ಬೆಂಗಳೂರು : ಕೊರೋನಾ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದ BBMP ಆಯುಕ್ತ ಅನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಮಂಜುನಾಥ್ ಪ್ರಸಾದ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಕೊರೋನಾ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ವೈಫಲ್ಯ ಕಂಡಿರುವುದಕ್ಕೆ ಮೊದಲ ತಲೆದಂಡ ಎಂಬಂತೆ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಿಬಿಎಂಪಿ ಕೊರೋನಾ ನಿರ್ವಹಣೆ ಮಾಡುವ ರೀತಿಗೆ ಹೈಕೋರ್ಟ್ ಕೂಡ ಅಸಮಧಾನಗೊಂಡು ಚಾಟಿ ಬೀಸಿತ್ತು. ಬೆಂಗಳೂರಿನ ಕೆಲ ಜನಪ್ರತಿನಿಧಿಗಳಿಗೂ ಅನಿಲ್ ಕುಮಾರ್ ಕಾರ್ಯವೈಖರಿ ಮೇಲೆ ಅಸಮಾಧಾನವಿತ್ತು.
ಇನ್ನು ನೂತನ ಕಮಿಷನರ್ ಆಗಿ ನೇಮಕವಾಗಿರುವ ಮಂಜುನಾಥ್ ಪ್ರಸಾದ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದು, ಈ ಹಿಂದೆ ಬಿಬಿಎಂಪಿಯಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಬಿಬಿಎಂಪಿ ಆಯುಕ್ತರಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿಯೂ ಮುಂದುವರೆಯಲಿದ್ದಾರೆ.