Saturday, May 28, 2022
Powertv Logo
Homeರಾಜ್ಯಅದ್ದೂರಿಯಾಗಿ ನಡೆದ ದ್ರೌಪದಮ್ಮನ ಕರಗ

ಅದ್ದೂರಿಯಾಗಿ ನಡೆದ ದ್ರೌಪದಮ್ಮನ ಕರಗ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಕಳೆದ ರಾತ್ರಿ ಅದ್ದೂರಿಯಾಗಿ ನೆರವೇರಿತು. ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ರಾತ್ರಿ 3 ಗಂಟೆ ಸುಮಾರಿಗೆ ಧರ್ಮರಾಯ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು. ಬಳಿಕ ಪೂಜಾರಿ ಜ್ಞಾನೇಂದ್ರ ಹೊತ್ತ ದ್ರೌಪದಿ ದೇವಿಯ ಕರಗ ನಗರ ಪ್ರದಕ್ಷಿಣೆ ಆರಂಭವಾಯ್ತು. ಇದಕ್ಕೂ ಮುನ್ನ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಅತ್ಯಂತ ವಿಧಿವತ್ತಾದ ಧಾರ್ಮಿಕ ಕಾರ್ಯಕ್ರಮಗಳು ಸಾಗಿದವು. ನಂತರ ಮಧ್ಯರಾತ್ರಿಯ ವೇಳೆಗೆ ಕಳಸದ ಆಕೃತಿಯ ಮಲ್ಲಿಗೆ ಹೂವಿನ ಕರಗವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊತ್ತ ಪೂಜಾರಿ ನರ್ತಿಸುತ್ತಾ ಗುಡಿಯಿಂದ ಹೊರಬಂದ್ರು. ಧಾರ್ಮಿಕವಾಗಿ ಕರಗ ಹೊತ್ತ ಪೂಜಾರಿಯನ್ನ ಸಾಕ್ಷಾತ್ ಆದಿಶಕ್ತಿಯ ರೂಪ ಎಂದೇ ನಂಬಲಾಗುತ್ತೆ. ಹೀಗಾಗಿ ಈ ಭಕ್ತಿಪೂರ್ವಕ ಗಳಿಗೆ ಕಣ್ತುಂಬಿಕೊಳ್ಳಲು ಲಕ್ಷೋಪ ಲಕ್ಷ ಭಕ್ತರು ಸೇರಿದ್ರು. ಇನ್ನು ಇದೇ ವೇಳೆ ಖಡ್ಗವನ್ನು ಹಿಡಿದ ವೀರಕುಮಾರರು ಗೋವಿಂದ… ಗೋವಿಂದ… ಗೋವಿಂದ ಎನ್ನುತ್ತಾ, ಡಿ. ಡಿ. ಡಿ. ಡಿ ಕ್. ಡಿ… ಎಂದು ಕೂಗಿ ಅಲಗು ಸೇವೆಯನ್ನು ಮಾಡುತ್ತ ಕರಗದ ಪೂಜಾರಿಯನ್ನು ಹಿಂಬಾಲಿಸಿದ್ರು. ಈ ಕ್ಷಣ ನೆರೆದಿದ್ದ ಭಕ್ತಗಣವನ್ನ ರೋಮಾಂಚನಗೊಳಿಸಿತು.

ಈ ವೇಳೆ ಝಗಮಗಿಸುವ ಬೆಳಕು ಓಲಗದ ಸದ್ದು ಇಡೀ ಪೇಟೆಯನ್ನೇ ಆವರಿಸಿಕೊಂಡಿತ್ತು.ಕರಗ ಹೊರ ಬಂದ ಕೂಡಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು‌.ಕರಗ ಹೊತ್ತ ಪೂಜಾರಿ ಧರ್ಮರಾಯ ಸ್ವಾಮಿ ಸನ್ನಿಧಿಯಿಂದ ಮೆರವಣಿಗೆ ಆರಂಭಿಸಿ, ಕಬ್ಬನ್ ಪೇಟೆ, ರಾಜಾ ಮಾರ್ಕೆಟ್, ಮೂಲಕ‌ ಸಾಗಿ ಮಾರ್ಕೆಟ್‌ನಲ್ಲಿ ಇರುವ ಗಣೇಶ, ಆಂಜನೇಯ ಸ್ವಾಮಿ ದೇವಸ್ಥಾನದ ಪೂಜೆ ಸ್ವೀಕರಿಸಲಾಯ್ತು. ಬಳಿಕ ಕಾಟನ್ ಪೇಟೆಯ ಹಲವು ದೇವಾಲಯಗಳು ಜೊತೆಗೆ ಮಸ್ತಾನ್ ಸಾಬ್ ದರ್ಗಾಕ್ಕೂ ಕರಗೋತ್ಸವ ತೆರಳಿತು. ಈ ವೇಳೆ ದರ್ಗಾದ ಆಡಳಿತ ವರ್ಗ ಕರಗಕ್ಕೆ ಗೌರವ ಸಮರ್ಪಿಸಿ ಬರಮಾಡಿಕೊಂಡಿತು. ಬಳೆಪೇಟೆ ವೃತ್ತ, ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನಕ್ಕೂ ತೆರಳಿ ಕೊನೆಗೆ ಕಿಲಾರಿ ರಸ್ತೆ, ಕುಂಬಾರಪೇಟೆ ಚೌಡೇಶ್ವರಿ ದೇವಸ್ಥಾನ ಮೂಲಕ ತಿಗಳರಪೇಟೆ ಪ್ರವೇಶಿಸಿತು. ಪುನಹ ಧರ್ಮರಾಯನ ಸನ್ನಿಧಿಗೆ ಬರೋ ಮೂಲಕ ಹೂವಿನ ಕರಗೋತ್ಸವ ಸಮಾಪ್ತಿಯಾಯ್ತು.

ಇನ್ನು ಕರಗೋತ್ಸವಕ್ಕೆ ಸ್ಥಳೀಯ ಶಾಸಕರಾದ ಉದಯ್ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದ್ರು. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಕಳೆಗುಂದಿದ್ದ ಕರಗ ಈಬಾರಿ ಮತ್ತೆ ತನ್ನ ಗತವೈಭವಕ್ಕೆ ಮರಳಿದ್ದು ಭಕ್ತರ ಹುಮ್ಮಸ್ಸನ್ನ ಇಮ್ಮಡಿಗೊಳಿಸಿತ್ತು.

- Advertisment -

Most Popular

Recent Comments