Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, April 21, 2019

ಒಡಿಐ ಸರಣಿಯೂ ಆಸೀಸ್​​ ಮುಡಿಗೆ..!

0

ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್​ಇಂಡಿಯಾ ಸೋಲುಂಡಿದೆ. ದೆಹಲಿಯಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ 273 ರನ್​ಗಳ ಟಾರ್ಗೆಟ್​​ ಬೆನ್ನತ್ತಿದ ಭಾರತ ಕೇವಲ 237 ರನ್​ಗಳಿಗೆ ಆಲೌಟ್​​ ಆಯ್ತು. ಪರಿಣಾಮ 35 ರನ್​ಗಳಿಂದ ಪಂದ್ಯ ಜಯಿಸಿದ ಆಸ್ಟ್ರೇಲಿಯಾ 3-2ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಪಂದ್ಯದಲ್ಲಿ ರೋಹಿತ್ ಶರ್ಮಾ ಹೊರತು ಪಡಿಸಿದ್ರೆ ಉಳಿದೆಲ್ಲಾ ಬ್ಯಾಟ್ಸ್​​ಮನ್​ಗಳು ಆಸೀಸ್​ ಬೌಲರ್​​ಗಳನ್ನು ಎದುರಿಸುವಲ್ಲಿ ವಿಫಲರಾದ್ರು. ಈ ಮೂಲಕ ಟಿ-20 ಸರಣಿಯನ್ನೂ ಜಯಿಸಿದ್ದ ಆಸ್ಟ್ರೇಲಿಯಾ ಏಕದಿನ ಸರಣಿಯನ್ನೂ ಗೆದ್ದು ಭಾರತದ ನೆಲದಲ್ಲಿ ಗೆಲುವಿನ ಕೇಕೆ ಹಾಕಿತು.
ಇದಕ್ಕೂ ಮೊದಲು ಬ್ಯಾಟಿಂಗ್​ ಮಾಡಿದ್ದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿತು. ಕಾಂಗರೂ ಪಡೆಯ ಪರ ಉಸ್ಮಾನ್ ಖವಾಜ ಶತಕ (100) ಸಿಡಿಸಿದ್ರೆ, ಪೀಟರ್ ಹ್ಯಾಂಡ್ಸ್‌ಸ್ಕಂಬ್​ ಹಾಫ್ ಸೆಂಚುರಿ (52) ಬಾರಿಸಿದರು.

ಇಂಡೋ-ಆಸೀಸ್​​ 5ನೇ ಒಡಿಐ : ಗೆದ್ದವರ ಪಾಲಿಗೆ ಸರಣಿ

0

ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಏಕದಿನ ಪಂದ್ಯ ಇಂದು ದೆಹಲಿಯಲ್ಲಿ ನಡೆಯಲಿದ್ದು, ಫಿರೋಜ್​ ಷಾ ಕೊಟ್ಲಾ ಮೈದಾನ ವೇದಿಕೆಯಾಗಲಿದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳೂ ತಲಾ 2-2 ಅಂತರದಲ್ಲಿ ಸಮಬಲ ಸಾಧಿಸಿರುವುದರಿಂದ ಪಂದ್ಯ ಕುತೂಹಲ ಮೂಡಿಸಿದ್ದು, ಇಂದಿನ ಪಂದ್ಯದ ಗೆಲುವು ಸರಣಿ ನಿರ್ಧರಿಸಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದು, ಇಂದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ಲೂ ಬಾಯ್ಸ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ಯಾವ ತಂಡವನ್ನು ಕಡೆಗಣೆಸುವಂತಿಲ್ಲ. 4ನೇ ಏಕದಿನ ಪಂದ್ಯದಲ್ಲಿ ಸವಾಲಿನ ಗುರಿ ಬೆನ್ನತ್ತಿ ಗೆದ್ದ ಆಸ್ಟ್ರೇಲಿಯಾ, ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಇದೀಗ 5 ಏಕದಿನ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 2 ಪಂದ್ಯ ಗೆದ್ದಿರುವುದರಿಂದ, ಕೊನೆಯ ಪಂದ್ಯ ರೋಚಕತೆ ಹುಟ್ಟಿಸಿದೆ.
ಫಾರ್ಮ್​ ಕಳೆದುಕೊಂಡಿದ್ದ ಆರಂಭಿಕ ಬ್ಯಾಟ್ಸ್​​ಮನ್​ಗಳು ಕೊನೆಯ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿರುವುದು ಟೀಮ್​ಇಂಡಿಯಾ ಪಾಳಯದಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದ ಅಂಚಿನಲ್ಲಿ ಎಡವಿದರೆ, ಧವನ್ 17 ಇನ್ನಿಂಗ್ಸ್ ಬಳಿಕ ಮೂರಂಕಿ ಮೊತ್ತ ಮುಟ್ಟಿದರು. ಹೀಗಾಗಿ ಈ ಆಟಗಾರರ ಮೇಲೆ ಭರವಸೆ ಮೂಡಿದೆ. ಇನ್ನು ಮಿಡಲ್​ ಆರ್ಡರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್, ಅಂಬಟಿ ರಾಯುಡು ತಂಡದ ಬಲವಾಗಿದ್ದಾರೆ. ಜೊತೆಗೆ ತವರಿನಲ್ಲಿ ಯುವ ವಿಕೆಟ್ ಕೀಪರ್ ರಿಷಬ್​​​ ಪಂತ್​ ಮಿಂಚಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇದೆಲ್ಲದರೊಂದಿಗೆ ಆಲ್​ರೌಂಡರ್​ಗಳು ಸಾಮರ್ಥ್ಯಕ್ಕೆ ತಕ್ಕವಾಡಬೇಕಿದೆ.

ಆದರೆ 4ನೇ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ನ ಹೊರತಾಗಿಯೂ ತಂಡವನ್ನು ಕಾಡಿದ್ದು, ಬೌಲಿಂಗ್​ ವೈಫಲ್ಯ. ಮೊಹಾಲಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ರನ್​ ನೀಡಿದ ​ಟೀಮ್​ಇಂಡಿಯಾ ಬೌಲರ್​ಗಳು ಸೋಲಿಗೆ ಕಾರಣರಾದ್ರು. ಹೀಗಾಗಿ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರಿತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಮ್ಮ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಬೇಕಿದೆ. ಸ್ಪಿನ್ ಜುಗಲ್ ಬಂದಿ ಯಜುವೇಂದ್ರ ಚಹಾಲ್ ಹಾಗೂ ಕುಲ್ ದೀಪ್ ಯಾದವ್ ಕೂಡ ಮೋಡಿ ಮಾಡಬೇಕಿದೆ.
ಇನ್ನು ಕಾಂಗರೂ ಬಳಗದಲ್ಲಿ ಆಟಗಾರರು ಲಯಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ತಂದಿದೆ. ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜ, ಶಾನ್ ಮಾರ್ಶ್, ಪೀಟರ್ ಹ್ಯಾಂಡ್ಸ್ ಸ್ಕಂಬ್, ಗ್ಲೇನ್ ಮ್ಯಾಕ್ಸ್​​ವೆಲ್ ತಂಡದ ಬ್ಯಾಟಿಂಗ್​ ಶಕ್ತಿಯಾಗಿದ್ರೆ, ಪ್ಯಾಟ್ ಕಮಿನ್ಸ್ ಹಾಗೂ ಜಾಯ್ ರಿಚರ್ಡಸನ್, ಆ್ಯಡಂಜಂಪಾ ಟೀಮ್ ಇಂಡಿಯಾ ಬ್ಯಾಟ್ಸ್​​​ಮನ್​​​​​ಗಳನ್ನ ಕಾಡಬಲ್ಲರು. ಹೀಗಾಗಿ ಇಂದಿನ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿರುವ ಕೊಹ್ಲಿ ಪಡೆ ಗೆಲುವಿನ ಹಳಿಗೆ ಮರಳುತ್ತಾ? ವಿಶ್ವಕಪ್​ಗೂ ಮುನ್ನ ಸರಣಿ ಗೆಲುವಿನ ಸಿಹಿ ಅನುಭವಿಸುತ್ತದಾ? ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಕಾರಣವಾಗಿದೆ.

ಸರಣಿ ಸಮಬಲ ಸಾಧಿಸಿದ ಆಸೀಸ್​

0

ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲೂ ಟೀಮ್​ಇಂಡಿಯಾ ಸೋಲುಂಡಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ಇಂಡಿಯಾ ಆಸೀಸ್​​ ಗೆಲುವಿಗೆ ಕಠಿಣ ಗುರಿ ನೀಡಿತು. ಆರಂಭಿಕ ಆಟಗಾರ ಶಿಖರ್​​ ಧವನ್​ರ ಶತಕ (143) ಹಾಗೂ ರೋಹಿತ್​​ ಶರ್ಮಾರ ಅಬ್ಬರದ ಅರ್ಧಶತಕ (95) ನೆರವಿನಿಂದ ಟೀಮ್​ಇಂಡಿಯಾ 50 ಓವರ್​ಗಳಲ್ಲಿ 358 ರನ್​ ಗಳಿಸಿತು. ​

ಬಳಿಕ ಭಾರತ ನೀಡಿದ 359 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲಿ ಆಘಾತ ಎದುರಿಸಿತು. ಆದರೆ ಉಸ್ಮಾನ್​ ಖವಾಜಾ (91) ಹಾಗೂ ಪೀಟರ್​ ಹ್ಯಾಂಡ್ಸ್​​ಕಂಬ್ (117)​ ಅವರನ್ನು ಕಟ್ಟಿ ಹಾಕುವಲ್ಲಿ ಟೀಮ್​ ಇಂಡಿಯಾ ಬೌಲರ್​ಗಳು ವಿಫಲರಾದರು. ಅದರಲ್ಲೂ ಡೆತ್​ ಓವರ್​ಗಳಲ್ಲಿ ಮಿಂಚಿದ ಅಸ್ಟನ್​ ಟರ್ನರ್​​ ಪ್ರವಾಸಿ ಬಳಗದ ಗೆಲುವಿಗೆ ಕಾರಣರಾದ್ರು. ಕೇವಲ 47.5 ಓವರ್​ಗಳಲ್ಲಿ ಬೆನ್ನತ್ತಿದ ಕಾಂಗರೂ ಬಳಗ 4 ವಿಕೆಟ್​​ಗಳ ಗೆಲುವಿನ ಕೇಕೆ ಹಾಕಿತು. ಜೊತೆಗೆ 5 ಪಂದ್ಯಗಳ ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಸಾಧಿಸಿತು.

ಇಂದು ಧೋನಿಗೆ ರೆಸ್ಟ್​, ಪಂತ್​ಗೆ ಟೆಸ್ಟ್​..!

0

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯ ಸೋಲಿನ ಬಳಿಕ ಏಕದಿನ ಸರಣಿಯಲ್ಲಿ ಕಮ್​​ಬ್ಯಾಕ್​​ ಮಾಡಿದ್ದ ಟೀಮ್ಇಂಡಿಯಾ 3ನೇ ಪಂದ್ಯದಲ್ಲಿ ಮುಗ್ಗರಿಸಿತು. ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆಬಾಗಿದ ಟೀಮ್ಇಂಡಿಯಾ 32 ರನ್​ಗಳ ಸೋಲುಂಡಿತು. ಪರಿಣಾಮ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಜಯ ದಾಖಲಿಸಿತು.
ಇದೀಗ ಸರಣಿಯ 4ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊಹಾಲಿಯಲ್ಲಿಂದು 4ನೇ ಏಕದಿನ ಪಂದ್ಯ ನಡೆಯಲಿದ್ದು, ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳಲು ಕೊಹ್ಲಿ ಪಡೆ ತಯಾರಿ ನಡೆಸಿದೆ. ಆದರೆ, 3ನೇ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ಸಿಯಾಗಿರುವ ಪ್ರವಾಸಿ ಬಳಗ, ಈ ಪಂದ್ಯದಲ್ಲೂ ಗೆಲ್ಲಲು ಶತಾಯುಗತಾಯ ಪ್ರಯತ್ನಕ್ಕಿಳಿದಿದೆ.
3ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಟೀಮ್ಇಂಡಿಯಾ ವೈಫಲ್ಯ ಕಂಡಿತ್ತು. ವಿರಾಟ್ ಕೊಹ್ಲಿ ಹೊರತು ಪಡಿಸಿದ್ರೆ ಉಳಿದೆಲ್ಲಾ ಬ್ಯಾಟ್ಸ್​​​​​ಮನ್​ಗಳು ಆಸೀಸ್ ಪಡೆಯ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು. ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳ ವೈಫಲ್ಯತೆ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು.

4, 5ನೇ ಪಂದ್ಯದಿಂದ ಧೋನಿಗೆ ರೆಸ್ಟ್ :
ಮುಂಬರುವ ವಿಶ್ವಕಪ್​​ಗೂ ಮುನ್ನ ಭಾರತದ ಪಾಲಿಗೆ ಇದು ಕೊನೆಯ ಸರಣಿಯಾಗಿದೆ. ಹೀಗಾಗಿ ಮೊದಲ 3 ಪಂದ್ಯಗಳಲ್ಲಿ ಆಡುವ ಹನ್ನೊಂದರ ತಂಡದೊಂದಿಗೆ ಕಣಕ್ಕಿಳಿದಿದ್ದ ಟೀಮ್ಇಂಡಿಯಾ 4 ಮತ್ತು 5ನೇ ಪಂದ್ಯಗಳಲ್ಲಿ ತಂಡದಲ್ಲಿ ಬದಲಾವಣೆಯನ್ನ ನಿರೀಕ್ಷಿಸಬಹುದು.

ಸರಣಿಯೂದ್ದಕ್ಕೂ ವೈಫಲ್ಯ ಅನುಭವಿಸಿರುವ ಶಿಖರ್ ಧವನ್ ಬದಲು ಕೆ ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಜೊತೆಗೆ ಸರಣಿಯಿಂದ ಧೋನಿಗೆ ವಿಶ್ರಾಂತಿ ನೀಡಿರುವುದರಿಂದ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಕುಲ್ ದೀಪ್ ಯಾದವ್, ಮೊಹಮದ್ ಶಮಿಗೆ ರೆಸ್ಟ್ ನೀಡಿ ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್​ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ಇನ್ನೊಂದೆಡೆ ಸರಣಿಯಲ್ಲಿ ಕಮ್​​ಬ್ಯಾಕ್​ ಮಾಡಿರುವ ಫಿಂಚ್ ಪಡೆಯೂ ಗೆಲುವಿಗೆ ಕಠಿಣ ತಯಾರಿ ನಡೆಸಿದೆ. ರಾಂಚಿ ಪಂದ್ಯದಲ್ಲಿ ಕಮ್​​ಬ್ಯಾಕ್​ ಮಾಡಿರುವ ನಾಯಕ ಫಿಂಚ್, ಶತಕ ಸಿಡಿಸಿ ಮಿಂಚಿದ ಉಸ್ಮಾನ್ ಖ್ವಾಜಾ ಹಾಗೂ ಮ್ಯಾಕ್ಸ್​​ವೆಲ್​ ಕಾಂಗರೂ ಬಳಗದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​​ಮನ್​​ಗಳನ್ನು ಕಟ್ಟಿ ಹಾಕುವಲ್ಲಿ ಆಸೀಸ್ ಬೌಲರ್​ಗಳು ಯಶಸ್ಸಿಯಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.
ಭಾರತ-ಆಸ್ಟ್ರೇಲಿಯಾ ಮೊಹಾಲಿ ಪಿಚ್​ನಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, 1996ರಲ್ಲಿ ಜಯಸಿದ್ದು ಬಿಟ್ಟರೆ ಆ ಬಳಿಕ ಆಡಿದ 3 ಪಂದ್ಯಗಳಲ್ಲೂ ಭಾರತ ಸೋಲುಂಡಿದೆ. ಜೊತೆಗೆ 2006ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೂ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಮೈದಾನದ ಅಂಕಿ-ಅಂಶಗಳೂ ಆಸ್ಟ್ರೇಲಿಯಾ ಪರವಾಗಿರುವುದರಿಂದ ಇಂದಿನ ಪಂದ್ಯದ ರಿಸಲ್ಟ್ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ವಿಶ್ವಕಪ್​​ಗೂ ಮುನ್ನ ಉಭಯ ತಂಡಗಳಿಗೂ ತಯಾರಿಯ ಸರಣಿ ಇದಾಗಿದೆ. ಭಾರತ 2011ರ ವಿಶ್ವಕಪ್ ಚಾಂಪಿಯನ್ ಆಗಿದ್ರೆ, ಆಸ್ಟ್ರೇಲಿಯಾ ಹಾಲಿ ಚಾಂಪಿಯನ್. ವಿಶ್ವಕಪ್​​ಗೂ ಮುನ್ನ ಅಂತಿಮ 15 ಆಟಗಾರರ ಬಳಗವನ್ನ ನಿರ್ಧರಿಸಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಉಭಯ ತಂಡಗಳ ಪ್ರತಿ ಆಟಗಾರನಿಗೂ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇಂದಿನ ಪಂದ್ಯದ ಗೆಲುವು ಉಭಯ ತಂಡಗಳ ಪಾಲಿಗೂ ಬಹು ಮುಖ್ಯವಾಗಿದೆ.

ಕ್ಯಾಪ್ಟನ್​ ಕೊಹ್ಲಿ ಆಟ ವ್ಯರ್ಥ, ಆಸೀಸ್​ಗೆ ಗೆಲುವು..!

0

ರಾಂಚಿ : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಒಡಿಐ ಸರಣಿಯ ಮೊದಲ 2 ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಟೀಮ್​ಇಂಡಿಯಾ 3ನೇ ಪಂದ್ಯದಲ್ಲಿ ಮುಗ್ಗರಿಸಿದೆ.
ರಾಂಚಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ನೀಡಿರುವ ಬೃಹತ್​ ಟಾರ್ಗೆಟ್​​ ಬೆನ್ನತ್ತುವಲ್ಲಿ ವೈಫಲ್ಯ ಅನುಭವಿಸಿದ ಟೀಮ್​ಇಂಡಿಯಾ 32 ರನ್​ಗಳ ಸೋಲುಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡ ಉಸ್ಮಾನ್​ ಖವಾಜಾರ ಶತಕ (104) ಹಾಗೂ ನಾಯಕ ಆ್ಯರೋನ್​ ಫಿಂಚ್ 93 ರನ್​ಗಳ ನೆರವಿನಿಂದ 50 ಓವರ್​ಗಳಲ್ಲಿ 313 ರನ್ ಗಳಿಸಿತು.
ಆಸೀಸ್​ ನೀಡಿದ ಸವಾಲಿನ ಟಾರ್ಗೆಟ್​​ ಬೆನ್ನತ್ತಿದ ಭಾರತ ಆರಂಭದಲ್ಲೇ ಎಡವಿತು. ಟೀಮ್​ಇಂಡಿಯಾ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ಗಳಾದ ರೋಹಿತ್​​ ಶರ್ಮಾ, ಶಿಖರ್​ ಧವನ್​, ಅಂಬಟಿ ರಾಯುಡು, ಎಮ್​ಎಸ್​​ ಧೋನಿ ವೈಫಲ್ಯ ಅನುಭವಿಸಿದ್ರು. ಇದರ ನಡುವೆಯೂ ನಾಯಕ ವಿರಾಟ್​​ ಕೊಹ್ಲಿ ಶತಕ (123) ಸಿಡಿಸಿ ಮಿಂಚಿದ್ರು. ಆದರೆ ಉಳಿದ ಬ್ಯಾಟ್ಸ್​​ಮನ್​ಗಳ ​ವೈಫಲ್ಯದ ಪರಿಣಾಮ ಟೀಮ್​ಇಂಡಿಯಾ ಸೋಲುಂಡಿತು. ಸೋಲಿನ ಹೊರತಾಗಿಯೂ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆಯಲ್ಲಿದೆ.

ಅಭಿಮಾನಿಗೆ ಚಮಕ್​ ಕೊಟ್ಟ ಧೋನಿ..!

0

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿನ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮೊದಲು ಬ್ಯಾಟಿಂಗ್​ ಮಾಡಿ ನಂತರ ಫೀಲ್ಡಿಂಗ್ ಗೆ ಟೀಮ್​ಇಂಡಿಯಾ ಇಳಿಯುತ್ತಿದ್ದಂತೆ ಕ್ರೀಡಾಂಗಣದೊಳಕ್ಕೆ ನುಗ್ಗಿದ ಅಭಿಮಾನಿಗೆ ಮಾಜಿ ನಾಯಕ ಎಮ್​.ಎಸ್​​ ಧೋನಿ ಚಮಕ್​ ನೀಡಿದ್ದಾರೆ. ಧೋನಿಯನ್ನು ತಬ್ಬಿಕೊಳ್ಳಲು ಮೈದಾನದೊಳಕ್ಕೆ ನುಗ್ಗಿದ ಅಭಿಮಾನಿಗೆ ಸಿಗದೇ  ಧೋನಿ ಆಟವಾಡಿಸಿದ್ದಾರೆ..!

ಅಭಿಮಾನಿ ಬಂದಿದ್ದು ಕಂಡ ಕೂಡಲೇ ಧೋನಿ ವೇಗವಾಗಿ ಮೈದಾನದಲ್ಲಿ ಓಡಿದ್ದಾರೆ. ಧೋನಿಯನ್ನು ಹಿಡಿಯಲು ಅಭಿಮಾನಿ ಕೂಡ ಓಡಿದ್ದಾರೆ. ಬಳಿಕ ಪಿಚ್ ಬಳಿ ಬಂದು ನಿಂತ ಧೋನಿ ಅಭಿಮಾನಿ ತಬ್ಬಿಕೊಳ್ಳಲು ಅವಕಾಶ ನೀಡಿದ್ರು. ಇತ್ತೀಚೆಗೆ ನ್ಯೂಜಿಲೆಂಡ್​​ ವಿರುದ್ಧದ ಟಿ-20 ಸರಣಿಯಲ್ಲೂ ಪಂದ್ಯದ ಮಧ್ಯದಲ್ಲೇ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಧೋನಿ ಅವರ ಆಶೀರ್ವಾದ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. 

ಟೀಮ್​ ಇಂಡಿಯಾಕ್ಕೆ 500ನೇ ಗೆಲುವು..!

0

ನಾಗ್ಪುರ : ಕ್ಯಾಪ್ಟನ್ ವಿರಾಟ್​ ಕೊಹ್ಲಿ ಅವರ ಶತಕ (116) ಹಾಗೂ ಬೌಲರ್​ಗಳ ಸಂಘಟಿತ ಪ್ರದರ್ಶನದಿಂದ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ 2ನೇ ಒಡಿಐನಲ್ಲಿ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ 500ನೇ ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಿತು. 
ವಿದರ್ಭ ಕ್ರಿಕೆಟ್​ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಖಾತೆ ತೆರೆಯುವ ಮುನ್ನವೇ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ರೋಹಿತ್ ಪೆವಿಲಿಯನ್​ ಅತ್ತ ಸಾಗಿದಾಗ ಆರಂಭಿಕ ಆಟಗಾರ ಶಿಖರ್ ಧವನ್​ ಜೊತೆಗೂಡಿದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ತಂಡಕ್ಕೆ ಆಧಾರವಾಗಿ ನಿಲ್ಲಲೇ ಬೇಕಾದ ಸವಾಲು ಸ್ವೀಕರಿಸಿದರು. ಆದರೆ, ತಂಡದ ಮೊತ್ತ 38ರನ್​ ಆಗಿದ್ದಾಗ ಧವನ್ (21) ಪೆವಿಲಿಯನ್ ಕಡೆ ಮುಖ ಮಾಡಿದ್ರು. ನಂತರ ವಿರಾಟ್​ ಜೊತೆಯಾದ ಅಂಬಟಿ ರಾಯುಡು 18 ರನ್​ ಕೊಡುಗೆ ನೀಡಿ ಪೆವಿಲಿಯನ್ ಸೇರಿದ್ರು. ಬಳಿಕ ಕ್ಯಾಪ್ಟನ್​ ಕೊಹ್ಲಿ ಜೊತೆ ಇನ್ನಿಂಗ್ಸ್ ಕಟ್ಟಲು ಬಂದ ವಿಜಯ್ ಶಂಕರ್ ಉತ್ತಮ ಸಾಥ್ ನೀಡಿದ್ರು. ವಿರಾಟ್​-ಶಂಕರ್ ಜೋಡಿ 81 ರನ್​ ಗಳ ಜೊತೆಯಾಟವಾಡಿತು.
ಟೀಮ್​ನ ಸ್ಕೋರ್ 156ರನ್ ಗಳಾಗಿದ್ದಾಗ 4ನೇ ಅವರಾಗಿ ವಿಜಯ್ ಶಂಕರ್ ಪೆವಿಲಿಯನ್ ಸೇರಿದ್ರು. ಆಮೇಲೆ ಬಂದ ಕೇದಾರ್ ಜಾಧವ್ (11), ಮಹೇಂದ್ರ ಸಿಂಗ್ ಧೋನಿ (0) ನಿರೀಕ್ಷೆ ಹುಸಿಯಾಗಿಸಿದ್ರು. ರವೀಂದ್ರ ಜಡೇಜಾ (21) ತಕ್ಕ ಮಟ್ಟಿನ ಕೊಡುಗೆ ನೀಡಿದ್ರು. ತಂಡದ ಮೊತ್ತ 238 ರನ್ ಆಗಿದ್ದಾಗ ಜಡೇಜಾ 7ನೇ ಅವರಾಗಿ ವಿಕೆಟ್ ಒಪ್ಪಿಸಿದ್ರು. ಜಡೇಜ ಪೆವಿಲಿಯನ್ ಸೇರಿದ ಮೇಲೆ ಟೀಮ್​ಗೆ 10ರನ್ ಸೇರುವಷ್ಟರಲ್ಲಿ ಕೊಹ್ಲಿ ಔಟಾದರು. ಕೊಹ್ಲಿಯ ಬೆನ್ನ ಹಿಂದೆಯೇ ಕುಲದೀಪ್ ಯಾದವ್​ (3), ಜಸ್ಪ್ರೀತ್​ ಬೂಮ್ರಾ (0) ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕುವುದರೊಂದಿಗೆ 48.2 ಓವರ್​ಗಳಲ್ಲಿ 250 ರನ್​ಗಳಿಗೆ ಭಾರತ ಆಲ್​ಔಟ್​ ಆಯ್ತು.
ಗುರಿ ಬೆನ್ನತ್ತಿದ ಆಸೀಸ್​ಗೆ ಕ್ಯಾಪ್ಟನ್​ ಆ್ಯರೋನ್​ ಫಿಂಚ್ (37), ಉಸ್ಮಾನ್ ಖವಾಜ (38) ರನ್ ಸಿಡಿಸಿ ಉತ್ತರ ಆರಂಭ ನೀಡಿದ್ರು. 83 ರನ್​ ಜೊತೆಯಾಟ ಆಡಿದ ಇವರಿಬ್ಬರು ಒಬ್ಬರ ಹಿಂದೊಂಬ್ಬರು ಪೆವಿಲಿಯನ್ ಸೇರಿದರು. ಬಳಿಕ ಪೀಟರ್ ಹ್ಯಾಂಡ್ಸ್​​​​​​​​​​​​ಕಂಬ್​ (48), ಮಾರ್ಕ್ಸ್​ ಸ್ಟೋಯಿನ್ಸ್ (52) ಹೊರತು ಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.
49.3 ಓವರ್ ಗಳಲ್ಲಿ 242 ರನ್​ಗಳಿಗೆ ಆಸೀಸ್ ಆಲ್​ಔಟ್ ಆಯಿತು. ಇದರೊಂದಿಗೆ ಒಂದು ಹಂತದಲ್ಲಿ ಮ್ಯಾಚ್​ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಉತ್ಸಾಹದಲ್ಲಿದ್ದ ಆಸೀಸ್​ ಸೋಲಬೇಕಾಯಿತು. ಟೀಮ್​ ಇಂಡಿಯಾ ರೋಚಕ ಗೆಲವು ಸಾಧಿಸಿ 2-0 ಅಂತರದ ಸರಣಿ ಮುನ್ನಡೆ ಪಡೆಯಿತು.

ಟೀಮ್​ ಇಂಡಿಯಾ ಪರ ಜಸ್ಪ್ರೀತ್ ಬೂಮ್ರಾ, ವಿಜಯ್ ಶಂಕರ್ ತಲಾ 2, ಕುಲದೀಪ್ ಯಾದವ್ 3, ರವೀಂದ್ರ ಜಡೇಜಾ, ಕೇದಾರ್ ಜಾಧವ್ ತಲಾ 1 ವಿಕೆಟ್​ ಪಡೆದ್ರು. 40ನೇ ಶತಕ ಸಿಡಿಸಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. 

40ನೇ ಶತಕ ಸಿಡಿಸಿ ರೆಕಾರ್ಡ್​ಗಳ ಸುರಿಮಳೆಗೈದ ಕಿಂಗ್ ಕೊಹ್ಲಿ..!

0

ನಾಗ್ಪುರ : ಟೀಮ್​ ಇಂಡಿಯಾ ಕ್ಯಾಪ್ಟನ್​ ರನ್ ಮಷಿನ್ ವಿರಾಟ್​ ಕೊಹ್ಲಿ ಸಾಮಾನ್ಯವಾಗಿ ಪ್ರತಿ ಮ್ಯಾಚ್​ನಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡ್ತಾರೆ. ಅಂತೆಯೇ ಇಂದು ನಾಗ್ಪುರದಲ್ಲಿ ನಡೆಯುತ್ತಿರೋ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಒಡಿಐನಲ್ಲೂ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ.
40ನೇ ಶತಕ (116) ಬಾರಿಸಿದ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀವೇಗವಾಗಿ 9 ಸಾವಿರ ರನ್​ ಪೂರೈಸಿದ ನಾಯಕ (159) ಒಟ್ಟಾರೆ 9 ಸಾವಿರ ರನ್ ಪೂರೈಸಿದ 6ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 159 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ರೆ, ಆಸೀಸ್​ ಮಾಜಿ ಕ್ಯಾಪ್ಟನ್ ರಿಕಿಪಾಂಟಿಂಗ್ 204 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ರು. ಇನ್ನುಳಿದಂತೆ ಸೌತ್ ಆಫ್ರಿಕಾದ ಮಾಜಿ ಕ್ಯಾಪ್ಟನ್​ ಗ್ರೇಮ್​ ಸ್ಮಿತ್​ 220, ಕೂಲ್​ ಕ್ಯಾಪ್ಟನ್ ಧೋನಿ 253, ಆಸೀಸ್​ನ ಅಲನ್​ ಬಾರ್ಡರ್ 257, ನ್ಯೂಜಿಲೆಂಡ್​ನ ಸ್ಟೀಫನ್ ಫ್ಲೆಮಿಂಗ್ 272 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇಷ್ಟೇ ಅಲ್ಲದೆ 4, 5, 6, 7, 8 ಸಾವಿರ ರನ್​ಗಳನ್ನು ವೇಗವಾಗಿ ಪೂರೈಸಿದ ನಾಯಕ ಎಂಬ ಹೆಗ್ಗಳಿಕೆಯೂ ಕೊಹ್ಲಿ ಬೆನ್ನಿಗಿದೆ. ಜೊತೆಗೆ ನಾಗ್ಪುರದಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಗ್ರೌಂಡ್​ನಲ್ಲಿ ಕೊಹ್ಲಿ 325 ರನ್ ಸಿಡಿ ಅಗ್ರ ಸ್ಥಾನದಲ್ಲಿದ್ರೆ, 268ರನ್​ಗಳಿಸಿರೋ ಎಂ.ಎಸ್​ ಧೋನಿ 2ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಈ ಇನ್ನಿಂಗ್ಸ್​ನಲ್ಲಿ 10 ಬೌಂಡರ್ ಬಾರಿಸಿದ್ದಾರೆ. ಇದರೊಂದಿಗೆ ಏಕದಿನ ಮಾದರಿಯಲ್ಲಿ 1ಸಾವಿರ ಬೌಂಡರಿ ಬಾರಿಸಿದ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ.

​ಆಸೀಸ್​ಗೆ ಕೊಹ್ಲಿ, ರೋಹಿತ್​ಗಿಂತ ದೊಡ್ಡ ತಲೆನೋವು ಈ ಸ್ಟಾರ್​..!

0

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸಿರುವ ಟೀಮ್ಇಂಡಿಯಾ ನಾಳಿನ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಮೈದಾನದಲ್ಲಿಂದು 2ನೇ ಏಕದಿನ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿ ಕೊಹ್ಲಿ ಪಡೆ ಇದ್ರೆ, ಅತಿಥೇಯ ತಂಡಕ್ಕೆ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. 

ಗೆಲುವಿಗಾಗಿ ಉಭಯ ತಂಡಗಳಿಂದ ಭರ್ಜರಿ ಗೇಮ್​ಪ್ಲ್ಯಾನ್​
ಕಿವೀಸ್ ವಿರುದ್ಧದ ಚುಟುಕು ಸರಣಿ ಹಾಗೂ ತವರಿನಂಗಳಲ್ಲಿ ಆಸೀಸ್ ವಿರುದ್ಧದ ಟಿ-20 ಸರಣಿ ಸೋತು ಮುಖಭಂಗ ಅನುಭವಿಸಿದ್ದ ಟೀಮ್ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿದೆ. ಹೈದ್ರಾಬಾದ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಆಲ್​​ರೌಂಡಿಗ್​ ಫರ್ಪಾಮೆನ್ಸ್ ನೀಡಿದ ಕೊಹ್ಲಿ ಪಡೆ 6 ವಿಕೆಟ್​ಗಳ ಗೆಲುವಿನ ನಗೆ ಬೀರಿತು.
 ಇದೀಗ 2ನೇ ಏಕದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ನಾಗ್ಪುರದಲ್ಲಿ ನಾಳೆ ಸರಣಿಯ 2ನೇ ಏಕದಿನ ಹೋರಾಟ ನಡೆಯಲಿದ್ದು, ಈ ಪಂದ್ಯದಲ್ಲೂ ಗೆದ್ದು ಬೀಗುವ ವಿಶ್ವಾಸದಲ್ಲಿ ಕೊಹ್ಲಿ ಪಡೆ ಇದ್ರೆ, ಭಾರತಕ್ಕೆ ತಿರುಗೇಟು ನೀಡುವ ವಿಶ್ವಾಸದಲ್ಲಿ ಪ್ರವಾಸಿ ಬಳಗವಿದೆ.

ಮೊದಲ ಏಕದಿನ ಪಂದ್ಯದಲ್ಲಿ ದಿಢೀರ್ ಕುಸಿತ ಕಂಡು ಸೋಲಿನೆಡೆ ಮುಖ ಮಾಡಿದ್ದ ಭಾರತವನ್ನು ಎಮ್ಎಸ್ ಧೋನಿ, ಕೇದಾರ್ ಜಾಧವ್ ಗೆಲುವಿನ ದಡ ಸೇರಿಸಿದ್ರು. ಇನ್ನು ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಮೊದಲ ಏಕದಿನದಲ್ಲಿ ಅಲ್ಪ ಮೊತ್ತದ ಕಾಣಿಕೆ ನೀಡಿದ್ರೆ, ಶಿಖರ್ ಧವನ್, ಅಂಬಟಿ ರಾಯುಡು ಆಸೀಸ್ ಬೌಲರ್​​ಗಳನ್ನು ಎದುರಿಸುವಲ್ಲಿ ಎಡವಿದ್ರು. ಹೀಗಾಗಿ ನಾಳಿನ ಪಂದ್ಯದಲ್ಲಿ ಶಿಖರ್ ಧವನ್ ಬದಲು ಟಿ-20 ಸರಣಿಯಲ್ಲಿ ಸಕ್ಸಸ್ ಕಂಡಿರುವ ಕೆ.ಎಲ್ ರಾಹುಲ್ ಕಣಕ್ಕಿಳಿತಾರಾ ಅನ್ನೋದು ಕುತೂಹಲ ಮೂಡಿಸಿದೆ.

 ಕಳಪೆ ಪ್ರದರ್ಶನದ ಹೊರಾತಾಗಿಯೂ ವಿಶ್ವಕಪ್​ಗೂ ಮುನ್ನ ಭಾರತದ ಪಾಲಿಗೆ ಇದು ಕೊನೆ ಸರಣಿಯಾಗಿರುವುದರಿಂದ ಈ ಸರಣಿಯಲ್ಲಿ ಆಟಗಾರರ ಸಾಮರ್ಥ್ಯ ಓರೆಗೆ ಹಚ್ಚುವ ಎಲ್ಲಾ ಪ್ರಯತ್ನಗಳು ನಡೀತಾ ಇವೆ. ಇದರಿಂದಾಗಿ ನಾಳಿನ ಪಂದ್ಯಕ್ಕೂ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮೊದಲ ಪಂದ್ಯದ ಸಾಧಾರಣ ಪ್ರದರ್ಶನದ ಹೊರತಾಗಿಯೂ ಆಲ್​ರೌಂಡರ್​ ವಿಜಯ್ ಶಂಕರ್​ಗೆ ಇನ್ನೊಂದು ಚಾನ್ಸ್ ಸೀಗೋ ಸಾಧ್ಯತೆ ಇದ್ರೆ, 3 ವಿಕೆಟ್ ಕಬಳಿಸಿ ಮಿಂಚಿರುವ ಕುಲದೀಪ್​ ಯಾದವ್ ಬದಲು ಯಜುವೇಂದ್ರ ಚಾಹಲ್ ಕಣಕ್ಕಿಳಿದರೂ ಅಚ್ಚರಿಯಿಲ್ಲ.

ಇನ್ನುಳಿದಂತೆ ರಿಷಭ್ ಪಂತ್ ಕೂಡ ಪ್ಲೇಯಿಂಗ್ ಇಲೆವೆನ್​​ನ ರೇಸ್​​​​​ನಲ್ಲಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಸಮರ್ಥ ಪ್ರದರ್ಶನವನ್ನ ನೀಡಿತ್ತು. ಆದರೆ ಬ್ಯಾಟಿಂಗ್​ ವಿಭಾಗವೇ ಕೊಂಚ ಎಡವಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್​​ಮನ್​ಗಳು ಜವಬ್ಧಾರಿಯುತ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ.

ಆಸೀಸ್​ಗೆ ಧೋನಿಯೇ ತಲೆನೋವು

ಇನ್ನು ಕಳೆದ ಪಂದ್ಯದಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಧೋನಿ ಗೆಲುವಿನ ದಡ ಸೇರಿಸಿದ್ರು. ಕಳೆದ ಕೆಲ ಪಂದ್ಯಗಳಿಂದ ಧೋನಿ ಉತ್ತಮ ಪ್ರದರ್ಶನ ನೀಡ್ತಾ ಇರೋದು ಪ್ರವಾಸಿ ಬಳಗಕ್ಕೆ ವಿರಾಟ್, ರೋಹಿತ್ ಗಿಂತ ಹೆಚ್ಚಿನ ತಲೆನೋವು ತಂದೊಡ್ಡಿದೆ. 2019ರಲ್ಲಿ ಒಟ್ಟು 6 ಇನ್ನಿಂಗ್ಸ್​​​ಗಳಲ್ಲಿ ಬ್ಯಾಟಿಂಗ್ ಮಾಡಿರುವ ಧೋನಿ 150.50 ರ ಸರಾಸರಿಯಲ್ಲಿ ಒಟ್ಟು 301 ರನ್​ಗಳಿಸಿದ್ದಾರೆ.

ತಿರುಗೇಟು ನೀಡಲು ಫಿಂಚ್ ಪಡೆ ತಯಾರಿ 
 ಒಂದೆಡೆ ಗೆಲುವಿನ ಲೆಕ್ಕಾಚಾರದಲ್ಲಿ ಕೊಹ್ಲಿ ಪಡೆ ಇರುವಂತೆ, ಭಾರತಕ್ಕೆ ತಿರುಗೇಟು ನೀಡಲು ಆ್ಯರೋನ್ ಫಿಂಚ್ ಬಳಗವೂ ಕಠಿಣ ತಯಾರಿ ನಡೆಸಿದೆ. ನಾಯಕ ಫಿಂಚ್, ಖ್ವಾಜಾ, ಹ್ಯಾಂಡ್​ಸ್ಕಂಬ್​, ಸ್ಟೋಯಿನೀಸ್, ಮ್ಯಾಕ್ಸ್​​ವೆಲ್​ರನ್ನ ಒಳಗೊಂಡ ಆಸೀಸ್ ಬ್ಯಾಟಿಂಗ್ ವಿಭಾಗ ಬಲಿಷ್ಠ ವಾಗಿದ್ದು, ಭಾರತೀಯ ಬೌಲರ್​​ಗಳಿಗೆ ನಿಜವಾದ ಸವಾಲು ಎದುರಾಗಲಿದೆ. ಜೊತೆಗೆ ನಥಾನ್ ಕೌಲ್ಟರ್ ನೈಲ್, ಪಾಟ್ ಕುಮಿನ್ಸ್, ಆ್ಯಡಮ್ ಜಂಪಾ ಪ್ರವಾಸಿ ಬಳಗದ ಬೌಲಿಂಗ್ ಶಕ್ತಿಯಾಗಿದ್ದಾರೆ.

ಹಾಗೇ ನೋಡಿದ್ರೆ, ನಾಗ್ಪುರ ಪಿಚ್​​ನಲ್ಲಿ ಟೀಮ್ಇಂಡಿಯಾ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. ಈ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಏಕದಿನ ಪಂದ್ಯಗಳನ್ನಾಡಿದ್ದು, ಮೂರೂ ಪಂದ್ಯಗಳಲ್ಲೂ ಭಾರತ ಗೆಲುವಿನ ನಗೆ ಬೀರಿದೆ. 2009 ರಲ್ಲಿ ನಡೆದ ಮೊದಲ ಪಂದ್ಯದಲ್ಲಿ 99 ರನ್ಗಳ ಅಂತರದಿಂದ ಜಯಿಸಿದ್ರೆ, 2013ರಲ್ಲಿ ಬರೋಬ್ಬರಿ 351 ರನ್​​ಗಳ ಗುರಿ ಬೆನ್ನತ್ತಿ ಜಯಭೇರಿ ಬಾರಿಸಿತ್ತು. ಇನ್ನು 2017 ರಲ್ಲಿ ನಡೆದ ಹೋರಾಟದಲ್ಲಿ 7 ವಿಕೆಟ್​​​​ಗಳ ಗೆಲುವು ದಾಖಲಿಸಿದೆ.

ವಿಶ್ವಕಪ್​ಗೂ ಮುನ್ನ ಉಭಯ ತಂಡಗಳಿಗೂ ತಯಾರಿಯ ಸರಣಿ ಇದಾಗಿರುವುದರಿಂದ ಪ್ರತಿ ಆಟಗಾರನೂ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇಂದಿನ ಪಂದ್ಯದ ಗೆಲುವು ಉಭಯ ತಂಡಗಳ ಪಾಲಿಗೂ ಬಹು ಮುಖ್ಯವಾಗಿದ್ದು, ನಾಗ್ಪುರ ಅಂಗಳದಲ್ಲಿ ಗೆಲುವಿಗಾಗಿ ಶತಾಯಗತಾಯ ಹೋರಾಟ ನಡೆಯುವುದಂತೂ ನಿಶ್ಚಿತ.

-ವಸಂತ್​​ ಮಳವತ್ತಿ

ಧೋನಿ- ಜಾಧವ್​ ಕಮಾಲ್​ – ಗೆಲುವಿನ ಹಳಿಗೆ ಮರಳಿದ ಕೊಹ್ಲಿ ಬಾಯ್ಸ್​​

0

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯನ್ನ ಕೈ ಚೆಲ್ಲಿದ್ದ ಟೀಮ್​ಇಂಡಿಯಾ ಏಕದಿನ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡಿದೆ. ನಿನ್ನೆಯ ಪಂದ್ಯದಲ್ಲಿ ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಆಲ್​ರೌಂಡಿಗ್​ ಪ್ರದರ್ಶನ ನೀಡಿದ ಕೊಹ್ಲಿ ಪಡೆ ಗೆಲುವಿನ ಹಳಿಗೆ ಮರಳಿತು. ಹೈದ್ರಾಬಾದ್​ನ ರಾಜೀವ್​ ಗಾಂಧಿ ಮೈದಾನದಲ್ಲಿ ನಡೆದ ರೋಚಕ ಹೋರಾಟದ ಹೈಲೆಟ್ಸ್​​ ಇಲ್ಲಿದೆ.

ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಮುಗ್ಗರಿಸಿದ್ದ ಟೀಮ್​ಇಂಡಿಯಾ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ. ನಿನ್ನೆ ಹೈದ್ರಾಬಾದ್​​ನ ರಾಜೀವ್​ ಗಾಂಧಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್​ಇಂಡಿಯಾ 6 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿತು. ಮ್ಯಾಜಿಕ್​ ಫಿನಿಷರ್​ ಎಮ್​ಎಸ್​​ ಧೋನಿ, ಕೇದಾರ್ ಜಾಧವ್ ಮಾಡಿದ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆಯನ್ನ ಮಣಿಸಿದ ಕೊಹ್ಲಿ ಪಡೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು. 

 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸೀಸ್​ 2ನೇ ಓವರ್​​ನಲ್ಲಿಯೇ ಆಘಾತ ಎದುರಿಸಿತು. ತಂಡದ ಖಾತೆ ತೆರುವುದರೊಳಗೆ ಆಸ್ಟ್ರೇಲಿಯಾ ನಾಯಕ ಆ್ಯರೋನ್​ ಫಿಂಚ್​ಗೆ ಯಾರ್ಕರ್​​ ಸ್ಪೆಷಲಿಸ್ಟ್​​ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ದಾರಿ ತೋರಿಸಿದ್ರು. ಬುಮ್ರಾ ಬೌಲಿಂಗ್​ನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿದ ಫಿಂಚ್​​ ಧೋನಿಗೆ ಕ್ಯಾಚಿತ್ತು ನಿರ್ಗಮಿಸಿದ್ರು.

ನಾಯಕನ ವಿಕೆಟ್​​ ಕಳೆದುಕೊಂಡು ಆರಂಭದಲ್ಲೇ ಸಂಕಷ್ಟಕ್ಕೆ ಒಳಗಾದ ತಂಡಕ್ಕೆ 2ನೇ ವಿಕೆಟ್​ಗೆ ಜೊತೆಯಾದ ಉಸ್ಮಾನ್​ ಖವಾಜಾ ಹಾಗೂ ಮಾರ್ಕಸ್ ಸ್ಟೋಯಿನಿಸ್​ ನೆರವಾದ್ರು. 2ನೇ ವಿಕೆಟ್​​ಗೆ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ ತಂಡವನ್ನ ಆರಂಭಿಕ ಸಂಕಷ್ಟದಿಂದ ಪಾರು ಮಾಡಿದ್ರು. ಸ್ಟೋಯಿನಿಸ್​​ 37 ರನ್​ಗಳಿಸಿ ಔಟಾದ್ರೆ, ಖವಾಜಾ ಅರ್ಧಶತಕ ಸಿಡಿಸಿ ಕುಲ್​ದೀಪ್​ ಯಾದವ್​ ವಿಕೆಟ್ ಒಪ್ಪಿಸಿದ್ರು.

ನಂತರ ಕಣಕ್ಕಿಳಿದ ಆಸ್ಟನ್ ಟರ್ನರ್ ಆಟ 21 ರನ್​ಗಳಿಗೆ ಕೊನೆಯಾಯ್ತು. ಇನ್ನು ಟಿ-20 ಸರಣಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಗ್ಲೇನ್​ ಮ್ಯಾಕ್ಸ್​​ವೆಲ್​ 40 ರನ್​ಗಳಿಸಿ ಮೊಹಮದ್​​ ಶಮಿ ಎಸೆತದಲ್ಲಿ ಔಟಾದ್ರು. ಆದ್ರೆ ಕೊನೆಯಲ್ಲಿ 62 ರನ್​ಗಳ ಜೊತೆಯಾಟವಾಡಿದ ಅಲೆಕ್ಸ್​​ ಕೇರಿ ಹಾಗು ನಾಥಾನ್ ಕೌಂಟರ್ ನೈಲ್​ ತಂಡದ ಮೊತ್ತವನ್ನ 230ರ ಗಡಿ ದಾಟಿಸಿದ್ರು. ಅಂತಿಮವಾಗಿ ಆಸಿಸ್​ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 237 ರನ್​ ಕಲೆಹಾಕಿತು.

ಆಸ್ಟ್ರೇಲಿಯಾ ನೀಡಿದ 237 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್​​ ಬೆನ್ನತ್ತಿದ್ದ ಟೀಮ್​ಇಂಡಿಯಾ ಕೂಡ ಆರಂಭಿಕ ಆಘಾತ ಎದುರಿಸಿತು. ಟೀಮ್​ಇಂಡಿಯಾ ಇನ್ನಿಂಗ್ಸ್​​ನಲ್ಲೂ ಖಾತೆ ತೆರಯುವ ಮುನ್ನವೇ ಆರಂಭಿಕ ಆಟಗಾರ ಶಿಖರ್ ಧವನ್, ವೇಗಿ ನಥಾನ್​ ಕೌಂಟರ್​ ನೈಲ್​ಗೆ ವಿಕೆಟ್​ ಒಪ್ಪಿಸಿದ್ರು.

ಬಳಿಕ ಎರಡನೇ ವಿಕೆಟ್​ಗೆ ಜೊತೆಯಾದ ನಾಯಕ ವಿರಾಟ್​ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, 76 ರನ್​ಗಳ ಜೊತೆಯಾಟವಾಡಿ ಆಸರೆಯಾದ್ರು. ಆದ್ರೆ ಆ ಹಂತದಲ್ಲಿ ಎಡವಿದ ಕೊಹ್ಲಿ, ಸ್ಪಿನ್ನರ್ ಆ್ಯಡಮ್ ಜಂಪಾ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಲೆಗೆ ಬಿದ್ರು. ಕೊಹ್ಲಿ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ ಪೆವಿಲಿಯನ್ ದಾರಿ ಹಿಡಿದ್ರು. ಪರಿಣಾಮವಾಗಿ ತಂಡ 100 ರನ್ ಗಳಿಸುವುದರೊಳಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇನ್ನು ಕೊಹ್ಲಿ ನಿರ್ಗಮನದ ಬಳಿಕ ಕಣಕ್ಕಿಳಿದ ಅಂಬಟಿ ರಾಯುಡು ಕೂಡ ಕ್ರೀಸ್​ ಕಚ್ಚಿ ನಿಲ್ಲಲಿಲ್ಲ. ಆ್ಯಡಮ್​ ಜಂಪಾ ಬೌಲಿಂಗ್​ನಲ್ಲಿ ಅಲೆಕ್ಸ್​ ಕ್ಯಾರಿಗೆ ಕ್ಯಾಚಿತ್ತ ರಾಯುಡು 13 ರನ್​ಗಳಿಸಿ ಔಟಾದ್ರು. ರಾಯುಡು ಪತನದ ಬೆನ್ನಲ್ಲೇ ಭಾರತೀಯ ಅಭಿಮಾನಿಗಳಲ್ಲಿ ಸೋಲಿನ ಆತಂಕ ಆರಂಭವಾದ್ರೆ, ಆಸೀಸ್​ ಪಾಳಯದಲ್ಲಿ ಗೆಲುವಿನ ಕನಸು ಚಿಗುರಿತ್ತು. ಆದ್ರೆ ಆ ಬಳಿಕ 5ನೇ ವಿಕೆಟ್​​ಗೆ ಜೊತೆಯಾದ ಎಮ್​ಎಸ್​​ ಧೋನಿ ಹಾಗೂ ಕೇದಾರ್​ ಜಾಧವ್​  ಆಸೀಸ್​​ ಕನಸಿಗೆ ತಣ್ಣೀರೆರಚಿದರು.

5ನೇ ವಿಕೆಟ್​​ಗೆ ಜೊತೆಯಾದ ಧೋನಿ-ಜಾಧವ್​ ಜೋಡಿ ಆಸ್ಟ್ರೇಲಿಯಾ ಬೌಲರ್​ಗಳನ್ನ ಕಾಡಿದ್ರು. ಆತುರಕ್ಕೆ ಒಳಗಾಗದೆ ರಕ್ಷಣಾತ್ಮಕ ಇನ್ನಿಂಗ್ಸ್​ ಕಟ್ಟಿದ​ ಈ ಜೋಡಿ ಫಿಂಚ್ ಪಡೆಯ ಲೆಕ್ಕಚಾರಗಳನ್ನ ಉಲ್ಟಾ ಮಾಡಿದ್ರು. ತಲಾ ಅರ್ಧ ಶತಕ ಬಾರಿಸಿದ ಇವರು ಅಜೇಯ 141 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ರು.

ಒಟ್ಟಿನಲ್ಲಿ ಟಿ-20 ಸರಣಿಯಲ್ಲಿ ಮುಗ್ಗರಿಸಿದ್ದ ಟೀಮ್​ಇಂಡಿಯಾ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಕಮ್​ ಬ್ಯಾಕ್​ ಮಾಡಿದೆ. ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕೊಹ್ಲಿ ಬಳಗ ಸರಣಿಯ ಉಳಿದ ಪಂದ್ಯಗಳಲ್ಲೂ ಶ್ರೇಷ್ಠ ಪ್ರದರ್ಶನ ನೀಡಲಿ.

 

Popular posts