ಬೆಂಗಳೂರು : ನಮ್ಮ ಬೆಂಗಳೂರು ದೇಶದ ಕೊರೋನಾ ಹಾಟ್ಸ್ಪಾಟ್ ಪಟ್ಟಿಗೆ ಸೇರಿದ್ದು, ಆತಂಕ ಹೆಚ್ಚಿದೆ. ಬೆಂಗಳೂರು, ಮಹಾರಾಷ್ಟ್ರದ ಪುಣೆ ಹಾಗೂ ತೆಲಂಗಾಣದ ಹೈದರಾಬಾದ್ ಕೊರೋನಾ ಸೋಂಕಿನ ಹೊಸ ಹಾಟ್ಸ್ಪಾಟ್ ಆಗಿವೆ.
ದೇಶದ ಈ ಪ್ರಮುಖ ನಗರಗಳಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಹೆಮ್ಮಾರಿ ವೈರಸ್ಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಬೆಂಗಳೂರಿನ ವಿಚಾರಕ್ಕೆ ಬರೋದಾದ್ರೆ ಕಳೆದ ಒಂದು ತಿಂಗಳಲ್ಲಿ ಕೊರೋನಾದ ಹೊಸ ಪ್ರಕರಣಗಳು ನಿತ್ಯವೂ ಸರಾಸರಿ ಶೇ.12.90ರಂತೆ ಏರಿಕೆಯಾಗುತ್ತಿದೆ. ಕಳೆದ ನಾಲ್ಕು ವಾರಗಳಿಂದಲೂ ನಿತ್ಯ ಕೊರೋನಾಗೆ ಬಲಿಯಾದವರ ಪ್ರಮಾಣದಲ್ಲಿಯೂ ಶೇ.8.90ರಷ್ಟು ಹೆಚ್ಚಳವಾಗಿದೆ. ಆದ್ರಿಂದ ಬೆಂಗಳೂರು ದೇಶದಲ್ಲಿ ಸದ್ಯ ಹೊಸ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ ಎಂಬುದು ತಜ್ಞರ ಅಭಿಪ್ರಾಯ. ಇನ್ನು ಈ ಹಿಂದೆ ದೇಶದ ಹಾಟ್ಸ್ಪಾಟ್ಗಳೆನಿಸಿದ್ದ ದೆಹಲಿ, ಮುಂಬೈ, ಚೆನ್ನೈ ಹಾಗೂ ಅಹಮದಾಬಾದ್ಗಳಲ್ಲಿಯೂ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿಲ್ಲ.
ಗುಜರಾತ್ನ ಅಹಮದಾಬಾದ್ನಲ್ಲಿ ಪ್ರತಿ 100 ಸೋಂಕಿತರಲ್ಲಿ 5 ಮಂದಿ ಮೃತಪಡ್ತಿದ್ದಾರೆ. ಮುಂಬೈನಲ್ಲಿ ಪ್ರತಿ 1 ಲಕ್ಷದಲ್ಲಿ 345 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಚೆನ್ನೈನಲ್ಲಿ ಪ್ರತಿ 10 ಲಕ್ಷ ಮಂದಿ ಪೈಕಿ 8,595 ಮಂದಿಗೆ ಕೊರೋನಾ ಸೋಂಕು ತಗುಲಿದೆ.