Friday, April 3, 2020

ರಾಜ್ಯದ 9ಜಿಲ್ಲೆಗಳಲ್ಲಿ ಕರ್ಫ್ಯೂ

0

ರಾಜ್ಯದ 9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರೋನಾ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್​ಡೌನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಇದೀಗ ಕೇವಲ 9 ಜಿಲ್ಲೆಗಳನ್ನು ಮಾತ್ರ ಕರ್ಫ್ಯೂ ಮೂಲಕ ಲಾಕ್​ಡೌನ್ ಮಾಡಲು ಮುಂದಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ , ದಕ್ಷಿಣ ಕನ್ನಡ, ಚಿಕ್ಕಾಬಳ್ಳಾಪುರ, ಮೈಸೂರು, ಕಲಬುರಗಿ, ಬೆಳಗಾವಿ, ಕೊಡಗು, ಧಾರವಾಡ ಜಿಲ್ಲೆಗಳು ಮಾರ್ಚ್​ 31ರವರೆಗೆ ಲಾಕ್​ಡೌನ್ ಆಗಲಿವೆ.
ಇನ್ನು ಕೇರಳ, ಮಹಾರಾಷ್ಟ್ರ ಸೇರಿದಂತೆ 19 ರಾಜ್ಯಗಳನ್ನು ಲಾಕ್​ಡೌನ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.

ನಿಮ್ಮ ಬಲಿದಾನವನ್ನು ದೇಶ ಎಂದೂ ಮರೆಯದು : ಮೋದಿಯಿಂದ ಭಗತ್ ಸಿಂಗ್, ರಾಜ್​ಗುರು, ಸುಖದೇವ್ ಸ್ಮರಣೆ

0

ನವದೆಹಲಿ: ಇಂದು  ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್​ದೇವ್ ಹಾಗೂ ರಾಜಗುರು ಹುತಾತ್ಮರಾದ ದಿನ. ಈ ಅಪ್ರತಿಮ ಸೇನಾನಿಗಳನ್ನು 1931ರ ಈ ದಿನ, ಅಂದ್ರೆ ಮಾರ್ಚ್​ 23ರಂದು ಗಲ್ಲಿಗೇರಿಸಲಾಯಿತು. ಈ ದಿನವನ್ನು ಬಲಿದಾನ್ ದಿವಸ್ ಎಂದು ಆಚರಿಸಲಾಗುತ್ತದೆ.

ಬ್ರಿಟಿಷರನ್ನು ಸಿಂಹಸ್ವಪ್ನವಾಗಿ ಕಾಡಿದ ಆ ಮೂವರು ನಗುತ್ತಲೇ ನೇಣುಗಂಬಕ್ಕೇರಿದ್ದರು. ಅವರ ಧೈರ್ಯ, ಸಾಹಸ, ಅಪ್ರತಿಮ ದೇಶಭಕ್ತಿಗೆ ಇಡೀ ದೇಶವೇ ತಲೆಬಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ದೇಶಭಕ್ತರನ್ನು ನೆನೆದಿದ್ದಾರೆ. “ದೇಶಕ್ಕಾಗಿ ನೀವು ಮಾಡಿರುವ ತ್ಯಾಗ, ನಿಮ್ಮ ಬಲಿದಾನವನ್ನು ರಾಷ್ಟ್ರ ಎಂದಿಗೂ ನೆನಪಿಟ್ಟುಕೊಳ್ಳುತ್ತದೆ. ನಿಮಗೆ ನನ್ನ ಕೋಟಿ ಕೋಟಿ ನಮನಗಳು” ಎಂದು ಟ್ವೀಟ್​ ಮೂಲಕ ನುಡಿನಮನ ಸಲ್ಲಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಟ್ವೀಟ್ ಮೂಲಕ ಸ್ಮರಿಸಿದ್ದಾರೆ. 

 

 

ಕ್ರಾಂತಿಕಾರಿ  ಭಗತ್ ಸಿಂಗ್, ದೇಶದ ದಾಸ್ಯ ಮುಕ್ತಿಗಾಗಿ ನೇಣಿಗೆ ಕೊರಳೊಡ್ಡಿ ಹುತಾತ್ಮನಾದ ದಿನವಿದು.  ಅವರ ಸ್ವಾತಂತ್ರ್ಯದೆಡೆಗಿನ ತುಡಿತ, ಕೆಚ್ಚೆದೆ, ದೇಶಪ್ರೇಮ ಹಾಗೂ ತ್ಯಾಗಗಳಿಗೆ ಕೋಟಿ ಕೋಟಿ ನಮನಗಳು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಗತ್ ಸಿಂಗ್ , ಸುಖ್​ದೇವ್ ಹಾಗೂ ರಾಜಗುರು ಅಂತಹ ಈ ನೆಲದ ವೀರ ಸೇನಾನಿಗಳ ತ್ಯಾಗ-ಬಲಿದಾನ, ನಿಸ್ವಾರ್ಥ ಚಿಂತನೆಗಳು ಇಂದಿನ ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದ್ದಾರೆ.

 

 

ಕೊರೋನಾ ವಿರುದ್ಧ ಸಮರಕ್ಕೆ ರೆಡಿಯಾದ ಉದ್ಯಮಿಗಳು..!

0

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಬೆನ್ನಲ್ಲೇ ದೇಶದ ಉದ್ಯಮಿಗಳು ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ತಯಾರಾಗಿದ್ದು, ಅದಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಉದ್ಯಮಿ ಆನಂದ್ ಮಹೀಂದ್ರಾ, ವಿಜಯ್ ​ಶೇಖರ್ ಹಾಗೂ ಅನಿಲ್ ಅಗರ್​ವಾಲ್  ದೇಶದ ಜನತೆಗಾಗಿ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.

ಪೇಟಿಎಂನ ಸಂಸ್ಥಾಪಕ ವಿಜಯ್ ಶೇಖರ್ ಕೊರೋನಾವನ್ನು ತಡೆಯಲು ಕೆಲಸ ಮಾಡುತ್ತಿರುವ ಟೀಮ್​ಗಾಗಿ ಹಾಗೂ ಅದಕ್ಕೆ ಔಷಧಿಗಳನ್ನು ಪತ್ತೆಹಚ್ಚುವುದಕ್ಕಾಗಿ 5 ಕೋಟಿ ರೂಪಾಯಿ ಮೀಸಲಿಡುವುದಾಗಿ ಹೇಳಿದ್ದಾರೆ.

ಇನ್ನು ವೆಂಡೇಟಾ ರಿಸೋರ್ಸ್​ನ ಚೇರ್​ಮನ್ ಅನಿಲ್ ಅಗರ್​ವಾಲ್ ದೇಶಕ್ಕಾಗಿ ನೂರು ಕೋಟಿ ರೂಪಾಯಿಗಳನ್ನು ಮೀಸಲಿಡುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ದೇಶಕ್ಕೆ ನಮ್ಮ ಅಗತ್ಯವಿದೆ. ಹಲವು ಜನ ಕೊರೋನಾ ವೈರಸ್​ನಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ದಿನಗೂಳಿಯವರಂತು ಪರದಾಡುವಂತಾಗಿದೆ. ಅವರಿಗಾಗಿ ನಾವು ಸಣ್ಣ ಮಟ್ಟದ ಸಹಾಯವನ್ನು ಮಾಡಬೇಕೆಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಛತ್ತೀಸಗಢದಲ್ಲಿ ನಕ್ಸಲರ ಅಟ್ಟಹಾಸ ; 17 ಯೋಧರು ಹುತಾತ್ಮ

0

ರಾಯ್​ಪುರ : ಛತ್ತೀಸ್​ಗಢದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಶನಿವಾರ ಘಟನೆ ನಡೆದಿದ್ದು, ಭಾನುವಾರ ಮೃತದೇಹಗಳು ಪತ್ತೆಯಾಗಿದೆ. 17 ಮಂದಿ ಯೋಧರು ಅಗಲಿರುವುದನ್ನು ಛತ್ತೀಸ್​ಗಢ ಪೊಲೀಸ್​​ ಮಹಾನಿರ್ದೇಶಕ ಡಿ.ಎಂ ಅವಸ್ಥಿ ತಿಳಿಸಿದ್ದಾರೆ.

ಮಾರ್ಚ್​​ 31ರವರೆಗೆ 9 ಜಿಲ್ಲೆಗಳು ಲಾಕ್​​ಡೌನ್

0

ನವದೆಹಲಿ: ಡೆಡ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಜಾರಿಯಾಗಿರುವ ಜನತಾ ಕರ್ಫ್ಯೂವಿಗೆ ರಾಜ್ಯಕ್ಕೆ ರಾಜ್ಯವೇ ಸ್ತಬ್ಧವಾಗಿದೆ. ಇನ್ನು ಮಾರ್ಚ್ 31 ರವರೆಗೆ 9 ಜಿಲ್ಲೆಗಳು ಲಾಕ್​ಡೌನ್ ಆಗಲಿವೆ.

ದೇಶದಲ್ಲಿ ಒಟ್ಟು 75 ಜಿಲ್ಲೆಗಳನ್ನು ಲಾಕ್​ಡೌನ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ 9 ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್ ಆಗಲಿದ್ದು, ಕೊಡಗು , ಮೈಸೂರು, ದಕ್ಷಿಣ ಕನ್ನಡ,  ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಚಿಕ್ಕಬಳ್ಳಾಪುರ,  ಧಾರವಾಡ, ಬೆಳಗಾವಿ ಜಿಲ್ಲೆಗಳು ಸಂಪೂರ್ಣ ಬಂದ್​ ಆಗಲಿವೆ.

 

ಮಾರ್ಚ್​ 31ರವರೆಗೆ ಸಾರಿಗೆ ಸೇವೆಗಳು ಸ್ತಬ್ಧ

0

ನವದೆಹಲಿ: ಕೊರೋನಾ ಸೋಂಕು ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಜನತಾ ಕರ್ಫ್ಯೂವನ್ನು  ಜಾರಿಗೊಳಿಸಲಾಗಿದ್ದು, ಪ್ರಧಾನಿ ಮೋದಿ ಕರೆಗೆ ದೇಶದೆಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದೀಗ ಮಾರ್ಚ್ 31ರವರೆಗೆ ರೈಲು, ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಇಂದು ಪ್ರಧಾನಮಂತ್ರಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಹಾಗೂ ಕೇಂದ್ರ ಕ್ಯಾಬಿನೆಟ್ ಸೆಕ್ರೆಟರಿ ನೇತೃತ್ವದಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಮಾರ್ಚ್ 31 ರವರೆಗೆ ಉಪನಗರ ರೈಲು ಸೇವೆ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಮೆಟ್ರೋ ಸೇವೆಗಳು ಸ್ಥಗಿತಗೊಳ್ಳಲಿದೆ. ಹಾಗೆಯೇ ಸಾರಿಗೆ ಸೇವೆಗಳು ಮಾರ್ಚ್ 31ರವರೆಗೆ ಬಂದ್ ಆಗಲಿವೆ.

ಇನ್ನು ಕೊರೋನಾ ದೃಢಪಟ್ಟಿರುವ 75 ಜಿಲ್ಲೆಗಳಲ್ಲಿ ಯಾವ ಸೇವೆಗಳು ಅವಶ್ಯಕತೆ ಇದೆಯೋ ಅವುಗಳನ್ನು ನೀಡುವುದರ ಬಗ್ಗೆ ಆಯಾಯ ರಾಜ್ಯ ಸರ್ಕಾರಗಳೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕೊರೋನಾ : ಭಾರತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆ

0

ಕೊರೋನಾ ವೈರಸ್​ಗೆ ಭಾರತದಲ್ಲಿ ಇಂದು ಎರಡು ಸಾವು ಸಂಭಿಸಿದ್ದು, ಸಾವಿನ ಸಂಖ್ಯೆ 7ಕ್ಕೇರಿದೆ. ಇಂದು ಮುಂಬೈ ಮತ್ತು ಬಿಹಾರದ ಪಾಟ್ನಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಪಾಟ್ನಾದಲ್ಲಿ 38 ವರ್ಷದ ವ್ಯಕ್ತಿ ಹಾಗೂ ಮುಂಬೈನಲ್ಲಿ 56 ವರ್ಷದ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ. ಈ ಹಿಂದೆ ಕರ್ನಾಟಕದ ಕಲಬುರಗಿ, ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಒಂದೊಂದು ಸಾವು ಸಂಭವಿಸಿತ್ತು. ಮಹಾರಾಷ್ಟ್ರದಲ್ಲಿ ಇಂದು ಸಂಭವಿಸಿರುವ ಸಾವು ಕೊರೋನಾದ ಎರಡನೇ ಬಲಿಯಾಗಿದೆ.

ನಿರ್ಭಯಾ ಅತ್ಯಾಚಾರಿಗಳ ಹ್ಯಾಂಗ್​​ಮನ್​ಗೆ 1 ಲಕ್ಷ ರೂ ನೀಡಿದ ನಟ ಜಗ್ಗೇಶ್!

0

ನಿರ್ಭಯಾ ಅತ್ಯಾಚಾರಿಗಳನ್ನು ಇಂದು ಗಲ್ಲಿಗೇರಿಸಲಾಗಿದೆ. ಈ ಮೂಲಕ 8 ವರ್ಷಗಳ ಬಳಿಕ ನಿರ್ಭಯಾ ಸಾವಿಗೆ ನ್ಯಾಯಸಿಕ್ಕಂತಾಗಿದೆ. ಅತ್ಯಾಚಾರಿಗಳಿಗೆ ಗಲ್ಲಾಗಿರುವುದಕ್ಕೆ ಇಡೀ ದೇಶ ಸಂಭ್ರಮಿಸುತ್ತಿದೆ.
ಇನ್ನು ನಟ ಜಗ್ಗೇಶ್ ಅತ್ಯಾಚಾರಿಳ ಹ್ಯಾಂಗ್​ಮನ್​ ಪವನ್​ಗೆ ಒಂದು ಲಕ್ಷ ರೂ ಕೊಡುವುದಾಗಿ ಘೋಷಿಸಿದ್ದರು. ಅವರೀಗ ತಮ್ಮ ಮಾತಿನಂತೆ ಹ್ಯಾಂಗ್​ಮನ್​ಗೆ 1 ಲಕ್ಷ ರೂ ಚೆಕ್ ನೀಡಿದ್ದಾರೆ.
ಈ ವಿಷಯವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಅವರು, ಕೊಟ್ಟ ಮಾತಿನಂತೆ 1 ಲಕ್ಷ ರೂ, ನಿರ್ಭಯ ಹಂತಕರ #hangmen ಗೆ ನನ್ನ ಧೇಣಿಗೆ..
ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ! ಸತ್ಯದ ಹಾದಿಯಲ್ಲಿ ನಡೆದವಗೆ ಭಯವಿಲ್ಲ.! ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪೊಲ್ಲ! ಈ ದಿನಕ್ಕೆ ಹಲ್ಲುಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ! ಸುದ್ದಿ ಕೇಳಲು ನಿದ್ರೆಮಾಡದೆ ಕಾದೆ! ಹರಿಓಂ. ಶುಭದಿನ” ಎಂದು ಟ್ವೀಟ್ ಮಾಡಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿ

0

2012 ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಕೊನೆಗೂ ಗಲ್ಲು ಶಿಕ್ಷೆ ಜಾರಿಯಾಗಿದೆ. ಅಪರಾಧಿಗಳಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್  ಹಾಗೂ ಪವನ್ ಗುಪ್ತಾ ಇಂದು ಬೆಳಗ್ಗೆ 5.30ಕ್ಕೆ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೇರಿದರು.

ಸಾವಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿ‌ ಮೂರು ಬಾರಿ ಕುಣಿಕೆಯಿಂದ ಸದ್ಯಕ್ಕೆ ಪಾರಾಗಿದ್ದ ಅಪರಾಧಿಗಳಿಗೆ ಕೊನೆಗೂ ಶಿಕ್ಷೆಯಾಗಿದೆ.

ಒಟ್ಟು 6 ಮಂದಿ ಅಪರಾಧಿಗಳಲ್ಲಿ 2013ರಲ್ಲಿ ರಾಮ್​ಸಿಂಗ್ ಎಂಬ ಅಪರಾಧಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನೊಬ್ಬ ಅಪರಾಧಿ ಕೃತ್ಯ ನಡೆದಾಗ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ. ನಾಲ್ವರು ಇಂದು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

 

ಜನತಾ ಕರ್ಫ್ಯೂಗೆ ಪ್ರಧಾನಿ ಮೋದಿ ಕರೆ

0

ಕೊರೋನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.
ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಜನತಾ ಕರ್ಫ್ಯೂ ಜಾರಿ ಆಗಲಿ. ಯಾರೂ ಕೂಡ ರಸ್ತೆಗಿಳಿಯಬೇಡಿ. ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳಿ. ಎನ್​ಸಿಸಿ, ಎನ್​ಎಸ್​ಎಸ್​ ಮೊದಲಾದ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಈ ಬಗ್ಗೆ ಇಂದಿನಿಂದ ಭಾನುವಾರದವರೆಗೆ ಮಾಹಿತಿ ನೀಡಲಿ. ಜನ ಫೋನ್​​ ಮಾಡಿ ಬೇರೆಯವರಿಗೆ ವಿಷಯ ತಿಳಿಸಲಿ ಎಂದು ಮನವಿ ಮಾಡಿದರು. ಅಂದು ಸಂಜೆ 5 ಗಂಟೆಗೆ ಮನೆ ಬಾಗಿಲು, ಕಿಟಕಿ, ಬಾಲ್ಕನಿ ಬಳಿ 5 ನಿಮಿಷ ನಿಂತು ಚಪ್ಪಾಳೆ ತಟ್ಟುವ ಮೂಲಕ ರಾಷ್ಟ್ರಕ್ಕಾಗಿ ಸೇವೆಸಲ್ಲಿಸುತ್ತಿರುವವರನ್ನು ಗೌರವಿಸಿ ಎಂದು ಕರೆಕೊಟ್ಟರು. ಅಲ್ಲದೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರನ್ನು ಗೌರವಿಸಿ ಎಂದರು.
ಕೊರೋನಾಗೆ ಮದ್ದಿಲ್ಲ. ಲಸಿಕೆ ಕಂಡು ಹಿಡಿಯಲು ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಸದ್ಯ ಸಂಕಲ್ಪ, ಸಂಯಮಗಳೇ ಅಸ್ತ್ರವಾಗಿರಲಿ ಎಂದರು. ನಾವು ಆರೋಗ್ಯವಾಗಿದ್ದರೆ ವಿಶ್ವವೇ ಆರೋಗ್ಯವಾಗಿರುತ್ತದೆ ಎಂದ ಅವರು, ಜನರೇ ಜನರಿಗಾಗಿ ಘೋಷಿಸಿಕೊಳ್ಳೋ `ಜನತಾ ಕರ್ಫ್ಯೂ’ಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.