Sunday, June 26, 2022
Powertv Logo
Homeರಾಜ್ಯಸಾಮಾಜಿಕ ಜಾಲತಾಣದಿಂದ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಬೆಟರ್ ಕಾರವಾರ ತಂಡ..!

ಸಾಮಾಜಿಕ ಜಾಲತಾಣದಿಂದ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಬೆಟರ್ ಕಾರವಾರ ತಂಡ..!

ಕಾರವಾರ: ಕೊರೋನಾ  ಬಂದಾಗಿದ್ದ ಶಾಲಾ ಕಾಲೇಜುಗಳು ಇನ್ನೂ ತೆರೆದುಕೊಂಡಿಲ್ಲ. ಇದರಿಂದಾಗಿ ಯುವಜನತೆ ಮೊಬೈಲ್‌ನಲ್ಲೇ ಕಾಲ ಕಳೆಯುವಂತಾಗಿದ್ದು, ವರ್ಕ್ ಫ್ರಾಮ್ ಹೋಮ್ ಮಾಡಿಕೊಂಡಿದ್ದವರೂ ಸಹ ಬೇರೇನೂ ಮಾಡಲಾಗದೇ ಕುಳಿತುಕೊಳ್ಳುವಂತಾಗಿದೆ. ಇದರ ನಡುವೆ ತಮ್ಮ ಊರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಅಂತಾ ನಿರ್ಧರಿಸಿದ್ದ ತಂಡವೊಂದು ಸಾಮಾಜಿಕ ಜಾಲತಾಣದಿಂದಲೇ ಸಮಾನ ಮನಸ್ಕರನ್ನು ಬೆಸೆಯುವ ಕೆಲಸ ಮಾಡಿದೆ. ಅಷ್ಟಕ್ಕೂ ಅವರು ಮಾಡಿದ ಕೆಲಸ ಏನು ಅಂತೀರಾ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ, ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡು ಇಂತಹ ಉತ್ತಮ ಕೆಲಸಗಳನ್ನೂ ಮಾಡಬಹುದು ಅಂತಾ ಬೆಟರ್ ಕಾರವಾರ ಹೆಸರಿನ ತಂಡವೊಂದು ಮಾಡಿ ತೋರಿಸಿದೆ. ತಮ್ಮ ಊರಿಗೆ ಏನಾದರೂ ಒಳ್ಳೆಯದನ್ನುಮಾಡ್ಬೇಕು ಅನ್ನೋ ಮನಸ್ಥಿತಿಯಿದ್ದ ಐದು ಮಂದಿ ಫೇಸ್ಬುಕ್‌ನಲ್ಲಿ ಗ್ರೂಪ್‌ವೊಂದನ್ನು ರಚಿಸಿಕೊಂಡಿದ್ದರು. ವಾರಕ್ಕೊಮ್ಮೆ ಬಿಡುವಿನ ಸಮಯದಲ್ಲಿ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುತ್ತಾ ತಮ್ಮ ಗ್ರೂಪ್‌ಗೆ ಇನ್ನಷ್ಟು ಸದಸ್ಯರನ್ನು ಸೇರಿಸಿಕೊಂಡಿದ್ದರು. ಇದೀಗ ನಗರವನ್ನು ಸುಂದರಗೊಳಿಸಬೇಕೆನ್ನುವ ಸದುದ್ದೇಶದಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದ ಕಂಪೌಂಡ್ ಗೋಡೆಗಳ ಮೇಲೆ ಚಿತ್ರಗಳನ್ನ ಮೂಡಿಸಲು ಮುಂದಾಗಿದ್ದು ಇದನ್ನೂ ಸಹ ಗ್ರೂಪ್ ಸದಸ್ಯರ ಸಹಕಾರದಿಂದಲೇ ಮಾಡುತ್ತಿದ್ದಾರೆ.

ಇನ್ನು ಬೆಟರ್ ಕಾರವಾರ ಗ್ರೂಪ್ ಸದಸ್ಯರು ಮೊದಲು ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದ್ದರು‌. ಮೊದಲು ಐದು ಮಂದಿ ಯುವಕರಿಂದ ಪ್ರಾರಂಭವಾಗಿದ್ದ ಗ್ರೂಪ್‌ನಲ್ಲಿ ಇದೀಗ ಯುವಕರು, ಯುವತಿಯರು, ವಿದ್ಯಾರ್ಥಿಗಳೂ ಸೇರಿದಂತೆ 40ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಎಲ್ಲರೂ ಸಹ ತಮ್ಮ ಊರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಉತ್ತಮ ಮನಸ್ಥಿತಿಯನ್ನು ಹೊಂದಿದವರಾಗಿದ್ದು, ಗ್ರೂಪ್‌ನಲ್ಲಿ ಹಾಕಿದ ಒಂದೇ ಸಂದೇಶಕ್ಕೆ ಒಟ್ಟಾಗಿ ಕಂಪೌಂಡ್ ಗೋಡೆಯ ಮೇಲೆ ಚಿತ್ರಗಳನ್ನು ಮೂಡಿಸಲು ಮುಂದಾಗಿದ್ದಾರೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು, ಉತ್ತಮ ಸಂದೇಶ ನೀಡುವ ಚಿತ್ರಗಳನ್ನೇ ಬಿಡಿಸಿದ್ದು, ಕೆಲಸದ ಒತ್ತಡದ ನಡುವೆ ಒಳ್ಳೆಯ ಕೆಲಸದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ ಅನ್ನೋದು ಸದಸ್ಯರ ಅಭಿಪ್ರಾಯವಾಗಿದೆ.

ಸಾಮಾಜಿಕ ಜಾಲತಾಣವನ್ನು ಹೀಗೂ ಬಳಸಿಕೊಳ್ಳಬಹುದು ಅಂತಾ ಬೆಟರ್ ಕಾರವಾರ ತಂಡ ತೋರಿಸಿಕೊಟ್ಟಿದ್ದು, ಈ ಗ್ರೂಪ್ ಮಾಡುತ್ತಿರುವ ಕಾರ್ಯವನ್ನ ನಿಜಕ್ಕೂ ಮೆಚ್ಚಲೇಬೇಕು.

 

– ಉದಯ ಬರ್ಗಿ  ಕಾರವಾರ

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments