ಬೆಂಗಳೂರು: ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ. ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಶಾಸಕ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು ಬಿಜೆಪಿ ರಾಜಕೀಯ ದ್ವೇಷ ಸಾಧನೆ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ರಾಜ್ಯ ಸರ್ಕಾರ ಕೊರೊನಾವನ್ನು ನಿಯಂತ್ರಣದಲ್ಲಿ ಇಟ್ಟಿದೆ. ಇಂತಹ ಸಂದರ್ಭದಲ್ಲಿ ಪದಗ್ರಹಣ ಕಾರ್ಯಕ್ರಮ ಮಾಡಿದರೆ ಹೇಗೆ ಎಂದು ರೇಣುಕಾಚಾರ್ಯ ಡಿಕೆಶಿಗೆ ಪ್ರಶ್ನಿಸಿದರು. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರೆ ಮುಖ್ಯಮಂತ್ರಿ ಆಗಿಬಿಡ್ತಾರಾ? ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮುಂದಿನ ದಿನದಲ್ಲಿ ನಮ್ಮದೇ ಸರ್ಕಾರ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಭ್ರಮಾಲೋಕದಿಂದ ಅವರು ಹೊರಬರಲಿ ಎಂದು ವ್ಯಂಗವಾಡಿದರು