಸ್ತೆಗಿಳಿಯದಂತೆ ತಾಕೀತು ಮಾಡಿದ್ದಾರೆ.
ಆ್ಯಕ್ಸಿಡೆಂಟ್ನಲ್ಲಿ ಒಂದೇ ಕುಟುಂಬದ ಐವರ ದುರ್ಮರಣ
ಆ್ಯಕ್ಸಿಡೆಂಟ್ನಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನಿಪ್ಪಾಣಿ ಹೊರವಲಯದ ಸ್ಥವನಿಧಿ ಘಾಟ್ನಲ್ಲಿ ನಡೆದಿದೆ.
ಗ್ರಾನೈಟ್ ತುಂಬಿದ್ದ ಟ್ರಕ್ನ ಟೈರು ಸಿಡಿದ ಪರಿಣಾಮ ಅದು ನಿಯಂತ್ರಣ ತಪ್ಪಿ ವ್ಯಾಗನಾರ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಿಂದ ಬೆಳಗಾವಿಗೆ ಹೊರಟಿದ್ದ ಮಹಾರಾಷ್ಟ್ರ ಮೂಲದ ರಹಿನಾ ಜಮಾದಾರ್ (55), ಅಫ್ರೀನಾ ಜಮಾದಾರ್ (33), ಜುನಿದಾಖಾನ್ (30), .ದಿಲಾವರ ಜಮಾದಾರ್ (56), ಅಯಾನಾ ಜಮಾದಾರ್ (05 ), ವ್ಯಾಬುರಿ (43) (ಟ್ರಕ್ ಡ್ರೈವರ್) ಮೃತ ದುರ್ದೈವಿಗಳು.