ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಹಿನ್ನೆಲೆ ಲಾಕ್ಡೌನ್ ಮುಗಿದ ಬಳಿಕ ಸೀಲ್ಡೌನ್ ಜಾರಿಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ ಸೀಲ್ಡೌನ್ ಮಾಡವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೀಲ್ಡೌನ್ ಬಗ್ಗೆ ಸರ್ಕಾರ ಇನ್ನೂ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ. ಮುಂಜಾಗೃತಾ ಕ್ರಮವಾಗಿ ಬರೀ ಎರಡು ವಾರ್ಡ್ಗಳಲ್ಲಷ್ಟೇ ಸೀಲ್ಡೌನ್ ಜಾರಿ ಮಾಡಲಾಗಿದೆ. ಇನ್ನುಳಿದಂತೆ ಬೆಂಗಳೂರಿನಲ್ಲಿ ಎಲ್ಲಿಯೂ ಸೀಲ್ಡೌನ್ ಮಾಡುವುದಿಲ್ಲ. ಹಾಗಾಗಿ ಜನ ಭಯಬೀಳುವ ಅವಶ್ಯಕತೆಯಿಲ್ಲ‘ ಎಂದು ಹೇಳಿದ್ದಾರೆ.
ಎರಡು ವಾರ್ಡ್ಗಳಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿರುವುದರಿಂದ ಸೀಲ್ಡೌನ್ ಮಾಡಲಾಗಿದೆ. ಇನ್ನು ಆ ಎರಡು ವಾರ್ಡ್ಗಳಿಗೂ ಸರ್ಕಾರ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ಇನ್ನುಳಿದಂತೆ ನಗರದಲ್ಲಿ ಎಲ್ಲಾ ಕಡೆ ಅಗತ್ಯ ವಸ್ತುಗಳಾದ ದಿನಸಿ, ಹಾಲು, ಹಣ್ಣು, ತರಕಾರಿ ಹಾಗೂ ಮೆಡಿಕಲ್ಸ್ಗಳು ಓಪನ್ ಇರುತ್ತವೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರಾದ್ಯಂತ ಸೀಲ್ಡೌನ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಹಬ್ಬುತ್ತಿವೆ. ಆದರೆ ಬೆಂಗಳೂರು ಸೀಲ್ಡೌನ್ ಆಗಲ್ಲ. ದಯವಿಟ್ಟು ಶಾಂತವಾಗಿರಿ ಎಂದು ಭಾಸ್ಕರ್ ರಾವ್ ಟ್ವೀಟ್ ಮೂಲಕವೂ ಮನವಿ ಮಾಡಿಕೊಂಡಿದ್ದಾರೆ.
Rumors and fake news are floating around of a Seal down in Bangalore City and creating panic. Dearest Citizens, there is nothing like that as of now. Please Stay calm.
— Bhaskar Rao IPS (@deepolice12) April 10, 2020