Saturday, October 1, 2022
Powertv Logo
Homeದೇಶ2ನೇ ಬಾರಿಗೆ ಮಣಿಪುರ CM ಆಗಿ ಬಿರೇನ್‌ ಸಿಂಗ್ ಆಯ್ಕೆ

2ನೇ ಬಾರಿಗೆ ಮಣಿಪುರ CM ಆಗಿ ಬಿರೇನ್‌ ಸಿಂಗ್ ಆಯ್ಕೆ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದು 10 ದಿನಗಳಾಗಿವೆ. ಆದ್ರೂ, ರಾಷ್ಟ್ರೀಯ ಪಕ್ಷ ಗೆದ್ದಿರುವ 4 ರಾಜ್ಯಗಳಿಗೆ ಸಿಎಂ ಆರಿಸಲು ಸರ್ಕಸ್‌ ಮಾಡ್ತಿದೆ. ಅಳೆದೂ ತೂಗಿ ಮಣಿಪುರಕ್ಕೆ 2ನೇ ಬಾರಿಗೆ ಎನ್‌.ಬಿರೇನ್‌ ಸಿಂಗ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಿಎಂ ಸ್ಥಾನಕ್ಕೆ ಮೂವರ ಪ್ರಬಲ ಪೈಪೋಟಿ ನಡುವೆ ಬಿರೇನ್‌ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಶಾಸಕಾಂಗ ಪಕ್ಷದ ಸಭೆ ಅವಿರೋಧವಾಗಿ ಆಯ್ಕೆ ಮಾಡಿತು. ಬಿರೇನ್‌ ಸಿಂಗ್ ಜೊತೆ ಬಿಸ್ವಜಿತ್ ಸಿಂಗ್ ಮತ್ತು ಯುಮ್ನಮ್ ಖೇಮ್ಚಂದ್ ಮುಖ್ಯಮಂತ್ರಿ ಸ್ಥಾನಕ್ಕೆ ಭಾರೀ ಲಾಬಿ ನಡೆಸಿದ್ದರು. ಮಣಿಪುರದ ಬಿಜೆಪಿಯ ಕೇಂದ್ರ ವೀಕ್ಷಕರಾಗಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜು ಮುಖ್ಯಮಂತ್ರಿಯ ಘೋಷಣೆ ಮಾಡಲು ರಾಜ್ಯ ರಾಜಧಾನಿ ಇಂಪಾಲ್‌ಗೆ ಭೇಟಿ ನೀಡಿದ್ರು. ಮಾಜಿ ಫುಟ್ಬಾಲ್ ಆಟಗಾರ ಮತ್ತು ಪತ್ರಕರ್ತ, 61ರ ಹರೆಯದ ಬಿರೇನ್‌ ಸಿಂಗ್ ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದರು.

ದೇವಭೂಮಿ ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮತ್ತೊಮ್ಮೆ ಸ್ಥಾಪಿಸಲು ಸಜ್ಜಾಗಿದೆ. ಆದರೆ, ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲು ಕಂಡಿದ್ದು, ಹೊಸ ಸಿಎಂ ಆಯ್ಕೆ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಾಖಂಡ್‌ನಲ್ಲಿ ಸರ್ಕಾರ ರಚನೆ ಕುರಿತು ಹಂಗಾಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ತಮ್ಮ ನವದೆಹಲಿ ನಿವಾಸದಲ್ಲಿ ಚರ್ಚೆ ನಡೆಸಿದ್ರು.

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದಿದ್ದರೂ ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹದಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆದ್ದಿದೆ, ಆದರೆ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಇದುವರೆಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ ಎಂದು ಕೇಜ್ರಿವಾಲ್ ಪಂಜಾಬ್ ಎಎಪಿ ಶಾಸಕರನ್ನು ಉದ್ದೇಶಿಸಿ ನಡೆಸಿದ ವಿಡಿಯೋ ಕಾನ್ಫರೆನ್ಸ್‌ ವೇಳೆ ಟೀಕಿಸಿದರು.

ಪಂಜಾಬ್​ನಲ್ಲಿ ನಿರ್ಣಾಯಕ ಜಯಗಳಿಸಿ ದೇಶದ ಗಮನ ಸೆಳೆದ ಆಮ್ ಆದ್ಮಿ ಪಕ್ಷ ಇದೀಗ ಛತ್ತೀಸಗಡದಲ್ಲಿಯೂ ಹೆಜ್ಜೆಗುರುತು ಮೂಡಿಸಲು ಪರಿಶ್ರಮ ಹಾಕುತ್ತಿದೆ. ಬುಡಕಟ್ಟು ಜನರೇ ಬಹುಸಂಖ್ಯೆಯಲ್ಲಿರುವ ಛತ್ತೀಸಗಡದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ನಾಯಕ ಅರವಿಂದ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಒಟ್ನಲ್ಲಿ, ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗಿದ್ದು, ಉಳಿದ ರಾಜ್ಯಗಳಲ್ಲಿ ಸದ್ಯ ಬಿಜೆಪಿಯಿಂದ ಯಾರೂ ಸಿಎಂ ಪಟ್ಟಕ್ಕೇರಿಲ್ಲ. ಗೋವಾದಲ್ಲೂ ಕಸರತ್ತು ನಡೆದಿದ್ದು, ಸದ್ಯದಲ್ಲೇ ಸಿಎಂಗಳ ಘೋಷಣೆ ಮಾಡುವ ಸಾಧ್ಯತೆ ಇದೆ.

- Advertisment -

Most Popular

Recent Comments