Tuesday, January 18, 2022
Powertv Logo
Homeದೇಶಬೆಚ್ಚಿ ಬಿದ್ದಿದ್ದಾರೆ ಉತ್ತರ ಕೊರಿಯಾದ ಜನತೆ

ಬೆಚ್ಚಿ ಬಿದ್ದಿದ್ದಾರೆ ಉತ್ತರ ಕೊರಿಯಾದ ಜನತೆ

ಉತ್ತರ ಕೊರಿಯಾ : ಅಧ್ಯಕ್ಷ ಕಿಮ್​​ನ ಸರ್ವಾಧಿಕಾರ ಮಿತಿ ಮೀರಿದ್ದು, ಅಲ್ಲಿನ ಜನರಿಗೆ ಯಾವಾಗಪ್ಪ ಈ ಕಿಮ್​ನಿಂದ ನಮಗೆ ಮುಕ್ತಿ ಸಿಗುತ್ತೆ ಅಂತ ಯೋಚ್ನೆ ಮಾಡ್ತಾ ಇದ್ದಾರೆ. ಇದೀಗ ಈ ಕಿಮ್​ ಅನ್ನೋ ಕಮಂಗಿ ಹೊಸ ರೂಲ್ಸ್​ ಒಂದನ್ನ ತಂದಿದ್ದು ಅಲ್ಲಿನ ಯುವಕರು ಇದೀಗ ಬಟ್ಟೆ ಹಾಕಿಕೊಳ್ಳೋದಕ್ಕೆ ಕೂಡ ಹೆದರುತ್ತಿದ್ದಾರೆ. ಏನಪ್ಪ ಅಂತಹ ವಿಚಿತ್ರ ರೂಲ್ಸ್​ ಅಂತ ಯೋಚ್ನೆ ಮಾಡ್ತಾ ಇದ್ದೀರಾ?

ಉತ್ತರ ಕೊರಿಯಾ… ಈ ದೇಶವನ್ನ ನತದೃಷ್ಟರ ದೇಶ ಅನ್ನಬೇಕೋ ಅಥವಾ ಸರ್ವಾಧಿಕಾರಿಗಳ ಅವಾಸ ಸ್ಥಾನ ಅನ್ನಬೇಕೊ ಅಂತಾ ಇಂದಿಗೂ ಜಗತ್ತು ಕನ್​ಫ್ಯೂಷನ್​ನಲ್ಲಿದೆ. ಯಾಕಂದ್ರೆ ಈ ದೇಶ ಉಗಮವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸರ್ವಾಧಿಕಾರಿಗಳ ಪ್ರತ್ಯಕ್ಷ ಹಾಗು ಪರೋಕ್ಷವಾದ ಆಳ್ವಿಕೆಗೆ ಒಳಪಟ್ಟಿದೆ. ಆದ್ರೆ ಈ ಕಿಮ್​ ಜಾಂಗ್ ಉನ್​ ಅನ್ನೋ ದಡ್ಡ ಸರ್ವಾಧಿಕಾರಿಯ ಆಡಳಿತದಲ್ಲಿ ಅಲ್ಲಿನ ಜನ ಅನುಭವಿಸಿದಷ್ಟು ನರಕ ಹಿಂದೆ ಯಾವತ್ತೂ ಅನುಭವಿಸಿರಲಿಲ್ಲ ಅಂತ ಕಾಣುತ್ತೆ. ಹೌದು, ಈತ ಯಾವಾಗ ಉತ್ತರ ಕೊರಿಯಾದ ಆಡಳಿತವನ್ನ ವಹಿಸಿಕೊಂಡನೋ ಅಂದಿನಿಂದ ಇಂದಿನವರೆಗೆ ಉತ್ತರ ಕೊರಿಯಾದಲ್ಲಿ ದರಿದ್ರತೆ ವಕ್ಕರಿಸಿಕೊಳ್ತು. ಇವನ ಅವಧಿಯಲ್ಲಿ ಉತ್ತರ ಕೊರಿಯಾ ಅಮೆರಿಕದ ನಿರ್ಬಂಧಕ್ಕೆ ಒಳಪಟ್ಟಿದೆ. ವಿಶ್ವ ಸಂಸ್ಥೆಯ ನಿಯಮಗಳನ್ನ ಮೀರಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಾಗತಿಕ ನಿರ್ಬಂಧವನ್ನ ಎದುರಿಸ್ತಾ ಇದೆ. ಇದ್ರ ಮಧ್ಯದಲ್ಲಿ ತನ್ನಅಕ್ಕಪಕ್ಕದ ರಾಷ್ಟ್ರಗಳ ಜೊತೆ ಕೂಡ ಉತ್ತರ ಕೊರಿಯಾ ಸಂಬಂಧ ಹಾಳು ಮಾಡಿಕೊಂಡಿದೆ..ಇದು ಕಿಮ್​ ಜಾಂಗ್​ ಉನ್​ನ ಮಹತ್ತರವಾದ ಸಾಧನೆ.

ಇಷ್ಟೆಲ್ಲ ಎಡವಟ್ಟನ್ನ ಮಾಡಿಕೊಂಡಿರುವ ಕಿಮ್​​​ ಕನಿಷ್ಟ ಪಕ್ಷ ತನ್ನ ಪ್ರಜೆಗಳಿಗಾದ್ರೂ ಸ್ವಾತಂತ್ರ್ಯ ಕೊಟ್ಟಿದ್ದಾನಾ ಅಂದ್ರೆ ಅದೂ ಇಲ್ಲ. ಬದಲಾಗಿ ತಾನು ಹೇಳಿದ್ದೇ ಕಾನೂನು, ತಾನು ಬರೆದಿದ್ದೇ ಶಾಸನ ಅನ್ನೋ ಹಾಗೆ ನಡೆದುಕೊಳ್ತಿದ್ದಾನೆ. ಇನ್ನು ಈತನ ಆಡಳಿತಕ್ಕೆ ಸಿಕ್ಕಿ ಅಲ್ಲಿನ ಜನ ನಲುಗುತ್ತಿದ್ದಾರೆ. ಸಾಕಷ್ಟು ಜನರಿಗೆ ಕಿಮ್​ನ ಸರ್ಕಾರದ ವಿರುದ್ಧ ಆಕ್ರೋಶವಿದ್ರೂ ಅದನ್ನ ತಡೆದುಕೊಂಡು ಬದುಕುತ್ತಿದ್ದಾರೆ. ಯಾಕಂದ್ರೆ ಅಲ್ಲಿ ಕಿಮ್​ ವಿರುದ್ಧ ಧ್ವನಿ ಎತ್ತಿದವರನ್ನ ನಿರ್ದಾಕ್ಷಿಣ್ಯವಾಗಿ ಮರಣದಂಡನೆಗೆ ಗುರಿ ಮಾಡಲಾಗುತ್ತಿದೆ. ಇದು ಅಲ್ಲಿನ ಜನರಿಗೆ ಹೆಚ್ಚು ಆತಂಕವನ್ನ ತಂದೊಡ್ಡಿದೆ.

ಇನ್ನು ಈ ಕಿಮ್​ ಕೂಡ ಒಂದಲ್ಲ ಒಂದು ರೀತಿ ವಿಚಿತ್ರವಾದ ಕಾನೂನುಗಳನ್ನ ತಂದು ಅಲ್ಲಿನ ಜನರ ನೆಮ್ಮದಿಯನ್ನ ಸಂಪೂರ್ಣವಾಗಿ ಹಾಳು ಮಾಡಿದ್ದಾನೆ.. ಹೌದು, ಕೆಲ ದಿನಗಳ ಹಿಂದಷ್ಟೆ ಜನರಿಗೆ ಕಡಿಮೆ ಆಹಾರ ಸೇವಿಸಲು ಆದೇಶ ಹೊರಡಿಸಿದ್ದ ಈ ಹುಚ್ಚು ಅಧ್ಯಕ್ಷ, ಇದೀಗ ಮತ್ತೊಂದು ವಿಚಿತ್ರವಾದ ಆದೇಶವನ್ನ ತಂದಿದ್ದಾನೆ. ಈ ಆದೇಶ ಇದೀಗ ಅಲ್ಲಿನ ಯುವಕರಿಗೆ ಆತಂಕವನ್ನ ತಂದೊಡ್ಡಿರುವ ಜೊತೆಗೆ ಯಾವ ರೀತಿಯ ಉಡುಗೆಗಳನ್ನ ಧರಿಸಬೇಕು ಅನ್ನೋ ಗೊಂದಲದಲ್ಲಿದ್ದಾರೆ. ಯಾಕಂದ್ರೆ ಈಗ ಕಿಮ್​ ತಂದಿರೋ ಹೊಸ ಆದೇಶ ಅವರ ಉಡುಪುಗಳ ಕುರಿತದ್ದಾಗಿದೆ. ಕಿಮ್​ನ ಸರ್ವಾಧಿಕಾರದ ಮುಂದುವರೆದ ಭಾಗವಾಗಿ ಉತ್ತರ ಕೊರಿಯಾ ಜನತೆಗೆ ಲೆದರ್ ಕೋಟ್​ಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಆತನ ಸ್ಟೈಲ್​ ಯಾರೂ ಕಾಪಿ ಮಾಡಬಾರ್ದು ಅನ್ನೋದು.

ಇನ್ನು ಇದಕ್ಕೆ ಹಲವು ನಿದರ್ಶನಗಳನ್ನ ಕೂಡ ಕಿಮ್​ ಸರ್ಕಾರ ನೀಡಿದ್ಯಂತೆ. ಅವರ ಪ್ರಕಾರ 2019ರಲ್ಲಿ ಕಿಮ್ ಜಾಂಗ್ ಉನ್ ಮೊದಲ ಬಾರಿಗೆ ಟ್ರೆಂಚ್ ಲೆದರ್ ಕೋಟ್​ ಅನ್ನ ಧರಿಸಿದ್ನಂತೆ. ಇದಾದ ಬಳಿಕ ಸಾರ್ವಜನಿಕ ವಲಯದಲ್ಲಿಯೂ ಈ ಕೋಟ್ ಭಾರೀ ಜನಪ್ರಿಯವಾಗಿತ್ತು ಅಂತ ಹೇಳಲಾಗಿತ್ತು. ಇದೇ ಕಾರಣಕ್ಕೆ ಚೀನಾದಿಂದ ಆರ್ಡರ್ ಮಾಡಿ ತರಿಸಿ ಈ ಕೋಟ್​ಗಳನ್ನ ಜನರು ಧರಿಸೋದಕ್ಕೆ ಶುರು ಮಾಡಿದ್ರು. ಆದರೆ ಕಿಮ್​ ಜಾಂಗ್ ಉನ್ ಧರಿಸಿದಂತೆ ಜಾಕೆಟ್​ಗಳನ್ನ ಜನ್ರು ಧರಿಸುವ ಮೂಲಕ ಜನರು ತನಗೆ ಅವಮಾನ ಮಾಡ್ತಾ ಇದ್ದಾರೆ ಅಂತ ಕಿಮ್​ ಜಾಂಗ್​ ಉನ್​ ಸಾರ್ವಜನಿಕರಿಗೆ ಈ ಕೋಟ್ ಧರಿಸದಂತೆ ನಿಷೇಧ ಹೇರಿದ್ದಾನೆ. ಇನ್ನು ಇದಕ್ಕೆ ಮತ್ತೊಂದು ನಿದರ್ಶನವನ್ನ ನೀಡಿರುವ ಕಿಮ್​ನ ಗುಲಾಮರು, ಕಿಮ್ ಜಾಂಗ್ ಉನ್​ನ ಸಹೋದರಿ ಕೂಡ ಈ ಟ್ರೆಂಚ್ ಕೋಟ್ ಧರಿಸಿದ್ಳು. ಇದಾದ ಬಳಿಕ ಮಹಿಳೆಯರು ಕೂಡ ಟ್ರೆಂಚ್ ಕೋಟ್ ಧರಿಸೋದಕ್ಕೆ ಆರಂಭಿಸಿದ್ದಾರೆ. ಇದು ಮಾತ್ರವಲ್ಲದೇ ಈ ವರ್ಷದ 8ನೇ ಪಕ್ಷದ ಕಾಂಗ್ರೆಸ್ ಮಿಲಿಟರಿ ಪರೇಡ್​ನಲ್ಲಿ ಹಿರಿಯ ಅಧಿಕಾರಿಗಳು ಇದೇ ರೀತಿಯ ಟ್ರೆಂಚ್ ಕೋಟ್ ಧರಿಸಿದ್ದಾರೆ. ಉತ್ತರ ಕೊರಿಯಾದಲ್ಲಿ ಟ್ರೆಂಚ್​ ಕೋಟ್​ಗೆ ಸಾಕಷ್ಟು ಬೆಲೆ ಇದೆ. ಹಾಗಾಗಿ ಇದನ್ನು ಶಕ್ತಿಯ ಸಂಕೇತ ಅಂತ ಪರಿಗಣಿಸಬೇಕು ಅಂತ ಕಿಮ್​​ನ ಸರ್ಕಾರ ಹೇಳಿದ್ಯಂತೆ.

ಒಟ್ಟಾರೆಯಾಗಿ ಈ ಕಿಮ್​ನ ಹೊಸ ರೂಲ್ಸ್ ಹಲವು ಕಡೆಗಳಲ್ಲಿ ನಗೆಪಾಟಲಿಗೆ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿ ಕಿಮ್​ ಬಟ್ಟೆ ಹಾಕೋದನ್ನೇ ನಿಷೇಧ ಮಾಡಿದ್ರೆ ಏನ್​ ಗತಿ ಅಂತ ಮಾತನಾಡಿಕೊಳ್ಳೊದಕ್ಕೆ ಶುರು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಕೆಲ ಪಾಶ್ಚಿಮಾತ್ಯ ಆರ್ಥಿಕ ತಜ್ಞರು ಬೇರೆನೇ ಹೇಳ್ತಾ ಇದ್ದಾರೆ. ಅವರ ಪ್ರಕಾರ ಉತ್ತರ ಕೊರಿಯಾ ಸಂಪೂರ್ಣವಾಗಿ ಆರ್ಥಿಕ ದಿವಾಳಿಯ ಅಂಚಿಗೆ ತಲುಪಿದೆ. ಹಾಗಾಗಿ ಜನರ ವಿನಾಕಾರಣದ ವೆಚ್ಚವನ್ನ ತಡೆಯೋದಕ್ಕೆ ಕಿಮ್​ ಪ್ರಯತ್ನಿಸಿದ್ದಾನೆ ಅನ್ನೋ ಮಾತುಗಳು ಕೇಳಿ ಬಂದಿವೆ. ಅದೇನೇ ಇರಲಿ ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾದ ಬಟ್ಟೆಯ ಮೇಲೂ ಈ ರೀತಿಯಾದ ನಿರ್ಬಂಧ ಹೇರೋದು ಎಷ್ಟು ಸರಿ ಅನ್ನೋದು ಈಗ ಎಲ್ಲರಲ್ಲೂ ಕಾಡ್ತಾ ಇರೋ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments