Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, August 18, 2019

ಬಿಎಸ್​ವೈ ಮತ್ತೆ ಸಿಎಂ ಆಗಲೆಂದು ದೇವರ ಮೊರೆ ಹೋದ ಅಭಿಮಾನಿಗಳು

0

ಶಿವಮೊಗ್ಗ : ಬಿ.ಎಸ್​ ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು ಅಂತ ಶಿವಮೊಗ್ಗದಲ್ಲಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂದಿರದ ನಿಜಲಿಂಗಪ್ಪ ಸಭಾಂಗಣದಲ್ಲಿ ಬಿಎಸ್​ವೈ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಯಾದಿ ಹೋಮ, ನವಗ್ರಹ ಶಾಂತಿ, ಹಾಗೂ ಮಂಡಲ ಪೂಜೆ ನೆರವೇರಿಸಲಾಗಿದ್ದು, ಬಿಎಸ್​ವೈ ಪುತ್ರಿ ಅರುಣಾದೇವಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಿ.ಎಸ್​ ಯಡಿಯೂರಪ್ಪರವರು ಆದಷ್ಟು ಬೇಗ ಮತ್ತೊಮ್ಮೆ ಸಿಎಂ ಆಗಲಿ. ರಾಜ್ಯವನ್ನು ಸಮೃದ್ಧವಾಗಿಸಲಿ. ನಾಳೆ ನಡೆಯುವ ವಿಶ್ವಾಸಮತದಲ್ಲಿ ಮೈತ್ರಿಯಾಗಿ ಹಿನ್ನಡೆಯಾಗಲಿ. ಬಿಜೆಪಿ ಅಧಿಕಾರಕ್ಕೆ ಬರಲಿ. ಅಂತ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು. ಕಾಯ್ರಕ್ರಮದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ರಾಮನಗರ ಜೆಡಿಎಸ್​ ಜಿಲ್ಲಾಧ್ಯಕ್ಷ ಅಶೋಕ್ ರಾಜೀನಾಮೆ..!

0

ರಾಮನಗರ: ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು ಸಿಎಂ ಕುಮಾರಸ್ವಾಮಿಗೆ ಟೆನ್ಷನ್ ಮೇಲೆ ಟೆನ್ಷನ್ ಆರಂಭವಾಗಿದೆ. ಈಗಾಗಲೇ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸ್ತಿದ್ರೆ, ಇದೀಗ ಸಿಎಂ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲಿ ರಾಜೀನಾಮೆ ಆಟ ಶುರುವಾಗಿದೆ, ಅದೂ ಜೆಡಿಯಸ್ ಜಿಲ್ಲಾಧ್ಯಕ್ಷ ಎಂ.ಪಿ ಅಶೋಕ್ ಕುಮಾರ್ ರಾಜೀನಾಮೆ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ 3 ವರ್ಷಗಳಿಂದ ರಾಮನಗರ ಜೆಡಿಯಸ್ ಜಿಲ್ಲಾಧ್ಯಕ್ಷರಾಗಿದ್ದ ಎಂ.ಪಿ ಅಶೋಕ್​ ಕುಮಾರ್ ತಮ್ಮ ರಾಜೀನಾಮೆ ಪತ್ರವನ್ನು ಈಗಾಗಲೇ ಸಿಎಂ ಕುಮಾರ್​ಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿಗೆ ನೀಡಿದ್ದಾರೆ. ವೈಯಕ್ತಿಕ ಕಾರಣವೇ ರಾಜೀನಾಮೆಗೆ ಕಾರಣ ಎಂದು ಹೇಳಿದ್ದಾರೆನ್ನಲಾಗಿದೆ.

ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೇವಣ್ಣ ಸರ್ಕಾರಕ್ಕೆ ‘ಬಲಿದಾನ್’ ಪತ್ರ!

0

ಬೆಂಗಳೂರು : ವಿಧಾನಸೌಧದ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೇವಣ್ಣಕುಮಾರ್ ಸರ್ಕಾರಕ್ಕೆ ಬರೆದ ಪತ್ರ ಸಿಕ್ಕಿದ್ದು, ಅದರಲ್ಲಿ ಅವರು ಮನಕಲುಕುವ ಬೇಡಿಕೆಯನ್ನಿಟ್ಟಿದ್ದಾರೆ.
ಲೈಬ್ರರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ರೇವಣ್ಣ, ”6 ಸಾವಿರ ಲೈಬ್ರರಿ ನೌಕರರ ಪ್ರತೀಕವಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವು ಆತ್ಮಹತ್ಯೆ ಅಲ್ಲ, ಸರ್ಕಾರಕ್ಕೆ ನೀಡುತ್ತಿರುವ ಬಲಿದಾನ” ಅಂತ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಹಂಗಾಮಿ ನೌಕರರನ್ನು ಖಾಯಂ ಪಡಿಸಿಕೊಳ್ಳಬೇಕು ಅಂತ ಒತ್ತಾಯಿಸಿದ್ದಾರೆ. ಸರ್ಕಾರದ ಗಮನ ಸೆಳೆಯಲು ಅವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ.
ರೇವಣ್ಣ ಸಾಕಷ್ಟು ದಿನಗಳಿಂದ ಉದ್ಯೋಗ ಖಾಯಂಗೆ ಓಡಾಡ್ತಾ ಇದ್ದರು. ಪ್ರಧಾನಿಯಿಂದ ರಾಷ್ಟ್ರಪತಿವರೆಗೂ ಸಂಪರ್ಕ ಮಾಡಿದ್ರು ನ್ಯಾಯ ಸಿಕ್ಕಿರಲಿಲ್ಲ. ಹಾಗಾಗಿ ವಿಧಾನಸೌಧಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಯುವಕನ ಪ್ರಾಣವನ್ನೇ ತೆಗೆದ ಸೆಲ್ಫಿ ಕ್ರೇಜ್​..!

0

ಅತಿಯಾದ ಸೆಲ್ಫಿ ಕ್ರೇಜ್​ನಿಂದ ಅದೆಷ್ಟೋ ಮಂದಿ ಜೀವವನ್ನೇ ಕಳೆದುಕೊಂಡಿರುವ ಘಟನೆಗಳು ನಮ್ಮ ನಡುವೆ ನಡೆದಿವೆ. ಪ್ರತಿ ನಿತ್ಯ ಇಂಥಾ ಸುದ್ದಿಗಳನ್ನು ಕೇಳುತ್ತಲೇ ಇರ್ತೀವಿ. ಆದರೂ ಕೆಲವರು ಈ ಬಗ್ಗೆ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ. ಮಾಮೂಲಿ ಸೆಲ್ಫಿಗಳು ಓಕೆ.. ಸೆಲ್ಫಿಗಾಗಿ ದುಸ್ಸಾಹಸ ಏಕೆ ಅನ್ನೋದು ಮಾತ್ರ ಅರ್ಥ ಆಗ್ತಿಲ್ಲ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇಂತಹದ್ದೇ ಒಂದು ದುರ್ಘಟನೆ ಸಂಭವಿಸಿದೆ. ಅಲ್ಲಿನ ಮೂಕನ ಮನೆ ಫಾಲ್ಸ್​ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತನುಷ್ ಅನ್ನೋ 21 ವರ್ಷದ ಯುವಕ ಮೃತ ದುರ್ದೈವಿ.
ಬೆಂಗಳೂರಿನ ತಿಗಳೂರು ಪಾಳ್ಯದ ತನುಷ್ ತನ್ನ ತನ್ನ ನಾಲ್ವರು ಫ್ರೆಂಡ್ಸ್ ಜೊತೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಮೂಕನ ಮನೆ ಫಾಲ್ಸ್​ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ತನುಷ್​ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಯಳಸೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಸೆಲ್ಫಿ, ಟಿಕ್​ ಟಾಕ್​ನಂತಹ ಕ್ರೇಜ್​ನಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗ್ತಾ ಇದೆ. ಈ ಬಗ್ಗೆ ಜಾಗೃತರಾಗುವ ಹಾಗೂ ಜಾಗೃತಿ ಮೂಡಿಸುವ ಅಗತ್ಯವಿದೆ.

“ಸಚಿವರು ಕಾಣೆಯಾಗಿದ್ದಾರೆ…ಗೋಧಿ ಬಣ್ಣ ಸಾಧಾರಣ ಮೈಕಟ್ಟು”..!

0

ಹಾವೇರಿ : ಇತ್ತೀಚೆಗೆ ಜನಪ್ರತಿನಿಧಿಗಳು ತಮ್ಮ ಮತದಾರರ ಕೈ ಸಿಗೋದು ತುಂಬಾ ಅಪರೂಪವಾಗಿ ಬಿಟ್ಟಿದೆ. ಹೀಗಾಗಿ ತಮ್ಮ ಪ್ರತಿನಿಧಿಗಳ ವಿರುದ್ಧ ಬೇಸತ್ತಿರುವ ಅನೇಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಯುವಕ ತಮ್ಮ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಫೇಸ್​ ಬುಕ್​ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರನ್ನು ಹುಡುಕಿ ಕೊಡಿ ಅಂತ ಪೋಸ್ಟ್ ಮಾಡಿದ್ದಾರೆ. 
”ಕಾಣೆಯಾದವರ ಪ್ರಕಟಣೆ – ಹೆಸರು : ಜಮೀರ್ ಅಹ್ಮದ್ ಖಾನ್, ಬಣ್ಣ : ಗೋಧಿ ಬಣ್ಣ ಸಾಧಾರಣ ಮೈಕಟ್ಟು , ಎತ್ತರ : ಸುಮಾರು 5 ಅಡಿ, ಕೊನೆಯ ಬಾರಿ ಕಂಡಿದ್ದು : ಬ್ಯಾಡಗಿ ತಾಲೂಕಿನಲ್ಲಿ. ಇವರು ಸಿಕ್ಕಲ್ಲಿ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಒಪ್ಪಿಸತಕ್ಕದ್ದು” ಅಂತ ಬ್ಯಾಡಗಿ ಯುವಕ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

ದೀಪದ ಕಿಡಿಯಿಂದ ಹೊತ್ತಿ ಉರಿದ ಸೀರೆ..! ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆ..!

0

ಹುಬ್ಬಳ್ಳಿ : ನಾಗರಕಟ್ಟೆಗೆ ಪೂಜೆ ಸಲ್ಲಿಸಿ ಹಿಂತಿರುಗುತ್ತಿರುವಾಗ ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯ ದೇಹ ಸುಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ವಿಶ್ವನಾಥ ದೇವಸ್ಥಾನಲ್ಲಿ ಮಹಿಳೆಯೊಬ್ಬರು ನಾಗರಕಟ್ಟೆಗೆ ಪೂಜೆ ಮಾಡಿ, ವಾಪಸ್ ಬರುತ್ತಿರುವಾಗ ದೀಪದ ಕಿಡಿ ಮಹಿಳೆಯ ಸೀರೆಗೆ ತಗುಲಿ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಮಹಿಳೆ ದೇವಸ್ಥಾನಕ್ಕೆ ಓಡಿ ಹೋಗಿ ಬೆಂಕಿಯನ್ನು ಆರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ಆದರೆ ಅದು ಸಾಧ್ಯವಾಗಿಲ್ಲ. ಮಹಿಳೆ ಕಿರುಚಾಡುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಓಡಿಬಂದಿದ್ದಾರೆ. ಅಲ್ಲೆ ಇದ್ದ ಬಟ್ಟೆ, ನೀರಿನಿಂದ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಮಹಿಳೆಯ ದೇಹ ಅರ್ಧ ಸುಟ್ಟಿದೆ. ಈ ಭಯಾನಕ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜ್ಯೋತಿಷಿ ಮಾತು ಕೇಳಿ ಮಗುವನ್ನೇ ಕೊಂದ ಪಾಪಿ ತಂದೆ..! ಇವನೆಂಥಾ ಅಪ್ಪ?

0

ಚಿಕ್ಕಮಗಳೂರು : ಜ್ಯೋತಿಷಿ ಮಾತು ಕೇಳಿ ತಂದೆಯೇ ತನ್ನ ಒಂದು ತಿಂಗಳ ಮಗುವಿನ ಕತ್ತನ್ನು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ..!
ಚಿಕ್ಕಮಗಳೂರು ತಾಲೂಕಿನ ಬುಚೇನಾಹಳ್ಳಿ ಗ್ರಾಮದ ಮಂಜುನಾಥ್ ಮಗುವನ್ನೇ ಕೊಂದ ಪಾಪಿ. ನಿನಗೆ ಹುಟ್ಟಿರೋ ಹೆಣ್ಣುಮಗುವಿನಿಂದ ನಿನ್ನ ಭವಿಷ್ಯಕ್ಕೆ ಕಂಟಕ ಇದೆ ಅಂತ ಜ್ಯೋತಿಷಿಯೊಬ್ಬ ಹೇಳಿದ್ದನಂತೆ. ಜ್ಯೋತಿಯ ಮಾತು ಕೇಳಿ ತನ್ನ 1 ತಿಂಗಳ ಹೆಣ್ಣುಮಗವನ್ನು ಮಂಜುನಾಥ್ ಕೊಲೆಗೈದಿದ್ದಾನೆ.
ಪತ್ನಿ ಬಟ್ಟೆ ತೊಳೆಯಲೆಂದು ಮನೆಯಿಂದ ಹೊರ ಹೋದಾಗ ಮಂಜುನಾಥ್ ಮಗುವಿನ ಕತ್ತು ಹಿಸುಕಿ ಕೊಂದಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಂದೆ ಗ್ರಾಮಸ್ಥರು ಮಂಜುನಾಥ್​​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ತಾನು ಮಗುವನ್ನು ಕೊಂದಿಲ್ಲ ಎಂದು ವಾದಿಸಿದ್ದ ಮಂಜುನಾಥ್​​​ ನಂತರ ಊರಿನವರು ದೇವರ ಅಡ್ಡೆ ಬಳಿ ಕರೆದುಕೊಂಡು ಹೋದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಜ್ಯೋತಿಷಿ ಮಾತು ಕೇಳಿ ತಾನು ಮಗುವನ್ನು ಕೊಲೆ ಮಾಡಿರೋದಾಗಿ ಹೇಳಿಕೊಂಡಿದ್ದಾನೆ. ಮಂಜುನಾಥ್​ನನ್ನು ಬಂಧಿಸಿರುವ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಜ್ಯೋತಿಷಿಗೆ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇಂದು ಮಂಡ್ಯಕ್ಕೆ ಸಂಸದೆ ಸುಮಲತಾ ಭೇಟಿ

0

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸ್ವಚ್ಛ ಮೇವ ಜಯತೇ ಜನಾಂದೋಲನದಲ್ಲಿ ಭಾಗವಹಿಸಲಿದ್ದಾರೆ. ಮಂಡ್ಯ ತಾಲೂಕಿನ ಕೀಲಾರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಗಿರೀಶ್ ಕಾರ್ನಾಡ್ ನಿಧನದಿಂದ ಶೋಕಾಚಾರಣೆ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ.

ಗಿಡ ನೆಟ್ಟು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾಡಳಿತ ಈ ನಿರ್ಧಾರ ಮಾಡಿದೆ. ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸುಮಲತಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಡಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸುಮಲತಾ ಅವರು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದು, ಬಳಿಕ ಬಿ.ಹೊಸೂರು ಕಾಲೋನಿಯಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸಲಿದ್ದಾರೆ.

ಕಾರ್ನಾಡ್ ಅಗಲಿಕೆಗೆ ಗಣ್ಯರ ಸಂತಾಪ

0

ಬೆಂಗಳೂರು: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್​ ಅಗಲಿಕೆಗೆ ಗಣ್ಯರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸಿಎಂ ಹೆಚ್​. ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್​. ಡಿ. ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​. ಯಡಿಯೂರಪ್ಪ ಸೇರಿ ಪ್ರಮುಖರು ಟ್ವಿಟರ್​ನಲ್ಲಿ ಹಿರಿಯ ಸಾಹಿತಿ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

“ಕನ್ನಡಕ್ಕೆ 7 ನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಸುದ್ದಿ‌ ಕೇಳಿ ತೀವ್ರ ದುಃಖವಾಗಿದೆ. ಅವರ ಅಭಿಮಾನಿ ವರ್ಗ ಹಾಗೂ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಅಂತ ಮಾಜಿ ಪ್ರಧಾನಿ ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.

“ಹಿರಿಯ ಸಾಹಿತಿ,ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ನಾಡಿನ ಬಹುಮುಖ್ಯ ಸಾಕ್ಷಿಪ್ರಜ್ಞೆಯ ದನಿ ಮೌನವಾದಂತಾಗಿದೆ. ಈ ದುರಿತದ ಕಾಲದಲ್ಲಿ ಅವರು ನಮ್ಮೊಡನೆ ಇನ್ನಷ್ಟು ಕಾಲ ಇರಬೇಕಿತ್ತು. ಅವರ ಸಾವಿನ ಶೋಕದಲ್ಲಿ‌ ನಾನು ಭಾಗಿಯಾಗಿದ್ದೇನೆ” ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತ: ಕರಾವಳಿ ತೀರದಲ್ಲಿ ಗಾಳಿ ಮಳೆ ಸಾಧ್ಯತೆ

0

ಉಡುಪಿ: ಮುಂದಿನ 24 ಗಂಟೆಯೊಳಗೆ ಕರ್ನಾಟಕ ಕರಾವಳಿ ತೀರದಲ್ಲಿ ಭಾರಿ ಗಾಳಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದ ಲಕ್ಷದ್ವೀಪ ಪರಿಸರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ತಾಸುಗಳಲ್ಲಿ ವ್ಯಾಪಕ ಗಾಳಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡ ಜತೆಗೆ ಟ್ರಫ್ ಉಂಟಾಗಿರುವುದರಿಂದ ಸಮುದ್ರದ ಮೇಲ್ಮೈಯಿಂದ ಬಲವಾದ ಗಾಳಿ ಬೀಸಲಿದೆ. ಗಂಟೆಗೆ 35-45ಕಿ.ಮೀ. ವೇಗದ ಬಿರುಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ತಿರುವನಂತಪುರದ ಹವಾಮಾನ ಕೇಂದ್ರದ ಸೈಕ್ಲಾನ್ ವಾರ್ನಿಂಗ್ ಸೆಂಟರ್ ಎಚ್ಚರಿಕೆ ನೀಡಿದೆ. ಹೀಗಾಗಿ ಕೇರಳ ಮತ್ತು ಕರ್ನಾಟಕ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಗಾಳಿಯ ವೇಗವು ಗಂಟೆಗೆ 90-ರಿಂದ 100ಕಿ.ಮೀ. ದಾಟುವ ಸಾಧ್ಯತೆ ಇದ್ದು, ಇದರ ಪರಿಣಾಮ ಮುಂದಿನ ಐದು ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

Popular posts