ಮುಂಬೈ: ಮಲೈಕಾ ಅರೋರಾ ಬಾಲಿವುಡ್ ಡಾನ್ಸರ್ ಆಗಿ, ನಟಿಯಾಗಿ ಖ್ಯಾತಿ ಗಳಿಸಿದವರು. ಅದರಲ್ಲೂ ಅವರು ಐಟಂ ಸಾಂಗ್ಗಳಿಗೆ ಹೆಜ್ಜೆ ಹಾಕಲು ಹೆಸರುವಾಸಿ. ಸದ್ಯ ಯಾವುದೇ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲವಾದರೂ, ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಮಲೈಕಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ ಹಾಗೇ ಅವರನ್ನು ಕಾಲೆಳೆಯುವವರೂ ಇದ್ದಾರೆ. ವಿಶೇಷವಾಗಿ ಬೋಲ್ಡ್ ಡ್ರೆಸ್ಗಳ ಮೂಲಕ ಈ ಬಾಲಿವುಡ್ ಬೆಡಗಿ ಆಗಾಗ ಸುದ್ದಿಯಾಗುತ್ತಾರೆ. ದಬಂಗ್ ಚಿತ್ರದಲ್ಲಿ ತನ್ನ ಭಾವ ಸಲ್ಮಾನ್ಖಾನ್ ಜೊತೆ ಐಟಂ ಸಾಂಗ್ಗೆ ಹೆಜ್ಜೆ ಹಾಕಿ ಸಖತ್ ಸುದ್ದಿ ಮಾಡಿದ್ದರು.
ಇತ್ತೀಚೆಗಷ್ಟೇ ನಟಿ ಮತ್ತೊಮ್ಮೆ ತಮ್ಮ ಡ್ರೆಸ್ ಕಾರಣದಿಂದ ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಇಷ್ಟೆಲ್ಲಾ ಟೀಕೆ ಎದುರಾದರೂ ಅವೆಲ್ಲವನ್ನೂ ನಿರ್ಲಕ್ಷದಿಂದ ನೋಡುತ್ತಾರೆ ಮಲೈಕಾ. ಅಲ್ಲದೇ ತಾವು ಏನು ಧರಿಸಬೇಕು ಎಂಬುದು ತಮ್ಮ ಆಯ್ಕೆ ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ. ‘‘ಏನು ಧರಿಸಬೇಕು, ಏನು ಧರಿಸಬಾರದು ಎಂಬುದು ನಮ್ಮ ಆಯ್ಕೆ, ಯಾವುದು ನನಗೆ ಹೊಂದುತ್ತದೆ ಎಂಬುದನ್ನು ತಿಳಿಯದಷ್ಟು ದಡ್ಡಿ ನಾನಲ್ಲ’’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಮಲೈಕಾ.