ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆ ರೌಡಿ ಶೀಟರ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಬೆಂಗಳೂರಿನ ಹೆಚ್ಎಎಲ್ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳೆದ ಜೂ 7 ನೇ ತಾರೀಖಿನ ಬೆಳಗ್ಗಿನ ಜಾವ 6.30 ರ ಸುಮಾರಿಗೆ ತನ್ನ ಮನೆಯಲ್ಲಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನ ಮಲಗಿರುವ ಸಂಧರ್ಭದಲ್ಲಿ ಮನೆಗೆ ನುಗ್ಗಿದ 9 ಜನ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಹೆಚ್ಎಎಲ್ ಪೋಲಿಸರು ಪ್ರಕರಣ ಸಂಬಂಧ ದೂರು ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸಂತೋಷ್, ವಿಜಯ್, ಸುರೇಶ್, ಪೀಟರ್ ಕುಮಾರ್, ಲೋಕೇಶ್, ಬಾಲಸುಬ್ರಹ್ಮಣ್ಯಂ, ನವಾಜ್, ದೀಲಿಪ್ ಹಾಗೂ ನ್ಯಾಮತ್ ಎಂದು ತಿಳಿದು ಬಂದಿದೆ.
ಕೊಲೆಯಾದ ಶ್ರೀನಿವಾಸ್ ಹಾಗೂ ಕೊಲೆ ಮಾಡಿದ ಪ್ರಮುಖ ಆರೋಪಿ ಸಂತೋಷ್ ಮೊದಲಿಗೆ ಸ್ನೇಹಿತರಾಗಿದ್ದು, ಬಳಿಕ ಇಬ್ಬರ ನಡುವೆ ಗಲಾಟೆ ನಡೆದು ದೂರವಾಗಿದ್ದರು. ಸಂತೋಷ್ ಕೊಲೆಗೆ ಶ್ರೀನಿವಾಸ ಬೇರೊಂದು ಗುಂಪಿನ ಜೊತೆ ಸೇರಿ ಸಂಚು ರೂಪಿಸಿದ್ದ. ಜೊತೆಗೆ ಕೊಲೆಯಾದ ಶ್ರೀನಿವಾಸ ಹುಡುಗರಿಗೆ ಗಾಂಜಾ ಮತ್ತು ಹಣ ತಂದು ಕೊಡುವಂತೆ ಪೀಡಿಸುತ್ತಿದ್ದು, ಕೊಡದೆ ಇದ್ದಾಗ ಹಲ್ಲೆಯನ್ನು ಮಾಡುತ್ತಿದ್ದ. ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನನನ್ನು ಕೊಲೆ ಮಾಡಲು ಸಂತೋಷ್ ಅಂಡ್ ಗ್ಯಾಂಗ್ ಸಂಚು ರೂಪಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಇನ್ನು ಕೃತ್ಯಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧನ ಮಾಡಿರುವ ಹೆಚ್ಎಎಲ್ ಪೋಲಿಸರು ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.