Saturday, May 30, 2020

ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲು ಕೊರೋನಾ ಸಂಕಷ್ಟವನ್ನು ಬಳಸಿಕೊಳ್ಳುತ್ತಿದೆಯಾ? : ಹೆಚ್.ಡಿ ಕುಮಾರಸ್ವಾಮಿ

0

ಬೆಂಗಳೂರು: ಮಹಾಮಾರಿ ಕೊರೋನಾ ವಿರುದ್ಧ ದೇಶದ ಜನರನ್ನುಒಗ್ಗೂಡಿಸುವ ಸಲುವಾಗಿ ದೀಪ ಹಚ್ಚೋಣ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಆದರೆ ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ  ಅನುಮಾನ ವ್ಯಕ್ತಪಡಿಸಿದ್ದು, ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸುತ್ತೆದೆಯಾ ಎಂದು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 1980 ಎಪ್ರಿಲ್ 6 ರಂದು ಬಿಜೆಪಿಯ ಸಂಸ್ಥಾಪನಾ ದಿನ. ಬಿಜೆಪಿ ಸಂಸ್ತಾಪನೆಗೊಂಡು ಇಂದಿಗೆ 40 ವರ್ಷ ತುಂಬುತ್ತದೆ. ಹಾಗಾಗಿ ನರೇಂದ್ರ ಮೋದಿ ಈ ಕೊರೋನಾ ಸಂಕಷ್ಟವನ್ನು ಸಂಸ್ಥಾಪನಾ ದಿನ ಆಚರಿಸಲು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ?‘ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕೊರೋನಾ ಸಂಕಷ್ಟದ ದಿನದಲ್ಲಿ ಬಿಜೆಪಿ ತನ್ನ ಸಂಸ್ಥಾಪನಾ ಸಂಭ್ರಮವನ್ನು ನೇರವಾಗಿ ಆಚರಿಸಲು ಹಿಂಜರಿದು, ದೇಶದ ಜನತೆಯ ಕೈಯಲ್ಲಿ ದೀಪ ಉರಿಸಿ ಆಚರಿಸಲು ಮುಂದಾಗಿರುವ ಬಿಜೆಪಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ದೀಪ ಬೆಳಗಿಸುವ ಪ್ರಧಾನಿ ಕರೆ ಹಿಂದಿನ ವೈಜ್ಞಾನಿಕ ಕಾರಣ ಏನೆಂದು ಅವರೇ ಸ್ಪಷ್ಟಪಡಿಸಬೇಕು. ಈ ಕಷ್ಟದ ದಿನಗಳಲ್ಲಿ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಇಂತಹ ತೋರಿಕೆಯ ಸಂಭ್ರಮ ಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ : ಡಾ. ಕೆ. ಸುಧಾಕರ್

0

ಬೆಂಗಳೂರು: ಕೊರೋನಾ ವೈರಸ್ ಮಾಹಿತಿ ವಿಚಾರವಾಗಿ ಸಚಿವರಾದ ಡಾ.ಕೆ ಸುಧಾಕರ್ ಹಾಗೂ ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯವಿದೆ ಎಂದು ಸುದ್ದಿ ಹಬ್ಬುತ್ತಿದೆ. ಇದರ ಬೆನ್ನಲ್ಲೆ ಅದರ ಬಗ್ಗೆ  ಡಾ.ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ರಾಜ್ಯದ ಜನರ ಹಿತಾಸಕ್ತಿಗಾಗಿ ಅಣ್ಣ–ತಮ್ಮಂದಿರಂತೆ ಶ್ರಮಿಸುತ್ತಿದ್ದೇವೆ. ಕೋವಿಡ್ -19 ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಈ ಸಮಸ್ಯೆಗೆ ಒಟ್ಟಾಗಿ ಪರಿಹಾರ ಹುಡುಕುತ್ತಿದ್ದೇವೆ‘ ಎಂದಿದ್ದಾರೆ.

ಇನ್ನು ಇಂತ ಹ ಪರಿಸ್ಥಿತಿಯಲ್ಲಿಯೂ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ. ನಮಗೆ ನಮ್ಮದೇ ಆದ ಜವಾಬ್ದಾರಿಗಳಿವೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವುದರ ಹಿಂದೆ ನೀಚ ರಾಜಕೀಯ ಷಡ್ಯಂತ್ರವಿದೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.  

 

 

 

`ಖಾಕಿ ಬಿಟ್ಟು ರಾಜಕೀಯ ಮಾಡಲಿ’ : ಕಮಿಷನರ್ ವಿರುದ್ಧ ಡಿಕೆಶಿ ಗರಂ

0

ಬೆಂಗಳೂರು: ಮಧ್ಯಪ್ರದೇಶ ಶಾಸಕರ ಭೇಟಿಗೆ ಅವಕಾಶ ನೀಡದ ವಿಚಾರಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಕೆಪಿಸಿಸಿ ಅಧ್ಕಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದು, ಇವರು ರಾಜಕೀಯ ಮಾಡೋದಾದ್ರೆ ಖಾಕಿ ಬಿಚ್ಚಿಟ್ಟು ರಾಜಕೀಯ ಮಾಡಲಿ ಎಂದು ಹೇಳಿದ್ದಾರೆ. 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದಿಗ್ವಿಜಯ್ ಸಿಂಗ್ ಮತ ಕೇಳಲು ಬಂದಿದ್ದರು. ಅವರೇನು  ವೆಪನ್ ತಂದಿದ್ರಾ?  ಅವರನ್ನೇ ಅರೆಸ್ಟ್ ಮಾಡಿದ್ದಾರೆ. ಅಲ್ಲಿ ಡಿಸಿಪಿ ಅವರನ್ನು ಕೇಳಿದ್ರೆ ಕಮಿಷನರನ್ನು ಕೇಳಬೇಕು, ಕಮಿಷರನ್ನು ಕೇಳಿದ್ರೆ  ಮಹಾನಿರ್ದೇಶಕರನ್ನು ಕೇಳಬೇಕು ಅಂತ ಹೇಳ್ತಾರೆ. ಕರ್ನಾಟಕ ಪೊಲೀಸರಿಗೆ ಒಳ್ಳೆಯ ಇತಿಹಾಸ ಇದೆ. ಆದರೆ ಇಂತಹ ಅಸಮರ್ಥ ಕಮಿಷನರನ್ನು ನಾನು ಎಲ್ಲೂ ನೋಡಿಲ್ಲ. ಇವರು ರಾಜಕೀಯ ಮಾಡ್ತಾ ಇದ್ದಾರೆ. ಹೀಗೆ ರಾಜಕೀಯ ಮಾಡೋದಾದ್ರೆ ಖಾಕಿ ಬಿಚ್ಚಿಟ್ಟು ರಾಜಕೀಯ ಮಾಡಲಿ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಶಾಸಕರು ಉಳಿದುಕೊಮಡಿರುವ ಹೋಟೆಲ್​ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ಮಾಡಿದ್ದಕ್ಕೆ ದಿಗ್ವಿಜಯ್ ಸಿಂಗ್ ಅವರನ್ನು ಬಂಧಿಸಿ, ಎಫ್ಐಆರ್​ ದಾಖಲಿಸಿದ್ದರು. ಆದರೆ ಬಳಿಕ ಪೊಲೀಸರು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲಿಂದ ಬಂದ ದಿಗ್ವಿಜಯ್ ಸಿಂಗ್ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಾ ನೇರವಾಗಿ ಪೊಲೀಸ್ ಕಮಿಷನರ್ ಆಯುಕ್ತರ ಕಚೇರಿಗೆ ಬಂದರು. ಅವರೊಂದಿಗೆ ಡಿ.ಕೆ ಶಿವಕುಮಾರ್, ರಿಜ್ವಾನ್ ಅರ್ಷದ್ ಹಾಗೂ ಹ್ಯಾರೀಸ್ ಸೇರಿದಂತೆ  ಕಾಂಗ್ರೆಸ್ ಮುಖಂಡರು ಕಮಿಷನರನ್ನು ಭೇಟಿಯಾಗಲು ಹೋಗಿದ್ದರು. ಆದರೆ, ಭಾಸ್ಕರ್​ ರಾವ್ ಭೇಟಿಗೆ ಅವಕಾಶ ನೀಡದೆ, ಡಿಜಿ -ಐಜಿಪಿಯನ್ನು ಭೇಟಿಯಾಗುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಕಮಿಷನರ್ ನಡೆಗೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ. 

 

BJPಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ – ಲೆಟರ್​​ ‘ಬಾಂಬ್​’ ಸ್ಫೋಟ!

0

ಬೆಂಗಳೂರು:  ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ, ಸರ್ಕಾರದ ಎಲ್ಲಾ ಕೆಲಸಗಳಲ್ಲಿ  ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅನಾಮಧೇಯ ಪತ್ರವೊಂದು ಬಿಡುಗಡೆಯಾಗಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿದೆ.

ಕೆಲವಾರು ಇಲಾಖೆಗಳಲ್ಲಿ ತನ್ನ ಸಂಗಡಿಗರೊಂದಿಗೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿ.ವೈ ವಿಜಯೇಂದ್ರ ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ  ನಡೆಸುತ್ತಿದ್ದಾರೆ . ಭಾರೀ ಪ್ರಮಾಣದಲ್ಲಿ ಅಧಿಕಾರದ ದುರುಪಯೋಗವನ್ನು ಪಡೆಸಿಕೊಂಡಿರುವ ಬಿವೈ ವಿಯಯೇಂದ್ರ ಕೋಟ್ಯಂತರ ರೂಪಾಯಿಗಳಷ್ಟು ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಪತ್ರದಲ್ಲೇನಿದೆ?

ಪಾರ್ಟಿ ವಿಥ್​ ಡಿಫರೆನ್ಸ್​ ಎಂಬ ಧ್ಯೇಯಕ್ಕೆ ಬದ್ಧರಾಗಿರುವ ಭಾರತೀಯ ಜನತಾ ಪಕ್ಷದಲ್ಲಿ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರ್ಯ  ಆಡಳೀತ ಮೇಳೈಸುತ್ತಿದೆ.  ಅನುವಂಶಿಯ ಆಡಳಿತಕ್ಕೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರೇ ಒತ್ತಾಸೆಯಾಗಿ ನಿಂತಿದ್ದಾರೆ. ದೆಹಲಿಯ ಬಿಜೆಪಿ ವರಿಷ್ಠರಿಗೆ ತನ್ನ ಮಗನ ಬಗ್ಗೆ ಒಲವಿದೆ. ಆತ ಪಕ್ಷ ಸಂಘಟನೆಗೆ ಪ್ರವಾಸ ಮಾಡುವುದನ್ನು ನೋಡಿ ವರಿಷ್ಠರು ಸಂತಸಗೊಂಡಿದ್ದಾರೆ ಎಂದು  ಮಗನ ಬಗ್ಗೆ ಸ್ವತಃ ತಂದೆಯೇ ಮೆಚ್ಚುಗೆ ವ್ಯಕ್ತಪಡಿಸಿರುವುದು ದುರಾದೃಷ್ಟಕರ ಸಂಗತಿ.

ಒಂದು ಕಾಲದಲ್ಲಿ ದೇವೇಗೌಡ ಹಾಗೂ ಅವರ ಪುತ್ರ ವ್ಯಾಮೋಹದ ಕುರಿತು ಅವರಿಗೆ ಪಾಠ ಕಲಿಸುತ್ತೇನೆ ಎಂದು  ಘರ್ಜಿಸುತ್ತಿದ್ದ “ರಾಜಾಹುಲಿ” ಇಂದು ಅಧಿಕಾರವನ್ನು ಪುತ್ರ ಪುತ್ರಿಯರಿಗ ವರ್ಗಾವಣೆ ಮಾಡುವ ಮೂಲಕ ದೃತರಾಷ್ಟ್ರ ಪ್ರೇಮವನ್ನು ತೋರಿಸುವ ಮೂಲಕ ದೇವೇಗೌಡರನ್ನೇ ಮೀರಿಸಿದ್ದಾರೆ, ತನ್ನದೇ ಕೂಟವನ್ನು ರಚಿಸಿರುವ ಬಿ ವೈ ವಿಜಯೇಂದ್ರ ಸೂಪರ್​ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವುದು ದುರಾದೃಷ್ಟಕರ.

ಒಂದು ವ್ಯೂಹ ರಚಿಸಿ ಕಾರ್ಪೋರೇಟ್​ ಶೈಲಿಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ವಿಜಯೇಂದ್ರ ನಾನೇ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ತಂದೆ ಮಕ್ಕಳ ಭ್ರಷ್ಟಾಚಾರದಿಂದ ಮತದಾರರಾದ ನಾವು ತಲೆತಗ್ಗಿಸುವಂತಾಗಿದೆ ಎಂದರು. ಸ್ವಾಭಿಮಾನವೇ ಮೂಲಮಂತ್ರವಾಗಿರುವ ಬಿಜೆಪಿಯ ಶಾಸಕರಾದ ನಾವುಗಳು ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಗೇಡಿನ ಸಂಗತಿ. ಮುಖ್ಯಮಂತ್ರಿ ಸ್ಥಾನದ ಶಾಸನಬದ್ಧ ಅಧಿಕಾರವನ್ನು ಸಿಎಂ ಪುತ್ರ ಚಲಾಯಿಸುತ್ತಿರುವುದು ನಮಗೆ ಮತ್ತು ಮತ್ತು ಪಕ್ಷಕ್ಕೆ ಮಾಡುವ ಅವಮಾನ ಎಂದು ದೂರಲಾಗಿದೆ.

ಇನ್ನು ಈ ಪತ್ರವನ್ನು ಯಾರು ಬರೆದಿದ್ದಾರೆ ಮತ್ತು ಯಾಕೆ ಬರೆದಿದ್ದಾರೆ ಎನ್ನುವುದೇ ಒಂದು ಪ್ರಶ್ನೆಯಾಗಿದೆ. ಇದೇ ಪತ್ರದಲ್ಲಿ ಬಿ.ವೈ ವಿಜಯೇಂದ್ರ ಮತ್ತು ಅವರ ಸಂಗಡಿಗರ ಸಂಪೂರ್ಣ ವಿವರವನ್ನೂ, ಅವರ ಮೊಬೈಲ್​ ಸಂಖ್ಯೆಯನ್ನೂ ನಮೂದಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ಹೊಸ ಪಕ್ಷ ಕಟ್ಟಲು ಮುಂದಾದ ನಟ ರಜನಿಕಾಂತ್…!

0

ಚೆನ್ನೈ: ಕಾಲಿವುಡ್ ನಟ ರಜನಿಕಾಂತ್ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಪಕ್ಷದ ಹೆಸ್ರನ್ನು ತಿಳಿಸದ ಅವರು, “ಈಗಿರುವ ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಮತಕ್ಕಾಗಿ ಜನರ ಹತ್ತಿರ ಹೋಗುತ್ತವೆ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ .ನಮ್ಮ ಹೊಸ ಪಕ್ಷದ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ” ಎಂದಿದ್ದಾರೆ. 

ಚೆನ್ನೈ ನ ಖಾಸಗಿ ಹೋಟೇಲ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು,‘ನಾನು ಸಿಎಂ ಆಗುವ ಕನಸು ಕಂಡಿಲ್ಲ. ಆದರೆ ಪಕ್ಷದ ಮುಖ್ಯಸ್ಥನಾಗಿರುತ್ತೇನೆ. ಇನ್ನು ನನ್ನ ರಾಜಕೀಯ ಊಹಾಪೋಹದ ಬಗ್ಗೆ ಕಳೆದ 15 ವರ್ಷಗಳಿಂದ ಸುದ್ಧಿ ಹಬ್ಬುತ್ತಲೇ ಇದೆ. 1996 ರಿಂದಲೂ ನನ್ನ ಹೆಸರು ರಾಜಕೀಯದ ಜೊತೆ ನಂಟಾಗಿತ್ತು. 2017ರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಉಹಾಪೋಹ ಹರಡಿತ್ತು‘ ಎಂದು ಹೇಳಿದರು.  

ರಾಜ್ಯದಲ್ಲಿ ಜಯಲಲಿತಾ ಬಳಿಕ ಪ್ರಬಲ ನಾಯಕತ್ವದ ಕೊರತೆಯಿದೆ. ರಾಜಕೀಯದಲ್ಲಿ ವಯಸ್ಸಾದವರೆ ಹೆಚ್ಚಿದ್ದು, ಇನ್ನುಮುಂದೆ  ರಾಜಕೀಯದಲ್ಲಿ ಯುವಜನತೆ ಹೆಚ್ಚಾಗಿ ತೊಡಗಿಕೊಳ್ಳಬೇಕು. ಹಾಗಾಗಿ ನನ್ನ ಪಕ್ಷದಲ್ಲಿ ಶೇ. 60-65 ರಷ್ಟು ಯುವಜನತೆಗೆ ಅವಕಾಶವನ್ನು ನೀಡುತ್ತೇನೆ. ಅಲ್ಲದೆ ನಿವೃತ ಐಪಿಎಸ್, ಐಎಎಸ್ ಅಧಿಕಾರಿಗಳಿಗೆ ಪಕ್ಷಕ್ಕೆ ಆಹ್ವಾನ ನೀಡಿ ಪಕ್ಷವನ್ನು ಬಲಿಷ್ಠಗೊಳಿಸುತ್ತೇನೆ. ನನ್ನ ಪಕ್ಷದಲ್ಲಿ ಅನಗತ್ಯವಾಗಿ ಸಂಪನ್ಮೂಲಗಳಿಗೆ ಖರ್ಚು ಮಾಡುವುದಿಲ್ಲ, ಕೆಲಸ ಮಾಡದವರಿಗೆ ನನ್ನ ಪಕ್ಷದಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು. ಇನ್ನು ಶೀಘ್ರದಲ್ಲೇ  ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವುದಾಗಿಯೂ ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕೃತ ಆಯ್ಕೆ

0

ಬೆಂಗಳೂರು: ಕೆಪಿಸಿಸಿ ಸಾರಥಿಯಾಗಿ ಡಿ.ಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣಾ ಹೀನಾಯ ಸೋಲಿನ ಬಳಿಕ ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ ಶಿವಕುಮಾರ್ ನೇಮಕವಾಗಿದ್ದಾರೆ. ಅದೇ ರೀತಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸಲೀಂ ಅಹ್ಮದ್, ಈಶ್ವರ್​ ಖಂಡ್ರೆ, ಸತೀಶ್ ಜಾರಕಿಹೊಳಿ ನೇಮಕಗೊಂಡಿದ್ದಾರೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಹಾಗೂ ಸಿಎಲ್​ಪಿ ನಾಯಕರಾಗಿ ಮುಂದುವರೆಯಲಿದ್ದಾರೆ.

ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಸಿಂಧ್ಯಾ..!

0

ನವದೆಹಲಿ: ಕಾಂಗ್ರೆಸ್ ಮುಖಂಡ  ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿ ಸೇರ್ತಾರಾ ಅನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸಿಂಧ್ಯಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ  ರಾಜೀನಾಮೆ ನೀಡಿದ್ದಾರೆ.

ಜನರ ಸೇವೆ ಮಾಡಬೇಕೆಂಬ ಆಸೆ ನನ್ನಲ್ಲಿ ಇನ್ನು ಮುಂದೆಯೂ ಹಾಗೆಯೇ ಮುಂದುವರಿಯಲಿದೆ. ಆದರೆ ಅದನ್ನು ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದು ಹೊಸ ಆರಂಭಕ್ಕೆ  ಸೂಕ್ತ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಸದ್ಯ ರಾಜೀನಾಮೆಯಿಂದ ಸಿಂಧ್ಯಾ ಬಿಜೆಪಿ ಸೇರ್ತಾರೆ ಅನ್ನುವ ನಂಬಿಕೆ ಹೆಚ್ಚಾಗಿದೆ.

7 ಸಂಸದರನ್ನು ಅಮಾನತುಗೊಳಿಸಿದ ಸ್ಪೀಕರ್!

0

ಅಶಿಸ್ತಿನ ನಡುವಳಿಕೆ ತೋರಿದ ಆರೋಪದಲ್ಲಿ 7 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಮಾನತುಗೊಳಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಪೇಪರ್​ ಹರಿದು ಸ್ಪೀಕರತ್ತ ಎಸೆದಿದ್ದಾರೆ ಎನ್ನಲಾದ ಸಂಸದರನ್ನು ಸಸ್ಪೆಂಡ್ ಮಾಡಲಾಗಿದೆ. ಗೌರವ್ ಗೊಗೊಯಿ, ಟಿ.ಎನ್ ಪ್ರತಾಪನ್, ಡಿಯನ್ ಕುರಿಕೋಸ್, ಆರ್. ಉಣ್ಣಿತ್ತಾನ್, ಮನಿಕಮ್ ಟಾಗೋರ್, ಬೆನ್ನಿ ಬೆಹ್ನನ್​ ಮತ್ತು ಗುರ್​​ಜೀತ್​ ಸಿಂಗ್​​ ಜಾಜ್​​ ಲಾ ಅಮಾನತುಗೊಂಡಿರುವ ಸಂಸದರು.

ಕರ್ನಾಟಕದ ಮಂತ್ರಿಯಾಗಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಬಿಜೆಪಿ ಸಚಿವ ನಾರಾಯಣ ಗೌಡ

0

ಮಂಡ್ಯ: ಫೆಬ್ರವರಿ 20 ರಂದು ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಕಾರ್ಯರ್ಕ್ರಮದಲ್ಲಿ  ಮಹಾರಾಷ್ಟ್ರಕ್ಕೆ ಜೈಕಾರ ಕೂಗಿ ಪೌರಾಡಳಿತ ಹಾಗೂ ತೋಟಗಾರಿಕೆ ಸಚಿವ ನಾರಾಯಣ ಗೌಡ ವಿವಾದಕ್ಕೆ ಗುರಿಯಾಗಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಈಗ ನಾನು ಏನೇ ಆಗಿದ್ದರೂ ಅದಕ್ಕೆ ಕಾರಣ ಮಹಾರಾಷ್ಟ್ರ. ಕಳೆದ 35 ವರ್ಷಗಳಿಂದ ಮುಂಬೈ ನಗರದಲ್ಲಿದ್ದೀನಿ. ನಾನು ಇಲ್ಲಿಂದ ಹೋಗಿ ಅಲ್ಲಿ ಒಬ್ಬ ಹೋಟೆಲ್ ಉದ್ಯಮಿಯಾಗಿ, ಬಿಲ್ಡರ್ ಆಗಿದ್ದೇನೆ. ಅದಾದ ಬಳಿಕ ಇಲ್ಲಿಗೆ ಬಂದು ರಾಜಕಾರಣಿಯಾಗಿದ್ದೇನೆ. ಅದಕ್ಕಾಗಿ ನಾನು ಮಹಾರಾಷ್ಟ್ರಕ್ಕೆ ಋಣಿಯಾಗಿದ್ದೇನೆ‘ ಎಂದು ಹೇಳುತ್ತಾ, ಜೈ ಮಹಾರಾಷ್ಟ್ರ, ಜೈ ಶಿವಾಜಿ ಅಂತ ಜೈಕಾರ ಹಾಕುತ್ತಾರೆ. ಇಂದು ನನ್ನ ದೇಹದಲ್ಲಿ ಶಕ್ತಿ, ತಾಕತ್ತು ಇದೆ ಅಂದರೆ ಅದು ಮಹಾರಾಷ್ಟ್ರದ್ದು ಎನ್ನುತ್ತಾ ಮರಾಠ ಪ್ರೇಮ ಮೆರೆದಿದ್ದಾರೆ.

ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ರಾತ್ರೋರಾತ್ರಿ ಶಾಸಕರ ರಹಸ್ಯ ಸಭೆ!

0

ಬೆಂಗಳೂರು: ರಾತ್ರೋರಾತ್ರಿ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಶ್ರೀಗಳು ಸಭೆ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ಸಭೆ ನಡೆದಿದ್ದು, ಸಭೆಯಲ್ಲಿ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಂತೆ ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಈ ಮೂವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡಬೇಕು. ಈ ಸಭೆಯಲ್ಲಿ ಸಚಿವ ಸ್ಥಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು. ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರ್ಪಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ.

ರಾತ್ರಿ ನಡೆದ ಸಭೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಸಂಗಣ್ಣ ಕರಡಿ, ಸಿಎಂ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಹನುಮಂತ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಿದ್ದು ಸವದಿ ಹಾಗೂ  ಮಹೇಶ್ ಕುಮಟಹಳ್ಳಿ ಭಾಗಿಯಾಗಿದ್ದರು.

Popular posts