Friday, April 3, 2020

ಜನತಾ ಕರ್ಫ್ಯೂ : ನಾಳೆ ಏನಿರುತ್ತೆ? ಏನಿರಲ್ಲ?

0

ಬೆಂಗಳೂರು: ಕೊರೋನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ನಾಳೆ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲೂ ಕೊರೋನಾ ವೈರಸ್ ತಡೆಯುವ ಸಲುವಾಗಿ ಕರ್ಫ್ಯೂ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಸಂಜೆಯವರೆಗೂ ಬೆಂಗಳೂರು ಸ್ತಬ್ಧವಾಗಲಿದೆ. ಇನ್ನು ಕರ್ಫ್ಯೂ ಇರುವ ಹಿನ್ನೆಲೆ  ನಾಳೆ ಬೆಂಗಳೂರಲ್ಲಿ ಏನಿರುತ್ತೆ, ಏನಿರಲ್ಲ ಎಂಬುದನ್ನು ನೋಡೋಣ.

ನಾಳೆ ಬೆಂಗಳೂರಲ್ಲಿ ಏನಿರಲ್ಲ….

 • ನಾಳೆ ಆಟೋ, ಟ್ಯಾಕ್ಸಿ, ಓಲಾ, ಉಬರ್, ಯಾವುದೇ ಕ್ಯಾಬ್​ಗಳು ರಸ್ತೆಗಿಳಿಯಲ್ಲ.
 •  ಹೋಟೆಲ್ ಮಾಲೀಕರು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ನಾಳೆ ಯಾವುದೇ ಹೋಟೆಲ್​ಗಳು ಓಪನ್ ಇರುವುದಿಲ್ಲ.
 • ನಮ್ಮ ಮೆಟ್ರೋ ಸೇವೆ ಮುಂಜಾನೆಯಿಂದಲೇ ಇರುವುದಿಲ್ಲ.
 • ಬಾರ್, ಪಬ್ ಹಾಗೂ ರೆಸ್ಟೋರೆಂಟ್​ಗಳು ಬಂದ್ ಆಗಲಿವೆ.
 • ಎಪಿಎಂಸಿ, ಕೆ.ಆರ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾರುಕಟ್ಟೆಗಳು ನಾಳೆ ಕಾರ್ಯನಿರ್ವಹಿಸುವುದಿಲ್ಲ.
 • ಬೆಂಗಳೂರಿನಲ್ಲಿ ಬಹುತೇಕ ಕೈಗಾರಿಕೆಗಳು ಬಂದ್.
 • ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳು ಬಂದ್ ಆಗಲಿವೆ.
 • ಆಭರಣ ಮಳಿಗೆಗಳು ಇರಲ್ಲ. ಜೊತೆಗೆ ಚಿಕ್ಕಪೇಟೆ ಬಟ್ಟೆ ಅಂಗಡಿಗಳು ಕೂಡಾ ನಾಳೆ ಕದ ತೆರೆಯುವುದಿಲ್ಲ.
 • ಇನ್ನು ಬೀದಿ ಬದಿ ವ್ಯಾಪಾರ, ಅಂಗಡಿ ಮುಂಗಟ್ಟುಗಳು ಕ್ಲೋಸ್ ಇರಲಿವೆ.
 • ಹೋಲ್ಸೇಲ್ ಬಟ್ಟೆ ವ್ಯಾಪಾರ ಬಂದ್.
 • ಶಾಲಾ- ಕಾಲೇಜು , ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸಲ್ಲ.
 • ಮಾಲ್, ಸೂಪರ್ ಮಾರ್ಕೆಟ್​ಗಳು ಸಂಪೂರ್ಣ ಬಂದ್ ಆಗಲಿವೆ.
 • ಇನ್ನು ದೇಶಾದ್ಯಂತ ಪ್ಯಾಸೆಂಜರ್ ರೈಲು, ಎಕ್ಸ್​ಪ್ರೆಸ್ ರೈಲು, ಇಂಟರ್ ಸಿಟಿ ಸೇರಿದಂತೆ ಇತರೆ ರೈಲುಗಳು ಸೇವೆಯೂ ನಾಳೆ ಇರುವುದಿಲ್ಲ.
 • ಕನಿಷ್ಠ ಮಟ್ಟದಲ್ಲಿ ಮಾತ್ರ ಬಸ್​ಗಳ ಕಾರ್ಯಾಚರಣೆ ಮಾಡಲು ಕೆಎಸ್​ಆರ್​ಟಿಸಿ ಆದೇಶ ನೀಡಿದೆ.
 • ಜನದಟ್ಟಣೆಗೆ ಅನುಗುಣವಾಗಿ ಬಿಎಂಟಿಸಿ ಬಸ್​ಗಳು ಓಡಾಟ ನಡೆಸಲಿದೆ.
 • ಖಾಸಗಿ ಬಸ್​ಗಳ ಓಡಾಟ ಇರುವುದು ಅನುಮಾನ
 • ರಾಜ್ಯದ್ಯಾಂತ ಲಾರಿ ಸಂಚಾರ ನಾಳೆ ಸ್ತಬ್ಧವಾಗಲಿದೆ.

ಏನಿರುತ್ತೆ…

ಅಗತ್ಯ ವಸ್ತುಗಳಾದ ಹಾಲು, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಪೆಟ್ರೋಲ್, ಡೀಸೆಲ್ ಬಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ವಿದೇಶದಿಂದ ವಾಪಸ್ಸಾಗುವವರ ಕೈಗೆ ಸ್ಟ್ಯಾಂಪ್​!

0

ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ವಿದೇಶದಿಂದ ವಾಪಾಸ್ಸಾಗುವವರ ಕೈಗೆ ಬೆಂಗಳೂರು ಏರ್​ಪೋರ್ಟ್​ನಲ್ಲಿ ಸ್ಟ್ಯಾಂಪ್ ಹಾಕುವ ಪ್ರಕ್ರಿಯೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಕಟ್ಟೆಚ್ಚರವನ್ನು ವಹಿಸುತ್ತಿದ್ದು, ವಿದೇಶಗಳಿಂದ ಬೆಂಗಳೂರಿಗೆ ಬರುವವರನ್ನು 14 ದಿನಗಳ ಕಾಲ ಪ್ರತ್ಯೇಕೀಕರಣಕ್ಕೆ ಒಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಹಾಗಾಗಿ ವಿದೇಶಗಳಿಂದ ಬರುವವರ ಕೈಗೆ ಸ್ಟ್ಯಾಂಪ್ ಹಾಕಲಾಗುತ್ತದೆ. ಈ ರೀತಿ ಸ್ಟ್ಯಾಂಪ್ ಹಾಕಿಸಿಕೊಂಡ ವ್ಯಕ್ತಿ 14 ದಿನ ಸ್ವಯಂಪ್ರೇರಿತವಾಗಿ ಮನೆಯಲ್ಲಿ ಏಕಾಂತ ವಾಸದಲ್ಲಿರಬೇಕು. ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಅಂತ ದೃಢಪಟ್ಟ ಮೇಲಷ್ಟೇ ಅವರು ಮನೆಯಿಂದ ಹೊರಬರಬಹುದು.  ಒಂದು ವೇಳೆ ಸ್ಟ್ಯಾಂಪ್ ಹಾಕಿಸಿಕೊಂಡ ವ್ಯಕ್ತಿ ನಿಗದಿಗೂ ಮುನ್ನ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ತಕ್ಷಣ ಆರೋಗ್ಯ ಇಲಾಖೆಗೆ ಆತನ ಬಗ್ಗೆ ಮಾಹಿತಿ ನೀಡಬೇಕೆಂದು ಆರೋಗ್ಯ ಇಲಾಖೆ ಆದೇಶಿಸಿದೆ.  

 

ಮಾರ್ಚ್​ 31ರವರೆಗೆ ಬಂದ್ ವಿಸ್ತರಣೆ

0

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಮಾರ್ಚ್ 31ರವರೆಗೆ  ಬಂದ್ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಾರ್ಚ್ 14ರಿಂದ ಶಾಲಾ ಒಂದು ವಾರಗಳ ಕಾಲ ಪಬ್, ಥಿಯೇಟರ್, ಬೇಸಿಗೆ ಶಿಬಿರಗಳು, ಮಾಲ್ಸ್ ಸೇರಿದಂತೆ ಯಾವುದೇ ರೀತಿಯ ಕಾರ್ಯಕರ್ಮಗಳನ್ನು ನಡೆಸದಂತೆ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶಿಸಿದ್ದರು. ಆದರೆ ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಆದೇಶವನ್ನು ಮಾರ್ಚ್ 31ರವರೆಗೆ ವಿಸ್ತರಿಸುವಂತೆ ಯಡಿಯೂರಪ್ಪ ಆದೇಶಿಸಿದ್ದಾರೆ.

ಇನ್ನು ಸೋಂಕು ತಡೆಗೆ ಡಾ.ಅಶ್ವತ್ಥ್ ನಾರಾಯಣ, ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ ಹಾಗೂ ಕೆ.ಸುಧಾಕರ್ ನೇತೃತ್ವದ ನಾಲ್ಕು ಟಾಸ್ಕ್ ಫೋರ್ಸ್​ಗಳನ್ನು ರಚಿಸಲಾಗಿದೆ.

 

ಕೆಎಸ್ಆರ್​ಟಿಸಿಗೂ ತಟ್ಟಿದ ಕೊರೋನಾ ಎಫೆಕ್ಟ್ : 1.85 ಕೋಟಿ ರೂಪಾಯಿ ನಷ್ಟ

0

ಬೆಂಗಳೂರು: ಕೊರೋನಾ ಎಫೆಕ್ಟ್​ಗೆ ರಾಜ್ಯದ ಜನ ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಇದರಿಂದ ರಾಜ್ಯಕ್ಕೆ ಸಾವಿರಾರು ಕೋಟಿಗಳಷ್ಟು ನಷ್ಟವಾಗ್ತಿದೆ. ಡೆಡ್ಲಿ ಕೊರೋನಾ ವೈರಸ್​ಗೆ ಹೆದರಿ ರಾಜ್ಯದ ಜನ ಕೆಎಸ್​ಆರ್​ಟಿಸಿ ಸಾರಿಗೆ ಬಳಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಆದ್ದರಿಂದ ಈಗಾಗಲೇ ಕೆಎಸ್​ಆರ್​ಟಿಸಿ ಬೊಕ್ಕಸಕ್ಕೆ ಸುಮಾರು 1.85 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೆಎಸ್​ಆರ್​ಟಿಸಿ ಮೂಲಗಳಿಂದ ತಿಳಿದು ಬಂದಿದೆ.

ಕೊರೋನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಕಳೆದ ಎರಡು ವಾರಗಳಿಂದ ಜನ ಕೆಎಸ್​ಆರ್​ಟಿಸಿ ಬಸ್ ಏರಲು ಭಯ ಪಡುತ್ತಿದ್ದಾರೆ. ಹಾಗಾಗಿ ಕೆಎಸ್ಆರ್​ಟಿಸಿಯ ಎಸಿ ಸ್ಲೀಪರ್ ಬಸ್, ಕ್ಲಬ್ ಕ್ಲಾಸ್ ಹಾಗೂ ಫ್ಲೈ ಬಸ್​ಗಳಲ್ಲಿ ಜನ ಪ್ರಯಾಣಿಸುತ್ತಿಲ್ಲ. ಆದ್ದರಿಂದ ಕೆಎಸ್​ಆರ್​​ಟಿಸಿ ಬಸ್​ಗಳ ಮುಖ್ಯ ರೂಟ್​​ಗಳಾದ ಹೈದರಾಬಾದ್, ತಿರುಪತಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ, ಪಣಜಿ ಊಟಿ ಹಾಗೂ ಕೊಡೈಕೆನಾಲ್ ಮಾರ್ಗದಲ್ಲಿ ಸಂಚರಿಸುವ 92 ಕ್ಕೂ ಹೆಚ್ಚಿನ ಬಸ್​ಗಳನ್ನು ರದ್ದುಗೊಳಿಸಲಾಗಿದೆ. ಅದರ ಪರಿಣಾಮ ಕೆಎಸ್​ಆರ್​ಟಿಸಿಯ ಬೊಕ್ಕಸಕ್ಕೆ ಸಾವಿರಾರು ಕೋಟಿಯ ನಷ್ಟವಾಗಿದೆ. ಇನ್ನು ಬಿಎಂಟಿಸಿಗೆ 70 ಲಕ್ಷ ರೂಪಾಯಿ ಆದಾಯ ಹಾಗೂ ನಮ್ಮ ಮೆಟ್ರೋಗೆ 40 ಲಕ್ಷ ಆದಾಯ ನಷ್ಟವಾಗಿದೆ.   

ಕೊರೋನಾ ಎಫೆಕ್ಟ್ : ನಾಳೆ ನಡೆಯಬೇಕಿದ್ದ 7, 8, 9 ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

0

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆ 7, 8, 9 ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್ 31 ರವರೆಗೆ ಮುಂದೂಡುವಂತೆ ಆದೇಶಿಸಿದೆ.

ಕೊರೋನಾ ಭೀತಿ ಹಿನ್ನೆಲೆ ಈಗಾಗಲೇ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ನಿಗದಿಯಾಗಿರುವ ಪರೀಕ್ಷೆಗಳನ್ನು ನಡಸಲಾಗುತ್ತದೆ ಎಂಬ ಸುದ್ದಿ ಇತ್ತು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನು ಮುಂದೂಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್​ ಸೂಚಿಸಿದ್ದಾರೆ. ಪರೀಕ್ಷಾ ಮುಂದಿನ ದಿನಾಂಕ ನಿಗದಿಯಾಗಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಸದ್ಯ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ವೇಳಾಪಟ್ಟಿಯಂತೆಯೇ ನಡೆಯಲಿವೆ. 

ಕರ್ನಾಟಕದಲ್ಲಿ ಮೊದಲ ಕರೋನಾ ಪ್ರಕರಣ ದಾಖಲು

0

ಬೆಂಗಳೂರು : ಕರ್ನಾಟಕದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಮಾರ್ಚ್​ 1ರಂದು ಅಮೆರಿಕಾದಿಂದ ಬಂದಿದ್ದ ವ್ಯಕ್ತಿಗೆ ಕಾರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಅಮೆರಿಕಾದಿಂದ ದಂಪತಿ ಬಂದಿದ್ದು, ಇಡೀ ಕುಟುಂಬ ಹಾಗು ಕಾರು ಚಾಲಕ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೋನಾ ಬಾಧಿತ ವ್ಯಕ್ತಿ ಅಮೆರಿಕಾದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದರೆಂದು ತಿಳಿದುಬಂದಿದೆ. ಅವರನ್ನು ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ.

ಇಲ್ಲಿದೆ BSY ಬಜೆಟ್​ನ ಸಂಪೂರ್ಣ ಮಾಹಿತಿ

0

ಬೆಂಗಳೂರು: 2020 -21 ನೇ ಸಾಲಿನ ರಾಜ್ಯ ಆಯವ್ಯಯವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಿದ್ದಾರೆ. 

 2 ಲಕ್ಷ 37 ಸಾವಿರದ 893 ಕೋಟಿ  ರೂ ಮೊತ್ತದ ಬಜೆಟ್ ಇದಾಗಿದ್ದು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಯ ಅಡಿಯಲ್ಲಿ ಶೋಷಿತ ದುರ್ಬಲ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ,  ಹಾಗೆಯೇ ಪರಿಶಿಷ್ಟ ಜಾತಿ-ಪಂಗಡಗಳಿಗೆ SCSP/TSP ಅಡಿಯಲ್ಲಿ 26,930 ಕೋಟಿ ರೂ ಬಿಡುಗಡೆ ಮಾಡಲಾಗುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಇನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗೆ ಶೇ.25ರಷ್ಟು ಸೀಟು ಮೀಸಲಿಡಲಾಗುತ್ತದೆ. ಅಲ್ಲದೆ ಪರಿಣಾಮಕಾರಿ ಕಾರ್ಯಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ. 

ಹಿಂದುಳಿದ ವರ್ಗದ ಯುವಕ-ಯುವತಿಯರಿಗೆ ವಾಹನ ಚಾಲನಾ ತರಬೇತಿಯನ್ನು ನೀಡುವ ವ್ಯವಸ್ಥೆಯನ್ನು ನೀಡಲಾಗುತ್ತದೆ. ಸಹಕಾರ ಸಂಘಗಳ ಆರ್ಥಿಕ ಚಟುವಟಿಕೆಗಾಗಿ 20 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು SSLC ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಬಂದ ಜಿಲ್ಲೆಯ ಹಿಂದುಳಿದ ವರ್ಗದ ಮಕ್ಕಳಿಗೆ 1 ಲಕ್ಷ ರೂ ನೀಡಲಾಗುತ್ತಿದೆ. 

ಇನ್ನು ಆರೋಗ್ಯ ಸಂಬಂಧ ಶಿವಮೊಗ್ಗ, ಮೈಸೂರಿನಲ್ಲಿ 2 ಕೋಟಿ ವೆಚ್ಚದಲ್ಲಿ ಔಷಧಿ ಸಂಸ್ಕರಣಾ ಘಟಕ  ಸ್ಥಾಪಿಸಲಾಗುವುದು. ಚರ್ಮ ಶಿಲ್ಪ 250 ಫಲಾನುಭವಿಗಳಿಗೆ 5 ಲಕ್ಷ ಸಹಾಯಧನವನ್ನು ಒದಲಾಗಿಸುತ್ತದೆ. ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ 250 ಕೋಟಿ ಬಿಡುಗಡೆ ಮಾಡಲಾಗುತ್ತದೆ. ಇನ್ನು ಇ-ವಾಣಿಜ್ಯ ಉತ್ಪನ್ನ ತಲುಪಿಸಲು ವಾಹನ ಖರೀದಿಗಾಗಿ 2.5 ಕೋಟಿ ಅನುದಾನ ನೀಡುವುದಾಗಿ ಬಿಎಸ್​ ವೈ ಹೇಳಿದ್ದಾರೆ. 

ಬಜೆಟ್​ನ ಪ್ರಮುಖಾಂಶಗಳು 

ಅಲ್ಪಸಂಖ್ಯಾತರಿರುವ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 200 ಕೋಟಿ ಅನುದಾನ

5 ಮೊರಾರ್ಜಿ ದೇಸಾಯಿ ಶಾಲೆ ಪದವಿ ಪೂರವ ಕಾಲೇಜಾಗಿ ಉನ್ನತೀಕರಣ

ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರೂ

ಸರ್ವರಿಗೂ ಸೂರು ಕಲ್ಪಿಸಲು 2500 ಕೋಟಿ ರೂ ಮೀಸಲು

ಒಂದೇ ಸೂರಿನಡಿ ಶಿಕ್ಷಣ ನೀಡಲು 100 ಕೋಟಿ ಅನುದಾನ

 

ನೆರೆಯಿಂದ ಹಾಳಾದ ಶಾಲೆಗಳ ಅಭಿವೃದ್ಧಿಗೆ 758 ಕೋಟಿ

ಶಾಸಕರು ತಮ್ಮ ವ್ಯಾಪ್ತಿಯಲ್ಲಿರುವ 3 ಶಾಲೆಗಳನ್ನು ದತ್ತು ಪಡೆಯಬೇಕು

ಮಕ್ಕಳು ತಿಂಗಳ 2 ಶನಿವಾರ ಶಾಲೆಗಳಿಗೆ ಬ್ಯಾಗ್​ ತೆಗೆದುಕೊಂಡು ಹೋಗುವಂತಿಲ್ಲ

ದಾವಣಗೆರೆ, ಉಡುಪಿ, ದೊಡ್ಬಳ್ಳಾಪುರದಲ್ಲಿ ಸ್ಕೌಟ್ಸ್​-ಗೈಡ್ಸ್​ ಕೇಂದ್ರಕ್ಕೆ 4 ಕೋಟಿ ಅನುದಾನ

ಶಿಕ್ಷಕರಿಗಾಗಿ ಶಿಕ್ಷಕ ಮಿತ್ರ ಎಂಬ ಆ್ಯಪ್​ ತೆರೆಯಲಾಗುವುದು

ಉರ್ದು ಶಾಲೆಗಳಲ್ಲಿ ಆಂಗ್ಲಮಾಧ್ಯಮ ಸ್ಥಾಪನೆಗೆ 1 ಕೋಟಿ

ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿ ಮಾಡಲು 10 ಕೋಟಿ ರೂ.

ವಿವಿ ಕಾಲೇಜುಗಳ ಆಡಳಿತ ಮಂಡಳಿಗೆ ತಂತ್ರಜ್ಞಾನ ನೀಡಲು 1 ಕೋಟಿ ರೂ

ಇಂಟರಾಕ್ಟೀವ್ ಆನ್​ಲೈನ್​ ಕೋರ್ಸ್​ ಸ್ಥಾಪನೆಗೆ 1 ಕೋಟಿ ರೂ

5 ಕೋಟಿ ವೆಚ್ಚದಲ್ಲಿ ಜಿಯೋಸ್ಪೆಶೀಯಲ್ ತಂತ್ರಜ್ಞಾನ ಕೇಂದ್ರ

 

ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಲಿಮೆಡಿಸನ್ ಸೇವೆಗಾಗಿ 19 ಕೋಟಿ ಅನುದಾನ

ಶಿರಸಿ ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆ ಆಸ್ಪತ್ರೆಯಾಗಿ ನಿರ್ಮಾಣ

ಮಕ್ಕಳನ್ನು ‘ಶ್ರವಣ ದೋಷ ಮುಕ್ತ ‘ ಮಾಡಲು 28 ಕೋಟಿ ರೂ ಮೀಸಲು

ಬಿಪಿಎಲ್​ ಕಾರ್ಡ್​ದಾರರಿಗೆ 5 ಕೋಟಿ ವೆಚ್ಚದಲ್ಲಿ ಪೆರಿಟೋನಿಯಲ್​ ಡಯಾಸಿಸ್​ ಸೇವೆ

5 ಆಸ್ಪತ್ರೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಗೆ 5 ಕೋಟಿ  ಅನುದಾನ

ಹೃದಯ ರೋಗ ಚಿಕಿತ್ಸೆಗಾಗಿ ಕ್ಯಾತ್​ಲ್ಯಾಬ್ ಸ್ಥಾಪನೆ

ಹಾವೇರಿಯಲ್ಲಿ ಆಯುಷ್​ ಸಂಯುಕ್ತ ಆಸ್ಪತ್ರೆಗೆ 5 ಕೋಟಿ ಅನುದಾನ 

 

ನವಜಾತ ಶಿಶುಗಳ ಪೋಷಣೆಗಾಗಿ ಆಧುನಿಕ ಮಕ್ಕಳ ಆರೋಗ್ಯ ಕೇಂದ್ರ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾಲಿಕ್ಯುಲಾರ್ ಬಯಾಲಜಿ ಲ್ಯಾಬ್

ಒಂದು ಚರ್ಮಶಾಸ್ತ್ರ, ಸೌಂದರ್ಯವರ್ಧಕ ಶಾಸ್ತ್ರ ಸಂಸ್ಥೆ, ಜಿರಿಯಾಟ್ರಿಕ್ಸ್​ ಸ್ಥಾಪನೆ

ಮೆಡಿಕಲ್ ವಿದ್ಯಾರ್ಥಿಗಳಿಗಾಗಿ ರಾಜೀವ್ ಗಾಂಧಿ ವಿವಿಯಲ್ಲಿ ಕೇಂದ್ರೀಕೃತ ಉದ್ಯೋಗ ಕೋಶ

 

18 ವರ್ಷದ ಕೆಳಗಿರುವ ಮಕ್ಕಳ ಅಭಿವೃದ್ಧಿಗಾಗಿ 36,340 ಕೋಟಿ

7 ಬಾಲಮಂದಿರ ಸ್ಥಾಪನೆಗಾಗಿ 5.67 ಕೋಟಿ

ಶೋಷಿತ ವರ್ಗದವರಿಗೆ ಆಶ್ರಯ ನೀಡುವ ಸಂಸ್ಥೆಗಳಿಗೆ 5 ಕೋಟಿ

 

ನೆರೆಯಿಂದ ಹಾಳಾಗಿರುವ 842 ಅಂಗನವಾಡಿ ಪುನರ್​ ನಿರ್ಮಾಣಕ್ಕೆ 138 ಕೋಟಿ

ಮಹಿಳೆಯರ ಸುರಕ್ಷೆಗಾಗಿ ಮಹಿಳಾ ಸುರಕ್ಷತಾ ಪೋರ್ಟಲ್​ ಪ್ರಾರಂಭ

ಉಪಕಾರ ಯೋಜನೆ ಜಾರಿಗೆ ತಂದು 1 ಕೋಟಿ ಅನುದಾನ

ಕಿರು ಸಾಲ ಯೋಜನೆಯಡಿ 20 ಕೋಟಿ ಅನುದಾನ

ಟ್ರಾನ್ಸ್​ಜೆಂಡರ್​ ನೀತಿಗೆ 70 ಲಕ್ಷ ರೂ ಅನುದಾನ

 

ಶ್ರವಣದೋಷವುಳ್ಳ  ವ್ಯಕ್ತಿಗಳ ಉದ್ಯೋಗಕ್ಕಾಗಿ 60 ಲಕ್ಷ ಅನುದಾನ

ದೃಷ್ಟಿದೋಷವುಳ್ಳವರಿಗಾಗಿ 30 ಲಕ್ಷ ವೆಚ್ಚದಲ್ಲಿ ಬ್ರೈಲ್​ ಕಂ ಟಾಕಿಂಗ್​​ ಲೈಬ್ರೆರಿ

ಅಂಧ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಗಾಗಿ 1.25 ಕೋಟಿ

ಅಂಧ ತಾಯಂದಿರಿಗಾಗಿ ಮಾಸಿಕ 200 ರೂ ಶಿಶುಪಾಲನಾ ಭತ್ಯೆ

 

ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಪ್ರೀಪೇಯ್ಡ್​  ಹೆಲ್ತ್​ ಕಾರ್ಡ್​

ವನಿತಾ ಸಂಗಾತಿ ಯೋಜನೆಯಡಿ ಬಸ್​ ಪಾಸ್​ ನೀಡಲು 25 ಕೋಟಿ

ಕಾರ್ಮಿಕರಿಗೆ  ರಕ್ಷಣೆ ನೀಡಲು 10 ಮೊಬೈಲ್ ಕ್ಲಿನಿಕ್​ ಪ್ರಾರಂಭ

110 ಕಿತ್ತೂರು ‘ರಾಣಿ ಚೆನ್ನಮ್ಮ’  ಶಿಶುಪಾಲನಾ ಕೇಂದ್ರ ಸ್ಥಾಪನೆ  

 

ಆಹಾರ ತಂತ್ರಾಶವನ್ನು ಉನ್ನತೀಕರಣಗೊಳಿಸಲು ಆದ್ಯತೆ

‘ಇ-ಮಾಪನ‘ ತಂತ್ರಾಂಶವನ್ನು ಉನ್ನತೀಕರಣಗೊಳಿಸಲು ಆದ್ಯತೆ

ಸರ್ವೋದಯ ಮತ್ತು  ಕ್ಷೇಮಾಭಿವೃದ್ಧಿ ವಲಯಕ್ಕೆ ಒಟ್ಟು 72,093 ಕೋಟಿ

 

ಬಜೆಟ್​ನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆ

ಪೆಟ್ರೋಲ್​ ಬೆಲೆ ಒಂದು ಲೀಟರ್​ಗೆ 1 ರೂ. 60 ಪೈಸೆ ಹೆಚ್ಚಳ

ಡೀಸೆಲ್​ ಬೆಲೆ ಒಂದು ಲೀಟರ್​ಗೆ 1ರೂ 59 ಪೈಸೆ ಹೆಚ್ಚಳ

ಎಲ್ಲಾ ರೀತಿಯ ಮದ್ಯದ ಬೆಲೆಯಲ್ಲಿಯೂ ಹೆಚ್ಚಳ ಆಗಲಿದೆ

 

ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​

ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ 10 ಸಾವಿರ ರೂ ಸಹಾಯಧನ

ಬೆಳೆ ವಿಮೆ ಸಮಯಕ್ಕೆ ಸರಿಯಾಗಿ ನೀಡಲು 900 ಕೋಟಿ ಮೀಸಲು

ಬರ ನಿರೋಧಕ ಬೆಳೆಗಳ ಪ್ರೋತ್ಸಾಹಕ್ಕೆ ರೈತ ಸಿರಿ ಯೋಜನೆ ಜಾರಿ

 

ಸಿರಿ ಧಾನ್ಯ ಬೆಳಗೆ ಪ್ರತಿ ಹೆಕ್ಟೇರ್​ಗೆ 10 ರಿಂದ 20 ಸಾವಿರ ಪ್ರೋತ್ಸಾಹ ಧನ

ಟೆಫ್​, ಚಿಯಾ, ಕ್ವಿನೋವಾ ಬೆಳೆಗಳು ಸಿರಿಧಾನ್ಯಗಳಿಗೆ  ಸೇರ್ಪಡೆ

ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸಲು ಪಾಲಿಮರ್​ ಲೇಪನ ಮಾಡಲಾಗುವುದು

ಮಣ್ಣು ಮತ್ತು ನೀರು ಪರೀಕ್ಷೆಗೆ ಸಂಚಾರಿ ಕೃಷಿ  ಹೆಲ್ತ್​ ಕ್ಲಿನಿಕ್​ಗಳ ಸ್ಥಾಪನೆ

ಈ ಸಂಚಾರಿ ಘಟಕಗಳು ಹಳ್ಳಿಗೆ ತೆರಳಿ ಸ್ಥಳದಲ್ಲೇ ಮಣ್ಣು, ನೀರು ಪರೀಕ್ಷೆ ಮಾಡುತ್ತವೆ.

 

ಸಾವಯವ ಕೃಷಿಗೆ ಉತ್ತೇಜಿಸಲು ನೀರಿನಲ್ಲಿ ಕರಗುವ ಗೊಬ್ಬರ ಬಳಕೆ

ಸೂಕ್ತ ಪೌಷ್ಠಿಕಾಂಶ ಮತ್ತು ಹೈಡ್ರೋಜೆಲ್​ ಬಳಕೆಗೆ ಉತ್ತೇಜನ

ಸಾವಯವ ಕೃಷಿ ಉತ್ತೇಜನಕ್ಕೆ 200 ಕೋಟಿ ಬಜೆಟ್​ನಲ್ಲಿ ನಿಗದಿ

ರಾಜ್ಯದಲ್ಲಿ 1.63 ಕೋಟಿ ಮಣ್ಣು ಆರೋಗ್ಯ ಕಾರ್ಡ್​ಗಳ ವಿತರಣೆ

ಈ ಕಾರ್ಡ್​ಗಳನ್ನು ಆಧರಿಸಿ ರೈತರು ವಿಶೇಷ ಬೆಳೆ ಬೆಳೆಯಲು ಉತ್ತೇಜನ

 

ಆಹಾರ ಸಂಸ್ಕರಣಾ ವಲಯದ ಬಲವರ್ಧನೆಗೆ ವಿಶೇಷ ಕ್ರಮಗಳು

ಕೃಷಿ ಮಹಾಮಂಡಲ, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆ

ಕೇಂದ್ರದ ಆಹಾರ ಮತ್ತು ತೋಟಗಾರಿಕೆ ಸಂಸ್ಥೆಗಳ ಜೊತೆಗೂಡಿ ಯೋಜನೆ

ಆಹಾರ ಸಂಸ್ಕರಣೆ, ಧಾನ್ಯಗಳ ರಫ್ತು ಮಾಡಲು ಯೋಜನೆಗಳ ಜಾರಿ

 

ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಆಧರಿಸಿ ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹ

ಈ ಜಿಲ್ಲೆಗಳ 14 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ರೈತರಿಗೆ ಸೂಕ್ತ ಮಾಹಿತಿ

2500 ಗ್ರಾಮಗಳಲ್ಲಿ ರೈತರಿಗೆ ಮಳೆ ಆಶ್ರಿತ ಬೆಳೆ ಬೆಳೆಯಲು ತರಬೇತಿ ಕಾರ್ಡ್​

ಇದಕ್ಕಾಗಿ 10 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರದ ಕ್ರಿಯಾ ಯೋಜನೆ

 

ರಾಜ್ಯದ 76 ತಾಲೂಕುಗಳಲ್ಲಿ ಅಂತರ್ಜಲದ ಪರಿಸ್ಥಿತಿ ಗಂಭೀರ

ಈ ಪ್ರದೇಶದಲ್ಲಿ 4.75 ಲಕ್ಷ ಹೆಕ್ಟೇರ್​ಗಾಗಿ 100  ಜಲಾನಯನ ಯೋಜನೆ

4 ವರ್ಷಗಳಲ್ಲಿ 810 ಅತಿ ಸಣ್ಣ ಜಲಾಮೃತ ಯೋಜನೆಗಳು ಜಾರಿ

ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಜಲಾಮೃತ ಯೋಜನೆಗಳು

 

ಶಿವಮೊಗ್ಗದ ಕೃಷಿ ತೋಟಗಾರಿಕೆ ವಿಜ್ಞಾನ ವಿವಿಗೆ 787 ಎಕರೆ ಕಂದಾಯ ಭೂಮಿ

ಇರುವಕ್ಕಿ ಗ್ರಾಮದಲ್ಲಿ ನೀಡಿರುವ ಭೂಮಿಯಲ್ಲಿ ಕೃಷಿ ಸಂಬಂಧಿ ಸಂಶೋಧನೆ

155 ಕೋಟಿ ವೆಚ್ಚದಲ್ಲಿ ಮಲೆನಾಡು ಕೃಷಿ ಚಟುವಟಿಕೆಗಳ ಬಗ್ಗೆ ಸಂಶೋಧನೆ

 

ಭಾರತದ ತೋಟಗಾರಿಕೆ ರಾಜ್ಯ ಎಂದು ಕರ್ನಾಟಕ ಹೆಗ್ಗಳಿಕೆ ಪಡೆದಿದೆ

ರಾಜ್ಯದ 32 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು

ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಶೀತಲ ಗೃಹಗಳ ನಿರ್ಮಾಣ

75 ಕೋಟಿ ವೆಚ್ಚದಲ್ಲಿ 5 ಸಾವಿರ ಮೆಟ್ರಿಕ್​ ಟನ್​ ಸಾಮರ್ಥ್ಯದ 10 ಶೀತಲ ಗೃಹ

 

ಸಣ್ಣ, ಅತಿ ಸಣ್ಣ ರೈತರು ತೋಟಗಾರಿಕೆಗೆ ಉತ್ತೇಜನ ನೀಡಲು ಯೋಜನೆ

ಇದಕ್ಕಾಗಿ ಪ್ರತಿ ಹೆಕ್ಟೇರಿಗೆ 5 ರಿಂದ 10 ಸಾವಿರ ನೇರ ಖಾತೆಗೆ ಸಹಾಯಧನ

1,46 ಲಕ್ಷ ಎಕರೆ ಪ್ರದೇಶಕ್ಕೆ ಹನಿ ನೀರಾವರಿ, ತುಂತುರು ನೀರಾವರಿ

ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷದಲ್ಲಿ 627 ಕೋಟಿ ಅನುದಾನ ಮೀಸಲು

 

ರಾಜ್ಯದ ಪ್ರತಿ ಗ್ರಾಮಗಳಲ್ಲಿ ಜಲಗ್ರಾಮ ಕ್ಯಾಲೆಂಡರ್​ ಸ್ಥಾಪನೆಗೆ ಕ್ರಮ

ಪಶ್ಚಿಮ ಘಟ್ಟದಲ್ಲಿ ನದಿ ನೀರು ಬಳಕೆಗೆ ಕಿಂಡಿ ಅಣೆಕಟ್ಟು ಯೋಜನೆ ಜಾರಿ

ಕಿಂಡಿ ಅಣೆಕಟ್ಟು (ವೆಂಟೆಡ್​ ಡ್ಯಾಮ್ಸ್​) ಯೋಜನೆಗೆ ಮಾಸ್ಟರ್​ ಪ್ಲ್ಯಾನ್​

ಕಳಸಾ ಬಂಡೂರಿ, ಮಹದಾಯಿ ಯೋಜನೆಗೆ 500 ಕೋಟಿ ನಿಗದಿ

ಎತ್ತಿನಹೊಳೆ ಯೋಜನೆ ಜಾರಿಗೆ 2020-21ರಲ್ಲಿ 1500 ಕೋಟಿ ನಿಗದಿ

ತುಂಗಭದ್ರಾ ಜಲಾಶಯದ ನೀರು ಬಳಕೆಗೆ ಯೋಜನಾ ವರದಿ

ತುಂಗಭದ್ರಾ ಯೋಜನಾ ವರದಿ ತಯಾರಿಗೆ 20 ಕೋಟಿ ನಿಗದಿ

ಹೊಸ ಏತ ನೀರಾವರಿ ಯೋಜನೆಗಳ ಜಾರಿಗೆ 5000 ಕೋಟಿ ನಿಗದಿ

ತಿಂತಿಣಿ ಬ್ರಿಡ್ಜ್​ ಬಳಿ ಜಲಾಶಯ ನಿರ್ಮಾಣಕ್ಕೆ ಯೋಜನಾ ವರದಿ

 

ಮತ್ಸ್ಯ ವಿಕಾಸ ಯೋಜನೆ ಜಾರಿಗೆ  ತರಲು 1.5 ಕೋಟಿ

1 ಸಾವಿರ ಮೀನುಗಾರ ಮಹಿಳೆಯರ  ಗುಂಪು ರಚಿಸಿ  ಸಬಲೀಕರಣ

ಈ ಯೋಜನೆಗೆ ಪ್ರಸಕ್ತ ವರ್ಷದಲ್ಲಿ 5 ಕೋಟಿ ಅನುದಾನ

ಮುಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ  ಕೇಂದ್ರಕ್ಕೆ 2 ಕೋಟಿ

ಮಂಗಳೂರಿನ ಕುಳಾಯಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ

ಕೇಂದ್ರದ ಸಾಗರಮಾಲಾ ಯೋಜನೆ ಸಹಭಾಗಿತ್ವಕ್ಕೆ ರಾಜ್ಯದ 12.50 ಕೋಟಿ

ಉಡುಪಿಯ ಹೆಜಮಾಡಿಯಲ್ಲಿ ಮೀನುಗಾರಿಕೆ ಬಂದರಿಗೆ 181 ಕೋಟಿ

ಉಡುಪಿ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ

ಕಾರವಾರ ಮೀನುಗಾರಿಕೆ  ಬಂದರು ಅಭಿವೃದ್ಧಿಗೆ 4 ಕೋಟಿ

ಕಾರವಾರದ ತೆಂಗಿನಗುಂಡಿ ಬಂದರು ಹೂಳೆತ್ತಲು 5 ಕೋಟಿ

ಉಡುಪಿಯ ಮರವಂತೆ ಬಂದರು 2ನೇ ಹಂತದ ಕಾಮಗಾರಿಗೆ 85 ಕೋಟಿ

ಸಹಕಾರ ಸಂಘಗಳ ಟ್ರ್ಯಾಕ್ಟರ್​, ರೈತೋಪಕರಣಗಳ ಸಾಲ ಮನ್ನಾ

2020-21ನೇ ಸಾಲಿನಲ್ಲಿ ಇದಕ್ಕಾಗಿ 446 ಕೋಟಿ ಅನುದಾನ ಮೀಸಲು

ಅಡಿಕೆ ಬೆಳೆಗಾರರ 2ಲಕ್ಷ ಸಾಲಕ್ಕೆ ಶೇ.5ರಷ್ಟು ಬಡ್ಡಿ ವಿನಾಯಿತಿ

ಕೃಷಿ ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿಗೆ 8 ಕೋಟಿ ಅನುದಾನ

2020-21ನೇ ವರ್ಷಕ್ಕೆ ನೌಕರರ ವೇತನ ಭತ್ಯೆ 10ಸಾವಿರ ಕೋಟಿ ಹೆಚ್ಚಳ

 

ಭಾಗ್ಯಲಕ್ಷ್ಮಿ, ಮಕ್ಕಳಿಗೆ ಬೈಸಿಕಲ್​ ಯೋಜನೆ ಮುಂದುವರೆಯುತ್ತವೆ

ಕೃಷಿ ಉತ್ಪನ್ನ ಸಂಸ್ಕರಣೆ, ಮಾರುಕಟ್ಟೆ ಪ್ರೋತ್ಸಾಹಕ್ಕೆ ಕೃಷಿ ನೀತಿ

ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಗೆ 825 ಕೋಟಿ ಅನುದಾನ

ಮುಂದಿನ ವರ್ಷದಲ್ಲಿ ಯೋಜನೆಗೆ 2600 ಅನುದಾನ ಮೀಸಲು

ರೈತರಿಗೆ ಕೇಂದ್ರದ 6 ಸಾವಿರ ಜೊತೆ ರಾಜ್ಯದ ಪಾಲು 4 ಸಾವಿರ

 

ಸಿರಿ ಧಾನ್ಯಗಳನ್ನು ಬೆಳೆಯಲು ಹೆಕ್ಟೇರ್​ಗೆ 10 ಸಾವಿರ ಅನುದಾನ

ಸಿರಿ ಧಾನ್ಯಗಳಿಗೆ ಮತ್ತಷ್ಟು ಬೆಳೆಗಳ ಸೇರ್ಪಡೆಗೆ ನಿರ್ಧಾರ

ನೀರಿನಲ್ಲಿ ಕರಗುವ ಗೊಬ್ಬರ ಬಳಕೆಗೆ ಹೆಚ್ಚಿನ ಉತ್ತೇಜನ

 

ನೀರು ಮತ್ತು ಗೊಬ್ಬರ ಬಳಕೆಯ ದಕ್ಷತೆ ಹೆಚ್ಚಿಸಲು ಕ್ರಮ

ಕೃಷಿ ಉತ್ತಜನಕ್ಕೆ ರಾಜ್ಯದಲ್ಲಿ 40 ಪ್ರಾತ್ಯಕ್ಷಿಕೆ ಕೇಂದ್ರಗಳ ಸ್ಥಾಪನೆ

ಆಹಾರ ಸಂಸ್ಕರಣಾ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು

ಕೇಂದ್ರದ ಸಹಯೋಗದಲ್ಲಿ ಮೌಲ್ಯವರ್ಧಿತ ಆಹಾರ ಸಂಸ್ಕರಣೆ

 

ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣದ ಭರವಸೆ ನೀಡಿದೆ

5 ಶತಕೋಟಿ ಡಾಲರ್​ ಬಜೆಟ್​ ಗುರಿ ಹೊಂದಿದೆ ಕೇಂದ್ರ ಸರ್ಕಾರ

ದೇಶದ ಇತಿಹಾಸದಲ್ಲಿ ಕೃಷಿಗೆ ಶೇ. 9.5 ರಷ್ಟು ಅನುದಾನ ಮೀಸಲು

ಕೇಂದ್ರದ ಆಶಯದಲ್ಲಿಯೇ ರಾಜ್ಯದ ಮುಂಗಡಪತ್ರ ಮಂಡನೆ

 

ನೆರೆ ಸಂತ್ರಸ್ತರಿಗೆ ಪರಿಹಾರ ಪುನರ್ವಸತಿ ಕಲ್ಪಿಸಲು ಅನುದಾನ

ವಿವಿಧ ಇಲಾಖೆಗಳ ಅನುದಾನ ಬಳಸಿಕೊಂಡು ಆಶ್ರಯ

ಬೆಳೆ ಹಾನಿಗೆ 1 ಹೆಕ್ಟೇರ್​ 10 ಸಾವಿರಕ್ಕೂ ಹೆಚ್ಚು ಪರಿಹಾರ

ಪರಿಹಾರದ ಹಣ ಈಗಾಗ್ಲೇ ಹೆಚ್ಚಿನ ಪ್ರಮಾಣದಲ್ಲಿ ವಿತರಣೆ

ಅಭಿವೃದ್ಧಿಯನ್ನೇ ಆಡಳಿತ ಮಂತ್ರವಾಗಿಸಿ ಕಾರ್ಯ ಯೋಜನೆ

ಕೇಂದ್ರದಿಂದ 1,800 ಕೋಟಿ ರೂ. ಅನುದಾನ ಬಂದಿದೆ

 

 

ರಾಜ್ಯ ಸರ್ಕಾರ ರಾಜ ಸ್ವ ಸಂಪನ್ಮೂಲ

8,887 ಕೋಟಿ ಅನುದಾನ ಕೇಂದ್ರದಿಂದ ಕಡಿತವಾಗಿದೆ

ಜಿಎಸ್​ಟಿ ಪರಿಹಾರದಲ್ಲೂ 3 ಸಾವಿರ ಕೋಟಿ ಕಡಿತ

ಈ ಕಾರಣದಿಂದ ಆಯವ್ಯಯದ ಗುರಿ ತಲುಪಲು ವಿಫಲ

2020-21ಕ್ಕೆ ಕೇಂದ್ರದ ತೆರಿಗೆಯ ಪಾಲು ನಿರ್ಧರಿಸಲಾಗಿದೆ

14ನೇ ಹಣಕಾಸು ಆಯೋಗದಲ್ಲಿ ಶೇ. 4.71 ಹಣ ಹಂಚಿಕೆ

15ನೇ ಹಣಕಾಸು ಆಯೋಗದಿಂದ ಶೇ. 3.64ಕ್ಕೆ ಇಳಿಕೆ

ಬಡ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ

 

ವಿಜಯಪುರ, ಮಂಡ್ಯ ಜಿಲ್ಲೆಗಳಲ್ಲಿ ಬೃಹತ್​ ಕುಡಿವ ನೀರಿನ ಯೋಜನೆ

AIIB ನೆರವಿನೊಂದಿಗೆ ಯೋಜನೆ ಜಾರಿಗೆ 700 ಕೋಟಿ ರೂ ಅನುದಾನ

ಎಲ್ಲಾ ಹಳ್ಳಿಗಳ ಮನೆ ಮನೆಗೂ ನೀರು ತಲುಪಿಸಲು ಯೋಜನೆ

ಮನೆ ಮನೆಗೆ ಗಂಗೆ ಯೋಜನೆ ಅಡಿಯಲ್ಲಿ 10 ಲಕ್ಷ ಮನೆ ಸಂಪರ್ಕ ಗುರಿ

 

ರಾಜ್ಯದ 17 ನದಿ ಪಾತ್ರದ ಮಾಲಿನ್ಯ ತಡೆಗೆ 1,670 ಕೋಟಿ ರೂ ವೆಚ್ಚ

20 ನಗರ ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ಪ್ರಸಕ್ತ ವರ್ಷ ಕ್ರಮ

ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 100 ಕೋಟಿ ರೂ ಅನುದಾನ ನಿಗದಿ

ಶುದ್ಧೀಕರಿಸಿದ ನೀರು ಗೃಹೇತರ ಯೋಜನೆಗೆ ಮರುಬಳಕೆ

ಬಳ್ಳಾರಿ, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡದಲ್ಲಿ ಯೋಜನೆ ಜಾರಿ

ಪ್ರಸಕ್ತ ವರ್ಷದಲ್ಲಿ ಇದಕ್ಕಾಗಿ 20 ಕೋಟಿ ರೂ ಅನುದಾನ ಮೀಸಲು

 

2020 ನವೆಂಬರ್​ನಲ್ಲಿ ಬೆಂಗಳೂರಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ

ರಾಮನಗರದ ಹೇರೋಹಳ್ಳಿಯಲ್ಲಿ ಎಲೆಕ್ಟ್ರಿಕಲ್​ ವಾಹನ ಕ್ಲಸ್ಟರ್​

ಈ ಕ್ಲಸ್ಟರ್​ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ನೀಡಿಕೆ

ಡಿಫೆನ್ಸ್​, ಏರೋಸ್ಪೇಸ್​ ವಸ್ತುಗಳ ಉತ್ಪಾದನೆ ಕ್ಲಸ್ಟರ್​ ಸ್ಥಾಪನೆ

ಬೆಂಗಳೂರು ಬಳಿ ಹರಳೂರು, ಮುದ್ದೇನಹಳ್ಳಿಯಲ್ಲಿ ಕ್ಲಸ್ಟರ್​ ಸ್ಥಾಪನೆ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಕೈಗಾರಿಕಾ ಕ್ಲಸ್ಟರ್​ ಸ್ಥಾಪನೆ

ಕೈಗಾರಿಕೆ ಅಭಿವೃದ್ಧಿಗೆ ಸೆಂಟರ್​ ಫಾರ್​ ಸ್ಮಾರ್ಟ್​ ಮ್ಯಾನ್ಯುಫ್ಯಾಕ್ಚರಿಂಗ್​ ಸಂಸ್ಥೆ

ಐದು ಕೋಟಿ ವೆಚ್ಚದಲ್ಲಿ ಈ ಸಂಸ್ಥೆ ಸ್ಥಾಪನೆಯ ಉದ್ದೇಶವಿದೆ

 

ತೆಂಗಿನ ನಾರು ಮಾರುಕಟ್ಟೆ ಸ್ಥಾಪನೆ ಅಭಿವೃದ್ಧಿಗೆ 5 ಕೋಟಿ ನಿಗದಿ

ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್​ ನಿರ್ಮಾಣ

ಎರಡು ನೂಲಿನ ಘಟಕ ಸ್ಥಾಪನೆಗೆ 50 ಲಕ್ಷ ಸಹಾಯಧನ

ಹಾವೇರಿಯ ಶಿಗ್ಗಾಂವಿ, ಉಡುಪಿಯ ಕಾರ್ಕಳದಲ್ಲಿ ಜವಳಿ ಪಾರ್ಕ್​

 

ನೇಕಾರರ ಸಾಲ ಮನ್ನಾ ಯೋಜನೆಗೆ 2020-21ರಲ್ಲಿ 79.57 ಕೋಟಿ ರೂ

ಕಿತ್ತೂರು ಮಾರ್ಗವಾಗಿ ಧಾರವಾಡ ಬೆಳಗಾವಿ ರೈಲು ಸಂಪರ್ಕ

ಈ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಸರ್ಕಾರದ ಒಪ್ಪಿಗೆ

ಶೇ. 50ರಷ್ಟು ಕಾಮಗಾರಿ ವೆಚ್ಚ ಭರಿಸುವುದಕ್ಕೂ ಸರ್ಕಾರದ ಒಪ್ಪಿಗೆ

 

ಬೆಂಗಳೂರಿನ ಆನಂದರಾವ್​ ಸರ್ಕಲ್​ನಲ್ಲಿ ಸರ್ಕಾರಿ ಕಚೇರಿಗಳ ಸಮೂಹ

25 ಅಂತಸ್ತುಗಳ ಅವಳಿ ಗೋಪುರ ಕಟ್ಟಡ ನಿರ್ಮಾಣಕ್ಕೆ 400 ಕೋಟಿ

ಈ ಬಗ್ಗೆ ವಿವರವಾದ ಯೋಜನಾ ವರದಿ ಜಾರಿಗೆ ಪ್ರಸಕ್ತ ವರ್ಷ ಕ್ರಮ

 

ಖಾಸಗಿ ಸಹಭಾಗಿತ್ವದಲ್ಲಿ ಕಾರವಾರದ ಬೇಲೆಕೇರಿ ಬಂದರು ಅಭಿವೃದ್ಧಿ

2500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಟೆಂಡರ್​ ಆಹ್ವಾನಿಸಲು ಕ್ರಮ

ರಾಜ್ಯದಲ್ಲಿ ಹೊಸದಾಗಿ ಇನ್ನೋವೇಷನ್​ ಹಬ್ಬ ಸ್ಥಾಪನೆಗೆ 4 ಕೋಟಿ ರೂ

IISC ಸಹಯೋಗದಲ್ಲಿ 5 ಜಿ ತಂತ್ರಜ್ಞಾನ ಅಭಿವೃದ್ಧಿಗೆ 60 ಕೋಟಿ ರೂ ಅನುದಾನ

 

ಬೆಂಗಳೂರಲ್ಲಿ ಬಯೋ ‘ಕೃಷಿ ನಾವಿನ್ಯತಾ ಕೇಂದ್ರ’ ಸ್ಥಾಪನೆಗೆ 20 ಕೋಟಿ

1000 ಪದವೀಧರರಿಗೆ ಕೌಶಲ್ಯ ತರಬೇತಿ ನೀಡಲು 2 ಕೋಟಿ ಅನುದಾನ

5 ಕೋಟಿ ವೆಚ್ಚದಲ್ಲಿ 5 ಜಿಲ್ಲೆಗೆ ಸಂಚಾರಿ ತಾರಾಲಯ ವಿಸ್ತರಣೆ

ರಾಜ್ಯದ ವಿಜ್ಞಾನ ಸಂಸ್ಥೆಗಳ ಮೂಲಕ 500 ವಿದ್ಯಾರ್ಥಿಗಳ ಆಯ್ಕೆ

ಮಾಸಿಕ ಒಂದು ಸಾವಿರ ಶಿಷ್ಯವೇತನ ನೀಡಿ ಎರಡು ವರ್ಷಗಳ ತರಬೇತಿ

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗೆ ಪ್ರಸಕ್ತ ವರ್ಷ 20 ಕೋಟಿ ರೂ

ಇಸ್ರೋ, ಹೆಚ್​ಎಎಲ್​ಗಳ ಸಾಮರ್ಥ್ಯ ಅಭಿವೃದ್ಧಿಗೆ 20 ಕೋಟಿ ವೆಚ್ಚ

 

ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತೀರ್ಮಾನ

ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕ್ರಮ

ಜನ ಸೇವಕ ಯೋಜನೆಯನ್ನು ರಾಜ್ಯದ ಎಲ್ಲಾ ಕಡೆ ವಿಸ್ತರಣೆ

ಸದ್ಯ ಬೆೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆ ಜಾರಿ

ಕರ್ನಾಟಕ -1, ಬೆಂಗಳೂರು-1 ರೀತಿ, ಗ್ರಾಮಗಳಲ್ಲಿ ಗ್ರಾಮ-1 ಜಾರಿ

ಕಬಳಿಕೆ ಆಗಿರುವ ಸರ್ಕಾರಿ ಜಮೀನು ವಶಕ್ಕೆ ಪಡೆಯಲು ಸಮಿತಿ ರಚನೆ

ಸಾರ್ವಜನಿಕರಿಗೆ ಪ್ರಮಾಣಪತ್ರಗಳನ್ನು ಒದಗಿಸಲು ಸಿದ್ಧ ಸೇವೆ ಜಾರಿಗೆ

ಬೆಳಗಾವಿ ಸುವರ್ಣ ಸೌಧಕ್ಕೆ ಹಂತ ಹಂತವಾಗಿ ವಿವಿಧ ಇಲಾಖೆಗಳ ಹಸ್ತಾಂತರ

ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ

ಜ್ಯೋತಿ ಸಂಜೀವಿನಿ ಯೋಜನೆೆಗೆ 50 ಕೋಟಿ  ಮೀಸಲು

22.5 ಲಕ್ಷ ಸರ್ಕಾರಿ ನೌಕರರಿಗೆ ಈ ಯೋಜನೆಯಿಂದ ಅನುಕೂಲ

ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಡಿಜಿಟಲ್‌ ಮಾಧ್ಯಮ ಜಾಹೀರಾತು ನೀತಿ

ಪೊಲೀಸರಿಗೆ ಪೊಲೀಸ್‌ ಗೃಹಭಾಗ್ಯ-2020 ಯೋಜನೆ ಜಾರಿ

ಮಹಿಳೆಯರ ಸುರಕ್ಷತೆಗೆ ಸುರಕ್ಷಾ ಆ್ಯಪ್‌ ರಚನೆ

ಇದ್ರಿಂದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಕಾರಿ

ಪೊಲೀಸ್‌ ಶ್ವಾನದಳ ಬಲವರ್ಧನೆಗೆ 2.5 ಕೋಟಿ ಅನುದಾನ

ರಾಜ್ಯದಲ್ಲಿ 10 ಹೊಸ ಅಗ್ನಿಶಾಮಕ ದಳ ಠಾಣೆ ಆರಂಭ

ಕಾರವಾರದಲ್ಲಿ 19 ಕೋಟಿ ವೆಚ್ಚದಲ್ಲಿ ಶಾಶ್ವತ ಅಗ್ನಿಶಾಮಕ ಉಪಕರಣ ಅಳವಡಿಕೆ

ಕೆಎಸ್‌ಆರ್‌ಟಿಸಿಗೆ 2450 ಹೊಸ ಬಸ್‌ಗಳ ಖರೀದಿ

ಆಟೋ ಚಾಲಕನ ಮಕ್ಕಳ ವಿದ್ಯಾಭ್ಯಾಸಕ್ಕೆ ವಾರ್ಷಿಕ 2 ಸಾವಿರ ನೆರವು

ಈ ಉದ್ದೇಶಕ್ಕಾಗಿ 40 ಕೋಟಿ ಅನುದಾನ ಮೀಸಲು

ಮಾಜಿ ಸಿಎಂ ಎಸ್‌.ನಿಜಲಿಂಗಪ್ಪ ಅವರ ಮನೆ ಸಂರಕ್ಷಿಸಲು 5 ಕೋಟಿ ಮೀಸಲು

ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ

ಇದಕ್ಕಾಗಿ ಬಜೆಟ್‌ನಲ್ಲಿ 5 ಕೋಟಿ ರೂಪಾಯಿ ಮೀಸಲು

ದೇಶದ ಬೇರೆ ಬೇರೆ ಭಾಗಗಳಲ್ಲಿನ ಧಾರ್ಮಿಕ ಕೇಂದ್ರಗಳಲ್ಲಿ ಅತಿಥಿ ಗೃಹ ನಿರ್ಮಾಣ

ಇದಕ್ಕಾಗಿ ಸರ್ಕಾರ 25 ಕೋಟಿ ರೂಪಾಯಿ ಮೀಸಲು

20 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವನ ಚೈತ್ರ ಯಾತ್ರೆ ಯೋಜನೆ

ಕೊಪ್ಪಳದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 20 ಕೋಟಿ ಮೀಸಲು

ಬಾದಾಮಿಯ ಸಮಗ್ರ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಮೀಸಲು

ರಾಜ್ಯದಲ್ಲಿ ಪ್ರವಾಸೋದ್ಯಮ ವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಟಾಕ್ಸ್‌ ಫೋರ್ಸ್‌ ಸ್ಥಾಪನೆ

ಇನ್ಫೋಸಿಸ್‌ ಸುಧಾಮೂರ್ತಿ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ಸ್ಥಾಪನೆ

ರಾಮನಗರದಲ್ಲಿ ರಣಹದ್ದುಗಳ ಧಾಮ ಅಭಿವೃದ್ಧಿಗೆ 2 ಕೋಟಿ ಅನುದಾನ

ಮಂಗಗಳ ಪುನರ್ವಸತಿಗಾಗಿ 1.25 ಕೋಟಿ ಮೀಸಲು

ಸಾಹಿತಿ ಎಲ್‌.ಎಲ್‌.ಭೈರಪ್ಪ ಹುಟ್ಟೂರು ಅಭಿವೃದ್ಧಿಗೆ 5 ಕೋಟಿ

ಬೆಂಗಳೂರಿನಲ್ಲಿ 2 ಕೋಟಿ ವೆಚ್ಚದಲ್ಲಿ ವಿವೇಕಾನಂದ ಯುವ ಕೇಂದ್ರ ಸ್ಥಾಪನೆ

ಚಿತ್ರದುರ್ಗದ ಮುರುಘಾ ಮಠದಲ್ಲಿ 325 ಅಡಿ ಎತ್ತರದ ಬಸವೇಶ್ವರ ಪ್ರತಿಮೆ ಸ್ಥಾಪನೆ

ಇದಕ್ಕೆ ಸರ್ಕಾರದಿಂದ 20 ಕೋಟಿ ನೆರವು

ಬಸವಕಲ್ಯಾಣದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ

 

ಬೆಂಗಳೂರಿಗರಿಗೆ ಬಜೆಟ್​ನಲ್ಲಿ ಮೀಸಲಾದ ಯೋಜನೆಗಳೇನು?

KIAL ನಲ್ಲಿ 100 ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ

ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ 66 ಕೋಟಿ ಮೀಸಲು

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಉಚಿತ ಬಸ್‌ ಪಾಸ್‌

ಬೆಂಗಳೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಾಣಕ್ಕಾಗಿ 500 ಕೋಟಿ

ರವೀಂದ್ರ ಕಲಾಕ್ಷೇತ್ರ ಮಾದರಿ ಕಲಾಮಂದಿರ ನಿರ್ಮಾಣಕ್ಕೆ 60 ಕೋಟಿ

2 ಕೋಟಿ ವೆಚ್ಚದಲ್ಲಿ ವಿವೇಕಾನಂದ ಯುವ ಕೇಂದ್ರ ಸ್ಥಾಪನೆ

ಶುಭ್ರ ಬೆಂಗಳೂರು ಯೋಜನೆಗೆ 317 ಕೋಟಿ ರೂ. ಮೀಸಲು

ರಾಜಕಾಲುವೆಗಳ ಅಭಿವೃದ್ಧಿಗೆ 200 ಕೋಟಿ ಮೀಸಲು

ಒಳಚರಂಡಿ, ಕುಡಿಯುವ  ನೀರಿಗಾಗಿ ಒಟ್ಟು 1 ಸಾವಿರ ಕೋಟಿ

ತ್ಯಾಜ್ಯದಿಂದ 210 ಕೋಟಿ ವೆಚ್ಚದಲ್ಲಿ ವಿದ್ಯುತ್‌ ತಯಾರಿಸಲು ಕ್ರಮ

ನಾಲ್ಕು ಭಾಗಗಳಲ್ಲಿ ನಾಲ್ಕು ವಿದ್ಯುತ್‌ ಚಿತಾಗಾರಗಳ ಸ್ಥಾಪನೆ

ಮೆಟ್ರೋ ನಿಲ್ದಾಣಗಳ ಬಳಿ 24 ಮೇಲ್ಸೇತುವೆಗಳ ನಿರ್ಮಾಣ

ಸಿಲ್ಕ್‌ಬೋರ್ಡ್‌- K.R. ಪುರ, ಹೆಬ್ಬಾಳ- ಕೆಐಎಲ್‌ಗೆ ಮೆಟ್ರೋ ಮಾರ್ಗ

ಈ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ 14,500 ಕೋಟಿ

ಸಬ್‌ ಅರ್ಬನ್‌ ರೈಲು ಯೋಜನೆಗೆ 500 ಕೋಟಿ ಮೀಸಲು

ಬೈಯಪ್ಪನಹಳ್ಳಿ- ಹೊಸೂರು, ಯಶವಂತಪುರ- ಚನ್ನಸಂದ್ರ ಜೋಡಿ ರೈಲು ಮಾರ್ಗಕ್ಕೆ ಅನುದಾನ

ಬೆಂಗಳೂರು ಒಟ್ಟು ಅಭಿವೃದ್ಧಿಗಾಗಿ 8,344 ಕೋಟಿ ಅನುದಾನ

ಬೆಂಗಳೂರು ಗುರಿಯಾಗಿ ಇಟ್ಟುಕೊಂಡು ಪ್ರತ್ಯೇಕ ಪೌರ ನಿಗಮ ಸ್ಥಾಪನೆ

ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗೆ ಶುಭ್ರ ಬೆಂಗಳೂರು ಯೋಜನೆ

317 ಕೋಟಿ ರೂಪಾಯಿ ಕೆರೆಗಳ ಅಭಿವೃದ್ಧಿಗೆ ಮೀಸಲು

ಬೆಂಗಳೂರಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಅಭಿವೃದ್ಧಿಗೆ ಕ್ರಮ

ರಾಮನಗರ ಜಿಲ್ಲೆಯಲ್ಲಿ 11.5 ಮೆಗಾವ್ಯಾಟ್‌ ಸಾಮರ್ಥ್ಯದ  ವಿದ್ಯುತ್‌ ಘಟಕ

ರಾಜ್ಯದಿಂದ ಶೇ.50ರಷ್ಟು ಅನುದಾನ ಒದಗಿಸಲು ಕ್ರಮ

ಬೆಂಗಳೂರಿನಲ್ಲಿ ಬಿಎಂಟಿಸಿ 600 ಕೋಟಿ ವೆಚ್ಚದಲ್ಲಿ ಡಿಸೇಲ್‌ ಬಸ್‌ಗಳ ಖರೀದಿ

ಬಿಎಂಟಿಸಿಗೆ ವಾರ್ಷಿಕ 100 ಕೋಟಿಯಂತೆ ಸರ್ಕಾರದಿಂದ ಸಾಲ

ಕೇಂದ್ರ ಸರ್ಕಾರದ ಅನುದಾನದಡಿ ಬಿಎಂಟಿಸಿಗೆ 300 ಹವಾನಿಯಂತ್ರಿತ ಎಲೆಕ್ಟ್ರಿಕಲ್‌ ಬಸ್‌ಗಳ ಖರೀದಿ

ರಾಜ್ಯ ಸರ್ಕಾರದಿಂದ 500 ಸಾಮಾನ್ಯ ಎಲೆಕ್ಟ್ರಿಕಲ್‌ ಬಸ್‌ಗಳ ಖರೀದಿ

ಸ್ಮಾರ್ಟ್‌ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಯೋಜನೆ

ಬೆಂಗಳೂರಿನ 12 ಕಡೆ ಬಸ್‌ ಆದ್ಯತಾ ಫಥ 2ನೇ ಹಂತದಲ್ಲಿ ಅನುಷ್ಠಾನ

ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಬಳಕೆಗೆ ಹೆಚ್ಚಿನ ಒತ್ತು

ಹೆಬ್ಬಾಳ, ಕೆ.ಆರ್‌.ಪುರಂ ಮತ್ತು ಸಿಲ್ಕ್‌ಬೋರ್ಡ್‌ನಲ್ಲಿ ಸಂಚಾರ ತಗ್ಗಿಸಲು ಕ್ರಮ

ಬೆಂಗಳೂರಿನ 12 ಅಧಿಕ ಸಾಂದ್ರತೆ ಇರುವ ಸಂಚಾರ ದಟ್ಟಣೆ ಕಡಿಮೆ ಮಾಡಲು 500 ಕೋಟಿ ಮೀಸಲು

ರಾಜ್ಯದಲ್ಲಿ ರಸ್ತೆ ಸುರಕ್ಷಾ ನಿಧಿ ಸ್ಥಾಪನೆ, ಇದಕ್ಕೆ 200 ಕೋಟಿ ಮೀಸಲು

20 ಕೋಟಿ ವೆಚ್ಚದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಾಹನಗಳ ಟ್ರ್ಯಾಕಿಂಗ್‌ ಯೋಜನೆ

ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಅಂಡರ್‌ಗ್ರೌಂಡ್‌ ವಾಹನ ಪಾರ್ಕಿಂಗ್‌ ಯೋಜನೆ

ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿ

ಬೆಂಗಳೂರಿನಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಿಸಲು ಅಪ್ಟಿಕಲ್‌ ಫೈಬರ್‌

ಟಿ.ಜಿ.ಹಳ್ಳಿ ಯೋಜನೆಯಿಂದ 1.7 ಟಿಎಂಸಿ ನೀರು ಬೆಂಗಳೂರಿಗೆ

ಬೆಂಗಳೂರು ಜಲ ಮಂಡಳಿ ನೀರಿನ ಘಟಕಗಳ ನವೀಕರಣಕ್ಕೆ 1,000 ಕೋಟಿ

ಕಾವೇರಿ 5ನೇ ಹಂತದ ಯೋಜನೆಗೆ 5,550 ಕೋಟಿ ಹಣ ಮೀಸಲು

2023ಕ್ಕೆ ಈ ಯೋಜನೆ ಪೂರ್ಣಗೊಳಿಸಲು ಸರ್ಕಾರ ಡೆಡ್‌ಲೈನ್‌

ಬೆಂಗಳೂರು ವಲಯ ಅಭಿವೃದ್ಧಿ 8,772 ಕೋಟಿ ರೂಪಾಯಿ

 

 

ಕೊರೋನಾ ವೈರಸ್ ಲಕ್ಷಣಗಳು ಹಾಗೂ ತಡೆಗಟ್ಟುವ ಕ್ರಮಗಳೇನು?

0

ಬೆಂಗಳೂರು: ಚೀನಾದೆಲ್ಲೆಡೆ ಭಯ ಹುಟ್ಟಿಸಿರುವ ಕೊರೋನಾ ವೈರಸ್ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿದೆ. ನಮ್ಮ ಸಿಲಿಕಾನ್ ಸಿಟಿ ಮೇಲೂ ಕೊರೋನಾದ ಕೆಂಗಣ್ಣು ಬಿದ್ದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ.

ಈ ಮಹಾಮಾರಿ ಕೊರೋನಾವನ್ನು ಪತ್ತೆ ಹಚ್ಚುವುದಾದರೂ ಹೇಗೆ? ಅದರ ಲಕ್ಷಣಗಳೇನು? ಅದು ಯಾವ ರೀತಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ? ಕೊರೋನಾ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳಾದರೂ ಏನು? ಅನ್ನೋದನ್ನು ಗಮನಿಸಬೇಕು. ಆ ಬಗ್ಗೆ ಇಲ್ಲಿದೆ ವಿವರಣೆ. 

ಕೊರೋನಾ ವೈರಸ್ ಹೇಗೆ ಹರಡುತ್ತದೆ?

ಈ ವೈರಸ್​ಗೆ ತುತ್ತಾಗಿರುವವರು  ಕೆಮ್ಮಿದಾಗ, ಸೀನಿದಾಗ ವೈರಸ್​ಗಳು ಆರೋಗ್ಯವಂತ ವ್ಯಕ್ತಿಯನ್ನು ತಗುಲುತ್ತದೆ. ಅಲ್ಲದೆ ಸೋಂಕು ಪೀಡಿತ ವ್ಯಕ್ತಿಯು ಬಳಕೆ ಮಾಡಿದ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿಯು ಮುಟ್ಟುವುದರಿಂದಲೂ ಈ ವೈರಸ್ ಹರಡುತ್ತದೆ.

ಕೊರೋನಾ ವೈರಸ್​ನ ಲಕ್ಷಣಗಳೆನು?

ಸಣ್ಣ ಪ್ರಮಾಣದಲ್ಲಿ ಜ್ವರ, ಕೆಮ್ಮು, ಸುಸ್ತು, ತಲೆನೋವು, ಅತಿಸಾರ, ಉಸಿರಾಟದ ಸಮಸ್ಯೆ ಹಾಗೂ ಬಹು ಅಂಗಾಂಗಗಳ ವೈಫಲ್ಯದಂತಹ ಲಕ್ಷಣಗಳು ಕಂಡು ಬರುತ್ತದೆ.

ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ  ಕ್ರಮಗಳು:

 • ಮೊದಲನೆಯದಾಗಿ ಶುಚಿತ್ವ ಕಾಪಾಡಬೇಕು. ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕೈ ತೊಳೆದುಕೊಳ್ಳದೆ ಬಾಯಿ, ಮೂಗು, ಕಣ್ಣು ಮುಟ್ಟಿಕೊಳ್ಳಬೇಡಿ. ಪದೇ ಪದೇ ಬಳಸುವ ವಸ್ತುಗಳನ್ನು ಶುಚಿಯಾಗಿಟ್ಟುಕೊಳ್ಳಿ.
 • ಕೆಮ್ಮು, ಶೀತ ಅಥವಾ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯಿಂದ ಆದಷ್ಟು ದೂರವಿರುವುದು ಉತ್ತಮ. ಒಂದು ಮೇಲೆ ಹೇಳಿರುವ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೂ ಮನೆಯಲ್ಲಿರೋದು ಒಳ್ಳೆಯದು. 
 • ಜನಸಂದಣಿಯಿಂದ ಆದಷ್ಟು ದೂರವಿರಿ.
 • ಜ್ವರ, ಕೆಮ್ಮು ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅದರಲ್ಲೂ ಎನ್ – 95 ಮಾಸ್ಕ್ ಧರಿಸಿಕೊಳ್ಳಿ.
 • ಇನ್ನು ನೀವು ತಿನ್ನುವಂತಹ ಪ್ರತಿಯೊಂದು ಆಹಾರವನ್ನು ಸರಿಯಾಗಿ ಬೇಯಿಸಿ.
 • ನೀವು ಈಗಾಗಲೇ ವಿದೇಶ ಪ್ರಯಾಣ ಬೆಳೆಸಿ ಬಂದಿದ್ದರೆ ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ವಿದೇಶ ಪ್ರವಾಸವನ್ನು ಹಮ್ಮಿಕೊಳ್ಳುವ ಯೋಚನೆಯಲ್ಲಿದ್ದರೆ ಅದನ್ನು ಮುಂದೂಡಿ. ಅಲ್ಲದೆ ವಿದೇಶದಿಂದ ಬಂದವರಿಂದ ದೂರವಿರಿ.

ಸಿಲಿಕಾನ್ ಸಿಟಿಗೂ ಕಾಲಿಟ್ಟ ಮಹಾಮಾರಿ ಕೊರೋನಾ!

0

ಬೆಂಗಳೂರು : ಚೀನಾದಲ್ಲಿ ಕಂಡುಬಂದ ಮಹಾಮಾರಿ ಕೊರೋನಾ ವೈರಸ್ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿದೆ.

ಬೆಂಗಳೂರಿನಿಂದ ತೆಲಂಗಾಣಕ್ಕೆ ತೆರಳಿದ್ದ ತೆಲಂಗಾಣ ಮೂಲದ ಟೆಕ್ಕಿಗೆ ಸೋಂಕು ಪತ್ತೆಯಾಗಿದ್ದು, ಈತ ಬೆಂಗಳೂರಿಗೆ ಬಂದಿರುವ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ವ್ಯಕ್ತಿಯ ಸ್ಥಳೀಯ ವಿಳಾಸ ಹಾಗೂ ಅಕ್ಕಪಕ್ಕದಲ್ಲಿ ನೆಲೆಸಿದ್ದವರ ಆರೋಗ್ಯದ ಬಗ್ಗೆ ಸುರಕ್ಷತೆಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಇಂದು ಮಧ್ಯಾಹ್ನ 12.30ಕ್ಕೆ  ಶ್ರೀರಾಮುಲು ಅಧಿಕಾರಿಗಳ ತುರ್ತುಸಭೆಯನ್ನು ಕರೆದಿದ್ದಾರೆ. ಈ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯನ್ನು ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ.

ಸದ್ಯ ರೋಗಿಗೆ ಹೈದರಾಬಾದ್​ನ ಅಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆಯನ್ನು  ನೀಡಲಾಗುತ್ತಿದೆ. ಇನ್ನು ಟೆಕ್ಕಿ ಬೆಂಗಳೂರಿನಲ್ಲಿ ಬಸ್​ನಲ್ಲಿ ಸಂಚರಿಸಿರುವ ಹಿನ್ನೆಲೆ ಆರೋಗ್ಯ ಇಲಾಖೆ ಸಹಪ್ರಯಾಣಿಕರನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಅದಕ್ಕಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡನ್ನು ಸಿದ್ಧಪಡಿಸಿಡಲಾಗಿದೆ. 

ಹಿರಿಯ ಪತ್ರಕರ್ತ ಗಜಾನನ ಹೆಗಡೆ ವಿಧಿವಶ

0

ಬೆಂಗಳೂರು : ಹಿರಿಯ ಪತ್ರಕರ್ತ ಗಜಾನನ ಹೆಗಡೆ ವಿಧಿವಶರಾಗಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಜೆ.ಪಿ ನಗರ ಬಳಿ ಸಂಭವಿಸಿದ ಅಪಘಾತದಲ್ಲಿ ಹೆಗಡೆ ಗಂಭೀರ ಗಾಯಗೊಂಡಿದ್ದರು. ಇವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಶಿರಸಿ ಮೂಲದವರಾದ ಇವರು ಪತ್ರಿಕೋದ್ಯಮ ಮಾತ್ರವಲ್ಲದೆ ಸಂಗೀತ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Popular posts