Friday, April 3, 2020

ರಾಜ್ಯದ 9ಜಿಲ್ಲೆಗಳಲ್ಲಿ ಕರ್ಫ್ಯೂ

0

ರಾಜ್ಯದ 9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರೋನಾ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್​ಡೌನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಇದೀಗ ಕೇವಲ 9 ಜಿಲ್ಲೆಗಳನ್ನು ಮಾತ್ರ ಕರ್ಫ್ಯೂ ಮೂಲಕ ಲಾಕ್​ಡೌನ್ ಮಾಡಲು ಮುಂದಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ , ದಕ್ಷಿಣ ಕನ್ನಡ, ಚಿಕ್ಕಾಬಳ್ಳಾಪುರ, ಮೈಸೂರು, ಕಲಬುರಗಿ, ಬೆಳಗಾವಿ, ಕೊಡಗು, ಧಾರವಾಡ ಜಿಲ್ಲೆಗಳು ಮಾರ್ಚ್​ 31ರವರೆಗೆ ಲಾಕ್​ಡೌನ್ ಆಗಲಿವೆ.
ಇನ್ನು ಕೇರಳ, ಮಹಾರಾಷ್ಟ್ರ ಸೇರಿದಂತೆ 19 ರಾಜ್ಯಗಳನ್ನು ಲಾಕ್​ಡೌನ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.

ಮಾರ್ಚ್​ 31ರವರೆಗೆ ಇಡೀ ಕರ್ನಾಟಕ ಲಾಕ್​ಡೌನ್?

0

ಬೆಂಗಳೂರು:  ಮಾರ್ಚ್ 31ರವರೆಗೆ ಇಡೀ ರಾಜ್ಯವನ್ನು ಲಾಕ್​​ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂತಹದ್ದೊಂದು ಮಹತ್ತರ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳಲಿದೆ. 

ರಾಜ್ಯದ 9 ಜಿಲ್ಲೆಗಳನ್ನು ಇಂದಿನಿಂದ ಮಾರ್ಚ್ 31 ರವರೆಗೆ ಲಾಕ್​ಡೌನ್ ಮಾಡುವಂತೆ  ಭಾನುವಾರವೇ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಆದರೆ ಜನ ಮಾತ್ರ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದಲ್ಲದೆ ಮನೆಯಿಂದ ಹೊರಬರುತ್ತಿದ್ದಾರೆ. ಇದೀಗ ಇಡೀ ಕರ್ನಾಟಕವನ್ನೇ ಲಾಕ್​ಡೌನ್ ಮಾಡಲು ತೀರ್ಮಾನಿಸಲಾಗಿದೆ. 

 

ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ

0

ಬೆಂಗಳೂರು: ಕೊರೋನಾ ಮುಂಜಾಗೃತ ಕ್ರಮವಾಗಿ ಮಾರ್ಚ್ ೩೧ರವರೆಗೆ ಬಂದ್ ಇರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ನಾಳೆ ಇಂಗ್ಲಿಷ್ ಪರೀಕ್ಷೆ ನಡೆಯಬೇಕಿತ್ತು. ಇದು ಕೊನೆಯ ಪರೀಕ್ಷೆಯಾಗಿದ್ದು, ಪರೀಕ್ಷೆಯ ಮುಂದಿನ ದಿನಾಂಕವನ್ನು ಸರ್ಕಾರ ಮಾರ್ಚ್ ೩೧ರಂದು ಪ್ರಕಟಿಸಲಿದೆ. ಅಂತೆಯೇ ಮಾರ್ಚ್ ೨೭ರಿಂದ ಆರಂಭವಾಗಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೂಡ ಮುಂದೂಡಲ್ಪಟ್ಟಿದೆ.

ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ

0

ಬೆಂಗಳೂರು: ಜನತಾ ಕರ್ಫ್ಯೂ ಮುಗಿದ ಬಳಿಕ ಜನರು ಮನೆಯಿಂದ ಹೊರಬರುವ ಸಾಧ್ಯತೆಯಿರುವುದರಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಜನತಾ ಕರ್ಫ್ಯೂ ಹಿನ್ನೆಲೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಮನೆಯಿಂದ ಹೊರಬರದಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದರು. ಪ್ರಧಾನಿ ಕರೆಗೆ ಜನ ಸ್ಪಂದಿಸಿದ್ದಾರೆ. ಆದರೆ, ರಾತ್ರಿ 9ಗಂಟೆ ಬಳಿಕ ಜನ ಮನೆಯಿಂದ ಆಚೆ ಬಂದು ಗುಂಪು ಸೇರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ  ಇಂದು ರಾತ್ರಿ 9ಗಂಟೆಯಿಂದ 12ಗಂಟೆವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.   ಯಾರೂ ಮನೆಯಿಂದ ಹೊರಬಂದು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. 

ಎಸ್​​ಎಸ್​ಎಲ್​ಸಿ ಪರೀಕ್ಷೆ ಮುಂದೂಡಿಕೆ

0

ಕೊರೋನಾ ಹಿನ್ನೆಲೆಯಲ್ಲಿ ಮಾರ್ಚ್​ 27ರಿಂದ ಆರಂಭವಾಗಬೇಕಿದ್ದ ಎಸ್​ ಎಸ್ ಎಲ್​ ಸಿ ಪರೀಕ್ಷೆ ಮುಂದೂಡಲ್ಪಟ್ಟಿದೆ.
ಬೆಳಗ್ಗೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಡಾ.ದೇವಿಪ್ರಸಾದ್ ಅವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಎಸ್​ ಎಸ್​ ಎಲ್​ ಸಿ ಪರೀಕ್ಷೆ ಹಾಗೂ ವಿವಿಧ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯವಾಗಲಿದ್ದು, ನಾಳೆ ನಡೆಯಲಿರುವ ಪರೀಕ್ಷೆ ಪೂರ್ವ ನಿಗದಿಯಂತೆ ನಡೆಯಲಿದೆ. 
ಕೊರೋನಾ ವೈರಸ್ ಸದ್ಯ ಹಳ್ಳಿಗಳಲ್ಲಿ ಅಷ್ಟೊಂದು ಪಸರಿಸಿಲ್ಲ, ಅಲ್ಲದೆ ಹಳ್ಳಿಗಳಲ್ಲಿ ಸೋಂಕು ಚಿಕಿತ್ಸೆಗಳಿಗೂ ಅಷ್ಟೊಂದು ಅನುಕೂಲಗಳಿರುವುದಿಲ್ಲ. ಹೀಗಾಗಿ ಇನ್ನು 15 ದಿನಗಳವರೆಗೆ ನಗರಗಳಿಂದ ಯಾರೂ ಪ್ರಯಾಣ ಮಾಡಬೇಡಿ. ತೀರಾ ಅಗತ್ಯವಿದ್ದರೆ ಮಾತ್ರ ಹಳ್ಳಿಗಳಿಗೆ ಹೋಗಿ ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ

0

ಬೆಂಗಳೂರು: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಒಟ್ಟು 283 ಸೋಂಕಿತರು ಪತ್ತೆಯಾಗಿದ್ದರೆ, ರಾಜ್ಯದಲ್ಲಿ ಒಟ್ಟು 20 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಶುಕ್ರವಾರ ಒಂದು ಸೋಂಕು ಪತ್ತೆಯಾಗದ ರಾಜ್ಯದಲ್ಲಿ ಇಂದು 5 ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಒಂದು, ಬೆಂಗಳೂರಲ್ಲಿ ನಾಲ್ಕು ಹಾಗೂ ಮೈಸೂರಿನಲ್ಲಿ ಒಂದು ಪ್ರಕರಣಗಳು ಪತ್ತೆಯಾಗಿವೆ. 

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಬೆಂಗಳೂರಿನ ಮೂವರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು, ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಸೋಂಕು ಕಾಣಿಸಿಕೊಂಡಿರುವ 32 ವರ್ಷದ ವ್ಯಕ್ತಿ ಮೆಕ್ಕಾ ಪ್ರವಾಸ ಮಾಡಿ ಬಂದಿರುವುದಾಗಿ ತಿಳಿಸಿದ್ದಾರೆ. 

 

 

ಜನತಾ ಕರ್ಫ್ಯೂ : ನಾಳೆ ಏನಿರುತ್ತೆ? ಏನಿರಲ್ಲ?

0

ಬೆಂಗಳೂರು: ಕೊರೋನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ನಾಳೆ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲೂ ಕೊರೋನಾ ವೈರಸ್ ತಡೆಯುವ ಸಲುವಾಗಿ ಕರ್ಫ್ಯೂ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಸಂಜೆಯವರೆಗೂ ಬೆಂಗಳೂರು ಸ್ತಬ್ಧವಾಗಲಿದೆ. ಇನ್ನು ಕರ್ಫ್ಯೂ ಇರುವ ಹಿನ್ನೆಲೆ  ನಾಳೆ ಬೆಂಗಳೂರಲ್ಲಿ ಏನಿರುತ್ತೆ, ಏನಿರಲ್ಲ ಎಂಬುದನ್ನು ನೋಡೋಣ.

ನಾಳೆ ಬೆಂಗಳೂರಲ್ಲಿ ಏನಿರಲ್ಲ….

 • ನಾಳೆ ಆಟೋ, ಟ್ಯಾಕ್ಸಿ, ಓಲಾ, ಉಬರ್, ಯಾವುದೇ ಕ್ಯಾಬ್​ಗಳು ರಸ್ತೆಗಿಳಿಯಲ್ಲ.
 •  ಹೋಟೆಲ್ ಮಾಲೀಕರು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ನಾಳೆ ಯಾವುದೇ ಹೋಟೆಲ್​ಗಳು ಓಪನ್ ಇರುವುದಿಲ್ಲ.
 • ನಮ್ಮ ಮೆಟ್ರೋ ಸೇವೆ ಮುಂಜಾನೆಯಿಂದಲೇ ಇರುವುದಿಲ್ಲ.
 • ಬಾರ್, ಪಬ್ ಹಾಗೂ ರೆಸ್ಟೋರೆಂಟ್​ಗಳು ಬಂದ್ ಆಗಲಿವೆ.
 • ಎಪಿಎಂಸಿ, ಕೆ.ಆರ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾರುಕಟ್ಟೆಗಳು ನಾಳೆ ಕಾರ್ಯನಿರ್ವಹಿಸುವುದಿಲ್ಲ.
 • ಬೆಂಗಳೂರಿನಲ್ಲಿ ಬಹುತೇಕ ಕೈಗಾರಿಕೆಗಳು ಬಂದ್.
 • ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳು ಬಂದ್ ಆಗಲಿವೆ.
 • ಆಭರಣ ಮಳಿಗೆಗಳು ಇರಲ್ಲ. ಜೊತೆಗೆ ಚಿಕ್ಕಪೇಟೆ ಬಟ್ಟೆ ಅಂಗಡಿಗಳು ಕೂಡಾ ನಾಳೆ ಕದ ತೆರೆಯುವುದಿಲ್ಲ.
 • ಇನ್ನು ಬೀದಿ ಬದಿ ವ್ಯಾಪಾರ, ಅಂಗಡಿ ಮುಂಗಟ್ಟುಗಳು ಕ್ಲೋಸ್ ಇರಲಿವೆ.
 • ಹೋಲ್ಸೇಲ್ ಬಟ್ಟೆ ವ್ಯಾಪಾರ ಬಂದ್.
 • ಶಾಲಾ- ಕಾಲೇಜು , ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸಲ್ಲ.
 • ಮಾಲ್, ಸೂಪರ್ ಮಾರ್ಕೆಟ್​ಗಳು ಸಂಪೂರ್ಣ ಬಂದ್ ಆಗಲಿವೆ.
 • ಇನ್ನು ದೇಶಾದ್ಯಂತ ಪ್ಯಾಸೆಂಜರ್ ರೈಲು, ಎಕ್ಸ್​ಪ್ರೆಸ್ ರೈಲು, ಇಂಟರ್ ಸಿಟಿ ಸೇರಿದಂತೆ ಇತರೆ ರೈಲುಗಳು ಸೇವೆಯೂ ನಾಳೆ ಇರುವುದಿಲ್ಲ.
 • ಕನಿಷ್ಠ ಮಟ್ಟದಲ್ಲಿ ಮಾತ್ರ ಬಸ್​ಗಳ ಕಾರ್ಯಾಚರಣೆ ಮಾಡಲು ಕೆಎಸ್​ಆರ್​ಟಿಸಿ ಆದೇಶ ನೀಡಿದೆ.
 • ಜನದಟ್ಟಣೆಗೆ ಅನುಗುಣವಾಗಿ ಬಿಎಂಟಿಸಿ ಬಸ್​ಗಳು ಓಡಾಟ ನಡೆಸಲಿದೆ.
 • ಖಾಸಗಿ ಬಸ್​ಗಳ ಓಡಾಟ ಇರುವುದು ಅನುಮಾನ
 • ರಾಜ್ಯದ್ಯಾಂತ ಲಾರಿ ಸಂಚಾರ ನಾಳೆ ಸ್ತಬ್ಧವಾಗಲಿದೆ.

ಏನಿರುತ್ತೆ…

ಅಗತ್ಯ ವಸ್ತುಗಳಾದ ಹಾಲು, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಪೆಟ್ರೋಲ್, ಡೀಸೆಲ್ ಬಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಕೆಮ್ಮಿದ್ದಕ್ಕೆ ವಿದ್ಯಾರ್ಥಿಯನ್ನು ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಮೇಲ್ವಿಚಾರಕರು!

0

ಯಾದಗಿರಿ: ರಾಜ್ಯದಲ್ಲಿ ಕೋರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕವೂ ಹೆಚ್ಚಿದೆ. ಪಕ್ಕದಲ್ಲಿ ಯಾರೂ ಕೆಮ್ಮಂಗಿಲ್ಲ, ಸೀನಂಗಿಲ್ಲ ಕೊರೋನಾ ಅಂತ ಹೇಳಿ ಮಾರುದ್ದ ಓಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಪರೀಕ್ಷೆ ಬರೆಯುವಾಗ ಕೆಮ್ಮಿದ ಅನ್ನೋ ಕಾರಣಕ್ಕೆ ಕೊಠಡಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ್ದಾರೆ.

ಬುಧವಾರ ನಡೆದ ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ಪರೀಕ್ಷೆ ವೇಳೆ ವಿದ್ಯಾರ್ಥಿಯೊಬ್ಬ ಪದೇ ಪದೇ ಕೆಮ್ಮುತ್ತಿದ್ದ. ಹಾಗಾಗಿ ಆತನಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆಂದು ಆತನನ್ನು ಕಾಲೇಜು ಆವರಣದಲ್ಲಿ ಕೂರಿಸಿ ಪರೀಕ್ಷೆ ಬರೆಸಿದ್ದಾರೆ. ಬಳಿಕ ಆ ವಿದ್ಯಾರ್ಥಿಯ ಆರೋಗ್ಯ ತಪಾಸಣೆಯನ್ನು ಮಾಡಿಸಿದ್ದಾರೆ. ಆದರೆ ಆತನಲ್ಲಿ ಕೊರೋನಾದ ಯಾವ ಲಕ್ಷಣಗಳು ಕಂಡು ಬಂದಿಲ್ಲ.

 

ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆ ತಪಾಸಣೆ!

0

ಶಿವಮೊಗ್ಗ : ತೀರ್ಥಹಳ್ಳಿ ಪಟ್ಟಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ಉಗ್ರರ ಮನೆಗಳನ್ನು ತಪಾಸಣೆ ಮಾಡಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಗೆ ಕೇಂದ್ರ ತನಿಖಾ ತ೦ಡ ಮತ್ತು ಶಿವಮೊಗ್ಗ ತನಿಖಾ ತ೦ಡ, ತೀರ್ಥಹಳ್ಳಿ ಪೊಲೀಸ್ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಒಟ್ಟು 8 ತಂಡಗಳಲ್ಲಿ ಆಗಮಿಸಿ ಶಂಕಿತ ಉಗ್ರರಾದ ಮತೀನ್ ಹಾಗೂ ಸಾಜಿದ್​​ ಮನೆಯನ್ನು ತಪಾಸಣೆ ನಡೆಸಿದ್ದಾರೆ. ಸುಮಾರು 9 ಗಂಟೆಯವರೆಗೆ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪಟ್ಟಣದ ಮೀನು ಮಾರ್ಕೆಟ್ ರಸ್ತೆಯಲ್ಲಿ ಅವರಿಬ್ಬರ ಮನೆಗಳಿವೆ.

ವಿದೇಶದಿಂದ ವಾಪಸ್ಸಾಗುವವರ ಕೈಗೆ ಸ್ಟ್ಯಾಂಪ್​!

0

ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ವಿದೇಶದಿಂದ ವಾಪಾಸ್ಸಾಗುವವರ ಕೈಗೆ ಬೆಂಗಳೂರು ಏರ್​ಪೋರ್ಟ್​ನಲ್ಲಿ ಸ್ಟ್ಯಾಂಪ್ ಹಾಕುವ ಪ್ರಕ್ರಿಯೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಕಟ್ಟೆಚ್ಚರವನ್ನು ವಹಿಸುತ್ತಿದ್ದು, ವಿದೇಶಗಳಿಂದ ಬೆಂಗಳೂರಿಗೆ ಬರುವವರನ್ನು 14 ದಿನಗಳ ಕಾಲ ಪ್ರತ್ಯೇಕೀಕರಣಕ್ಕೆ ಒಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಹಾಗಾಗಿ ವಿದೇಶಗಳಿಂದ ಬರುವವರ ಕೈಗೆ ಸ್ಟ್ಯಾಂಪ್ ಹಾಕಲಾಗುತ್ತದೆ. ಈ ರೀತಿ ಸ್ಟ್ಯಾಂಪ್ ಹಾಕಿಸಿಕೊಂಡ ವ್ಯಕ್ತಿ 14 ದಿನ ಸ್ವಯಂಪ್ರೇರಿತವಾಗಿ ಮನೆಯಲ್ಲಿ ಏಕಾಂತ ವಾಸದಲ್ಲಿರಬೇಕು. ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ ಅಂತ ದೃಢಪಟ್ಟ ಮೇಲಷ್ಟೇ ಅವರು ಮನೆಯಿಂದ ಹೊರಬರಬಹುದು.  ಒಂದು ವೇಳೆ ಸ್ಟ್ಯಾಂಪ್ ಹಾಕಿಸಿಕೊಂಡ ವ್ಯಕ್ತಿ ನಿಗದಿಗೂ ಮುನ್ನ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ತಕ್ಷಣ ಆರೋಗ್ಯ ಇಲಾಖೆಗೆ ಆತನ ಬಗ್ಗೆ ಮಾಹಿತಿ ನೀಡಬೇಕೆಂದು ಆರೋಗ್ಯ ಇಲಾಖೆ ಆದೇಶಿಸಿದೆ.  

 

Popular posts