ಪ್ರಣಬ್​ ಮುಖರ್ಜಿ ಸೇರಿದಂತೆ ಮೂವರಿಗೆ ಭಾರತ ರತ್ನ- ದೇವರಿಗಿಲ್ಲ ಅತ್ಯುನ್ನತ ಗೌರವ!

0
653

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಗಾಯಕ ಭೂಪೇನ್ ಹಜಾರಿಕಾ ಹಾಗೂ ನಾನಾಜಿ ದೇಶ್​​ಮುಖ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ, ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಈ ಬಾರಿಯೂ ದೇಶದ ಅತ್ಯುನ್ನತ ಗೌರವ ಸಿಕ್ಕಿಲ್ಲ.
ಪಶ್ಚಿಮ ಬಂಗಾಳ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿಯ ಮಿರತಿ ಹಳ್ಳಿಯಲ್ಲಿ ಗ್ರಾಮದಲ್ಲಿ 1935 ಡಿಸೆಂಬರ್ 11ರಂದು ಜನಿಸಿದ ಪ್ರಣಬ್​ ಮುಖರ್ಜಿ ಅವರ ತಂದೆ ಕಿಂಕರ್ ಮುಖರ್ಜಿ, ತಾಯಿ ರಾಜಲಕ್ಷ್ಮಿ ಮುಖರ್ಜಿ.
ಭಾರತದ 13ನೇ ರಾಷ್ಟ್ರಪತಿಗಳಾಗಿ 2012 ಜುಲೈ 25ರಿಂದ 2017ರ ಜುಲೈ 25ರವರೆಗೆ ಸೇವೆ ಸಲ್ಲಿಸಿದ್ದ ಪ್ರಣಬ್ ಮುಖರ್ಜಿ ಅವರು ಈ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ ದೇಶದ ಪ್ರಥಮ ಪ್ರಜೆಯಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಸರ್ಕಾರದಲ್ಲಿ 1982 ಜನವರಿ 5ರಿಂದ 1984ರ ಡಿಸೆಂಬರ್ 31ರವರೆಗೆ ವಿತ್ತ ಸಚಿವರಾಗಿ, ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ 2004ರ ಮೇ 22ರಿಂದ 2006ರ ಅಕ್ಟೋಬರ್ 27ರವರೆಗೆ ರಕ್ಷಣಾ ಸಚಿವರಾಗಿ, 2006ರ ಅಕ್ಟೋಬರ್ ನಿಂದ 2009ರ ಮೇ 22ರವರೆಗೆ ವಿದೇಶಾಂಗ ಸಚಿವರಾಗಿ, 2009ರ ಜನವರಿ 24ರಿಂದ ಜುಲೈ 24 2012ರವರೆಗೆ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಗ್ರಾಮೀಣಾಭಿವೃದ್ಧಿಗಾಗಿ ಶ್ರಮಿಸಿದ ಆರ್​ಎಸ್​ಎಸ್​ ಮುಖಂಡ ನಾನಾಜಿ ದೇಶ್ ಮುಖ್ ಹಾಗೂ ಜಾನಪದ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಣೆಯಾಗಿದೆ. ಆದರೆ, ಇತ್ತೀಚೆಗಷ್ಟೇ ಲಿಂಗಕ್ಯರಾದ ದೇವರು ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಈ ಬಾರಿಯೂ ಪ್ರಶಸ್ತಿ ನೀಡಿಲ್ಲ.

LEAVE A REPLY

Please enter your comment!
Please enter your name here