Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, April 21, 2019

ಯುದ್ಧ ವಿಮಾನ ಪತನ

0

ಜೈಪುರ : ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಯುದ್ಧ ವಿಮಾನವೊಂದು ಪತನವಾಗಿದೆ. ಎಂಎಂಐಜಿ-27 ಫೈಟರ್​ ಪತನವಾಗಿರೋ ಯುದ್ಧ ವಿಮಾನ ಅಂತ ಗುರುತಿಸಲಾಗಿದೆ.
ಪೋಕ್ರಾನ್ ವ್ಯಾಪ್ತಿಯಲ್ಲಿ ಸಂಜೆ 6.10ರ ಸುಮಾರಿಗೆ ಈ ಘಟನೆ ನಡೆದಿದೆ. ಪೈಲೆಟ್​ ಸಾವಿನಿಂದ ಪಾರಾಗಿದ್ದಾರೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದ್ದು, ಏರ್​ಫೋರ್ಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ತಾಂತ್ರಿಕ ತನಿಖಾ ತಂಡ ಮತ್ತಿತರರ ತಂಡಗಳಿಂದ ವಿಸ್ತೃತ ತನಿಖೆ ನಡೆಯಲಿದೆ.

ರಾಹುಲ್​ ಗಾಂಧಿ ವಿರುದ್ಧ ಕಂಪ್ಲೇಂಟ್​..!

0

ಮುಂಬೈ : ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ​ಗಾಂಧಿ ವೀರಸಾವರ್ಕರ್ ಅವರನ್ನು ಹೇಡಿ ಅಂತ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಸಾವರ್ಕರ್ ಅವರ ಸಹೋದರನ ಮೊಮ್ಮಗ ರಂಜಿತ್​ ಸಾವರ್ಕರ್ ಅವರು ಮುಂಬೈನ ಶಿವಾಜಿ ಪಾರ್ಕ್​ ಸ್ಟೇಷನ್​ನಲ್ಲಿ ಕಂಪ್ಲೇಂಟ್​ ದಾಖಲಿಸಿದ್ದಾರೆ. 
ಕಳೆದ ನವೆಂಬರ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ವೀರ ಸಾವರ್ಕರ್ ಅವರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರಉ. ”1911ರಲ್ಲಿ ಸಾವರ್ಕರ್ ಅವರನ್ನು ಅಂಡಮಾನ್​ನಲ್ಲಿರೋ ಸೆಲ್ಯೂರ್​ ಜೈಲಿಗೆ ಕಳುಹಿಸಿದಾಗ ಅವರು ತಮ್ಮ ರಕ್ಷಣೆಗಾಗಿ ಬ್ರಿಟಿಷರತ್ರ ಅಂಗಲಾಚಿದ್ರು” ಅಂತ ರಾಹುಲ್​ ಗಾಂಧಿ ನಾಲಿಗೆ ಹರಿಬಿಟ್ಟಿದ್ದರು. 
ರಾಹುಲ್​​ ಗಾಂಧಿ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಸಾವರ್ಕರ್​ ಅವರ ಕುಟುಂಬ ಕೂಡ ಈ ಬಗ್ಗೆ ಗರಂ ಆಗಿತ್ತು. ಇದೀಗ ಸಾವರ್ಕರ್ ಅವರ ಸಹೋದರನ ಮೊಮ್ಮಗ ರಂಜಿತ್ ದೂರು ನೀಡಿದ್ದಾರೆ.

ತಿರುಪತಿಯಲ್ಲಿ 3 ವಜ್ರ ಕಿರೀಟಗಳು ಗೋವಿಂದ…ಗೋವಿಂದ..!

0

ಆಂಧ್ರಪ್ರದೇಶ : ತಿರುಪತಿಯ ಶ್ರೀಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ 3 ವಜ್ರಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ.
ದೇವಾಲಯಲ್ಲಿ ಪೂಜಾಕಾರ್ಯಗಳು ಹಾಗೂ ಭಕ್ತರ ದರ್ಶನದ ಬಳಿಕ ಸಂಜೆ 5 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. 45 ನಿಮಿಷಗಳ ಬಳಿಕ ಪುನಃ ದೇವಸ್ಥಾನದ ಬಾಗಿಲು ತೆರೆದಾಗ ಅಲ್ಲಿ ಮೂರು ಕಿರೀಟಗಳು ಇರಲಿಲ್ಲ ಎಂದು ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.
ಈ ಗೋವಿಂದರಾಜ ಸ್ವಾಮಿ ದೇವಾಲಯ 12ನೇ ಶತಮಾನದ್ದಾಗಿದೆ. ಈ ದೇವಾಲಯಕ್ಕೆ 1130ರ ವೇಳೆಯಲ್ಲಿ ರಾಮಾನುಜಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದರಂತೆ. ಇನ್ನು ದೇವಾಲಯದಲ್ಲಿ ಕಿರೀಟ ಕಳವಾಗಿರುವ ಬಗ್ಗೆ ಟಿಟಿಡಿ ಅಧ್ಯಕ್ಷ ಪಿ.ಸುಧಾಕರ್ ಯಾದವ್ ಸೇರಿದಂತೆ ಮುಖ್ಯಸ್ಥರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಹಳಿತಪ್ಪಿದ ರೈಲಿಗೆ 7 ಮಂದಿ ಬಲಿ

0

ಪಾಟ್ನಾ : ರೈಲು ಅಪಘಾತದಿಂದ 7 ಮಂದಿ ದುರ್ಮರಣವನ್ನಪ್ಪಿದ ಘಟನೆ ಬಿಹಾರದ ಸೋನಪುರದಲ್ಲಿ ನಡೆದಿದೆ.
ಜೋಗ್​ಬನಿಯಿಂದ ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ್​ ಎಕ್ಸ್​ಪ್ರೆಸ್​ ರೈಲು ಸೋನಾಪುರ ರೈಲ್ವೆ ನಿಲ್ದಾಣದ ಬಳಿ ಹಳಿತಪ್ಪಿ ಈ ಧಾರುಣ ಘಟನೆ ಸಂಭವಿಸಿದೆ. 
ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು, 7 ಮಂದಿ ಸಾವನ್ನಪ್ಪಿರುವುದಲ್ಲದೆ, 13 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ.

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಮತ್ತಿಬ್ಬರು ಮಹಿಳೆಯರು!

0

ಕೇರಳ : ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತಿಬ್ಬರು ಮಹಿಳೆಯರು ಯತ್ನಿಸಿದ್ದು, ಅವರನ್ನು ತಡೆದಿರೋ ಘಟನೆ ನಡೆದಿದೆ.
ಬುಧವಾರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ಶಬರಿಮಲೆಗೆ ಎಂಟ್ರಿ ಕೊಡಲು ಮುಂದಾಗಿದ್ರು. ಈ ವೇಳೆ ನೀಲಿಮಾಲ ಬೆಟ್ಟದ ಬಳಿ ಅವರನ್ನು ತಡೆಯಲಾಗಿದೆ. ಕಣ್ಣೂರಿನ ರೇಷ್ಮಾ ನಿಶಾಂತ್ (30) ಮತ್ತು ಕೊಲ್ಲಮ್​​ ನ ಶನಿಲಾ ಸಾಜೇಶ್ (28) ದೇವಾಲಯ ಪ್ರವೇಶಕ್ಕೆ ಯತ್ನಿಸಿದವ್ರು. ಪಾಂಬಾ ತಲುಪಿದ್ದ ಈ ಮಹಿಳೆಯರು ಪೊಲೀಸ್​ ರಕ್ಷಣೆಯೊಂದಿಗೆ ಅಯ್ಯಪ್ಪನ ಸನ್ನಿಧಿ ಪ್ರವೇಶಿಸಲು ಬೆಟ್ಟ ಹತ್ತುತ್ತಿದ್ರು. ನೀಲಿಮಾಗೆ ತಲುಪಿದಾಗ ಬೆಟ್ಟದಿಂದ ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಇವರು ಈ ಇಬ್ಬರು ಮಹಿಳೆಯರನ್ನು ತಡೆದಿದ್ದಾರೆ.
ಅಯ್ಯಪ್ಪನ ದರ್ಶನಕ್ಕೆ ಯತ್ನಿಸಿದ ರೇಷ್ಮ, ‘ತಾನು 2 ತಿಂಗಳುಗಳಿಂದ ಉಪವಾಸ ಕುಳಿತಿದ್ದೇನೆ. ಅಯ್ಯಪ್ಪನ ದರ್ಶನ ಪಡೆಯಲೇ ಬೇಕು. ಪಡೆದೇ ಪಡೆಯುತ್ತೇನೆ’ ಅಂತ ಹೇಳಿದ್ದಾರೆ.

ಟ್ರಾನ್ಸ್​ಫರ್​ ಲಿಸ್ಟ್​ನಲ್ಲಿತ್ತು ಮೃತ ಪೊಲೀಸ್ ಅಧಿಕಾರಿ ಹೆಸರು..!

0

ಲಕ್ನೋ: ಕಳೆದ ತಿಂಗಳಷ್ಟೇ ಮೃತಪಟ್ಟ ಪೊಲೀಸ್ ಅಧಿಕಾರಿಯ ಹೆಸರನ್ನು ಟ್ರಾನ್ಸ್​ಫರ್ ಆಗಲಿರುವ ಆಫೀಸರ್​ಗಳ ಲಿಸ್ಟ್​ನಲ್ಲಿ ಪ್ರಕಟಿಸಿ ಉತ್ತರ ಪ್ರದೇಶ ಪೊಲೀಸರು ಮುಜುಗರಕ್ಕೀಡಾಗಿದ್ದಾರೆ.

ಸಾಯುವ ಮೊದಲು ಡಿಎಸ್​ಪಿ ಆಗಿದ್ದ ಸತ್ಯ ನರೇನ್ ಸಿಂಗ್​ ಅವರ ಹೆಸರು ಶುಕ್ರವಾರ ಬಿಡುಗಡೆ ಮಾಡಿದ ಲಿಸ್ಟ್​ನಲ್ಲಿ ಸೇರಿಸಿರುವುದು ಪೊಲೀಸ್ ಇಲಾಖೆಗೆ ಮುಜುಗರ ತಂದಿಟ್ಟಿದೆ. ಲಿಸ್ಟ್​​ನಲ್ಲಿ ಮೃತ ಆಫೀಸರ್​ ಹೆಸರನ್ನು ಸೇರಿಸಿರುವ ತಪ್ಪಿಗೆ ಉತ್ತರಪ್ರದೇಶ ಡಿಜಿಪಿ ಒ.ಪಿ ಸಿಂಗ್​ ಕ್ಷಮೆ ಕೇಳಿದ್ದು, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

“ಇಂದಿನ ಟ್ರಾನ್ಸ್​ಫರ್​ ಲಿಸ್ಟ್​ನಲ್ಲಿ ಮೃತ ಪೊಲೀಸ್​ ಅಧಿಕಾರಿ ಹೆಸರು ಸೇರಿರುವ ಘಟನೆಗೆ ನಾನು ಕ್ಷಮೆ ಕೇಳುತ್ತೇನೆ. ಈಗಾಗಲೇ ಕ್ಯಾನ್ಸ್​ಲೇಷನ್ ಲೆಟರ್​ ಕಳುಹಿಸಲಾಗಿದೆ. ಇಂತಹ ತಪ್ಪನ್ನು ಲಘುವಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಇಲಾಖೆ ಮುಖ್ಯಸ್ಥನಾಗಿ ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತೇನೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಅಂತ ಉತ್ತರಪ್ರದೇಶ ಡಿಜಿಪಿ ಒ.ಪಿ ಸಿಂಗ್​ ಟ್ವೀಟ್​ ಮಾಡಿದ್ದಾರೆ.

ಕೇಜ್ರಿವಾಲ್​ ಭೇಟಿಯಾದ ಪ್ರಕಾಶ್ ರೈ

0

ದೆಹಲಿ : ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿರುವ ನಟ ಪ್ರಕಾಶ್ ರೈ ಅವರು ಗುರುವಾರ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರು ಸೆಂಟ್ರಲ್​ನಿಂದ ಚುನಾವಣೆಗೆ ಸ್ಪರ್ಧಿಸಲಿರುವ ಪ್ರಕಾಶ್​ ರೈ ಅವರು ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಕಾಶ್​ ರೈ ಅವರ ಜೊತೆ ಮಾತುಕತೆ ನಡೆಸಿದ ಕೇಜ್ರಿವಾಲ್​ ಅವರು ಬೆಂಬಲ ವ್ಯಕ್ತಪಡಿಸಿದ್ದು, ಪ್ರಕಾಶ್ ಅವರಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಶಬರಿಮಲೆ ಸಂಪ್ರಾದಯಕ್ಕೆ ಬ್ರೇಕ್ : ದೇವಾಲಯಕ್ಕೆ ಎಂಟ್ರಿಕೊಟ್ಟ ಮಹಿಳೆಯರು..!

0

ಕೇರಳದ ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ.‌ 40 ವರ್ಷದ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಿ , ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
10-50 ವರ್ಷದೊಳಗಿನ ಮಹಿಳೆಯರಿಗೂ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ದೇವಾಲಯದ ಆಡಳಿತ ಮಂಡಳಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ದೇವಾಲಯ ಪ್ರವೇಶವನ್ನು ವಿರೋಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರ ಪ್ರವೇಶ ಸಾಧ್ಯವಾಗಿರಲಿಲ್ಲ.
ಹೋರಾಟ , ಪರ-ವಿರೋಧದ ನಡುವೆಯೇ ಇದೀಗ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ 3.45 ರ ಸುಮಾರಿಗೆ ದೇವಾಲಯ ಪ್ರವೇಶಿಸಿದ್ದಾರೆ. ಇದರೊಂದಿಗೆ 800 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಂತಾಗಿದೆ.

ಮನೆಬಿಟ್ಟು ಹೋಗ್ಬೇಡ ಅಂದಿದ್ದಕ್ಕೆ ತಾಯಿಯನ್ನೇ ಕೊಂದಳು..!

0

ತಿರುವಲ್ಲೂರು: ಮನೆಬಿಟ್ಟು ಓಡಿ ಹೋಗ್ಬೇಡ ಎಂದ ತಾಯಿಯನ್ನು ಮಗಳು ಕೊಲೆ ಮಾಡಿದ್ದಾಳೆ. ಫೇಸ್​ಬುಕ್​ ಗೆಳೆಯನ ಜೊತೆ ಓಡಿ ಹೋಗಲು ಬಿಡಲಿಲ್ಲ ಅಂತ ಕೋಪಗೊಂಡ ಮಗಳು ತಾಯಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾಳೆ.

ಕಾಲೇಜು ವಿದ್ಯಾರ್ಥಿನಿ ದೇವಿ ಪ್ರಿಯಾಗೆ ಫೇಸ್​ಬುಕ್ ಫ್ರೆಂಡ್​ ವಿವೇಕ್​ ಜೊತೆ ಪ್ರೀತಿಯಾಗಿತ್ತು. ಹಾಗೇ ಅವನ ಜೊತೆ ಮನೆಬಿಟ್ಟು ಓಡಿಹೋಗಲು ಬಯಸಿದ್ದಳು. ಗಾರ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್​ ತಾನು ಬರುವುದು ಸಾಧ್ಯವಿಲ್ಲ ಅಂತ ತನ್ನ ಸ್ನೇಹಿತರನ್ನು ಗೆಳತಿ ಮನೆಗೆ ಕಳುಹಿಸಿದ್ದ. ಲಗೇಜ್​ ಪ್ಯಾಕ್​ ಮಾಡಿ ಓಡಿಹೋಗಲು ಸಿದ್ಧಳಾಗಿದ್ದ ಮಗಳನ್ನು ತಾಯಿ ಭಾನುಮತಿ ತಡೆದಿದ್ದರು. ಕೋಪದಲ್ಲಿ ದೇವಿ ಪ್ರಿಯಾ ಚೂರಿಯಿಂದ ಇರಿದು ತಾಯಿಯ ಕೊಲೆ ಮಾಡಿದ್ದಾಳೆ. ಯುವಕರಿಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರ ಬಟ್ಟೆಯಲ್ಲಿದ್ದ ರಕ್ತದ ಕಲೆ ನೋಡಿ ಗ್ರಾಮಸ್ಥರು ತಡೆದಿದ್ದಾರೆ. ಗ್ರಾಮಸ್ಥರು ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರಿ ಆಸ್ಪತ್ರೆ ಎಡವಟ್ಟು: ಗರ್ಭಿಣಿಗೆ ನೀಡಿದ್ರು ಎಚ್​ಐವಿ ಪಾಸಿಟಿವ್​ ರಕ್ತ

0

ಚೆನ್ನೈ: ಗರ್ಭಿಣಿಗೆ ಎಚ್​ಐವಿ ರಕ್ತ ನೀಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿರುಧುನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ರಕ್ತ ನೀಡುವಾಗ ಎಚ್​ಐವಿ ರಕ್ತವನ್ನು ಇಂಜೆಕ್ಟ್​ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಲ್ಯಾಬ್ ತಂತ್ರಜ್ಞರನ್ನು ಅಮಾನತುಗೊಳಿಸಲಾಗಿದೆ.

ಗರ್ಭಿಣಿಗೆ ಎಚ್​​ಐವಿ ಪೀಡಿತ ವ್ಯಕ್ತಿಯಿಂದ ಡಿಸೆಂಬರ್​ 3ರಂದು ರಕ್ತ ನೀಡಲಾಗಿತ್ತು. ಎರಡು ವರ್ಷಗಳ ಹಿಂದೆ ರಕ್ತ ನೀಡುವ ಸಂದರ್ಭದಲ್ಲಿ ಆ ವ್ಯಕ್ತಿಗೆ ಎಚ್ಐವಿ ಇರೋದು ಪತ್ತೆಯಾಗಿತ್ತು. ಆದರೆ ವ್ಯಕ್ತಿ ತನಗೆ ಎಚ್​ಐವಿ ಪಾಸಿಟಿವ್​ ಇರುವ ಕುರಿತು ಯಾವುದೇ ವಿಷಯವನ್ನು ತಿಳಿಸದೆ, ಕಳೆದ ತಿಂಗಳು ಪುನಃ ಸರ್ಕಾರಿ ಬ್ಲಡ್ ಬ್ಯಾಂಕ್​ನಲ್ಲಿ ರಕ್ತ ನೀಡಿದ್ದರು. ಈ ರಕ್ತವನ್ನು ಗರ್ಭಿಣಿಗೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗರ್ಭಿಣಿಯ ರಕ್ತ ಪರೀಕ್ಷೆ ಸಂದರ್ಭ ಆಕೆಗೆ ಎಚ್​ಐವಿ ಪೊಸಿಟಿವ್​ ಆಗಿತ್ತು. ಈಗ ರೆಟ್ರೋ ವೈರಲ್​ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವೂ ಇದರಿಂದ ಬಾಧಿತವಾಗಿದೆಯೇ ಎಂದು ಜನಿಸಿದ ಮೇಲಷ್ಟೇ ಹೇಳಲು ಸಾಧ್ಯ ಎಂದು ಆಸ್ಪತ್ರೆ ಅಧಿಖಾರಿಗಳು ತಿಳಿಸಿದ್ದಾರೆ.

“ಎರಡು ಬಾರಿ ಈ ರೀತಿ ಲೋಪ ಕಂಡುಬಂದಿದ್ದು, ಟೆಕ್ನೀಶಿಯನ್​ ರಕ್ತವನ್ನು ಎಚ್​ಐವಿ ಪರೀಕ್ಷೆಗೆ ಒಳಪಡಿಸಿಲ್ಲ. ಇದು ಉದ್ದೇಶಪೂರ್ವಕವಲ್ಲ. ಸೂಕ್ತ ತನಿಖೆಗೆ ಸೂಚಿಸಲಾಗಿದೆ. ಎಚ್​ಐವಿ ಪೀಡಿತ ವ್ಯಕ್ತಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಿಣಿಗೆ ಹಾಗೂ ಆಕೆಯ ಪತಿಗೆ ಉದ್ಯೋಗ ಮತ್ತು ಪರಿಹಾರ ನೀಡಲು ಮುಂದಾಗಿದ್ದೇವೆ ಎಂದು ತಮಿಳುನಾಡು ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ಆರ್​ ಮನೋಹರನ್​ ತಿಳಿಸಿದ್ದಾರೆ.

Popular posts